ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಲಾವತಿ, ನಂದಿನಿಗೆ ಬಿಜೆಪಿ ಟಿಕೆಟ್

ರಾಮನಗರ, ಕನಕಪುರ ಅಭ್ಯರ್ಥಿ ಘೋಷಣೆ: ಪಕ್ಷದೊಳಗೆ ಬಂಡಾಯ
Last Updated 24 ಏಪ್ರಿಲ್ 2018, 11:42 IST
ಅಕ್ಷರ ಗಾತ್ರ

ರಾಮನಗರ: ಬಿಜೆಪಿಯು ಕಡೆಯ ಹೊತ್ತಿನಲ್ಲಿ ಕನಕಪುರ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ.

ಈ ಎರಡೂ ಕ್ಷೇತ್ರಗಳಲ್ಲಿ ಘಟಾನುಘಟಿ ನಾಯಕರು ಸ್ಪರ್ಧೆಯಲ್ಲಿ ಇದ್ದು, ಅವರನ್ನು ಕಟ್ಟಿಹಾಕಲು ಕಮಲ ಪಾಳಯವು ‘ಹೈ ಪ್ರೊಫೈಲ್‌’ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಸಾಮಾನ್ಯ ಕಾರ್ಯಕರ್ತೆಯರಿಗೆ ಅವಕಾಶ ನೀಡಲಾಗಿದೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿರುವ ಎಚ್‌. ಲೀಲಾವತಿ ಅವರಿಗೆ ರಾಮನಗರದಲ್ಲಿ ಟಿಕೆಟ್‌ ನೀಡಲಾಗಿದೆ. ಕೈಲಾಂಚ ಹೋಬಳಿಯ ಮೂಡಲಹಳ್ಳಿ ದೊಡ್ಡಿಯವರಾದ ಅವರು ಈ ಹಿಂದೆ ಯಾವುದೇ ವಿಧಾನಸಭೆ ಚುನಾವಣೆ ಎದುರುಸಿದ ಅನುಭವ ಹೊಂದಿಲ್ಲ.

ರಾಮನಗರದಿಂದ ಪ್ರಮುಖವಾಗಿ ತೇಜಸ್ವಿನಿ ಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಆರ್. ನಾಗರಾಜು, ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ರುದ್ರೇಶ್ ಸೇರಿ ಹಲವು ಹಿರಿಯ ಮುಖಂಡರ ಹೆಸರು ಕೇಳಿಬಂದಿತ್ತು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಗೌಡ, ಜಗದೀಶ್‌ ಗೌಡ ಇನ್ನಿತರರೂ ಆಕಾಂಕ್ಷಿ ಆಗಿದ್ದರು. ಲೀಲಾವತಿ ಹೆಸರು ಚಾಲ್ತಿಯಲ್ಲಿ ಇರಲಿಲ್ಲ. ಹೀಗಿರುವಾಗ ಅವರ ಹೆಸರು ಘೋಷಣೆಯು ಅಚ್ಚರಿ ತಂದಿದೆ.

‘ಟಿಕೆಟ್‌ ಸಿಗುವ ಬಗ್ಗೆ ನನಗೂ ಅಷ್ಟಾಗಿ ನಿರೀಕ್ಷೆ ಇರಲಿಲ್ಲ. ಆದರೆ ಪಕ್ಷ ಸಂಘಟನೆಯ ದೃಷ್ಟಿಯಿಂದ ಹಿರಿಯರು ಈ ಜವಾಬ್ದಾರಿ ನೀಡಿದ್ದಾರೆ. ಈಗಷ್ಟೇ ಬಿ ಫಾರಂ ಕೈಸೇರಿದ್ದು, ಮಂಗಳವಾರ ಮಧ್ಯಾಹ್ನ 12ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ’ ಎಂದು ಲೀಲಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕನಕಪುರ: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನಂದಿನಿ ಗೌಡ ಅವರಿಗೆ ಟಿಕೆಟ್‌ ನೀಡಲಾಗಿದೆ. ವರ್ಷದ ಹಿಂದೆ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ನಂದಿನಿ ಅಲ್ಲಿ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಾತ್ರಿಯಾದ ಕಾರಣ ಬಿಜೆಪಿಗೆ ವಲಸೆ ಬಂದಿದ್ದರು. ಅಲ್ಲಿಂದ ಪಕ್ಷದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದಾಗ್ಯೂ ಸ್ಥಳೀಯರಿಗೇ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆಯ ದಿನವಾಗಿದೆ.ಇಬ್ಬರೂ ಉಮೇದು ವಾರಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಂಡಾಯದ ಬಿಸಿ: ಲೀಲಾವತಿ ಆಯ್ಕೆಗೆ ಪಕ್ಷದ ಒಳಗೆ ಅಸಮಾಧಾನ ವ್ಯಕ್ತವಾಗಿದೆ.ಎಸ್.ಆರ್. ನಾಗರಾಜು ತಮಗೇ ಟಿಕೆಟ್ ಘೋಷಣೆಯಾಗಿದೆ ಎಂದು ಭಾವಿಸಿದ್ದರು. ಆದರೀಗ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಜಿಲ್ಲಾ ಅಧ್ಯಕ್ಷ ಹುಲುವಾಡಿ ದೇವರಾಜು ವಿರುದ್ಧ ಆರೋಪ ಮಾಡಿದ್ದಾರೆ.

**

ಕೋಟ್‌ ಪಕ್ಷದ ಹಿರಿಯರು ಸ್ಪರ್ಧೆಗೆ ಸೂಚಿಸಿದ್ದಾರೆ. ಅದರಂತೆ ಮಂಗಳವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ
 ಎಚ್‌.ಲೀಲಾವತಿ, ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT