ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಜನಶಕ್ತಿ ಪ್ರದರ್ಶನ

ತಿ.ನರಸೀಪುರ ಕ್ಷೇತ್ರ: ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿ 7 ನಾಮಪತ್ರ
Last Updated 24 ಏಪ್ರಿಲ್ 2018, 11:28 IST
ಅಕ್ಷರ ಗಾತ್ರ

ತಿ.ನರಸೀಪುರ: ಇಲ್ಲಿನ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ಕಾಂಗ್ರೆಸ್, ಬಿಜೆಪಿ, ಎಸ್‌ಜೆಪಿ ಅಭ್ಯರ್ಥಿಗಳು ಸೇರಿ ಒಟ್ಟು 7 ಮಂದಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ‘ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಅಭಿವೃದ್ಧಿಯೇ ಗೆಲುವಿಗೆ ಶ್ರೀರಕ್ಷೆ. ಬಿಜೆಪಿ ಮತ್ತು ಜೆಡಿಎಸ್ ಸಿದ್ಧಾಂತ ಇಲ್ಲದ, ತತ್ವ ರಹಿತ ರಾಜಕೀಯ ಪಕ್ಷಗಳಾಗಿವೆ’ ಎಂದು ಟೀಕಿಸಿದರು.

ಬಿಜೆಪಿ ಸಂವಿಧಾನ ಬದಲಿಸುವ ಚಿಂತನೆಯಲ್ಲಿದೆ. ಪ್ರಜಾಪ್ರಭುತ್ವ ನಾಶಕ್ಕೆ ಹೊರಟ ಬಿಜೆಪಿಯನ್ನು ಬೆಂಬಲಿಸುವ ಅವಕಾಶವಾದಿ ರಾಜಕಾರಣಕ್ಕೆ ಜೆಡಿಎಸ್‌ ಮುಂದಾಗಿದೆ. ಜನರು ಈ ಎರಡೂ ಪಕ್ಷಗಳನ್ನು ಜನರಿಂದದ ದೂರವಿಡಬೇಕು ಎಂದು ಹೇಳಿದರು.

ಚಾಮುಂಡೇಶ್ವರಿ, ಟಿ. ನರಸೀಪುರ, ವರುಣಾ ಸೇರಿ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಪಟ್ಟಣದ ಮಹಾಲಕ್ಷ್ಮೀ ಸಮೇತ ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟಿದ್ದು, ಚಿತ್ರನಟ ಆದಿತ್ಯ ಮತ್ತು ನಟಿ ರಿಷಿಕಾ ಸಿಂಗ್, ಪುತ್ರ ಸುನಿಲ್‌ ಬೋಸ್‌ ಇದ್ದರು.

ದೇವಾಲಯದಿಂದ ಪ್ರಮುಖ ಬೀದಿಗಳಲ್ಲಿ ರೋಡ್‌ ಶೋ ನಡೆಸಿದರು. ಮಾಜಿ ಶಾಸಕ ಕೃಷ್ಣಪ್ಪ, ಜಿ.ಪಂ ಮಾಜಿ ಸದಸ್ಯೆ ಸುಧಾ ಮಹದೇವಯ್ಯ, ತಾ.ಪಂ ಅಧ್ಯಕ್ಷ ಚೆಲುವರಾಜ್, ಸದಸ್ಯರಾದ ಕುಕ್ಕೂರು ಗಣೇಶ್, ಉಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಪುರಸಭೆ ಅಧ್ಯಕ್ಷ ಉಮೇಶ್, ಸದಸ್ಯ ರಾಘವೇಂದ್ರ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮದ್ ಅಲಿ, ಡಿ.ಪದ್ಮನಾಭ, ಬಿ.ಆರ್.ರಂಗಸ್ವಾಮಿ, ಲಕ್ಷ್ಮಿನಾರಾಯಣ, ಮೈಸೂರು ವಿಭಾಗದ ಅಲ್ಪಸಂಖ್ಯಾತರ ಉಪಾಧ್ಯಕ್ಷ ಎನ್.ಕೆ.ಫರೀದ್, ಮನ್ಸೂರ್ ಅಲಿ ಖಾನ್‌ ಇತರರು ಇದ್ದರು.


ಬಿಜೆಪಿ ಅಭ್ಯರ್ಥಿ ನಾಮಪತ್ರ

ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ತಮ್ಮ ಬೆಂಬಲಿಗರೊಂದಿಗೆ ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರೋಡ್ ಶೋ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಅವರು ’ಅಭಿವೃದ್ಧಿ ಮಾಡಿದ್ದೇವೆ ಎನ್ನುವ ಸಚಿವರು ರೈತರ ಹಿತ ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಜಮೀನುಗಳಿಗೆ ನೀರು ಕೊಡಲಿಲ್ಲ. ಅವರನ್ನು ಸಾಲಗಾರರನ್ನಾಗಿ ಮಾಡಿರುವುದೇ ಇವರ ಸಾಧನೆ’ ಎಂದು ಟೀಕಿಸಿದರು.

ಹಣ ಬಲದಿಂದ ಕಾಂಗ್ರೆಸ್ ಅಭ್ಯರ್ಥಿ ಚುನಾವಣೆ ಎದುರಿಸುತ್ತಿದ್ದಾರೆ ಹೊರತು ವೈಯಕ್ತಿಕ ವರ್ಚಸ್ಸಿನಿಂದಲ್ಲ. ಇಲ್ಲಿ ಹಣ ಬಲ ಮತ್ತು ಜನಬಲದ ನಡುವೆ ಚುನಾವಣೆ ನಡೆದಿದೆ. ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದರು.

ಮಾಜಿ ಶಾಸಕರಾದ ಚಿಕ್ಕಮಾದನಾಯಕ, ಸುನಿತಾ ವೀರಪ್ಪಗೌಡ, ಸಿ.ರಮೇಶ್, ಮುಖಂಡರಾದ ಧರಣಿ ಸುಂದರೇಶನ್, ಕ್ಷೇತ್ರಾಧ್ಯಕ್ಷ ಪರಶಿವಮೂರ್ತಿ ಇದ್ದರು.

ಉಳಿದಂತೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಚಿದರಹಳ್ಳಿ ಮಹದೇವಸ್ವಾಮಿ, ಪಕ್ಷೇತರರಾಗಿ ನಿಂಗಯ್ಯ, ಕುಮಾರಕ್ರಾಂತಿ, ಬಸವರಾಜು, ಮಹೇಶ್ಕುಮಾರ್ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT