ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಆಡಳಿತ ನಿಶ್ಚಿತ

ಲಿಂಗಸುಗೂರು: ಅದ್ಧೂರಿ ಮೆರವಣಿಗೆ, ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜ ಹೇಳಿಕೆ
Last Updated 24 ಏಪ್ರಿಲ್ 2018, 11:38 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಐದು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸ್ಥಿರ ಸರ್ಕಾರ ನಾಡಿನ ಜನರ ಪರವಾಗಿ ಉತ್ತಮ ಕಾರ್ಯಗಳನ್ನು ಮಾಡಿದೆ. ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬರಲಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜ ತಿಳಿಸಿದರು.

ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿ ಡಿ.ಎಸ್‌.ಹೂಲಗೇರಿ ನಾಮಪತ್ರ ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗೆಲ್ಲುವ ವರದಿಗಳು ಬಂದಿವೆ. ಅಂತೆಯೇ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲವು ಕೂಡ ನಿಶ್ಚಿತವಾಗಿದೆ’ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಎಚ್‌.ಬಿ. ಮುರಾರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವಂತರಾಯ ಕುರಿ, ಮಾಜಿ ಅಧ್ಯಕ್ಷ ಭೂಪನಗೌಡ ಕರಡಕಲ್ಲ ಮಾತನಾಡಿದರು. ‘ಕಳೆದ ಎರಡು ಅವಧಿಯಲ್ಲಿ ಕ್ಷೇತ್ರ ಪ್ರತಿನಿಧಿಸಿದ ಮಾನಪ್ಪ ವಜ್ಜಲ ಯಾವ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಸಹೋದರರ ಗುತ್ತಿಗೆದಾರಿಕೆ ಸೀಮಿತರಾಗಿ ಜನರ ಆಶಯಗಳಂತೆ ಕೆಲಸ ಮಾಡದೆ ವಂಚಿಸಿದ್ದು ಮತದಾರರು ಪಾಠ ಕಲಿಸಬೇಕು’ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಡಿ.ಎಸ್‌. ಹೂಲಗೇರಿ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ ಎಷ್ಟೆಲ್ಲ ಬೆಂಬಲ ಸಿಕ್ಕರೂ ಕಡಿಮೆ ಮತಗಳ ಅಂತರದಲ್ಲಿ ಸೋಲಬೇಕಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಮೆಚ್ಚಿದ ಬಹುತೇಕ ಮತದಾರರು ಸ್ವಯಂ ಪ್ರೇರಿತರಾಗಿ ಕಚೇರಿಗೆ ಬಂದು ಗೆಲ್ಲಿಸುವ ಭರವಸೆ ನೀಡಿದ್ದು ನಮಗೆ ಖುಷಿ ತಂದಿದೆ’ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶರಣಪ್ಪ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಕೋಠೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಣ್ಣ ಇರಬಗೇರ, ಮಾಜಿ ಸಚಿವರಾದ ರಾಜಾ ಅಮರೇಶ್ವರ ನಾಯಕ, ಹನುಮಂತಪ್ಪ ಆಲ್ಕೋಡ, ಸಂಸದ ಬಿ.ವಿ. ನಾಯಕ, ಪಾಮಯ್ಯ ಮುರಾರಿ ಮಾತನಾಡಿದರು.

ಕಾಂಗ್ರೆಸ್‌ ಕಚೇರಿಯಿಂದ ಆರಂಭಗೊಂಡ ಮೆರವಣಿಗೆ ಬಸ್‌ ನಿಲ್ದಾಣ ವೃತ್ತ, ಜೆಸ್ಕಾಂ ಕಚೇರಿ, ಪ್ರವಾಸಿ ಮಂದಿರ ಮಾರ್ಗದಿಂದ ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಕಚೇರಿಗೆ ತಲುಪಿತು.

ಡಿ.ಎಸ್‌. ಹೂಲಗೇರಿ ಅವರು ಚುನಾವಣಾಧಿಕಾರಿ ರೇಣುಕಾ ಪ್ರಸಾದ ಅವರಿಗೆ ನಾಮಪತ್ರ ಸಲ್ಲಿಸಿದರು.ಮುಖಂಡರಾದ ಆರ್‌.ಎಸ್‌. ನಾಡಗೌಡ್ರ, ಅಮರಗುಂಡಪ್ಪ ಮೇಟಿ, ಲಿಂಗರಾಜ ಭೂಪಾಲ ಜಹಗೀರದಾರ, ಶರಣಬಪ್ಪ ಗುಡದನಾಳ, ನೂರುಲ್ಲಾ ಗ್ಯಾರಂಟಿ, ಕುಪ್ಪಣ್ಣ ಕೊಡ್ಲಿ,

ದೇವಪ್ಪ ರಾಠೋಡ, ವೆಂಕಟೇಶ ರಾಠೋಡ, ದಾವೂದ್‌ ಮುದಗಲ್ಲ, ನಾರಾಯಣಮ್ಮ, ಹನುಮಂತಪ್ಪ ಕಂಡಗಲ್ಲ ಅಮರೇಶ ನಾಡಗೌಡ್ರ, ಖಾದರಪಾಷ, ಬಾಬಾ ಖಾಜಿ, ರುದ್ರಪ್ಪ ಬ್ಯಾಗಿ, ಅನೀಸಪಾಷ, ರವಿಕುಮಾರ ಚೌದ್ರಿ, ಫಯಾಜ್‌ ಇದ್ದರು.

ಲಿಂಗಸುಗೂರು: ‘ರಾಜ್ಯದಲ್ಲಿ ವರುಣಾ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ಸಿಗುತ್ತಿರುವುದು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭೀತಿ ಎದುರಾಗಿದೆ. ಅವರು ಕ್ಷೇತ್ರದಿಂದ ಕ್ಷೇತ್ರಕ್ಕೆ ಅಲೆದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ‘ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದರು.

ಸೋಮವಾರ ಮಾನಪ್ಪ ವಜ್ಜಲ ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮೇಲಿಂದ ಮೇಲೆ ಅಪಶಕುನಗಳ ಸರಮಾಲೆಗಳಿಂದ ಭಾವೋದ್ವೇಗಕ್ಕೆ ಒಳಗಾದ ಸಿದ್ದರಾಮಯ್ಯ ಬದಾಮಿ ಕ್ಷೇತ್ರದತ್ತ ಹೊರಟಿದ್ದಾರೆ. ಸ್ಥಿರ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿರುವೆ ಎಂದು ಹೇಳುವ ಅವರು ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದೇಕೆ’ ಎಂದು ಕುಟುಕಿದರು.

‘ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೂ ಬಿಜೆಪಿಯ ಕೆಲ ಮುಖಂಡರು ಹೈಕಮಾಂಡ್‌ ಸೂಚಿಸಿದರೆ ಪ್ರತಿಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಲು ಸಿದ್ಧರಿದ್ದಾರೆ. ಬಿಜೆಪಿ ಟಿಕೆಟ್‌ ಹಂಚಿಕೆಯಿಂದ ಕೆಲ ಕ್ಷೇತ್ರದಲ್ಲಿ ಗೊಂದಲ ಉಂಟಾಗಿರುವುದು ನಿಜ. ಅವುಗಳನ್ನೆಲ್ಲ ಸರಿಪಡಿಸಿಕೊಂಡು ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಸ್ಪಷ್ಟಪಡಿಸಿದರು.

ಅಭ್ಯರ್ಥಿ ಮಾನಪ್ಪ ವಜ್ಜಲ ಮಾತನಾಡಿ, ‘ಕಳೆದ ಎರಡು ಅವಧಿಯಲ್ಲಿ ಶಾಸಕನಾಗಿ ಮಾಡಿರುವ ಕೆಲಸಗಳು ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಅದರಲ್ಲೂ ಬಿ.ಎಸ್‌.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳಿಂದ ಗೆಲವು ಸಾಧಿಸುವುದು ನಿಶ್ಚಿತ. ಹ್ಯಾಟ್ರಿಕ್‌ ಹೀರೋ ಮಾಡಲು ಕ್ಷೇತ್ರದ ಅಭಿಮಾನಿ ಕಾರ್ಯಕರ್ತರು ಸಿದ್ಧರಿದ್ದಾರೆ’ ಎಂದು ಹೇಳಿದರು.

ಜನಸಾಗರದ ಮಧ್ಯೆ ಮೆರವಣಿಗೆ: ಬಿಜೆಪಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ ನಾಮಪತ್ರ ಸಲ್ಲಿಸಲು ಆರಂಭಗೊಂಡ ಮೆರವಣಿಗೆ ಬಸ್‌ ನಿಲ್ದಾಣ ವೃತ್ತ, ಜೆಸ್ಕಾಂ ಕಚೇರಿ, ಪ್ರವಾಸಿ ಮಂದಿರ ಮಾರ್ಗದಿಂದ ಉಪ ವಿಭಾಗಾಧಿಕಾರಿ ಕಚೇರಿಗೆ ತಲುಪಿತು.

ಮೆರವಣಿಗೆಯಲ್ಲಿ ಬಿಜೆಪಿ ಪಕ್ಷದ ಧ್ವಜಗಳು, ಭಾಜಾ ಭಜಂತ್ರಿ, ಡೊಳ್ಳು ಮೇಳಗಳು ಮೆರುಗು ನೀಡಿದವು. ಮೆರವಣಿಗೆ ಉಪವಿಭಾಗಾಧಿಕಾರಿ ಕಚೇರಿ ತಲಪುತ್ತಿದ್ದಂತೆ ಮಾನಪ್ಪ ವಜ್ಜಲ ನೇತೃತ್ವದಲ್ಲಿ ಐವರು ಒಳಗಡೆ ಹೋಗಿ ಚುನಾವಣಾಧಿಕಾರಿ ರೇಣುಕಾ ಪ್ರಸಾದ ಅವರಿಗೆ ನಾಮಪತ್ರ ಸಲ್ಲಿಸಿದರು.

ಮುಖಂಡರಾದ ಬಸವರಾಜ ಪಾಟೀಲ ಆನ್ವರಿ, ಟಿ.ಆರ್‌. ನಾಯ್ಕ, ಡಾ. ಶಿವಬಸಪ್ಪ ಹೆಸರೂರು, ಗುಂಡಪ್ಪ ಕಾಚಾಪುರ, ಗಿರಿಮಲ್ಲನಗೌಡ ಪಾಟೀಲ, ಶಿವಾನಂದ ಐದನಾಳ, ರಾಜಾ ನರಸಿಂಹ ನಾಯಕ, ವೀರನಗೌಡ ಪಾಟೀಲ, ಶಂಕರಗೌಡ ಅಮರಾವತಿ, ಅಯ್ಯಣ್ಣ ಮಾಳೂರು, ಗೋವಿಂದ ನಾಯಕ, ದ್ಯಾಮಣ್ಣ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT