ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪು, ಬೆಳ್ಳುಬ್ಬಿ ವಿರುದ್ಧದ ಪೋಸ್ಟ್‌ಗಳು ವೈರಲ್‌

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
Last Updated 24 ಏಪ್ರಿಲ್ 2018, 12:41 IST
ಅಕ್ಷರ ಗಾತ್ರ

ವಿಜಯಪುರ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಪೂರ್ಣಗೊಳ್ಳುವ ಮುನ್ನವೇ, ವಿಜಯಪುರ ನಗರ ಕ್ಷೇತ್ರದ ಚುನಾವಣಾ ಅಖಾಡದಲ್ಲಿನ ಕೆಸರೆರಚಾಟ ತಾರಕಕ್ಕೇರಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಜಯಪುರ ನಗರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಚರ್ಚೆ ಬಿರುಸಿನಿಂದ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಅವರ ಅಭಿಮಾನಿಗಳು, ಬೆಂಬಲಿಗರು ಅಪ್‌ಲೋಡ್‌ ಮಾಡಿರುವ ಕೆಲ ಪೋಸ್ಟ್‌ಗಳು ವೈರಲ್‌ ಆಗಿವೆ. ಇದೀಗ ಈ ವಿಷಯವೇ ಎಲ್ಲೆಡೆ ಚರ್ಚೆಗೀಡಾಗುತ್ತಿದೆ.

‘ವಿಜಯಪುರದ ಮಾಜಿ ಶಾಸಕರೇ, ನಗರವೊಂದನ್ನು ಬಿಟ್ಟು ಉಳಿದೆಲ್ಲಾ ಕಡೆಯಲ್ಲಿ ಪ್ರಚಾರ ಮಾಡ್ತೀನಿ ಅಂದ್ರಲ್ಲಾ, ಯಾವ ಕಾರಣಕ್ಕೆ ನೀವೂ ವಿಜಯಪುರದಲ್ಲಿ ಪ್ರಚಾರ ಮಾಡುವುದಿಲ್ಲ? ಮುಶ್ರೀಫ್‌ಗೂ ನಿಮಗೂ ಏನು ಸಂಬಂಧ. ವಿಜಯಪುರದ ಜನ ನಿಮ್ಮಿಂದ ಉತ್ತರ ಬಯಸಿದ್ದಾರೆ’ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಉದ್ದೇಶಿಸಿ ಪ್ರಶ್ನೆ ಮಾಡಿರುವ ಫೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ಮೊದಲು ಬೀಳಗಿಯಲ್ಲಿ ನಿಲ್ಲುತ್ತೇನೆಂದು, ಈಗ ವಿಜಯಪುರಕ್ಕೆ ಶಿಫ್ಟ್‌ ಆಗಲೂ ಕಾರಣವೇನು ಬೆಳ್ಳುಬ್ಬಿಯವರೇ ? ನಿರಾಣಿಯವರಿಂದ ಎಷ್ಟು ಸೂಟ್‌ಕೇಸ್‌ ಹೊತ್ತುಕೊಂಡು ಬಂದ್ರಿ? ವಿಜಯಪುರದ ಜನರಿಗೆ ಉತ್ತರ ನೀಡಿ.  ಬೆಳ್ಳುಬ್ಬಿಯವರೇ ವಿಜಯಪುರದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ. ನಿಮಗೆ ನೆನಪಿರಲಿ. ಇಲ್ಲಿ ಏನೇ ಇದ್ದರೂ ಹಿಂದುತ್ವದ ಪರವಾಗಿಯೇ ಮತ ಚಲಾವಣೆ ಆಗುತ್ತದೆ. ಬಿಜೆಪಿ ಗೆಲುವಿಗಾಗಿ ಮತ ಚಲಾವಣೆ ಆಗುತ್ತದೆ. ನೀವೂ ಎಷ್ಟೇ ಲಾಗಾ ಹಾಕಿದರೂ ಇಲ್ಲಿ ಗೆಲ್ಲುವುದು ಹಿಂದುತ್ವವೇ. ನಾವೆಲ್ಲರೂ ಒಟ್ಟಾಗಿದ್ದೇವೆ. ನಮ್ಮೆಲ್ಲರ ಮತ ಬಸನಗೌಡ ಪಾಟೀಲ ಯತ್ನಾಳರಿಗೆ. ಹಿಂದುತ್ವದ ಒಳಿತಿಗಾಗಿ’ ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.

‘ವಿಜಯಪುರದ ಹಿಂದೂಗಳಿಗೆ ಮೋಸ ಮಾಡಲು ಬರುತ್ತಿದ್ದಾರೆ, ಹಿಂದೂ ವಿರೋಧಿ ಸೂಟ್‌ಕೇಸ್ ಮುತ್ಯಾ ಬೆಳ್ಳುಬ್ಬಿ... ಹಿಂದೂಗಳೇ ಎಚ್ಚರ..!’ ಎಂಬ ಒಕ್ಕಣೆಯುಳ್ಳ ಮೂರು ಸಂದೇಶಗಳು ಮಾಜಿ ಸಚಿವ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಘೋಷಿತ ಅಭ್ಯರ್ಥಿ ಎಸ್‌.ಕೆ.ಬೆಳ್ಳುಬ್ಬಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಆಗಿದ್ದು, ಸೋಮವಾರ ದಿನವಿಡಿ ಇದೇ ವಿಷಯ ಎಲ್ಲೆಡೆ ಚರ್ಚೆಗೊಳಪಟ್ಟಿದೆ.

ಈ ನಾಲ್ಕು ಪೋಸ್ಟ್‌ಗಳಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶರವೇಗದಲ್ಲಿ ಒಬ್ಬರಿಂದ ಒಬ್ಬರಿಗೆ ಹಂಚಿಕೆಯಾಗುತ್ತಿವೆ. ಬಿಜೆಪಿ ಆಂತರಿಕ ವಲಯದಲ್ಲೇ ತೊಳಲಾಟ ಆರಂಭಗೊಂಡಿದೆ. ಕೆಲವರಂತೂ ಅತ್ಯಂತ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದರೆ, ಹಲವರು ಸವಾಲಿನ ರೂಪದಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ಕಾಂಗ್ರೆಸ್‌ ರ‍್ಯಾಲಿಯಲ್ಲಿ ಗಮನ ಸೆಳೆದ ‘ಕೇಸರಿ ಟೋಪಿ’

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಬ್ದುಲ್‌ ಹಮೀದ್ ಮುಶ್ರೀಫ್‌ ಸೋಮವಾರ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನಾ, ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲದಿಂದ ನಡೆಸಿದ ಮೆರವಣಿಗೆಯಲ್ಲಿ ಕಾಂಗ್ರೆಸ್‌ ಚಿಹ್ನೆಯುಳ್ಳ ಟೋಪಿ, ಧ್ವಜದ ಜತೆ ಕೇಸರಿ ಟೋಪಿಗಳು ರಾರಾಜಿಸಿದವು.

ಯಾರ‍್ಯಾರ ಮೆರವಣಿಗೆಯಲ್ಲಿ ಎಷ್ಟು ಮಂದಿ ಪಾಲ್ಗೊಂಡಿದ್ದರು ಎಂಬುದನ್ನು ಕುತೂಹಲದಿಂದ ವೀಕ್ಷಿಸಲು ರಸ್ತೆಯ ಇಕ್ಕೆಲ್ಲಗಳಲ್ಲೂ ನೆರೆದಿದ್ದ ಜನಸ್ತೋಮಕ್ಕೆ ಒಂದರೆಕ್ಷಣ ವಿಸ್ಮಯ.

ಕಾಂಗ್ರೆಸ್‌ ಮೆರವಣಿಗೆಯಲ್ಲಿ ಕೇಸರಿ ಟೋಪಿ ವಾಲಾಗಳು, ಹಣೆಗೆ ಕುಂಕುಮದ ತಿಲಕವಿಟ್ಟು ವಿಜೃಂಭಿಸಿದ್ದು, ನೆರೆದಿದ್ದ ಜನಸ್ತೋಮದಲ್ಲಿ ಅಚ್ಚರಿ ಮೂಡಿಸಿತು. ಮೆರವಣಿಗೆಯ ನಡುವೆ ‘ಬೋಲೋ ಭಾರತ್‌ ಮಾತಾಕಿ’ ಜಯಘೋಷಗಳು ಮುಗಿಲು ಮುಟ್ಟಿದವು.

ಕಾಂಗ್ರೆಸ್‌ ಅಭ್ಯರ್ಥಿ ಅಬ್ದುಲ್‌ ಹಮೀದ್ ಮುಶ್ರೀಫ್‌ ₹ 5,001 ನಗದು ಪಾವತಿಸಿ, ಸಿದ್ಧೇಶ್ವರ ಗುಡಿಯಲ್ಲಿ ಸೋಮವಾರ ಮುಂಜಾನೆ ಅಭಿಷೇಕ, ವಿಶೇಷ ಪೂಜೆ ಹಮ್ಮಿಕೊಂಡಿದ್ದರು ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT