ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಮಾರುಕಟ್ಟೆಯಲ್ಲಿ ಸ್ವಯಂಪ್ರೇರಿತ ಬಂದ್‌

ಕಠುವಾ ಬಾಲಕಿ ಮೇಲಿನ ಅತ್ಯಾಚಾರಕ್ಕೆ ಖಂಡನೆ
Last Updated 24 ಏಪ್ರಿಲ್ 2018, 11:15 IST
ಅಕ್ಷರ ಗಾತ್ರ

ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಬಾಲಕಿಯರ ಮೇಲೆ ಅತ್ಯಾಚಾರ ಮಾಡುವವರಿಗೆ ಮರಣದಂಡನೆ ವಿಧಿಸುವಂತೆ ಆಗ್ರಹಿಸಿ ಸೋಮವಾರ ನಗರದ ಮಾರುಕಟ್ಟೆ ಹಾಗೂ
ಹಳೆಯ ಬಂದರು ಪ್ರದೇಶದಲ್ಲಿ ಸ್ವಯಂ ಪ್ರೇರಿತ ಬಂದ್ ಆಚರಿಸಲಾಯಿತು.

ನಗರದ ಕೇಂದ್ರ ಮಾರುಕಟ್ಟೆ, ಮೀನು ಮಾರುಕಟ್ಟೆ, ಬಂದರು ಪ್ರದೇಶಗಳಲ್ಲಿ ವ್ಯಾಪಾರಿಗಳು, ಗುಜರಿ ಅಂಗಡಿಗಳ ಮಾಲೀಕರು ಬಂದ್‌ನಲ್ಲಿ ಪಾಲ್ಗೊಂಡಿದ್ದು, ಸೋಮವಾರ ಅಂಗಡಿಗಳನ್ನು ತೆರೆಯಲಿಲ್ಲ. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಬಂದರು ಪ್ರದೇಶದ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ಜನರ ಓಡಾಟ ವಿರಳವಾಗಿತ್ತು.

ಕಾಶ್ಮೀರದ ಪೈಶಾಚಿಕ ಘಟನೆ ಹಾಗೂ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸುವ ಬ್ಯಾನರ್‌ ಮತ್ತು ಪೋಸ್ಟರ್‌ಗಳನ್ನು ಮಾರುಕಟ್ಟೆಯ ವಿವಿಧೆಡೆ ಗೋಡೆಗಳಿಗೆ ಅಂಟಿಸಲಾಗಿತ್ತು.

ಹಳೆಯ ಬಂದರು ಧಕ್ಕೆಯ ಹಸಿ ಮೀನು ಮಾರಾಟಗಾರರು ಹಾಗೂ ಕಮಿಷನ್‌ ಏಜೆಂಟರ ಸಂಘದಿಂದ ಬಂದ್‌ಗೆ ಬೆಂಬಲ ಸೂಚಿಸಿದ್ದು, ಮೀನಿನ ವ್ಯಾಪಾರವೂ ಸ್ಥಗಿತಗೊಂಡಿತ್ತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೋಟ್‌ಗಳು ಸಮುದ್ರಕ್ಕೆ ಇಳಿಯಲಿಲ್ಲ.

ಭಾನುವಾರವೇ ಬಂದ್‌ಗೆ ಸಿದ್ಧತೆ ಮಾಡಿಕೊಂಡಿದ್ದ ವ್ಯಾಪಾರಿ ಗಳು ಯಾವುದೇ ಸರಕನ್ನು ತರಿಸಲಿಲ್ಲ. ಸೋಮವಾರವೂ ಯಾವುದೇ ವಹಿವಾಟು ನಡೆಯದೇ ಇರುವುದರಿಂದ ಖರೀದಿಗೆ ಬಂದಿದ್ದ ನಾಗರಿಕರು ಬರಿಗೈಲಿ ವಾಪಸಾಗುವಂತಾಯಿತು.

ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಕಠುವಾ ಮತ್ತು ಉನ್ನಾವೋ ಘಟನೆಗಳಲ್ಲಿ ಭಾಗಿಯಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅವರಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಕೂಡಲೇ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT