ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುರಾಡಳಿದಿಂದ ಕ್ಷೇತ್ರದ ಅಭಿವೃದ್ಧಿ ಹಿನ್ನಡೆ’

ಜೆಡಿಎಸ್, ಕಾಂಗ್ರಸ್‌, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ
Last Updated 24 ಏಪ್ರಿಲ್ 2018, 11:36 IST
ಅಕ್ಷರ ಗಾತ್ರ

ಮಾನ್ವಿ: ‘ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಪೂರೈಸುವಲ್ಲಿ ವಿಫಲರಾಗಿರುವ ಮತ್ತು ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸದ ಶಾಸಕರಿಗೆ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಬೇಕು’ ಎಂದು ಜೆಡಿಎಸ್‌ ಪಕ್ಷದ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಸೋಮವಾರ ನಾಮಪತ್ರ ಸಲ್ಲಿಕೆ ಪ್ರಯುಕ್ತ ಪಟ್ಟಣದ ಬಸವ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.‘ಶಾಸಕ ಜಿ.ಹಂಪಯ್ಯ ನಾಯಕ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾವು ಆಯ್ಕೆಯಾದ ನೂರು ದಿನಗಳಲ್ಲಿ ಮಾನ್ವಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಗೊಳಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಿಲ್ಲ’ ಎಂದು ಅವರು ಆರೋಪಿಸಿದರು.

ಕ್ಷೇತ್ರದ ಕವಿತಾಳ, ಕಲ್ಲೂರು ಮುಂತಾದ ಹೋಬಳಿ ಕೇಂದ್ರ ಹಾಗೂ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಕ್ಷೇತ್ರದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸಲು ಶಾಸಕರ ಬೇಜವಾಬ್ದಾರಿಯೇ ಕಾರಣ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ತುಂಗಭದ್ರಾ ಕಾಡಾ ಅಧ್ಯಕ್ಷ ಪದವಿ ಹೊಂದಿದ್ದರೂ ಕೂಡ ಎಡದಂಡೆ ನಾಲೆಯ ಕೊನೆ ಭಾಗಕ್ಕೆ ನೀರು ತಲುಪದ ಕಾರಣ ಸತತ ಮೂರು ವರ್ಷ ಬೆಳೆಗಳು ಒಣಗಿ ರೈತರು ಕೋಟ್ಯಾಂತರ ರೂಪಾಯಿ ಬೆಳೆಹಾನಿ ಅನುಭವಿಸಿದ್ದಾರೆ.ಶಾಸಕರ ದುರಾಡಳಿತದಿಂದ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಕ್ಷೇತ್ರದ ಸರ್ವಾಂಗೀಣ ಪ್ರಗತಿ ಮತ್ತು ಸರ್ವ ಧರ್ಮ, ಜಾತಿ ಜನಾಂಗಗಳ ಜನರು ಶಾಂತಿಯಿಂದ ಇರಲು ತಮ್ಮನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು’ ಎಂದು ಅವರು ಮನವಿ ಮಾಡಿದರು.

ಜೆಡಿಎಸ್‌ ಪಕ್ಷದ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಬಲ್ಲಟಗಿ, ಪುರಸಭೆಯ ಮಾಜಿ ಅಧ್ಯಕ್ಷ ಮಹ್ಮದ್‌ ಇಸ್ಮಾಯಿಲ್‌, ಪುರಸಭೆಯ ಪ್ರತಿಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ, ಮುಖಂಡರಾದ ಲೋಕರೆಡ್ಡಿಗೌಡ ಸಿರವಾರ, ಜಂಬುನಾಥ ಯಾದವ್‌, ಬಿಚ್ಚಾಲಿ ದುರುಗಪ್ಪ, ಕಾಶೀನಾಥ ಸರೋದೆ ಸಿರವಾರ, ಖಲೀಲ್‌ ಖುರೇಷಿ, ಸುಭಾನ್‌ ಬೇಗ್‌, ನಾರಾಯಣರಾವ್‌ ದೇಸಾಯಿ, ರವಿಕುಮಾರ ವಕೀಲ, ಜೆ,.ಎಚ್‌.ದೇವರಾಜ, ಮಲ್ಲಪ್ಪ ಹೂಗಾರ, ಬಿ.ನಾಗರಾಜ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಆದೆಪ್ಪ, ನಗರ ಘಟಕದ ಅಧ್ಯಕ್ಷೆ ಸೌಂದರ್ಯಾ ಪ್ರಸಾದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು. ಪಟ್ಟಣದ ಎಂಟಿಎಂ ಟಾಕೀಸ್‌ ಹತ್ತಿರ ಇರುವ ಜೆಡಿಎಸ್‌ ಪಕ್ಷದ ಕಚೇರಿಯಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆ ನಡೆಯಿತು. ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಮತ್ತು ಮುಖಂಡರು ಎತ್ತಿನ ಬಂಡಿಯಲ್ಲಿ ತೆರಳಿದರು.

‘ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ’

ಮಾನ್ವಿ: ‘ಕ್ಷೇತ್ರದ ಪ್ರಗತಿಗಾಗಿ ಶಾಸಕ ಜಿ.ಹಂಪಯ್ಯ ನಾಯಕ ಅವರು ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳಿಗೆ ಮನ್ನಣೆ ನೀಡಿ ಮತದಾರರು ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆ ಮಾಡಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಹೇಳಿದರು.

ಸೋಮವಾರ ಶಾಸಕ ಜಿ.ಹಂಪಯ್ಯ ನಾಯಕ ಅವರ ನಾಮಪತ್ರ ಸಲ್ಲಿಕೆ ಅಂಗವಾಗಿ ನಡೆದ ಬಹಿರಂಗ ಸಭೆಯ್ಲಲಿ ಅವರು ಮಾತನಾಡಿದರು. ‘ ಸತತ ಎರಡು ಬಾರಿ ಆಯ್ಕಯಾಗಿರುವ ಹಂಪಯ್ಯ ನಾಯಕ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಸದ್ಬಳಕೆ ಮಾಡಿದ್ದಾರೆ. ಕುಡಿಯುವ ನೀರಿನ ಕೆರೆ , ಗ್ರಾಮೀಣ ರಸ್ತೆಗಳ ನಿರ್ಮಾಣ, ಶಾಲಾ ಕಾಲೇಜುಗಳ ಕಟ್ಟಡ , ಸಮುದಾಯ ಭವನಗಳ ನಿರ್ಮಾಣ, ಪದವಿ ಕಾಲೇಜುಗಳ ಮಂಜೂರಾತಿ ಸೇರಿದಂತೆ ಅನೇಕ ಜನಪರ ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಸಂಸದ ಬಿ.ವಿ.ನಾಯಕ ಮಾತನಾಡಿ,‘ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡಳಿತದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಮೂಲಕ ಎಲ್ಲ ವರ್ಗದ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯದ ಪ್ರಗತಿಗಾಗಿ ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷದ ಸರ್ಕಾರ ಅವಶ್ಯಕ. ಮತದಾರರು ಮತ್ತೊಮ್ಮೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಬೆಂಬಲಿಸಬೇಕು’ ಎಂದು ಕೋರಿದರು.

ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಣ್ಣ ಇರಬಗೇರಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್ ಗಫೂರ್‌ ಸಾಬ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್‌ ಇಲಿಯಾಸ್‌ ಖಾದ್ರಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಸೈಯದ್‌ ಅಬೀದ್‌ ಖಾದ್ರಿ, ಮುಖಂಡರಾದ ಸಜ್ಜಾದ್ ಹುಸೇನ ಮತವಾಲೆ, ಮುಖಂಡರಾದ ರಾಜಾ ವಸಂತ ನಾಯಕ, ಲಕ್ಷ್ಮೀನಾರಾಯಣ ಯಾದವ್‌, ಬಷೀರುದ್ದೀನ್‌, ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.
ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಬಿಜೆಪಿ ಅಭ್ಯರ್ಥಿ ಬಿ.ಮಾನಪ್ಪ ನಾಯಕ ಸೋಮವಾರ ಪಕ್ಷದ ಮುಖಂಡರೊಂದಿಗೆ ಬಂದು  ನಾಮಪತ್ರ ಸಲ್ಲಿಸಿದರು. ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಸಿದ್ದಲಿಂಗಪ್ಪ ವಕೀಲ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT