ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ಹಿಂಸೆ ಹೆಚ್ಚಾಯ್ತೆ: ಇಷ್ಟೆಲ್ಲಾ ಕಾನೂನು ಆಯ್ಕೆಗಳಿವೆ ಗಮನಿಸಿ...

Last Updated 7 ಮಾರ್ಚ್ 2019, 6:58 IST
ಅಕ್ಷರ ಗಾತ್ರ

ವಿವಿಧ ಸಮೀಕ್ಷೆಗಳ ಪ್ರಕಾರ, ಭಾರತದಲ್ಲಿ ಕೌಟುಂಬಿಕ ಹಿಂಸೆ ತೀರಾ ಸಾಮಾನ್ಯವಾಗಿದೆ. ಅದರಲ್ಲೂ ವಿಶೇಷವಾಗಿ ವೈವಾಹಿಕ ಜೀವನದಲ್ಲಿ. ಈ ಸಂದರ್ಶನದಲ್ಲಿ, ಪರ್ಯಾಯ ಕಾನೂನು ವೇದಿಕೆ (ಎಎಲ್ಎಫ್)ಯಲ್ಲಿ ವಕೀಲರಾಗಿರುವ ಬಿಂದು ಎನ್ ದೊಡ್ಡಹಟ್ಟಿ, ಕೌಟುಂಬಿಕ ಹಿಂಸೆಯನ್ನು ಎದುರಿಸಲು ಮಹಿಳೆಯರಿಗೆ ಇರುವ ಕಾನೂನಿನ ಆಯ್ಕೆಗಳ ಬಗ್ಗೆ ಚರ್ಚಿಸಿದ್ದಾರೆ.

ಪ್ರಶ್ನೆ: ವೈವಾಹಿಕ ಜೀವನದಲ್ಲಿನ ಹಿಂಸಾಚಾರದಿಂದ ಮಹಿಳೆಯರನ್ನು ರಕ್ಷಿಸಲು ಇರುವ ಪ್ರಮುಖ ಕಾನೂನುಗಳು ಯಾವುವು?

ಉತ್ತರ: ಸಾಮಾನ್ಯವಾಗಿ ವಿವಾಹ ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ದಾಳಿ ನಡೆದ ಸಂದರ್ಭದಲ್ಲಿ ಮಹಿಳೆಯರು ಐಪಿಸಿ ಸೆಕ್ಷನ್ 498 ಎ ಯನ್ನು ಬಳಸುತ್ತಾರೆ. (ಮಹಿಳೆಯನ್ನು ಗಾಯಗೊಳಿಸುವುದು/ ಅಥವಾ ಪ್ರಾಣಾಪಾಯ ತಂದೊಡ್ಡುವುದು, ಅಥವಾ ಆತ್ಮಹತ್ಯೆಗೆ ಪ್ರಚೋದಿಸುವುದು, ಅಥವಾ ವರದಕ್ಷಿಣೆ ಕಿರುಕುಳ ಇಂತಹ ಪ್ರಕರಣಗಳಲ್ಲಿ ಪತಿಯ ಅಥವಾ ಆತನ ಸಂಬಂಧಿಗಳ ವಿರುದ್ಧ ಸಲ್ಲಿಸಬಹುದು.) ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ (PWDVA), 2005) ಕಾಯಿದೆಯ ವ್ಯಾಪ್ತಿ ವ್ಯಾಪಕವಾಗಿದೆ. ಇದು ದೈಹಿಕ, ಲೈಂಗಿಕ, ಭಾವನಾತ್ಮಕ, ಮೌಖಿಕ ಮತ್ತು ಆರ್ಥಿಕ ಹಿಂಸೆಗಳನ್ನು ಒಳಗೊಳ್ಳುತ್ತದೆ. ಈ ಕಾಯಿದೆಯ ಅಡಿಯಲ್ಲಿ ಮಹಿಳೆಯರು ತಮ್ಮ ಸ್ವಂತ ಕುಟುಂಬದ ವಿರುದ್ಧವೂ ಪ್ರಕರಣ ದಾಖಲಿಸಬಹುದು; ಇದು ಮದುವೆಯಾಗದೆ ಸಹಜೀವನ ನಡೆಸುವ ಸಂಬಂಧಗಳನ್ನೂ ಸಹ ಒಳಗೊಳ್ಳುತ್ತದೆ.

ಪ್ರಶ್ನೆ: ಈ ಕಾನೂನಿನ ಅಡಿಯಲ್ಲಿ ದೊರೆಯುವ ಪರಿಹಾರಗಳು ಯಾವುವು?
ಉತ್ತರ: 498 ಎ ಪ್ರಕರಣ ಒಂದು ಕ್ರಿಮಿನಲ್ ಪ್ರಕರಣವಾಗಿದೆ. ಇದಕ್ಕೆ ಶಿಕ್ಷೆಯೆಂದರೆ ಮೂರು ವರ್ಷಗಳವರೆಗಿನ ಸೆರೆವಾಸ ಮತ್ತು ದಂಡ. ಆದರೆ PWDV ಕಾಯಿದೆಯಡಿ ಹಲವು ರೀತಿಯ ಪರಿಹಾರಗಳಿವೆ. ಮಹಿಳೆ ತನ್ನ ಸುರಕ್ಷತೆಗಾಗಿ ಆದೇಶ ಪಡೆಯಬಹುದು, ನಿವಾಸ ಆದೇಶ ಪಡೆಯಬಹುದು (ಆಕೆಗೆ ವಾಸಿಸಲು ಒಂದು ಮನೆಯನ್ನು ಕೊಡಿಸುವುದು ಅಥವಾ ಪ್ರತಿವಾದಿ ಅಲ್ಲಿ ನೆಲೆಸದಂತೆ ಆದೇಶ), ಆರ್ಥಿಕ ಪರಿಹಾರ / ಜೀವನಾಂಶ, ಪರಿಹಾರ ಧನ, ಅಥವಾ ಮಕ್ಕಳ ತಾತ್ಕಾಲಿಕ ಸುಪರ್ದಿ...ಇತ್ಯಾದಿ. ಈ ಕಾಯಿದೆಯಡಿ, ಪ್ರತಿವಾದಿಯು ನ್ಯಾಯಾಲಯದ ಆದೇಶಗಳನ್ನು ಅನುಸರಿಸದಿದ್ದಲ್ಲಿ ಮಾತ್ರ ಜೈಲಿಗೆ ಹೋಗುತ್ತಾನೆ. ಆದೇಶ ಅನುಸರಿಸದಿದ್ದಲ್ಲಿ, ಆದೇಶವನ್ನು ಜಾರಿಗೆ ತರುವಂತೆ ಕೋರಿ ಮಹಿಳೆ ಪೊಲೀಸರ ಸಹಾಯ ಪಡೆಯಬಹುದು; ಆಗಲೂ ಆತ ಒಪ್ಪದಿದ್ದಲ್ಲಿ ಪೊಲೀಸರು ಅವನನ್ನು ಬಂಧಿಸಬಹುದು. ಇದಕ್ಕೆ ಶಿಕ್ಷೆಯೆಂದರೆ ಒಂದು ವರ್ಷ ಕಾರಾಗೃಹ ಮತ್ತು / ಅಥವಾ ರೂ 20,000 ವರೆಗೆ ದಂಡ.

ಪ್ರಶ್ನೆ: PWDV ಕಾಯಿದೆ ಮತ್ತು ಸೆಕ್ಷನ್ 498 ಎ ಯ ಅಡಿಯಲ್ಲಿ ಪ್ರಕರಣ ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆಗಳು ಏನು?
ಉತ್ತರ: 498ಎ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಬೇಕು. ಆದರೆ ಕಳೆದ ವರ್ಷದ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಅಂತಹ ಪ್ರಕರಣಗಳಲ್ಲಿ ಕೌನ್ಸಿಲಿಂಗ್ ಕಡ್ಡಾಯವಾಗಿದೆ. 2-3 ತಿಂಗಳುಗಳ ಕಾಲ ಕೌನ್ಸಿಲಿಂಗ್ ಮುಂದುವರಿಯಬಹುದು. ಮತ್ತು ಈ ಸಮಯದಲ್ಲಿ ಆರೋಪಿಗಳನ್ನು ಬಂಧಿಸಲು ಆಗುವುದಿಲ್ಲ. ತರಬೇತಿ ಪಡೆದ ಆಪ್ತ ಸಲಹೆಗಾರರು ಬಹುತೇಕ ಲಭ್ಯವಿರುವುದಿಲ್ಲ ಮತ್ತು ಪೋಲೀಸರು ತಾವೇ ಕೌನ್ಸಿಲಿಂಗ್ ಮಾಡುತ್ತಾರೆ. ಇದು ಕ್ರಿಮಿನಲ್ ಕೇಸ್ ಆಗಿರುವುದರಿಂದ, ಸರ್ಕಾರಿ ವಕೀಲರು ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಾರೆ. ಆದರೆ ನ್ಯಾಯಲಯದ ಹೊಸ ತೀರ್ಪಿನ ಪ್ರಕಾರ, ನೀವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ಗಳಿಗೆ ನಿಮ್ಮ ಸ್ವಂತ ವಕೀಲರನ್ನು ನೇಮಿಸಿಕೊಳ್ಳಬಹುದು. ಇದೊಂದು ಉತ್ತಮ ಆಯ್ಕೆಯಾಗಿದೆ.

ಡಿ.ವಿ ಕಾಯಿದೆ ಬಳಸಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲು, ನೇರವಾಗಿ ವಕೀಲರ ಬಳಿಗೆ ಹೋಗುವುದು ಉತ್ತಮ. ವಾಸ್ತವವಾಗಿ, ನೀವು ಜಿಲ್ಲಾ ರಕ್ಷಣಾಧಿಕಾರಿಗಳ (ಪಿಒ) ಬಳಿಗೆ ಹೋಗಬಹುದು. ಅವರು ನಿಮಗೆ, ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಿಕೊಡಬಹುದು, ಮಧ್ಯಸ್ಥಿಕೆ ವಹಿಸಬಹುದು, ಅಥವಾ ನಿಮಗೆ ಡಿ.ವಿ. ಪ್ರಕರಣ ಅಥವಾ 498ಎ ಪ್ರಕರಣ ದಾಖಲಿಸಲು ಸಹಾಯ ಮಾಡಬಹುದು. (ಪಿ.ಒ ಪೀಡಿತೆಗೆ ಉಳಿದುಕೊಳ್ಳುವ ವ್ಯವಸ್ಥೆ ಅಥವಾ ವೈದ್ಯಕೀಯ ಸೌಲಭ್ಯ ಕೂಡ ಕಲ್ಪಿಸಬಹುದು). ಆದರೆ ಪಿಒ ವ್ಯವಸ್ಥೆ ವ್ಯವಸ್ಥಿತವಾಗಿಲ್ಲ - ಹಲವು ಹುದ್ದೆಗಳು ಖಾಲಿಯಾಗಿವೆ ಮತ್ತು ನೇಮಿಸಲ್ಪಟ್ಟ ವಕೀಲರು ಉತ್ತಮವಾಗಿಲ್ಲದೇ ಇರಬಹುದು. ಆದ್ದರಿಂದ ನಿಮ್ಮ ಸ್ವಂತ ವಕೀಲರನ್ನು ನೇಮಿಸಿಕೊಳ್ಳುವುದು ಒಳ್ಳೆಯದು. ಇಂತಹ ಸಂದರ್ಭಗಳಲ್ಲಿ, ಎ ಎಲ್ ಎಫ್ ನಂತಹ ಕೆಲವು ಸಂಸ್ಥೆಗಳು ಉಚಿತವಾಗಿ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತವೆ.

ಪ್ರಶ್ನೆ: ಈ ಕಾನೂನುಗಳನ್ನು ಉಪಯೋಗಿಸುವಲ್ಲಿನ ತೊಡಕುಗಳು ಏನು?
ಉತ್ತರ: 498 ಎ ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಮಿತಿ ತುಂಬಾ ಹೆಚ್ಚಾಗಿದೆ. ಮತ್ತು ಆಪಾದನೆಗಳನ್ನು ಸಾಬೀತುಪಡಿಸುವುದು ಕಷ್ಟ. ಮುಚ್ಚಿದ ಬಾಗಿಲುಗಳ ಹಿಂದೆ ನಡೆಯುವ ಯಾವುದೇ ಅಪರಾಧಗಳನ್ನು ಸಾಬೀತು ಮಾಡುವುದು ಕಷ್ಟ. ಅನೇಕ ಮಹಿಳೆಯರು ಇಂತಹ ಸಮಸ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ ಮತ್ತು ಹಿಂಸೆ ಒಂದು ಸಾಮಾನ್ಯ ವಿಷಯ ಎಂಬಂತೆ ಪರಿಗಣಿಸುತ್ತಾರೆ. ಹಿಂಸೆ ಅಸಹನೀಯವಾದಾಗ ಮಾತ್ರ ಅವರು ಪ್ರಕರಣಗಳನ್ನು ದಾಖಲಿಸುತ್ತಾರೆ. ಮಹಿಳೆ ತನ್ನ ಸಹೋದರಿಯೊಂದಿಗೆ ಈ ಸಮಸ್ಯೆ ಕುರಿತು ಮಾತನಾಡಿದ್ದಾಳೆ ಎಂದುಕೊಳ್ಳೋಣ. ಆಗ ಆಕೆ ಈ ಪ್ರಕರಣದಲ್ಲಿ ಸಾಕ್ಷಿಯಾಗುತ್ತಾಳೆ. ಆದರೆ, ನ್ಯಾಯಾಧೀಶರು, ದೂರುದಾತೆಗೆ ಆಕೆ ತೀರಾ ಹತ್ತಿರದ ಸಂಬಂಧಿಯಾಗಿರುವುದರಿಂದ ಆಕೆಯ ಸಾಕ್ಷಿ ವಿಶ್ವಾಸಾರ್ಹವಲ್ಲ ಎಂದು ಪರಿಗಣಿಸಬಹುದು.

ಇನ್ನೊಂದು ಕಷ್ಟವೆಂದರೆ ಕಾನೂನಿನ ವ್ಯಾಖ್ಯಾನ ಹಲವು ರೀತಿಯಲಿ ಬದಲಾಗುತ್ತದೆ. ಉದಾಹರಣೆಗೆ, 'ಕ್ರೌರ್ಯ' ಎಂಬುದು 498 ಎಯಲ್ಲಿರುವ ಪ್ರಮುಖ ಅಂಶವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಹಿಳೆಯನ್ನು ಪ್ರಚೋದಿಸುವ ನಡವಳಿಕೆಯೂ ಇದರಲ್ಲಿ ಸೇರಿದೆ - ಆದರೆ ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸದೆ, ಕೇವಲ ಖಿನ್ನತೆಗೆ ಒಳಗಾಗಿದ್ದರೆ, ಆಗೇನು? ಮಹಿಳೆಯ ಮುಖದ ಮೇಲೆ ಗುರುತುಗಳೇನು ಇಲ್ಲದಿದ್ದರೆ, ಪೊಲೀಸರು ಯಾವುದೇ ಹಿಂಸೆ ನಡೆದಿಲ್ಲ ಎಂದು ಹೇಳುತ್ತಾರೆ. ಅನೇಕ ತೀರ್ಪುಗಳಲ್ಲಿ, ಈ ಕಾನೂನಿನ ಅಡಿಯಲ್ಲಿ ಲೈಂಗಿಕ ಅಪರಾಧಗಳಿಗಾಗಿ ಗಂಡಂದಿರಿಗೆ ಶಿಕ್ಷೆ ವಿಧಿಸಿದ್ದರೂ, ಪೋಲೀಸರು ಲೈಂಗಿಕ ಹಿಂಸೆ 498 ಎ ಅಡಿಯಲ್ಲಿ ಬರುವುದಿಲ್ಲ ಎಂದುಕೊಳ್ಳುತ್ತಾರೆ. ಮಾಮೂಲಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳವನ್ನು ವಿವರಿಸುವುದೂ ಸಹ ಕಷ್ಟ – ಇದಕ್ಕೆ ಒಳ್ಳೆಯ, ಸೂಕ್ಷ್ಮ ವಕೀಲರು ಅಗತ್ಯ.

ಡಿವಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸುವುದು ಸುಲಭವಾಗಿದೆ. ಏಕೆಂದರೆ ಇದು ಅಪರಾಧ ಕಾನೂನಲ್ಲ ಮತ್ತು ಕೆಲವು ನಿರ್ದಿಷ್ಟ ಪರಿಹಾರಗಳನ್ನು ನೀಡುತ್ತದೆ.

ಪ್ರಶ್ನೆ: ಇಂತಹ ಸನ್ನಿವೇಶಗಳಲ್ಲಿ, ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಮಹಿಳೆಯರು ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
ಉತ್ತರ: ಪುರಾವೆಗಳನ್ನು ಸಂಗ್ರಹಿಸಲು ಆರಂಭಿಸಿ. ಎಲ್ಲವನ್ನೂ ರೆಕಾರ್ಡ್ ಮಾಡಿ - ಫೋನ್ ಕರೆಗಳು, ಸಂಭಾಷಣೆ ಇತ್ಯಾದಿ. ಒಂದು ಡೈರಿಯಲ್ಲಿ ಬರೆಯಲು ಆರಂಭಿಸಿ. ಮತ್ತು ಹಿಂಸೆಯ ಬಗ್ಗೆ ತನ್ನ ಕುಟುಂಬದವರಿಗೆ ಮತ್ತು ಎಲ್ಲಾ ಸ್ನೇಹಿತರಿಗೆ ಹೇಳಿ. ಇವುಗಳೆಲ್ಲವೂ ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಣಮಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಮಹಿಳೆಯರಲ್ಲಿ ಹಿಂಸಾಚಾರದ ಬಗ್ಗೆ ಅರಿವು ಇರಬೇಕು.

498 ಎ ಅಡಿಯಲ್ಲಿ ಒಂದು ಪ್ರಕರಣವನ್ನು ರೂಪಿಸುವಾಗ, ಪ್ರಕರಣವನ್ನು ಮತ್ತಷ್ಟು ಬಲಪಡಿಸಲು, ನಿಮ್ಮ ಪ್ರಕರಣಕ್ಕೆ ಸಂಬಂಧಿಸಿದ ಇತರ ಐಪಿಸಿ ಸೆಕ್ಷನ್ ಗಳನ್ನು ಸೇರಿಸಿ. ಕೆಲವು ಉದಾಹರಣೆಗಳೆಂದರೆ ಐಪಿಸಿ ಸೆಕ್ಷನ್ 321 (ಸ್ವಯಂಪ್ರೇರಣೆಯಿಂದ ಹಾನಿ ಉಂಟುಮಾಡುವುದು), ಸೆಕ್ಷನ್ 322 (ಸ್ವಯಂಪ್ರೇರಣೆಯಿಂದ ಗಂಭೀರ ಹಾನಿ ಉಂಟುಮಾಡುವುದು), ಸೆಕ್ಷನ್ 312 (ಹೆಣ್ಣು ಭ್ರೂಣ ಹತ್ಯೆ ಸಂದರ್ಭದಲ್ಲಿ, ಸ್ತ್ರೀ ಭ್ರೂಣಕ್ಕೆ ಹಾನಿಮಾಡಿದ್ದಕ್ಕೆ ಶಿಕ್ಷೆ), ಸೆಕ್ಷನ್ 509 ( ಮಹಿಳೆಯ ಮಾನಹರಣಕ್ಕೆ ಯತ್ನಿಸುವುದು), ಸೆಕ್ಷನ್ 420 (ವಂಚನೆ). (ಈ ಸೆಕ್ಷನ್ ಗಳು ಒಂದರಿಂದ ಏಳು ವರ್ಷಗಳವರೆಗಿನ ಸೆರೆಮನೆವಾಸದ ಶಿಕ್ಷೆಯನ್ನು ಒಳಗೊಂಡಿವೆ). ಆಗಲೂ, ಪೊಲೀಸರು ಸರಿಯಾಗಿ ಪ್ರಕರಣವನ್ನು ರೂಪಿಸಬೇಕು. ಉದಾಹರಣೆಗೆ, ಸೆಕ್ಷನ್ 322 ಅನ್ನು ಬಳಸಿದರೆ, ದಾಳಿ ಹೇಗೆ ಸಂಭವಿಸಿದೆ ಎಂಬುದನ್ನು ಪೋಲಿಸರು ತೋರಿಸಬೇಕು; ನೀವು ವೈದ್ಯಕೀಯ ಪ್ರಮಾಣಪತ್ರವನ್ನು ಹೊಂದಿದ್ದರೆ, ಅದು ಬಲವಾದ ಪುರಾವೆಯಾಗುತ್ತದೆ.

ದೈಹಿಕ ಮತ್ತು ಮಾನಸಿಕ ಹಿಂಸಾಚಾರ ಪ್ರಕರಣಗಳಲ್ಲಿ 498 ಎ ಮತ್ತು ಪಿ ಡಬ್ಲ್ಯೂ ಡಿ ವಿ ಕಾಯಿದೆಯಡಿ ಪ್ರತ್ಯೇಕ ಪ್ರಕರಣಗಳನ್ನು ಸಲ್ಲಿಸಬಹುದು. ಇದರಿಂದಾಗಿ ಒಂದು ಪ್ರಕರಣ ಮತ್ತೊಂದು ಪ್ರಕರಣವನ್ನು ಬಲವಾಗಿಸುತ್ತದೆ. – ಒಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಇನ್ನೊಂದು ಪ್ರಕರಣ, ಮತ್ತೊಂದು ನ್ಯಾಯಾಲಯದಲ್ಲಿ ನಡೆಯುತ್ತಿದೆ ಎಂದು ನೀವು ಹೇಳಬಹುದು. 498 ಎ ಪ್ರಕರಣವು ಗಂಡನನ್ನು ಸಂಧಾನಕ್ಕೆ ತರಲು ಆತನ ಮೇಲೆ ಒತ್ತಡವನ್ನುಂಟುಮಾಡುವ ಸಲುವಾಗಿ ಹಾಕಲಾಗುತ್ತದೆ – ಇಲ್ಲವಾದರೆ, ಆತನ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಅಥವಾ ಇದಕ್ಕೆ ದಂಡವೂ ಇಲ್ಲ. ಆದರೆ, ಉದಾಹರಣೆಗೆ ಮಹಿಳೆಗೆ ಕೇವಲ ಸುಪರ್ದಿಯ ಆದೇಶದ ಅಗತ್ಯವಿದ್ದರೆ, ಸಮಾನಾಂತರವಾಗಿ 498 ಎ ಪ್ರಕರಣವನ್ನು ಸಲ್ಲಿಸುವ ಅಗತ್ಯವಿಲ್ಲ.

ಪ್ರಶ್ನೆ: ಈ ಪ್ರಕರಣಗಳು ಇತ್ಯರ್ಥವಾಗಲು ಸಾಮಾನ್ಯವಾಗಿ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಉತ್ತರ: 498 ಎ ಪ್ರಕರಣಗಳು ಇತ್ಯರ್ಥವಾಗಲು ಸರಾಸರಿ 3-4 ವರ್ಷಗಳು ತೆಗೆದುಕೊಳ್ಳುತ್ತವೆ. ಡಿ.ವಿ ಪ್ರಕರಣಗಳು ಸುಮಾರು ಮೂರು ವರ್ಷ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT