ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದಲ್ಲಿ ಸಿಗುತ್ತಿಲ್ಲ ಬಾಡಿಗೆ ಮನೆ!

‌ಯಡಿಯೂರಪ್ಪ ವಿರುದ್ಧ ಸ್ಪರ್ಧೆಗಿಳಿದ ಯುವಕ
Last Updated 24 ಏಪ್ರಿಲ್ 2018, 12:16 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯ ಕ್ಷೇತ್ರ ಶಿಕಾರಿಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದ ಚಿಗುರು ಮೀಸೆಯ ಯುವಕನಿಗೆ ಅಲ್ಲಿನ ಯಾರೊಬ್ಬರೂ ಬಾಡಿಗೆಗೆ ಮನೆ ಕೊಡುತ್ತಿಲ್ಲ!

ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ 25ರ ಹರೆಯದ ವಿನಯ್ ರಾಜಾವತ್ ತಮ್ಮ ವಿಭಿನ್ನ ನಡೆಯ ಮೂಲಕ ಪ್ರಮುಖ ಪಕ್ಷಗಳ ಮುಖಂಡರು ಹುಬ್ಬೇರಿಸುವಂತೆ ಮಾಡಿದ್ದರು.

ಸ್ನೇಹಿತರ ಜತೆಗೂಡಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬಂದು, ಸೆಲ್ಫಿ ತೆಗೆದುಕೊಂಡು ನಂತರ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ಇದು ಎಲ್ಲೆಡೆ ಭಾರಿ ಸುದ್ದಿಯಾಗಿತ್ತು.

ನಾಮಪತ್ರ ಸಲ್ಲಿಸಿದ ನಂತರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಶಿಕಾರಿಪುರದಲ್ಲೇ ಮನೆ ಬಾಡಿಗೆಗೆ ಪಡೆಯಲು ನಿರ್ಧರಿಸಿದ್ದ ಅವರು ಅದಕ್ಕಾಗಿ ಅನುಕೂಲ ಇರುವ ಮನೆಗಳ ಹುಡುಕಾಟ ನಡೆಸಿದ್ದಾರೆ. ಹಲವು ಮನೆಗಳು ಖಾಲಿ ಇದ್ದು, ಕೆಲವು ಇಷ್ಟವಾಗಿವೆ. ಮುಂಗಡ ಹಣ, ಬಾಡಿಗೆಯನ್ನೂ ಮಾತನಾಡಿದ್ದಾರೆ.

ಒಪ್ಪಂದ ಮಾಡಿಕೊಂಡ ಮನೆಗೆ ಸಾಮಗ್ರಿ ಸ್ಥಳಾಂತರಿಸಬೇಕು ಎನ್ನುವಷ್ಟರಲ್ಲಿ ‘ಸಾರಿ, ನಿಮಗೆ ಈಗ ಮನೆ ಕೊಡಲು ಸಾಧ್ಯವಾಗುತ್ತಿಲ್ಲ. ಬೇಸರ ಮಾಡಿಕೊಳ್ಳಬೇಡಿ’ ಎಂಬ ಉತ್ತರಗಳು ಬಂದಿವೆ. ಇದು ಹಲವು ಮನೆಗಳಲ್ಲಿ ಪುನರಾವರ್ತನೆಯಾಗಿದೆ.

‘ಮನೆ ಬಾಡಿಗೆಗೆ ಕೊಡಲು ಮಾಲೀಕರು ನೆಪ ಹೇಳುತ್ತಿದ್ದಾರೆ. ಅದರ ಕಾರಣ ಗೊತ್ತಾಗಿಲ್ಲ. ಅವರ ಮೇಲೆ ಯಾರದೋ ಒತ್ತಡ ಇರಬಹುದು. ಶಿಕಾರಿಪುರದಲ್ಲೇ ಪ್ರೌಢಶಾಲೆ, ಪಿಯು ಓದಿದ್ದೇನೆ. ಕ್ಷೇತ್ರದ ಎಲ್ಲೆಡೆ ಸ್ನೇಹಿತರು ಇದ್ದಾರೆ. ಅವರೆಲ್ಲರೂ ಆಹ್ವಾನಿಸುತ್ತಿದ್ದಾರೆ. ದಿನವೂ ಒಬ್ಬೊಬ್ಬ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡು, ಸುತ್ತಮುತ್ತ ಇರುವ ಪ್ರದೇಶಗಳಲ್ಲಿ ಪ್ರಚಾರ ಮಾಡುತ್ತಿದ್ದೇನೆ’ ಎಂದು ವಿನಯ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದ ನಂತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ವಿನಯ್, ‘ವಿದ್ಯಾರ್ಥಿ’ ಸಂಘಟನೆ ಹುಟ್ಟುಹಾಕಿ ಆಹಾರ, ಆರೋಗ್ಯ, ಶಿಕ್ಷಣ ವಿಷಯಗಳಿಗಾಗಿ ಹೋರಾಟ ನಡೆಸುತ್ತಿದ್ದರು.

‘ಎರಡು ವರ್ಷಗಳ ಹಿಂದೆ ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಸಗಿ ಆಂಬುಲೆನ್ಸ್‌ ಹಾವಳಿ ವಿರುದ್ಧ ಹೋರಾಟ ನಡೆಸುತ್ತಿದ್ದಾಗ ಆದ ಕಹಿ ಅನುಭವ ರಾಜಕೀಯಕ್ಕೆ ಧುಮುಕಲು ಪ್ರೇರೇಪಿಸಿತು. ಅದಕ್ಕಾಗಿ ಇಲ್ಲಿಂದಲೇ ಸ್ಪರ್ಧಿಸುತ್ತಿರುವೆ’ ಎಂದು ಪ್ರತಿಕ್ರಿಯೆ ನೀಡುತ್ತಾರೆ ವಿನಯ್.

‘ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎದುರು ಸ್ಪರ್ಧಿಸುವ ಕಾರಣ ನಿನ್ನನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ಅವರಿಗೆ ಸರಿಸಮನಾಗಿ ನಿಲ್ಲಬೇಕು ಎಂದು ಗೆಳೆಯರೇ ಸೇರಿ ದುಡ್ಡು ಹಾಕಿ ಹೆಲಿಕಾಪ್ಟರ್ ಬಾಡಿಗೆಗೆ ಕೊಡಿಸಿದರು. ಹಾಗಾಗಿ, ಅಲ್ಲಿಂದ ಬಂದೆ. ಪ್ರಚಾರ ಪಡೆಯುವ ಯಾವುದೇ ಉದ್ದೇಶ ಇರಲಿಲ್ಲ. ಮೂರು ವರ್ಷ ಮುಖ್ಯ
ಮಂತ್ರಿಯಾದರೂ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಮೂಲಸೌಕರ್ಯಗಳಿಗೆ ಆದ್ಯತೆ ನೀಡಿಲ್ಲ. ಈ ವಿಷಯಗಳೇ ನನಗೆ ಚುನಾವಣಾ ಅಸ್ತ್ರ’ ಎಂದು ಹೇಳಿದರು.

ತಂದೆ ಜೀಪು ಚಾಲಕ

ವಿನಯ್ ತಂದೆ ಚಂದ್ರಾನಾಯ್ಕ ಅವರದು ಶಿವಮೊಗ್ಗ ತಾಲ್ಲೂಕು ಕುಂಚೇನಹಳ್ಳಿ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೆ ಅವರು ಹರಪನಹಳ್ಳಿ ಡಿವೈಎಸ್‌ಪಿ ಜೀಪು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆಗ ಅವರ ಕುಟುಂಬ ಶಿಕಾರಿಪುರದಲ್ಲೇ ನೆಲೆಸಿತ್ತು. ಹೀಗೆ ಅಲ್ಲಿನ ನಂಟು ಬೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT