ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

33 ಅಭ್ಯರ್ಥಿಗಳಿಂದ 50 ನಾಮಪತ್ರ ಸಲ್ಲಿಕೆ

ಕಾಳಿಕಾಂಬ ದೇವಾಲಯದಿಂದ ಎಂ.ಶ್ರೀನಿವಾಸ್‌ ಬೆಂಬಲಿಗರ ಮೆರವಣಿಗೆ, ಸಾವಿರಕ್ಕೂ ಹೆಚ್ಚು ಜನ ಭಾಗಿ
Last Updated 24 ಏಪ್ರಿಲ್ 2018, 10:58 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ 33 ಅಭ್ಯರ್ಥಿಗಳು 50 ನಾಮಪತ್ರ ಸಲ್ಲಿಸಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಎಂ.ಶ್ರೀನಿವಾಸ್‌ 4 ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಐದು ರೂಪಾಯಿ ವೈದ್ಯ ಡಾ.ಎಸ್‌.ಸಿ.ಶಂಕರೇಗೌಡ 2 ನಾಮಪತ್ರ, ಎಸ್‌.ಜೆ.ಮಂಜುನಾಥ್‌ 2  ನಾಮಪತ್ರ, ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ ಅಭ್ಯರ್ಥಿಯಾಗಿ ಕಾವೇರಿ ಶ್ರೇಯಾ 3 ನಾಮಪತ್ರ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಬಿ.ಎಸ್.ಶಿವಕುಮಾರ್   2 ನಾಮಪತ್ರ ಸಲ್ಲಿಸಿದರು.

ನಗರದ ಕಾಳಿಕಾಂಬ ದೇವಾಲಯದಿಂದ ತೆರೆದ ವಾಹನದಲ್ಲಿ ಎಂ.ಶ್ರೀನಿವಾಸ್‌ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಮೆರವಣಿಗೆ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿದ ಕಾರಣ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಜಿಲ್ಲಾ ಪಂಚಾಯಿತಿ ಕಚೇರಿ, ಕೋರ್ಟ್‌ ರಸ್ತೆಗಳಿಗೆ ಪೊಲೀಸರು ಬ್ಯಾರಿಕೇಡ್‌ ಹಾಕಿ ವಾಹನಗಳನ್ನು ನಿಯಂತ್ರಿಸಿದರು.

ಜೋತಿಷ್ಯಕ್ಕೆ ಮೊರೆ ಹೋದ ಮುಖಂಡ: ಎಂ.ಶ್ರೀನಿವಾಸ್‌ ಮಧ್ಯಾಹ 1 ಗಂಟೆಗೆ ಚುನಾವಣಾಧಿಕಾರಿ ಕಚೇರಿ ತಲುಪಿದರು. ಆದರೆ ಜ್ಯೋತಿಷಿಯ ಮಾರ್ಗದರ್ಶನದಂತೆ 2.15ರವರೆಗೂ ಅವರು ನಾಮಪತ್ರ ಸಲ್ಲಿಸಲಿಲ್ಲ. ಕಚೇರಿಯ ಒಳಗೆ ಕುಳಿತಿದ್ದ ಅವರು 2.15ರ ನಂತರ ನಾಮಪತ್ರ ಸಲ್ಲಿಸಿದರು. ‘ಈ ಚುನಾವಣೆಯಲ್ಲಿ ಜೆಡಿಎಸ್‌ ಮುಖಂಡರು ಸಂಘಟಿತರಾಗಿ ಕೆಲಸ ಮಾಡುತ್ತಾರೆ. ನನಗೆ ಟಿಕೆಟ್‌ ನೀಡಿರುವುದರಲ್ಲಿ ಯಾವುದೇ ಗೊಂದಲಗಳಿಲ್ಲ. ಜಿಲ್ಲೆಯ ಎಲ್ಲಾ ಜೆಡಿಎಸ್‌ ಮುಖಂಡರ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ’ ಎಂದು ಎಂ.ಶ್ರೀನಿವಾಸ್‌ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ತಗ್ಗಹಳ್ಳಿ ವೆಂಕಟೇಶ್‌, ಅಶೋಕ್‌ ಜಯರಾಂ, ಕೆ.ಎಸ್‌.ವಿಜಯಾನಂದ್‌, ಎಚ್‌.ಎನ್‌.ಯೋಗೇಶ್‌ ಹಾಜರಿದ್ದರು.

ಧಾರಾವಾಹಿ ಕಲಾವಿದರ ಆಕರ್ಷಣೆ: ಜೆಡಿಎಸ್‌ ಮೆರವಣಿಗೆಯಲ್ಲಿ ಧಾರಾವಾಹಿ ನಟರು ಪಾಲ್ಗೊಂಡು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು. ಎಂ.ಶ್ರೀನಿವಾಸ್‌ ಅಳಿಯ, ನಟ ವಿಶಾಲ್‌ ರಘು, ನಟರಾದ ಸಂದೀಪ್‌, ಮೈಸೂರು ಶ್ರೀಹರಿ, ನಟಿ ತೇಜು ಪೊನ್ನಪ್ಪ ಮುಂತಾದವರು ತೆರೆದ ವಾಹನದಲ್ಲಿ ರೋಡ್‌ ಷೋ ನಡೆಸಿದರು.

ಐದು ರೂಪಾಯಿ ವೈದ್ಯ ನಾಮಪತ್ರ ಸಲ್ಲಿಕೆ: ಐದು ರೂಪಾಯಿ ವೈದ್ಯ ಎಂದೇ ಪ್ರಸಿದ್ಧಿ ಪಡೆದಿರುವ ಚರ್ಮರೋಗ ತಜ್ಞ ಡಾ.ಎಸ್‌.ಸಿ.ಶಂಕರೇಗೌಡ ಬಂದೀಗೌಡ ಬಡಾವಣೆಯ ತಮ್ಮ ನಿವಾಸದಿಂದ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ರುಕ್ಮಿಣಿ ಗೌಡ, ಪುತ್ರಿ ಉಜ್ವಲಾ ಇದ್ದರು.

ಪಕ್ಷೇತರ ಅಭ್ಯರ್ಥಿಯಾಗಿ ಗುತ್ತಿಗೆದಾರ ಎಸ್‌.ಜೆ ಮಂಜುನಾಥ್‌ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿಯಿಂದ ಶನಿವಾರ ನಾಮಪತ್ರ ಸಲ್ಲಿಸಿದ್ದ ಕಾವೇರಿ ಶ್ರೇಯಾ ಸೋಮವಾರ ಇನ್ನೊಂದು ನಾಮಪತ್ರ ಸಲ್ಲಿಸಿದರು.

5 ರೂಪಾಯಿ ವೈದ್ಯರಿಂದ ₹ 1.5 ಕೋಟಿ ಆಸ್ತಿ ಘೋಷಣೆ

ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದ 5 ರೂಪಾಯಿ ವೈದ್ಯ ಎಂದೇ ಪ್ರಸಿದ್ಧಿ ಪಡೆದಿರುವ ಚರ್ಮ ರೋಗ ತಜ್ಞ ಡಾ.ಎಸ್‌.ಸಿ.ಶಂಕರೇಗೌಡ ₹ 1.5 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ.

₹ 91.51 ಲಕ್ಷ ಮೌಲ್ಯದ ಸ್ಥಿರಾಸ್ತಿ, ₹ 2.66 ಲಕ್ಷ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಅವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ತಮ್ಮ ತವರು ಶಿವಳ್ಳಿಯಲ್ಲಿ 5 ಎಕರೆ ಕೃಷಿ ಜಮೀನು, ನಗರದ ಬಂದೀಗೌಡ ಬಡಾವಣೆಯಲ್ಲಿ ಒಂದು ಮನೆ ಹೊಂದಿದ್ದಾರೆ. ಒಂದು ಷವರ್ಲೇಟ್‌ ಬೀಟ್‌ ಕಾರು, ಹೋಂಡ ಆ್ಯಕ್ಟಿವಾ ಸ್ಕೂಟರ್‌ ಇವೆ. ಪತ್ನಿ ರುಕ್ಮಿಣಿ ಗೌಡ ಅವರ ಹೆಸರಿನಲ್ಲಿ ₹ 12.79 ಲಕ್ಷ ಹಣವಿದೆ. 450 ಗ್ರಾಂ ಚಿನ್ನ ಒಂದು ಹೋಂಡಾ ಆ್ಯಕ್ಟೀವಾ ಸ್ಕೂಟರ್‌ ಹೊಂದಿದ್ದಾರೆ. ಪುತ್ರಿ ಉಜ್ವಲಾ ಅವರ ಹೆಸರಿನಲ್ಲಿ ₹ 94 ಸಾವಿರ ಹಣ ಇರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಯಾವುದೇ ಸಾಲ ಇಲ್ಲ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT