ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ನಿರ್ಲಕ್ಷಿಸಿದ ಎಚ್‌ಡಿಕೆ: ಡಿ.ಕೆ.ಸುರೇಶ್‌

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ರಿಂದ ನಾಮಪತ್ರ ಸಲ್ಲಿಕೆ, ಮತದಾರರ ಬೆಂಬಲದ ಭರವಸೆ
Last Updated 24 ಏಪ್ರಿಲ್ 2018, 11:47 IST
ಅಕ್ಷರ ಗಾತ್ರ

ರಾಮನಗರ: ಕ್ಷೇತ್ರವು ಕಳೆದ 12 ವರ್ಷಗಳಿಂದ ಅಭಿವೃದ್ಧಿಯಲ್ಲಿ ವಂಚಿತವಾಗಿದ್ದು, ಈ ಬಾರಿ ಮತದಾರರು ಇಲ್ಲಿನ ಶಾಸಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ನಾಮಪತ್ರ ಸಲ್ಲಿಕೆ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು.

ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇವೆ ಎಂಬುದು ತಿಳಿದಿದೆ. ಅವರ ಆಡಳಿತ ವೈಫಲ್ಯ ಮತ್ತು ಕ್ಷೇತ್ರದ ಬಗ್ಗೆ ತಾಳಿರುವ ನಿರ್ಲಕ್ಷೃ ಭಾವನೆಯನ್ನು ಜನರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಲಾಗುವುದು ಎಂದರು.

ಒಂದು ಪಕ್ಷ ಜಾತಿ ಹೆಸರಿನಲ್ಲಿಯೂ, ಮತ್ತೊಂದು ಪಕ್ಷ ಧರ್ಮದ ಹೆಸರಿನಲ್ಲಿಯೂ ಮತ ಕೇಳುತ್ತಿವೆ. ಆದರೆ ಕಾಂಗ್ರೆಸ್ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತದೆ. ಜಾತಿ ಕೇವಲ ಹೆಸರಿಗೆ ಮಾತ್ರ ಸೀಮಿತ. ಜಾತಿ ಹೆಸರಿನಲ್ಲಿ ಮತ ಕೇಳುವವರನ್ನು ದೂರ ಇಡಬೇಕು. ಜನತೆ ಜಾತಿ ಆಧಾರದ ಮೇಲೆ ಮತ ಚಲಾಯಿಸಬಾರದು ಎಂದು ಮತದಾರರಲ್ಲಿ ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದೆ. ಸರ್ಕಾರದ ಸಾಧನೆಗಳನ್ನು ಜನತೆಗೆ ಮತ್ತೆ ಜ್ಞಾಪಿಸಿ ಮತಯಾಚನೆ ಮಾಡುತ್ತೇವೆ. ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರ ಟೀಕೆಗೆ ಉತ್ತರಿಸಿದ ಸುರೇಶ್ ‘ಅವರು ತರಕಾರಿ ಬೆಳೆದು ರಾಜಕಾರಣ ಮಾಡಿದರೆ, ನಾವು ಗಣಿ ಹಗರಣದಲ್ಲಿ ರಾಜಕಾರಣ ಮಾಡುತ್ತಿದ್ದೇವೆ. ಕ್ಷೇತ್ರದ ಜನತೆಗೆ ಬಗ್ಗೆ ಗೌರವ ಇದ್ದರೆ ಅವರು ಇಲ್ಲಿಯೇ ಮನೆ ಮಾಡಬೇಕಾಗಿತ್ತು. ಅದು ಬಿಟ್ಟು ಹುಬ್ಬಳ್ಳಿ ಮನೆ ಮಾಡಲು ಯಾರು ಹೇಳಿದ್ದು? ಅಲ್ಲಿ ಮನೆ ಮಾಡಿದರೆ ರಾಮನಗರ ಅಭಿವೃದ್ಧಿ ಯಾರು ಮಾಡುತ್ತಾರೆ. ಯಾರು ಏನು ಮಾಡಬೇಕು ಎಂಬುದನ್ನು ಜನತೆ ಚುನಾವಣೆಯಲ್ಲಿ ಮೂಲಕ ಉತ್ತರ ನೀಡುತ್ತಾರೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ ‘ಕುಮಾರಸ್ವಾಮಿ 12 ವರ್ಷಗಳ ಕಾಲ ಕ್ಷೇತ್ರದ ಶಾಸಕರಾಗಿದ್ದರೂ ಅಭಿವೃದ್ಧಿಗೆ ಕೊಡುಗೆ ನೀಡಿಲ್ಲ. ಒಂದು ದಿನವೂ ಜನತೆ ಕಷ್ಟ ಸುಖಗಳ ಬಗ್ಗೆ ಗಮನ ಹರಿಸಿಲ್ಲ. ಸತತ 12 ವರ್ಷಗಳ ಕಾಲ ಕೆಡಿಪಿ ಸಭೆಗಳಿಗೆ ಸತತ ಗೈರಾಗುತ್ತಿದ್ದಾರೆ. ಇಂತಹ ಶಾಸಕರನ್ನು ಮನೆಗೆ ಕಳುಹಿಸಲು ಜನತೆ ನಿರ್ಧರಿಸಬೇಕು. ಸ್ಥಳೀಯ ನಾಯಕರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ, ಜನತೆ ಕಷ್ಟ ಸುಖಗಳಿಗೆ ಭಾಗಿಯಾಗುತ್ತಾರೆ’ ಎಂದು ತಿಳಿಸಿದರು.

ಕಾರ್ಯಕರ್ತರ ಅದ್ದೂರಿ ಮೆರವಣಿಗೆ
ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್‌ ಮೆರವಣಿಗೆಯಲ್ಲಿ ತೆರಳಿ ಮಿನಿ ವಿಧಾನಸೌಧದ ತಹಶೀಲ್ದಾರ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಜೂನಿಯರ್‌ ಕಾಲೇಜು ಮೈದಾನದಿಂದ ತೆರೆದ ಜೀಪಿನಲ್ಲಿ ಹೊರಟ ಅವರಿಗೆ ಸಾವಿರಾರು ಕಾರ್ಯಕರ್ತರು ಸಾಥ್‌ ನೀಡಿದರು.

ಎಂ.ಜಿ. ರಸ್ತೆ, ಸ್ಟೇಷನ್ ರಸ್ತೆ, ಐಜೂರು ಮಾರ್ಗವಾಗಿ ಮೆರವಣಿಗೆಯು ಸಾಗಿ ಬಂದಿತು. ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರುಗು ಹೆಚ್ಚಿಸಿದವು.

ವಿಧಾನ ಪರಿಷತ್‌ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್‌.ರವಿ. ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್, ಕೆ. ಶೇಷಾದ್ರಿ ಇತರರು ಸಾಥ್‌ ನೀಡಿದರು. ಕಿರಿದಾದ ರಸ್ತೆಗಳಲ್ಲಿ ಮೆರವಣಿಗೆಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಜನರು ಪರದಾಡಿದರು.

ಮಧ್ಯಾಹ್ನ ಸಚಿವ ಡಿ.ಕೆ. ಶಿವಕುಮಾರ್ ರಾಮನಗರಕ್ಕೆ ಭೇಟಿ ನೀಡಿ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿದರು.

ಎಚ್‌.ಡಿ. ಕುಮಾರಸ್ವಾಮಿ ಎದುರು ರಾಮನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಗಣಿ ಉದ್ಯಮಿ ಇಕ್ಬಾಲ್‌ ಹುಸೇನ್ ಕುಟುಂಬದ ಒಟ್ಟು ಆಸ್ತಿ ಮೌಲ್ಯ ₹81.54 ಕೋಟಿ.

ಇಕ್ಬಾಲ್‌ ಹುಸೇನ್‌ 1 ಟ್ರ್ಯಾಕ್ಟರ್, 2 ಲಾರಿ, 2 ಟ್ರಕ್‌, 1ಟೊಯೊಟಾ ಕ್ವಾಲಿಸ್, 2 ಫಾರ್ಚುನರ್‌, 1 ಮಹೀಂದ್ರ ಎಕ್ಸ್‌ಯುವಿ, 1 ಇನೋವಾ ಸೇರಿದಂತೆ ಒಟ್ಟು 10 ವೈವಿಧ್ಯಮಯ ವಾಹನಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. 500 ಗ್ರಾಂ ಬಂಗಾರವಿದೆ. ಅವರ ಪತ್ನಿ ಫೌಜಿಯಾ ಖಾನಂ ಬಳಿ 1,200 ಗ್ರಾಂ ಬಂಗಾರ, 1500 ಗ್ರಾಂ ಬೆಳ್ಳಿ ಹಾಗೂ ಇಬ್ಬರು ಮಕ್ಕಳ ಬಳಿ ತಲಾ 150 ಗ್ರಾಂ ಬಂಗಾರವಿದೆ. ಇಕ್ಬಾಲ್‌ ಹೆಸರಿನಲ್ಲಿ ₹3.53 ಕೋಟಿ ಸಾಲವಿದೆ.

ಪತಿ, ಪತ್ನಿ ರಾಮನಗರ, ಕನಕಪುರ, ಮಂಡ್ಯ ಮೊದಲಾದ ಕಡೆಗಳಲ್ಲಿ ಕೃಷಿ ಹಾಗೂ ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ.

ವೈಯಕ್ತಿಕ ಆದಾಯ: ಇಕ್ಬಾಲ್‌ ಕೃಷಿ ಮೂಲದಿಂದ ವಾರ್ಷಿಕ ₹8.67 ಲಕ್ಷ ಹಾಗೂ ಗ್ರಾನೈಟ್‌ ಉದ್ದಿಮೆಯಲ್ಲಿನ ಪಾಲುದಾರಿಕೆಯಿಂದ ₹21.82 ಲಕ್ಷ ವಾರ್ಷಿಕ ಆದಾಯ ಪಡೆಯುತ್ತಿದ್ದಾರೆ. ಅವರ ಪತ್ನಿಯು ಕೃಷಿ ಮೂಲದಿಂದ ₹8.67 ಲಕ್ಷ ಹಾಗೂ ಗಣಿ ಉದ್ದಿಮೆಯಿಂದ ₹19.34 ಲಕ್ಷ ಆದಾಯ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT