ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಒಲ್ಲದ ದೇಶದಲ್ಲಿ ಪಳಗಿದ ಸ್ಪಿನ್ನರ್

Last Updated 26 ಮೇ 2018, 1:40 IST
ಅಕ್ಷರ ಗಾತ್ರ

ಶಪಗೀಜ ಕ್ರಿಕೆಟ್ ಲೀಗ್ ಎಂದರೆ ಅಫ್ಗನ್ನರ ಪಾಲಿಗೆ ಇಲ್ಲಿನ ಪ್ರೀಮಿಯರ್ ಕ್ರಿಕೆಟ್ ಲೀಗ್ ಇದ್ದಂತೆ. ಅಲ್ಲಿನ ದೇಸಿ ಕ್ರಿಕೆಟ್‌ನ ರುಚಿ ಕಂಡವರು ಪಂದ್ಯವೊಂದನ್ನು ಆಸ್ವಾದಿಸುತ್ತಿದ್ದರು. ಬ್ಯಾಂಡ್-ಎ-ಅಮೀರ್ ಡ್ರಾಗನ್ಸ್ ತಂಡಕ್ಕೆ ಗೆಲುವು ತಂದಿತ್ತ ಲೆಗ್ ಸ್ಪಿನ್ನರ್ ರಶೀದ್ ಖಾನ್ 19ನೇ ವಯಸ್ಸಿಗೇ ಸ್ಟಾರ್ ಕ್ರಿಕೆಟರ್ ರೀತಿ ಆಗಿದ್ದರು.

ಟಿ-20 ಕ್ರಿಕೆಟ್ ನಲ್ಲಿ ಚಿಕ್ಕಪ್ರಾಯದಲ್ಲಿಯೇ 100 ವಿಕೆಟ್ ಪಡೆದ ದೇಸಿ ಟೂರ್ನಿಯ ದಿಗ್ಗಜ ಎಂದು ಹೆಸರಾಗಿದ್ದವರು ರಶೀದ್.

ಅದೇ ಟೂರ್ನಿಯ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿ ಮೂವರು ಮೃತಪಟ್ಟರು. ಕಾಬೂಲ್‌ನ ಕ್ರೀಡಾಂಗಣದಿಂದ ಕೆಲವೇ ಮೀಟರ್‌ಗಳ ದೂರದಲ್ಲಿ ನಡೆದ ಅವಘಡ ಇದು.

ಸುದ್ದಿ ಕಿವಿಮೇಲೆ ಬಿತ್ತಾದರೂ ಕ್ರೀಡಾಂಗಣದಲ್ಲಿ ಇದ್ದ ರಶೀದ್ ಅಭಿಮಾನಿಗಳು ಕದಲಲಿಲ್ಲ. ಕೆಲವರು ಬಣ್ಣದಲ್ಲಿ ಮೈಮೇಲೆ ರಶೀದ್ ಚಿತ್ರ ಬಿಡಿಸಿಕೊಂಡು ಬಂದು ಕುಳಿತಿದ್ದರು. ಇನ್ನು ಕೆಲವರು ನೆಚ್ಚಿನ ಆಟಗಾರನ ಕುರಿತು ಹಾಡುತ್ತಾ ಮೈಮರೆತಿದ್ದರು. ಅಫ್ಗನ್ ರಾಷ್ಟ್ರಧ್ವಜವನ್ನು ಗಾಳಿಯಲ್ಲಿ ಆಡಿಸುತ್ತಾ ಬಾಂಬ್ ಸ್ಫೋಟದ ಆತಂಕವನ್ನೂ ಲೆಕ್ಕಿಸದೆ ಆಟದ ಮಜಾ ಕಣ್ತುಂಬಿಕೊಂಡರು.

ಅದೇ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ರಶೀದ್ ಹೀಗೆ ಹೇಳಿದರು: ‘ನನ್ನ ದೇಶಕ್ಕೆ ಗೆಲುವು ತಂದುಕೊಡಲೆಂದು ಆಡಬಯಸುತ್ತೇನೆ. ವಿಶ್ವದ ವೇದಿಕೆ ಮೇಲೆ ದೇಶದ ಹೆಸರು ರಾರಾಜಿಸಬೇಕು ಎನ್ನುವುದು ನನ್ನ ಕನಸು’.

ಕಳೆದ ವರ್ಷ ಅವರು ಹೀಗೆ ಹೇಳಿದ ಮೇಲೆಯೇ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲೂ ಆಡಿದ್ದು. ಈ ವರ್ಷ ಕೂಡ ಹೈದರಾಬಾದ್ ತಂಡದ ಆಟಗಾರರು, ತರಬೇತುದಾರರ ನಿರೀಕ್ಷೆಯ ನೋಟ ಅವರ ಮೇಲೆ ನೆಟ್ಟಿದೆ.

ಅಫ್ಗನಿಸ್ಥಾನದ ಬೇರೆ ಯಾವ ಆಟಗಾರ ಕೂಡ ಐಪಿಎಲ್ ನಲ್ಲಿ ಆಡಿರಲಿಲ್ಲ. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಅನುಭವ ಕಂಡುಕೊಳ್ಳುವ ಅವಕಾಶ ಕೂಡ ಆ ದೇಶದ ಬೇರೆ ಯಾರಿಗೂ ಸಿಕ್ಕಿರಲಿಲ್ಲ.

ಅಡಿಲೇಡ್ ಸ್ಟ್ರೈಕರ್ಸ್ ಪರವಾಗಿ ಆಡುವ ಅವಕಾಶ ಪಡೆದಾಗ ಆ ತಂಡದ ಕೋಚ್ ಆಗಿದ್ದ ಜೇಸನ್ ಗಿಲೆಸ್ಪಿ ಬಾಯಿತುಂಬಾ ಹೀಗೆ ಹೊಗಳಿದ್ದರು: ‘ಚುಟುಕು ಕ್ರಿಕೆಟ್ ನಲ್ಲಿ ಯುವಕರು ಮಿಂಚುತ್ತಿದ್ದಾರೆ. ಆದರೆ, ಉತ್ಸಾಹ, ಸಾಮರ್ಥ್ಯ ಇದ್ದೂ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬಲ್ಲ ಜಾಣತನ ರಶೀದ್ ನಲ್ಲಿ ಇದೆ’.

1996ರಿಂದ 2001ರ ವರೆಗೆ ತಾಲೀಬಾನ್ ಆಳ್ವಿಕೆ ಇತ್ತಲ್ಲ; ಆ ಸಂದರ್ಭದಲ್ಲಿ ರಶೀದ್ ಖಾನ್ ಹುಟ್ಟಿದ್ದು. ಕ್ರೀಡೆಯನ್ನು ಧರ್ಮಪ್ರಜ್ಞೆ ಹಾಳುಗೆಡಹುವ ಕಾಲಹರಣದ ಚಟ ಎಂದೇ ಅಲ್ಲಿ ಆಗ ಬಿಂಬಿಸಲಾಗಿತ್ತು.

ಟಿ.ವಿ.ಯಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಹಾಗೂ ಪಾಕಿಸ್ತಾನದ ಶಾಹಿದ್ ಆಫ್ರಿದಿಯ ಆಲ್ ರೌಂಡ್ ಆಟ ನೋಡಿಯೇ ರಶೀದ್ ಉತ್ಸಾಹ ತಂದುಕೊಂಡಿದ್ದು. ಟೆನಿಸ್ ಬಾಲ್ ಬಳಸಿ ತನ್ನ ಅಣ್ಣ-ತಮ್ಮಂದಿರ ಜೊತೆ ಆಡುತ್ತಿದ್ದ ರಶೀದ್ ದೊಡ್ಡ ಕುಟುಂಬದ ಮಗ. ಒಂದು ಡಜನ್ ಮಕ್ಕಳಲ್ಲಿ ಅವರೂ ಒಬ್ಬರು.

ಟೆನಿಸ್ ಬಾಲ್ ಕ್ರಿಕೆಟ್ ನಿಂದ ದೇಸಿ ಅಂಗಳಕ್ಕೆ ಜಿಗಿದ ಅವರು, ತಮ್ಮ ಲೆಗ್ ಸ್ಪಿನ್ ಜಾಣತನ ತೋರಿಯೇ ಅಫ್ಗನಿಸ್ಥಾನ ರಾಷ್ಟ್ರೀಯ ತಂಡಕ್ಕೆ 17ರ ಪ್ರಾಯದಲ್ಲೇ ಆಯ್ಕೆಯಾದರು.

ವೆಸ್ಟ್ ಇಂಡೀಸ್ ವಿರುದ್ಧ ಬರೀ 18 ರನ್ ನೀಡಿ 8 ವಿಕೆಟ್ ಪಡೆದ ಶ್ರೇಷ್ಠ ಸಾಧನೆಯೂ ಸೇರಿದಂತೆ ಬಲು ಬೇಗ ಪಂದ್ಯವೊಂದಕ್ಕೆ ಸರಾಸರಿ ಎರಡು ವಿಕೆಟ್ ನಂತೆ ಪಡೆಯುತ್ತಾ ಸಾಧನೆ ಮಾಡತೊಡಗಿದರು.

ಕೆರೀಬಿಯನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ನಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ ಬೌಲರ್ ಎಂಬ ಗೌರವ ಕೂಡ ಅವರದ್ದೇ ಆಯಿತು.

‘ನನ್ನ ದೇಶಕ್ಕೆ ವಿಶ್ವಕಪ್ ಗೆದ್ದುಕೊಡಬೇಕು. ಅದು ನನ್ನ ಜೀವಮಾನದ ಕನಸು’- ಹೀಗೊಮ್ಮೆ ರಶೀದ್ ಹೇಳಿದ್ದರು. ಕನಸು ಕಾಣುವುದಿದ್ದರೆ ಅದು ಇಷ್ಟು ದೊಡ್ಡದಾಗಿರಬೇಕು; ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT