ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದ ದರ, ಮುದ್ರಣ ವೆಚ್ಚ ದುಬಾರಿ

ವಿಶ್ವ ಪುಸ್ತಕ ದಿನಾಚರಣೆ, ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಭಾಗ್ಯಜ್ಯೋತಿ ಬೇಸರ
Last Updated 24 ಏಪ್ರಿಲ್ 2018, 10:51 IST
ಅಕ್ಷರ ಗಾತ್ರ

ಕೊಪ್ಪಳ: 'ಕಾಗದದ ದರ ಮತ್ತು ಮುದ್ರಣ ವೆಚ್ಚ ದುಬಾರಿ ಆಗಿದ್ದರಿಂದ ಪ್ರಕಾಶಕರು ತತ್ತರಿಸುತ್ತಿದ್ದಾರೆ' ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಭಾಗ್ಯಜ್ಯೋತಿ ಹೇಳಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಆಶ್ರಯದಲ್ಲಿ ವಿಶ್ವ ಪುಸ್ತಕ ದಿನಾಚರಣೆ ನಿಮಿತ್ತ ‘ಪುಸ್ತಕೋದ್ಯಮ ಪ್ರಕಾಶಕರ ಆರ್ಥಿಕ ಸಮಸ್ಯೆಗಳು’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

'ನಮ್ಮ ಜನರಲ್ಲಿ ಇತ್ತೀಚಿಗೆ ಓದಿನ ಅಭಿರುಚಿ ಕಡಿಮೆ ಆಗುತ್ತಿದೆ. ಇದರಿಂದಾಗಿ ಪ್ರಕಾಶಕರು ಪ್ರಕಟಿಸಿದ ಮಹತ್ವದ ಪುಸ್ತಕಗಳನ್ನು ಜನರು ಖರೀದಿಸುತ್ತಿಲ್ಲ. ವಿಶ್ವವಿದ್ಯಾಲಯಗಳು ಸಹ ಪ್ರತಿ ವರ್ಷಕ್ಕೊಮ್ಮೆ ಪುಸ್ತಕಗಳನ್ನು ಬದಲಿಸುವ ಕಾರಣ ಪ್ರಕಾಶಕರು ಪ್ರಕಟಿಸಿದ ಎಷ್ಟೋ ಪುಸ್ತಕಗಳು ಪ್ರಕಾಶಕರಲ್ಲಿ ರಾಶಿಗಟ್ಟಲೇ ಉಳಿದಿವೆ. ಸರ್ಕಾರದ ಅಧೀನ ಇಲಾಖೆಗಳು ಮತ್ತು ವಿಶ್ವವಿದ್ಯಾಲಯಗಳಿಂದ ಪ್ರಕಾಶಕರಿಗೆ ಸಕಾಲಕ್ಕೆ ಹಣ ಪಾವತಿ ಆಗುವುದೇ ಇಲ್ಲ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಎಲ್ಲ ಕಷ್ಟ ಕಾರ್ಪಣ್ಯಗಳಿಂದ ಪ್ರಕಾಶಕರು ಹೊರಬರಬೇಕಿದೆ' ಎಂದರು.

ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ ಮಾತನಾಡಿ, 'ಹೊಸ ಮಾಧ್ಯಮಗಳ ಆವಿಷ್ಕಾರಗಳಿಂದ ಜನರಲ್ಲಿ ಪುಸ್ತಕ ಪ್ರೇಮ ಹುಟ್ಟುತ್ತಿಲ್ಲ. ಇಂದಿನ ಯುವಕರು ಕಂಪ್ಯೂಟರ್ ಮತ್ತು ಮೊಬೈಲ್‍ಗಳಲ್ಲಿ ಅಂತರ್ಜಾಲ ಬಳಸಿಕೊಂಡು ಕನ್ನಡ ಸಾಹಿತ್ಯ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಅರಿತುಕೊಳ್ಳುತ್ತಾರೆ. ಆದರೆ ಅಕ್ಷರ ರೂಪದ ಪುಸ್ತಕಗಳನ್ನು ಓದುವಾಗ ಓದುಗನಿಗೆ ಸಿಗುವ ನಿಜವಾದ ಸುಖ, ಶಾಂತಿ, ಆಹ್ಲಾದ ಮತ್ತು ಆತ್ಮೀಯತೆ ಕಂಪ್ಯೂಟರ್ ಮತ್ತು ಮೊಬೈಲ್‍ಗಳಲ್ಲಿ ಸಿಗುವದಿಲ್ಲ. ಆದ್ದರಿಂದ ಪುಸ್ತಕಗಳನ್ನು ಓದುವ, ಖರೀದಿಸುವ ಹವ್ಯಾಸ ಇವತ್ತಿನ ಯುವ ಜನತೆ ರೂಡಿಸಿಕೊಳ್ಳಬೇಕು' ಎಂದರು.

'ಪ್ರಕಾಶಕರು ಕ್ರಿ.ಶ.1900ರ ಅಂದಿನಿಂದಲೂ 20ನೇ ಶತಮಾನದವರೆಗೂ ನಿರಂತರವಾಗಿ ತಮ್ಮ ಏಳು–ಬೀಳುಗಳ ಮಧ್ಯದಲ್ಲೂ ಪ್ರಕಾಶಕರು ಪುಸ್ತಕಗಳನ್ನು ಪ್ರಕಟಿಸುತ್ತಲೇ ಬಂದಿದ್ದಾರೆ. ಕನ್ನಡ ಸಾಹಿತ್ಯದ ಪುಸ್ತಕಗಳು ಓದುಗನಿಗೆ ನವರಸಗಳ ಅನುಭವದಿಂದ ಆನಂದ ನೀಡುತ್ತವೆ. ಕ್ರಿ.ಶ.1564 ಏಪ್ರಿಲ್‌ 23ರಂದು ಷೇಕ್ಸ್‌ಪೀಯರನ ಹುಟ್ಟಿದ ದಿನವನ್ನೇ ಯುನೆಸ್ಕೋ ವಿಶ್ವ ಪುಸ್ತಕ ದಿನಾಚರಣೆ ಮತ್ತು ಕಾಪಿರೈಟ್ ದಿನಾಚರಣೆಯನ್ನಾಗಿ ಘೋಷಿಸಿರುವುದು ಅರ್ಥಪೂರ್ಣ' ಎಂದರು.

ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ, ಸಂಶೋಧಕಿ ಡಾ.ಹನುಮಾಕ್ಷಿ ಗೋಗಿ, ಬಸವರಾಜ ಆಕಳವಾಡಿ, ಸಾಹಿತಿ ಶಂ.ನಿಂ.ತಿಮ್ಮನಗೌಡರ, ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ಚಂದಪ್ಪ ಅಕ್ಕಿ, ಶಿವಾನಂದ ಹೊದ್ಲೂರ, ಬಿ.ಎಫ್.ಬೀರನಾಯ್ಕರ್, ಅಂಜನಪ್ಪ, ಶಿವಕುಮಾರ ಹಿರೇಮಠ, ಬಿ.ಎನ್.ಹೊರಪೇಟೆ, ಇತರರು ಇದ್ದರು.

ವೈ.ಬಿ.ಜೂಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಮೈಲಾರಪ್ಪ ಉಂಕಿ ವಂದಿಸಿದರು.ಉಪನ್ಯಾಸಕ ಡಾ.ಪ್ರಕಾಶ ಬಳ್ಳಾರಿ ವಂದಿಸಿದರು.

**

>ಅಕ್ಷರ ರೂಪದ ಪುಸ್ತಕಗಳನ್ನು ಓದುವಾಗ ಓದುಗನಿಗೆ ಸಿಗುವ ನಿಜವಾದ ಸುಖ, ಶಾಂತಿ, ಆಹ್ಲಾದ ಮತ್ತು ಆತ್ಮೀಯತೆ ಕಂಪ್ಯೂಟರ್ ಮತ್ತು ಮೊಬೈಲ್‍ಗಳಲ್ಲಿ ಸಿಗುವುದಿಲ್ಲ 
– ಎಚ್‌.ಎಸ್‌.ಪಾಟೀಲ್‌, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT