ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ

ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶಿಸಿದ ಪ್ರಮುಖ ಪಕ್ಷಗಳು; ಶುಭ ಸೋಮವಾರ ನಾಮಪತ್ರಗಳ ಸುರಿಮಳೆ
Last Updated 24 ಏಪ್ರಿಲ್ 2018, 12:39 IST
ಅಕ್ಷರ ಗಾತ್ರ

ವಿಜಯಪುರ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆ ದಿನದ ಮುನ್ನಾ ದಿನವಾದ ಸೋಮವಾರ, ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧೆ ಬಯಸಿ, ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬಲ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದರು.

ಜ್ಯೋತಿಷಿಗಳು ನೀಡಿದ ಮುಹೂರ್ತದಂತೆ ಈಗಾಗಲೇ ನಿಗದಿತ ವೇಳೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಪ್ರಮುಖರು, ಶುಭ ಸೋಮವಾರದಂದು ಸಹ ತಮ್ಮ ಬಲ ಪ್ರದರ್ಶನಕ್ಕಾಗಿ ಬೆಂಬಲಿಗರ ಮೆರವಣಿಗೆ ಆಯೋಜಿಸಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

ನೆತ್ತಿ ಸುಡುವ ಕೆಂಡದಂತಹ ಬಿಸಿಲನ್ನು ಲೆಕ್ಕಿಸದೆ ಅಪಾರ ಸಂಖ್ಯೆಯ ಬೆಂಬಲಿಗರು, ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು. ಜಯಘೋಷ ಮೊಳಗಿಸಿದರು.

ಆಯಾ ಪಕ್ಷಗಳ ಧ್ವಜಗಳು ಹಾರಾಡಿದವು.

ಬಿಜೆಪಿ: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಕುಮಾರ ಪಾಟೀಲ ನಗರದ ವಿಡಿಎ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಇದಕ್ಕೂ ಮುನ್ನಾ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಶಿವನಗೌಡ ಬಿರಾದಾರ ಮಮದಾಪುರ ಸೇರಿದಂತೆ ಇನ್ನಿತರ ಮುಖಂಡರ ಜತೆ ಬೃಹತ್‌ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದವು.

ನಾಮಪತ್ರ ಸಲ್ಲಿಸಿ ಹೊರ ಬಂದ ಬಳಿಕ, ವಿಡಿಎ ಕಚೇರಿ ಬಳಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ವಿಜಯಕುಮಾರ ಪಾಟೀಲಗೆ ಘೋಷಣೆ ಕೂಗಿ ಸ್ವಾಗತಿಸಿದರು. ಕಂಬಳಿ ಹೊದಿಸಿ ಗೌರವಿಸಿದರು. ಇನ್ನೂ ಕೆಲವು ಕಾರ್ಯಕರ್ತರು ಹೆಗಲ ಮೇಲೆ ಕೂರಿಸಿಕೊಂಡು ಕುಣಿದರು.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಗೋಪಾಲ ಕಾರಜೋಳ ನಾಮಪತ್ರ ಸಲ್ಲಿಸಿದರು. ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಾದಯಾತ್ರ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್‌ ಹಮೀದ್ ಮುಶ್ರೀಫ್ ಸೋಮವಾರ ನಾಮಪತ್ರ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಬಾಗವಾನ, ಅಜಿತ್‌ ಸಿಂಗ್ ಸಾತ್‌ ನೀಡಿದರು. ಇದಕ್ಕೂ ಮುನ್ನ ಸಿದ್ಧೇಶ್ವರ ದೇವಾಲಯದಿಂದ ಬೃಹತ್ ಯಾತ್ರೆ ನಡೆಸಿದರು. ಅಪಾರ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಜೆಡಿಎಸ್‌: ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ದೇವಾನಂದ ಚವ್ಹಾಣ ನಾಮಪತ್ರ ಸಲ್ಲಿಸಿದರು. ಮುಖಂಡ ಎಲ್.ಎಲ್.ಉಸ್ತಾದ್‌ ಪಾಲ್ಗೊಂಡಿದ್ದರು.

ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಸಿದ್ಧೇಶ್ವರ ದೇವಾಲಯದಿಂದ ಬೃಹತ್ ಯಾತ್ರೆ ನಡೆಸಿದರು.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಒಟ್ಟು 41 ಅಭ್ಯರ್ಥಿಗಳಿಂದ 46 ನಾಮಪತ್ರ ಸಲ್ಲಿಕೆಯಾಗಿವೆ.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಎ.ಎಸ್.ಪಾಟೀಲ ನಡಹಳ್ಳಿ (ಬಿಜೆಪಿ), ಬಿಬಿಹಾಜರಾ ಎ.ನಿಡಗುಂದಿ (ಎಐಎಂಇಪಿ), ನಾಡಗೌಡ ಗಂಗಾಧರ ಶಂಕರರಾವ (ಪಕ್ಷೇತರ), ನಾಡಗೌಡ ಅಪ್ಪಾಜಿ ಉರುಫ್‌ ಚನ್ನಬಸವರಾಜ ಶಂಕರರಾವ್ (ಕಾಂಗ್ರೆಸ್), ಅಯ್ಯಪ್ಪ ದೊರೆ (ಜನಸಾಮಾನ್ಯರ ಪಕ್ಷ), ಮಂಗಳಾದೇವಿ ಎಸ್.ಬಿರಾದಾರ (ಜೆಡಿಎಸ್) ನಾಮಪತ್ರ ಸಲ್ಲಿಸಿದ್ದಾರೆ.

ದೇವರಹಿಪ್ಪರಗಿಯಿಂದ ಬಾಪುಗೌಡ ಶಂಕರಗೌಡ ಪಾಟೀಲ (ಕಾಂಗ್ರೆಸ್, 2 ನಾಮಪತ್ರ), ಆಸೀಫ್ ಹಸನಸಾಬ್‌ ಹೆರಕಲ್ (ಆಮ್‌ ಆದ್ಮಿ ಪಕ್ಷ), ಸೋಮನಗೌಡ ಬಸನಗೌಡ ಪಾಟೀಲ (ಬಿಜೆಪಿ), ಭೀಮನಗೌಡ ಬಸನಗೌಡ ಪಾಟೀಲ (ಜೆಡಿಎಸ್), ಧರ್ಮಪ್ಪ ಚಂದಪ್ಪ ನಾಟೀಕಾರ (ಪಕ್ಷೇತರ), ಅಬ್ದುಲ್‌ ರಹಿಮಾನ್‌ ದುಂಡಸಿ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ಬಸವನಬಾಗೇವಾಡಿಯಿಂದ ಮಲ್ಲಿಕಾರ್ಜುನ ಬಿ.ಕೆಂಗನಾಳ (ಸ್ವರಾಜ್ ಇಂಡಿಯಾ ಪಕ್ಷ, 2 ನಾಮಪತ್ರ), ಶಿವಾನಂದ ಎಸ್.ಪಾಟೀಲ (ಕಾಂಗ್ರೆಸ್) ನಾಮಪತ್ರ ಸಲ್ಲಿಸಿದ್ದಾರೆ.

ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಮಂಜುಳಾ ಚವ್ಹಾಣ (ಜನ ಸಾಮಾನ್ಯರ ಪಕ್ಷ), ಮಹಿಬೂಬ ಮಲಬೌಡಿ (ಪಕ್ಷೇತರ), ಸಂಭಾಜಿ ಗಾಯಕವಾಡ (ಆರ್‌ಪಿಐಜೆ), ವಿಜಯಕುಮಾರ ಪಾಟೀಲ (ಬಿಜೆಪಿ), ಎಂ.ಬಿ.ಪಾಟೀಲ (ಕಾಂಗ್ರೆಸ್ 2 ನಾಮಪತ್ರ), ಮಹಾದೇವಿ ನಾಟೀಕಾರ (ಪಕ್ಷೇತರ), ರವಿ ಪಡಸಲಗಿ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ವಿಜಯಪುರದಿಂದ ಬಸನಗೌಡ ಪಾಟೀಲ ಯತ್ನಾಳ (ಬಿಜೆಪಿ), ಅಬ್ದುಲ್‌ ಹಮೀದ್‌ ಮುಶ್ರೀಫ್‌ (ಕಾಂಗ್ರೆಸ್, 2 ನಾಮಪತ್ರ), ಪೀರಪಾಶಾ ಗಚ್ಚಿನಮಹಲ್ (ಎನ್‌ಸಿಪಿ) ನಾಮಪತ್ರ ಸಲ್ಲಿಸಿದ್ದಾರೆ.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಟಕದೊಂಡ ದೀಪಕ (ಹಿಂದೂಸ್ತಾನ ಜನತಾ ಪಾರ್ಟಿ), ಕವಿತಾ ಕಟಕದೊಂಡ (ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್), ಗೋಪಾಲ ಕಾರಜೋಳ (ಬಿಜೆಪಿ, 2 ನಾಮಪತ್ರ), ದೇವಾನಂದ ಚವ್ಹಾಣ (ಜೆಡಿಎಸ್), ರಾಹುಲ ಭಾಸ್ಕರ್ (ಪಕ್ಷೇತರ), ಭಾರತಿ ಕಾಲೇಬಾಗ (ಕೆಜೆಪಿ), ವಿಠ್ಠಲ ಕಟಕದೊಂಡ (ಕಾಂಗ್ರೆಸ್) ನಾಮಪತ್ರ ಸಲ್ಲಿಸಿದ್ದಾರೆ.

ಇಂಡಿ ವಿಧಾನಸಭಾ ಕ್ಷೇತ್ರದಿಂದ ಗೊಲ್ಲಾಳಲಿಂಗಗೌಡ ಜ್ಯೋತಿಗೊಂಡ (ಪಕ್ಷೇತರ), ಹೆಗ್ಗೆಪ್ಪ ಗುಡ್ಲಾ (ಪಕ್ಷೇತರ), ರವಿಕಾಂತ ಪಾಟೀಲ (ಪಕ್ಷೇತರ), ಯಶವಂತರಾಯಗೌಡ ಪಾಟೀಲ (ಕಾಂಗ್ರೆಸ್) ನಾಮಪತ್ರ ಸಲ್ಲಿಸಿದ್ದಾರೆ.

ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ವೀರಣ್ಣ ಮಡಿವಾಳಪ್ಪ ವಿಶ್ವಕರ್ಮ (ಪಕ್ಷೇತರ), ಮಲ್ಲಣ್ಣ ನಿಂಗಪ್ಪ ಸಾಲಿ (ಕಾಂಗ್ರೆಸ್), ಮಲ್ಲಪ್ಪ ಚನ್ನವೀರಪ್ಪ ಮನಗೂಳಿ (ಜೆಡಿಎಸ್), ಮೊಹ್ಮದ್‌ ಸಾದಿಕ್‌ ಫರೀದಸಾಬ್ ಸುಂಬಡ (ಪಕ್ಷೇತರ), ಯಶವಂತಗೌಡ ಆರ್.ರೂಗಿ (ಜೆಡಿಯು), ದತ್ತಾತ್ರೇಯ ಯಾಡಗಿ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

**

ಯತ್ನಾಳ ಜತೆ ಭಿನ್ನಾಭಿಪ್ರಾಯವಿಲ್ಲ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವೆ. ಟಿಕೆಟ್ ಹಂಚಿಕೆಯಲ್ಲಿ ನನ್ನದೇನು ಪಾತ್ರವಿಲ್ಲ 
ರಮೇಶ ಜಿಗಜಿಣಗಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT