ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ದಿನಕ್ಕೂ ಮುನ್ನ ನಾಮಪತ್ರ ಭರಾಟೆ

ಎಲ್ಲೆಡೆ ಮೆರವಣಿಗೆ ಮೂಲಕ ಸಾಗಿದ ಅಭ್ಯರ್ಥಿಗಳು, ವಾಹನ ಸಂಚಾರ ವ್ಯತ್ಯಯ
Last Updated 24 ಏಪ್ರಿಲ್ 2018, 12:12 IST
ಅಕ್ಷರ ಗಾತ್ರ

ಶಿವಮೊಗ್ಗ: ನಾಮಪತ್ರ ಸಲ್ಲಿಕೆಗೆ ಕೇವಲ ಒಂದು ದಿನ ಬಾಕಿ ಉಳಿದಿದ್ದು, ಸೋಮವಾರ ಜಿಲ್ಲೆಯಲ್ಲಿ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಸಚಿವ ಕಾಗೋಡು ತಿಮ್ಮಪ್ಪ ಸಾಗರದಲ್ಲಿ, ಶಾಸಕ ಕೆ.ಬಿ. ಪ್ರಸನ್ನಕುಮಾರ್ ಶಿವಮೊಗ್ಗದಲ್ಲಿ (ಇಬ್ಬರೂ ಕಾಂಗ್ರೆಸ್), ನರಸಿಂಹಮೂರ್ತಿ (ಪಕ್ಷೇತರ), ಶಾಸಕ ಎಂ.ಜೆ. ಅಪ್ಪಾಜಿ ಗೌಡ ಭದ್ರಾವತಿಯಲ್ಲಿ (ಜೆಡಿಎಸ್), ಶಿಕಾರಿಪುರದಲ್ಲಿ ಗೋಣಿ ಮಾಲತೇಶ್ (ಕಾಂಗ್ರೆಸ್), ಕೆ.ಬಿ. ಅಶೋಕನಾಯ್ಕ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಪ್ರಮುಖರು.

ಶಾಸಕ ಪ್ರಸನ್ನಕಮಾರ್: ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮೊದಲು ವಿವಿಧ ದೇವಾಲಯ, ಚರ್ಚ್‌ ಮಸೀದಿಗಳಿಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ನಾಗರಾಜ ಬಡಾವಣೆಯ ಗಣಪತಿ ದೇವಾಲಯ, ಕೆ.ಆರ್. ಪುರಂ ರಾಯರ ಮಠ, ಬಿ.ಬಿ. ರಸ್ತೆಯ ಲಕ್ಷ್ಮೀನಾರಾಯಣ ದೇವಾಲಯ, ಕೋಟೆ ರಾಮಾಂಜನೇಯ ದೇವಾಲಯ, ಕೋಟೆ ಮಾರಿಕಾಂಬ ದೇವಾಲಯ, ಗಾಯತ್ರಿ ದೇವಾಲಯ, ಅಯ್ಯಪ್ಪ ಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮೆರವಣಿಗೆ: ಮುಖ್ಯ ಬಸ್‌ನಿಲ್ದಾಣದ ಸಮೀಪ ಇರುವ ಅಶೋಕ ವೃತ್ತದಿಂದ ಬೃಹತ್ ಮೆರವಣಿಗೆಯಲ್ಲಿ ಹೊರಟು, ಬಿ.ಎಚ್. ರಸ್ತೆ, ಅಮೀರ್ ಅಹಮದ್‌ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತದ ಮೂಲಕ ಪಾಲಿಕೆಯ ಅನತಿ ದೂರದವರೆಗೆ ಮೆರವಣಿಗೆ ಸಾಗಿತು. ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಬೆಂಬಲಿಗರು ಪ್ರಸನ್ನಕುಮಾರ್ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರ ಮಿಸಿದರು. ಕಾಂಗ್ರೆಸ್ ಪಕ್ಷ ಹಾಗೂ ಪ್ರಸನ್ನಕುಮಾರ್ ಪರವಾಗಿ ಘೋಷಣೆ ಕೂಗಿದರು.

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಪಂಡಿತ್ ವಿಶ್ವನಾಥ್, ದೀಪಕ್‌ ಸಿಂಗ್, ಇಸ್ಮಾಯಿಲ್ ಖಾನ್, ಎನ್. ರಮೇಶ್, ತೀ.ನಾ. ಶ್ರೀನಿವಾಸ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಚುನಾವಣೆಯಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ. ಕ್ಷೇತ್ರದ ಎಲ್ಲೆಡೆ ಕಾಂಗ್ರೆಸ್‌ಗೆ ಜನ ಬೆಂಬಲ ವ್ಯಕ್ತವಾಗಿದೆ. ಗೆಲುವಿಗೆ ಕಾಂಗ್ರೆಸ್ ಸರ್ಕಾರದ ಸಾಧನೆಯೇ ಶ್ರೀರಕ್ಷೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಕಲ್ಯಾಣ ಕಾರ್ಯಕ್ರಮ ಜನತೆಗೆ ನೀಡಿದ್ದಾರೆ. ಹಾಗಾಗಿ, ಜನರು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಬಯಸುತ್ತಿದ್ದಾರೆ’ ಎಂದರು.

ನಾಮಪತ್ರ ಸಲ್ಲಿಸುವ ಸಮಯದಲ್ಲಿ ಜತೆ ಇದ್ದ ಬೆಂಬಲಿಗರು, ಕಾರ್ಯಕರ್ತರ ಕಂಡು ವಿರೋಧ ಪಕ್ಷದ ಅಭ್ಯರ್ಥಿಗಳಿಗೆ ಸೋಲಿನ ಭಯ ಕಾಡತೊಡಗಿದೆ ಎಂದು ಕುಟುಕಿದರು.

ಬಿಜೆಪಿ ಅಭ್ಯರ್ಥಿ ಅಶೋಕ್ ನಾಯ್ಕ: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ. ಅಶೋಕ್ ನಾಯ್ಕ ಸೋಮವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮೊದಲು ಮಾಜಿ ಶಾಸಕ ಎಂ. ಆನಂದರಾವ್ ಅವರ ಪುತ್ರ ಎಂ. ಶಂಕರ್ ಅವರ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಶಿವಪ್ಪ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಮಯದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರುದ್ರೇಗೌಡ್ರು ಮಾತನಾಡಿ, ‘ಅಶೋಕ ನಾಯ್ಕ ಅವರು ಪಕ್ಷದ ಹಿರಿಯ ನಾಯಕರು ಹಾಗೂ ಮಹನೀಯರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ. ಇದು ಪ್ರೇರಣಾದಾಯಕ ಕಾರ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ಆರ್‌.ಕೆ. ಸಿದ್ದರಾಮಣ್ಣ, ಎಸ್.ಎಸ್. ಜ್ಯೋತಿ ಪ್ರಕಾಶ್, ಎಸ್.ಎಸ್. ಸತೀಶ್, ಎಸ್‌.ಎನ್. ಚನ್ನಬಸಪ್ಪ, ಎಸ್. ಜ್ಞಾನೇಶ್ವರ್, ಡಿ.ಎಸ್. ಅರುಣ್ ಉಪಸ್ಥಿತರಿದ್ದರು.

ಪಾಲಿಕೆ ಸದಸ್ಯ ನರಸಿಂಹ ಮೂರ್ತಿ: ಶಿವಮೊಗ್ಗ ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ (ಜೆಡಿಎಸ್ ಬಂಡಾಯ) ಜಿ. ನರಸಿಂಹಮೂರ್ತಿ (ಬಾಬಣ್ಣ) ಇಂದು ಬೆಂಬಲಿಗರ ಜತೆ ತೆರಳಿ ನಾಮಪತ್ರ ಸಲ್ಲಿಸಿದರು.
ನಗರದ ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಗಾಂಧಿಬಜಾರ್ ಮೂಲಕ ಶಿವಪ್ಪನಾಯಕ ವೃತ್ತದವರೆಗೆ ಮೆರವಣಿಗೆ ನಡೆಸಿದರು. ನಂತರ ನಾಮಪತ್ರ ಸಲ್ಲಿಸಿದರು.ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್‌ಗೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು.

ಕೊನೆಗೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್. ನಿರಂಜನ್ ಅವರಿಗೆ ಟಿಕೆಟ್ ನೀಡಿದ ಕಾರಣ ಪಕ್ಷದ ವಿರುದ್ಧ ಬಂಡೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

‘ನಮ್ಮ ಕಾಂಗ್ರೆಸ್’ ಅಭ್ಯರ್ಥಿ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ‘ನಮ್ಮ ಕಾಂಗ್ರೆಸ್’ ಅಭ್ಯರ್ಥಿ ಎಂ. ಸಮೀವುಲ್ಲಾ ಸೋಮವಾರ ನಾಮಪತ್ರ ಸಲ್ಲಿಸಿದರು.ಬೆಂಬಲಿಗರ ಜತೆ ಮೆರವಣಿಗೆಯಲ್ಲಿ ಬಂದು ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಶ್ರೀನಾಥ್ ನಾಮಪತ್ರ ಸಲ್ಲಿಕೆ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀನಾಥ್ ನಾಮಪತ್ರ ಸಲ್ಲಿಸಿದರು. ಪಾಲಿಕೆ ಸದಸ್ಯೆ ಪತ್ನಿ ಗೌರಿ ಶ್ರೀನಾಥ್ ಹಾಗೂ ಬೆಂಬಲಿಗರ ಜತೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು.

ಗೋ ರಮೇಶ್ ಗೌಡ: ಜನಸಾಮಾನ್ಯರ ಪಕ್ಷದ ಅಭ್ಯರ್ಥಿ ಗೋ.ರಮೇಶ್ ಗೌಡ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ನಾಮಪತ್ರ ಸಲ್ಲಿಸಿದರು.ಬೆಂಬಲಿಗರ ಜತೆ ಪಾಲಿಕೆ ಕಚೇರಿಗೆ ಬಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಸಂಚಾರ ಅಸ್ತವ್ಯಸ್ತ

ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೂ ಮೊದಲು ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದ ಪರಿಣಾಮ ಹಲವು ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಬಿ.ಎಚ್. ರಸ್ತೆ, ಬಸ್‌ನಿಲ್ದಾಣ, ನೆಹರೂ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT