ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೋಕಕಲ್ಯಾಣಕ್ಕೆ ಅಣಿಮಾದಿ ಅಷ್ಟಸಿದ್ಧಿಯಾಗ

ಅಬ್ಬೆತುಮಕೂರಿನ ಸಿದ್ಧಸಂಸ್ಥಾನ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
Last Updated 24 ಏಪ್ರಿಲ್ 2018, 13:00 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸಿದ್ಧಸಂಸ್ಥಾನ ಮಠದಲ್ಲಿ ಸೋಮವಾರ ಅಣಿಮಾದಿ ಅಷ್ಟಸಿದ್ಧಿ ಪ್ರಾಪ್ತಿಯಾಗ ಭಕ್ತಿಯಿಂದ ಜರುಗಿತು.

ಅಬ್ಬೆತುಮಕೂರಿನ ಸೀಮಾಂತರದಲ್ಲಿರುವ ಭೀಮಾನದಿಯಲ್ಲಿ ಭಾನುವಾರ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಗಂಗಾಸ್ನಾನ ಕೈಗೊಂಡು ಗಂಗಾಮಾತೆಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಅವರಿಗೆ ಯಾಗಕಂಕಣ ಧಾರಣೆ ಮಾಡಲಾಯಿತು.

ಸೋಮವಾರ ಶ್ರೀಶೈಲ ವೀರಶೈವ ಗುರುಕುಲ ವೇದ ಅಧ್ಯಯನ ಮಾಡಿದ ಪಂಡಿತರು, ಕಾಶೀ ಜ್ಞಾನಪೀಠ ಪುರಸ್ಕೃತರು ಆದ ಗವಮಠಂ ವಿಶ್ವನಾಥ ಶಾಸ್ತ್ರಿಗಳ ನೇತೃತ್ವದಲ್ಲಿ 28 ಜನ ಋತ್ವಿಜರು ಅಣಿಮಾದಿ ಅಷ್ಟಸಿದ್ಧಿ ಪ್ರಾಪ್ತಿಯಾಗ ನಡೆಸಿಕೊಟ್ಟರು. ಸರ್ವತೋಭದ್ರ ಮಂಡಲಪಿತ ಆಹ್ವಾಹಿತ ದೇವತಾ ಶತಚೇಷ್ಟಿಯೋಗಿನಿ ದೇವಿಯಂತರ ಪೂಜಾ, ಚಂಡಿಯಾಗ, ನವಗ್ರಹ ವಾಸ್ತುಮಂಡಲ, ಭದ್ರಮಂಡಲ, ಸುಹಾಸಿನಿ ಪೂಜಾ, ಸುಮಂಗಲಿ ಪೂಜಾ, ಇತ್ಯಾದಿ ಪೂಜಾ ಕೈಂಕರ್ಯಗಳನ್ನು ಅತ್ಯಂತ ಭಕ್ತಿಯಿಂದ ನೆರವೇರಿಸಲಾಯಿತು.

ಈ ಯಾಗದಲ್ಲಿ140 ಕೆ.ಜಿ.ತುಪ್ಪ140 ಕೆ.ಜಿ ನವಧಾನ್ಯ,140 ಕೆ.ಜಿ 69 ಬಗೆಯ ವನಸ್ಪತಿಗಳನ್ನು ಬಳಸಲಾಯಿತು.18 ಪೀಠಗಳ ದ್ಯೋತಕವಾಗಿ 18 ಜನ ಬಾಲಕಿಯರು, 18 ಜನ ಮುತೈದೆಯರು ಈ ಯಾಗದಲ್ಲಿ ಭಾಗಿಯಾಗಿದ್ದು, ಅವರಿಗೆ ಉಡಿ ತುಂಬುವ ಕಾರ್ಯ ನೆರವೇರಿಸಲಾಯಿತು.

ಈ ಯಾಗದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ,‘ ವಿಶ್ವಾರಾಧ್ಯರು ತಮ್ಮ ಜೀವಿತಾವಧಿಯಲ್ಲಿ ಶ್ವೇತಾಂಬಿಕೆಯನ್ನು ಆರಾಧಿಸಿ ಒಲಿಸಿಕೊಂಡು ಆಕೆಯಿಂದ ಅಣಿಮಾದಿ ಅಷ್ಟಸಿದ್ಧಿಗಳನ್ನು ಪ್ರಾಪ್ತಿ ಮಾಡಿಕೊಂಡಿದ್ದರು. ಅದಕ್ಕಾಗಿ ಈ ಯಾಗವನ್ನು ನಡೆಸುತ್ತಿದ್ದು, ದೇವಿಯ ಪ್ರತಿಷ್ಠಾಪನೆಯನ್ನು ಮಾಡಲಾಗುವುದು’ ಎಂದರು.

‘ಈ ಯಾಗವನ್ನು ಕೈಗೊಳ್ಳುವುದರಿಂದ ಎಲ್ಲ ದೋಷಗಳು ನಿವಾರಣೆಯಾಗುತ್ತವೆ. ಸೂರ್ಯಾದಿ ನವಗ್ರಹ ಶನಿದೋಷ, ಬಾಲಾರಿತ್ಯ ದೋಷ, ಅನೇಕ ದೋಷಗಳು ನಿವಾರಣೆಯಾಗಲಿದ್ದು, ಲೋಕಕಲ್ಯಾಣವನ್ನು ಬಯಸಿ ಐದು ದಿನಗಳ ಯಾಗವನ್ನು ಶ್ರೀಮಠದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ’ ಎಂದು ವಿವರಿಸಿದರು.

ಧಾನ್ಯಾದಿವಾಸ ಹೋಮ ಇಂದು

‘151 ಕೆ.ಜಿ. ಬೆಳ್ಳಿಯ ಮಂಟಪವನ್ನೊಳಗೊಂಡ ಬಗುಳಾಂಬಿಕೆ ದೇವಿಯ ಸ್ಥಾಪನೆಗಾಗಿ ಜಲಾಧಿವಾಸ ಹೋಮವನ್ನು ನಡೆಸಲಾಗಿದೆ. ಇದರಲ್ಲಿ 38 ಜನ ದಂಪತಿಗಳು ಭಕ್ತಿಯಿಂದ ಪಾಲ್ಗೊಂಡಿದ್ದರು. ಏ.24ರಂದು ಬಗುಳಾಂಬಿಕೆ ದೇವಿಯ ಸ್ಥಾಪನೆಗಾಗಿ ಧಾನ್ಯಾದಿವಾಸ ಹೋಮವನ್ನು ನಡೆಸಲಾಗುವುದು’ ಎಂದು ಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದರು.

**

ಅಣಿಮಾದಿ ಅಷ್ಟಸಿದ್ಧಿ ವಿಶ್ವರಾಧ್ಯರು ಪವಾಡ ಸೃಷ್ಟಿಸಿದರು. ಅವರಿಗೆ ಶ್ವೇತಾಂಬೆ ದೇವಿ ಶಕ್ತಿ ಕರುಣಿಸಿದ್ದಳು. ಮಠದಲ್ಲಿ ಆ ದೇವಿಯನ್ನು ಪ್ರತಿಷ್ಠಾಪಿಸಲಾಗುವುದು
– ಗಂಗಾಧರ ಸ್ವಾಮೀಜಿ,ಸಿದ್ಧಸಂಸ್ಥಾನ ಮಠ ಅಬ್ಬೆತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT