ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ, ಮುಸ್ಲಿಮರಿಗೆ ಉಪಮುಖ್ಯಮಂತ್ರಿ ಸ್ಥಾನ

ಜೆಡಿಎಸ್‌ ಎದುರಾಳಿ ಬಿಜೆಪಿ ಅಲ್ಲ; ಕಾಂಗ್ರೆಸ್‌– ಎಚ್‌.ಡಿ. ಕುಮಾರಸ್ವಾಮಿ
Last Updated 24 ಏಪ್ರಿಲ್ 2018, 11:31 IST
ಅಕ್ಷರ ಗಾತ್ರ

ಮೈಸೂರು: ಜೆಡಿಎಸ್‌ ಪಕ್ಷವು ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ದಲಿತ ಹಾಗೂ ಮುಸ್ಲಿಂ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನಮಾನ ನೀಡಲಾಗುವುದು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಸೋಮವಾರ ಪುನರುಚ್ಚರಿಸಿದರು.

‘ರಾಜ್ಯದಲ್ಲಿ ಬಿಜೆಪಿ ನಮಗೆ ಸ್ಪರ್ಧಿಯೇ ಅಲ್ಲ. ನಮ್ಮ ನೇರ ಎದುರಾಳಿ ಕಾಂಗ್ರೆಸ್‌. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾದಾಮಿಯಲ್ಲೂ ಕಠಿಣ ಪೈಪೋಟಿ ನೀಡುತ್ತಿರುವುದು ನಾವೇ. ಕಾಂಗ್ರೆಸ್‌ ಹಾಗೂ ಬಿಜೆಪಿ ಕರ್ನಾಟಕದ ದೊಡ್ಡ ಶತ್ರುಗಳು. ಪಕ್ಷವು ಬಹುಮತ ಪಡೆಯುವ ವಿಶ್ವಾಸವಿದೆ’ ಎಂದು ಮಾಧ್ಯಮ ಸಂವಾದದಲ್ಲಿ ತಿಳಿಸಿದರು.

ಸಿದ್ದರಾಮಯ್ಯನವರ ಜೊತೆ ಮೂಲ ಕಾಂಗ್ರೆಸ್ಸಿಗರು ಯಾರೂ ಇಲ್ಲ. ಎಲ್ಲರನ್ನೂ ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್‌ನೊಳಗೆ ಈಗ ಅವರು ಏಕಾಂಗಿಯಾಗಿದ್ದಾರೆ ಎಂದರು.

‘ನಾನು ಯಾರಿಂದಲೂ ಜಾತ್ಯತೀತ ವಿಚಾರದ ಬಗ್ಗೆ ಪಾಠ ಕಲಿಯಬೇಕಾಗಿಲ್ಲ. ಕಾಂಗ್ರೆಸ್‌ನ ಜಾತ್ಯತೀತ ಧೋರಣೆ ಢೋಂಗಿತನದ್ದು. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ನವರೇ ಕಾರಣ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಯಾರೋ ಬರೆದುಕೊಟ್ಟಿದ್ದನ್ನು ಓದಿ ಹೋಗುತ್ತಾರೆ’ ಎಂದು ವ್ಯಂಗ್ಯವಾಡಿದರು.

ಏ.25 ರಂದು ಬಿಎಸ್ಪಿ ನಾಯಕಿ ಮಾಯಾವತಿ ಮೈಸೂರಿಗೆ ಪ್ರಚಾರಕ್ಕಾಗಿ ಬರುತ್ತಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಅಸಾದುದ್ದೀನ್‌ ಓವೈಸಿ ಪ್ರಚಾರ ಮಾಡಲಿದ್ದಾರೆ. ತೆಲುಗು ಮಾತನಾಡುವವರು ಹೆಚ್ಚಿರುವ ಪ್ರದೇಶಗಳಲ್ಲಿ ಪ್ರಚಾರ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ ಎಂದರು.

ಗುತ್ತಿಗೆದಾರರ ಗತಿ ಏನು: ‘ಸಿದ್ದರಾಮಯ್ಯ ಅವರು ಚುನಾವಣೆಗಾಗಿ ಹಣ ಸಂಗ್ರಹಿಸಲು ಕೊನೆ ಗಳಿಗೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಘೋಷಿಸಿದ್ದಾರೆ. ರಾಜ್ಯದ ಬೊಕ್ಕಸ ಬರಿದಾಗಿದ್ದು, ಗುತ್ತಿಗೆದಾರರರಿಂದ ಹಣ ಸಂಗ್ರಹಿಸಲಾಗಿದೆ. ಕಾಂಗ್ರೆಸ್‌ ಸೋತರೆ ಗುತ್ತಿಗೆದಾರರ ಗತಿ ಏನು’ ಎಂದು ಪ್ರಶ್ನಿಸಿದರು.

‘10 ಪರ್ಸೆಂಟ್‌ ಸರ್ಕಾರ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿದರೆ ಮುಖ್ಯಮಂತ್ರಿಯವರು ದಾಖಲೆ ಕೇಳುತ್ತಾರೆ. ದಾಖಲೆಯನ್ನು ಗುತ್ತಿಗೆದಾರರೇ ನೀಡಲಿದ್ದಾರೆ’ ಎಂದು ತಿರುಗೇಟು ನೀಡಿದರು.

ಹೆಚ್ಚಿದ್ದು ಅಬಕಾರಿ ಆದಾಯ: ಅನ್ನಭಾಗ್ಯ ಯೋಜನೆಯಿಂದ ಅಬಕಾರಿ ಇಲಾಖೆಯ ಆದಾಯ ಹೆಚ್ಚಿದೆ. ಒಂದು ಕಡೆ ನೀಡಿ ಮತ್ತೊಂದು ಕಡೆಯಿಂದ ವಾಪಸ್‌ ಪಡೆಯಲು ಸಿದ್ದರಾಮಯ್ಯ ರೂಪಿಸಿರುವ ತಂತ್ರವಿದು ಎಂದು ವ್ಯಂಗ್ಯವಾಡಿದರು.

ಚಾಮುಂಡೇಶ್ವರಿಯಲ್ಲೇ ನೀರಿಗೆ ಸಮಸ್ಯೆ: ನೀರಾವರಿ ಯೋಜನೆಗಳಿಗಾಗಿ ₹ 50 ಸಾವಿರ ಕೋಟಿ ಖರ್ಚು ಮಾಡಿರುವುದಾಗಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ‌. ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಬಾದಾಮಿಯಲ್ಲೂ ನೀರಿಗೆ ತತ್ವಾರ ಇದೆ. ಅಷ್ಟೊಂದು ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.

‘ನೂರಾರು ಕೋಟಿ ಖರ್ಚು ಮಾಡಿ ಜಾತಿ ಗಣತಿ ನಡೆಸಿದರು. ಆದರೆ, ಸತ್ಯಾಂಶ ಮುಚ್ಚಿಟ್ಟರು. ಈ ಸರ್ಕಾರ ಆರಂಭದಿಂದಲೂ ತೆರಿಗೆ ಹಣವನ್ನು ದುರ್ಬಳಕೆ ಮಾಡುತ್ತಿದೆ’ ಎಂದು ಆರೋಪಿಸಿದರು.

ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ ₹ 5 ಸಾವಿರ ನೀಡುವುದಾಗಿ ಈ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಮೂರು ವರ್ಷಗಳ ಹಿಂದೆಯೇ ಈ ಯೋಜನೆ ಜಾರಿಗೆ ತಂದಿದ್ದರೆ ರೈತರ ಬಗೆಗಿನ ಅವರ ಕಾಳಜಿಯನ್ನು ಮೆಚ್ಚಬಹುದಿತ್ತು ಎಂದರು.‌

ಇದು ನುಡಿದಂತೆ ನಡೆದ ಸರ್ಕಾರ ಅಲ್ಲ; ನುಡಿದಂತೆ ಒಡೆದ ಸರ್ಕಾರ. ಸಿದ್ದರಾಮಯ್ಯನವರು ಅತಿ ಬುದ್ಧಿವಂತಿಕೆ ತೋರಿಸಲು ಹೋಗಿ ಮೈಮೇಲೆ ಹುಳು ಬಿಟ್ಟುಕೊಂಡಿದ್ದಾರೆ ಎಂದು ಕುಟುಕಿದರು.

ಬಿಜೆಪಿ–ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದಾಗ ಯಡಿಯೂರಪ್ಪ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದು ನೆನಪಾಗಿರಬಹುದು’ ಎಂದು ತಿರುಗೇಟು ನೀಡಿದರು.

ಅಪ್ಪ–ಮಗ ಯಾರು: ಪಕ್ಷದ ಅಭ್ಯರ್ಥಿಯನ್ನು ಸೋಲಿಸುವಂತೆ ಭವಾನಿ ರೇವಣ್ಣ ಹೇಳಿದ್ದಾರೆ ಎನ್ನಲಾದ ವಿಡಿಯೊ ವೈರಲ್‌ ಕುರಿತು, ‘ಅಪ್ಪ–ಮಗ ಯಾರೆಂದು ಅವರು ಹೇಳಿಲ್ಲ. ಅದು ಜಿ.ಟಿ.ದೇವೇಗೌಡ
ಹಾಗೂ ಅವರ ಪುತ್ರನ ಬಗ್ಗೆಯೂ ಇರಬಹುದಲ್ಲವೇ? ಸಾ.ರಾ.ಮಹೇಶ್‌ ಅವರು ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತಾರೆ’ ಎಂದರು.

‘ನಾನು ಸ್ವಯಂಘೋಷಿತ ಸಿ.ಎಂ ಅಲ್ಲ‌’

ಮೈಸೂರು: ‘ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ರೀತಿ ನಾನು ಸ್ವಯಂಘೋಷಿತ ಮುಖ್ಯಮಂತ್ರಿ ಅಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

ಈ ವಿಚಾರವನ್ನು ಜನರ ತೀರ್ಮಾನಕ್ಕೆ ಬಿಟ್ಟಿದ್ದೇನೆ. ಜೆಡಿಎಸ್‌ 25ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡುತ್ತಿದ್ದಾರೆ. ಆದರೆ, ಯಾರಿಗೆ ಎಷ್ಟು ಸ್ಥಾನ ಕೊಡಬೇಕು ಎಂಬ ತೀರ್ಮಾನ ಕೈಗೊಳ್ಳುವವರು ಮತದಾರರು ಎಂದರು.

‘ಪಕ್ಷದಲ್ಲಿ ನನ್ನದು ಏಕಾಂಗಿ ಹೋರಾಟವಾಗಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ನಾಮಪತ್ರ ಸಲ್ಲಿಸಲು ಮಾತ್ರ ಅಲ್ಲಿಗೆ ಹೋಗಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT