ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ಬದಲಿಸಲು ಅವಕಾಶ ನೀಡದಿರಿ’

ಪುರಭವನದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ: ಪ್ರಕಾಶ್‌ ರೈ
Last Updated 24 ಏಪ್ರಿಲ್ 2018, 11:18 IST
ಅಕ್ಷರ ಗಾತ್ರ

ಮಂಗಳೂರು: ಬ್ರಿಟಿಷರ ಆಳ್ವಿಕೆಯ ಬಳಿಕ ಸ್ವತಂತ್ರ ಬಂದ ನಂತರ ಬಾಬಾ ಸಾಹೇಬ್‌ ಅಂಬೇಡ್ಕರ್‌ ಎಲ್ಲ ಭಾಷೆ, ಧರ್ಮ, ವಿಭಿನ್ನ ಆಲೋಚನೆಗಳನ್ನು ಅಧ್ಯಯನ ಮಾಡಿ ಭಾರತದ ಸಂವಿಧಾನ ರಚಿಸಿದರು. ಶ್ರೀಮಂತರು ಬಡವರ ಮೇಲೆ ದೌರ್ಜನ್ಯ ಮಾಡಬಾರದು, ಪ‍ಕ್ಷಪಾತ, ಅಧಿಕಾರ ದುರುಪಯೋಗ, ದೌರ್ಜನ್ಯ ಮಾಡಬಾರದು ಎಂದು ಹೇಳುವ ಸಂವಿಧಾನವನ್ನು ಬದಲಾಯಿಸಬೇಕು ಎಂದು ಹೇಳುವುದು ಎಷ್ಟು ಸರಿ ಎಂದು ಬಹುಭಾಷಾ ನಟ ಪ್ರಕಾಶ್‌ ರೈ ಪ್ರಶ್ನಿಸಿದರು.

ದಲಿತ ಸಂಘರ್ಷ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸೋಮವಾರ ನಗರದ ಪುರಭವನದಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಜಗತ್ತಿನ ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ‌ಹಿಂದೂ ಧರ್ಮ ಬೆಂಕಿ ಹಚ್ಚುವ ಧರ್ಮವಲ್ಲ. ಬದಲಾಗಿ ದೀಪ ಹಚ್ಚುವ ಧರ್ಮ. ಈ ಪ್ರಪಂಚದಲ್ಲಿ ಸರ್ವಾಧಿಕಾರ ಮಾಡಿದ ಯಾರೂ ಒಳ್ಳೆಯ ಕೊನೆಯನ್ನು ಕಂಡ ಚರಿತ್ರೆಯೇ ಇತಿಹಾಸದಲ್ಲಿ ಇಲ್ಲ. ಆದರೆ ಅಂತಹವರ ದೆಸೆಯಿಂದ ಕೆಲವು ಮುಗ್ಧರು ಬಲಿಯಾಗುತ್ತಿದ್ದಾರೆ. ಗಾಯಗೊಂಡವರು ಏಳುವುದಕ್ಕೆ ಸಮಯ ಆಗುತ್ತದೆ. ಅದರರ್ಥ ಜನರು ನಿರಂತರವಾದ ದೌರ್ಜನ್ಯಕ್ಕೆ ಹೆದರುತ್ತಾರೆ ಎಂದೇನೂ ಅಲ್ಲ.  ಜನರು ಕೆಲವೊಮ್ಮೆ ಮೂರ್ಖರಾಗುತ್ತಾರೆ. ಆದರೆ ನಿರಂತರವಾಗಿ ಮೂರ್ಖರಾಗುವುದಿಲ್ಲ. 120 ಕೋಟಿ ಜನರ ಆಶೀರ್ವಾದ ತಮಗಿದೆ ಎಂದು ಹೇಳಿಕೊಳ್ಳುವವರು ವಿಮರ್ಶೆ ಮಾಡಿಕೊಳ್ಳಬೇಕು. ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಪಶ್ಚಿಮ ಬಂಗಾಳದಲ್ಲಿ ಜನರ ಆಶೀರ್ವಾದ  ಇಲ್ಲದೇ ಇದ್ದರೂ, 120 ಕೋಟಿ ಎಂದು ಯಾವ ಅರ್ಥದಲ್ಲಿ ಹೇಳಿಕೊಳ್ಳುತ್ತಾರೆ ಎಂದು ವಿಚಾರ ಮಾಡಬೇಕಾಗಿದೆ ಎಂದು ಅವರು ವಿವರಿಸಿದರು.

ದಕ್ಷಿಣ ಕನ್ನಡ, ಮಂಗಳೂರು, ಬುದ್ಧಿವಂತಿಕೆ, ವ್ಯಾಪಾರಕ್ಕೆ ಹೆಸರುವಾಸಿ. ಆದರೆ ಕಳೆದ ಕೆಲವು ವರ್ಷಗಳಿಂದ ಈ ಜಿಲ್ಲೆಗೆ ಕೋಮುವಾದದ ಹಣೆಪಟ್ಟಿ ಬಂದಿದೆ. ಅದನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಜನರು ಯೋಚಿಸಬೇಕಾಗಿದೆ. ನಮ್ಮ ಮನೆಯಷ್ಟೇ ಅಲ್ಲ, ರಾಜ್ಯ ದೇಶವನ್ನು ಚೆನ್ನಾಗಿ ಇರಿಸುವ ಜವಾಬ್ದಾರಿ ಎಲ್ಲರ ಮೇಲೆ ಇದೆ. ಜಿಲ್ಲೆಯಿಂದ ಹೊರಗೆ ಹೋದಾಗ ‘ದಕ್ಷಿಣ ಕನ್ನಡದವರು’ ಎಂದು ಹೇಳುವ ಹೆಮ್ಮೆ ನಮ್ಮಲ್ಲಿ ಮೂಡುವಂತಾಗಬೇಕು. ಆ ನಿಟ್ಟಿನಲ್ಲಿ ಮುಂದಿನ ಚುನಾಚವಣೆಯಲ್ಲಿ ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಮತ ಹಾಕಬೇಕು. ಕುರುಕ್ಷೇತ್ರದಲ್ಲಿ ಇಂಟರ್‌ನೆಟ್‌ ಇತ್ತು ಎಂದು ಹೇಳುವ ಮೂರ್ಖರ ಕೈಯಿಂದ ದೇಶವನ್ನು ಪಾರು ಮಾಡಬೇಕು ಎಂದರು.

ಪ್ರತಿಪಕ್ಷವೇ ಇಲ್ಲದ ಸರ್ಕಾರ ನಡೆಸುವ ಆಕಾಂಕ್ಷೆ ಸರಿಯಲ್ಲ. ನಮಗೆ ಪ್ರತಿಪಕ್ಷವಿಲ್ಲದ ಸರ್ಕಾರವೇ ಬೇಡ. ಧರ್ಮದ ಹೆಸರಲ್ಲಿ ರಾಜಕಾರಣ ಮಾಡದೇ, ಪ್ರಗತಿಯಿಂದ ಮಾತ್ರ ರಾಜಕೀಯ ಮಾಡುವ ಬಗ್ಗೆ ಮನವರಿಕೆ ಆದ ಮೇಲೆ ಸರ್ಕಾರ ರಚನೆಗೆ ಮುಂದಾದಾಗ ಜನರೂ ಅವಕಾಶ ಕಲ್ಪಿಸುತ್ತಾರೆ. ಅಲ್ಲಿಯವರೆಗೆ ಜನರು ಅವಕಾಶ ನೀಡಲಾರರು ಎಂದು ಅವರು ಹೇಳಿದರು. 

ಜಿಲ್ಲಾ ಅಧ್ಯಕ್ಷ ರಘು ಕೆ.ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಮೆಹಬೂಬ್ ಪಾಷಾ ಮಲ್ನಾಡ್, ಅಖಿಲ ಭಾರತ ವಿಚಾರವಾದಿ ವೇದಿಕೆ ಅಧ್ಯಕ್ಷ ನರೇಂದ್ರ ನಾಯಕ್, ಉಪನ್ಯಾಸಕಿ ಜ್ಯೋತಿ ಚೇಳ್ಯಾರ್, ಸಮಿತಿಯ ಮಹಿಳಾ ಮುಖ್ಯಸ್ಥೆ ಸರೋಜಿನಿ, ಕೊರಗ ಸಮುದಾಯದ ಮುಖಂಡ ಬಾಲರಾಜ್ ಹಾಗೂ ನಿವೃತ್ತ ಸಾರಿಗೆ ಅಧಿಕಾರಿ ಕೇಶದ ಧರಣಿ ಇದ್ದರು. ಕೃಷ್ಣಾನಂದ ಡಿ. ಪ್ರಸ್ತಾವನೆ ಗೈದರು. ರುಕ್ಮಯ ಕಟೀಲ್‍ ಸ್ವಾಗತಿಸಿದರು. ನಗರದ ಬಾವುಟಗುಡ್ಡೆಯಿಂದ ಸಭಾಂಗಣ ತನಕ ಜನಕಲಾ ಮೇಳ ನಡೆಯಿತು.

ದಲಿತ ವಿರೋಧಿ ಧೋರಣೆ: ದೇವದಾಸ್‌

ಉದ್ಘಾಟನೆ ಮಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್ ಮಾತನಾಡಿ, ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಈ ತೀರ್ಪು ನೀಡಿದ ನ್ಯಾಯಮೂರ್ತಿಗಳಲ್ಲಿ ಓರ್ವರಾದ ಲಲಿತ್ ಅವರು ಈ ಹಿಂದೆ ಜೈಲಿನಲ್ಲಿದ್ದ ಅಮಿತ್ ಶಾ ಪರವಾಗಿ ವಾದಿಸಿದ್ದವರು. ದಲಿತ ನೌಕರರ ಮುಂಬಡ್ತಿ ಸಂಬಂಧಿಸಿ ಕೂಡ ಸುಪ್ರೀಂ ಕೋರ್ಟ್ ಇದೇ ರೀತಿಯ ತೀರ್ಪು ಪ್ರಕಟಿಸಿದೆ. ಕೋರ್ಟ್‌ ಕೇಂದ್ರದ ಕೈಗೊಂಬೆ ಆದಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT