ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಜೀವನಬಂಡಿ ಸಾಗಿಸುತ್ತಿರುವ ಕೋಲೆ ಬಸವ

ಅಕ್ಷರ ಗಾತ್ರ

ಹೆಸರು ಸುಬ್ರಮಣ್ಯಂ, ನನಗೆ 65 ವರ್ಷ ಆಂಧ್ರಪ್ರದೇಶದ ಮಂಗಾಪುರ ನಮ್ಮೂರು. ಮಾತಾಡುವ ಭಾಷೆ ತೆಲುಗು. ಕೋಲೆ ಬಸವನನ್ನು ಆಡಿಸುವುದೇ ನಮ್ಮ ಕೆಲಸ. ರಾಜ್ಯದಾದ್ಯಂತ ಊರೂರು ಸುತ್ತುತ್ತಾ ಅಲೆಮಾರಿ ಜೀವನ ಸಾಗಿಸುತ್ತಿರುವೆ.

ಕೋಲೆ ಬಸವನ ಆಟವನ್ನು ತಾತ, ಮುತ್ತಾತರ ಕಾಲದಿಂದ ಆಡಿಕೊಂಡು ಬಂದಿದ್ದೇವೆ. ನಾನು ಓದಿಲ್ಲ. ಅಪ್ಪ ತಾತನ ಜೊತೆ ಸೇರಿ ಬಸವನ ಆಡಿಸುವುದನ್ನು ಕಲಿತೆ. ಅವರಿಗೆ ನೆರವೂ ಆದೆ. ಅವರಿಂದ ಕಲಿತ ಆಟವೇ ಇಂದು ನಮ್ಮ ಜೀವನ ಬಂಡಿ ಎಳೆಯುತ್ತಿದೆ.

ಈಗ ನಾನು, ನನ್ನ ಹೆಂಡತಿ ಪಾರ್ವತಮ್ಮ ಹಾಗೂ ಮಗ ವೆಂಕಟೇಶ್‌ ಮೂರು ಜನ ಸೇರಿ ಆಟ ಆಡಿಸುತ್ತೇವೆ. ನನ್ನ ಮಗನೂ ಓದಿಲ್ಲ. ಇದೇ ನಮ್ಮ ಜೀವನದ ವೃತ್ತಿ. ಬಸವಗಳಿಗೆ ಆಟ ಹೇಳಿಕೋಡುತ್ತೀವಿ, ಅವುಗಳಿಗೆ ಆಟ ಕಲಿಸಿ ಎಲ್ಲರನ್ನು ನಗಿಸುತ್ತೇವೆ. ಈಗ ಟಿ.ವಿ ಬಂದಿವೆ. ಆದರೂ ಕೋಲೆ ಬಸವನ ಆಟ ಆಂದ್ರೆ ನೋಡೋಕೆ ಜನ ಸೇರುತ್ತಾರೆ. ಅವರು ನೀಡೋ ಕಾಸಲ್ಲಿ ನಮ್ಮ ಜೀವನ ನಡೆತ್ತೈತೆ.

ಬೇಸಿಗೆ ಕಾಲದಲ್ಲಿ ನಮ್ಮೂರು ಆಂಧ್ರದ ಕಡೆ ತುಂಬಾ ಬಿಸಿಲು. ನಮಗೆ ಅಂತ ಜಮೀನು ಏನೂ ಇಲ್ಲ. ನಮ್ಮ ಆಸ್ತಿ ಈ ಕೋಲೆ ಬಸವನ ಆಟ ಆಡಿಸುವುದು ಮಾತ್ರ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದೀವಿ. ಬೇಸಿಗೆ ಕಾಲದಲ್ಲಿ ಕರ್ನಾಟಕದ ಕಡೆ ಬರುತ್ತೇವೆ. ಅಲ್ಲಿ ಒಂದೊಂದು ಊರಲ್ಲಿ ಒಂದೊಂದು ದಿನ ಬಸವನ ಆಟ ಆಡಿಸುತ್ತಾ ಜೀವನ ಸಾಗಿಸುತ್ತೇವೆ.

ಬಸವನ ಆಟದಲ್ಲಿ ರಾಮ, ಲಕ್ಷ್ಮಣ, ಸೀತೆ ಮೂರು ಜನರ ಕಥೆ ಹೇಳುತ್ತಾ, ರಾಮ ಸೀತೆಗೆ ಮದುವೆ ಮಾಡಿಸುತ್ತೇವೆ. ರಾತ್ರಿ ಊರಲ್ಲಿ ಆಟವಾಡಿಸಿ ಬೆಳಗ್ಗೆ ಮನೆಮನೆಗೆ ಹೋಗಿ ಅವರು ನೀಡೋದನ್ನು ತೆಗೆದುಕೊಂಡು ಬರುತ್ತೀವಿ. ಒಂದು ದಿನಕ್ಕೆ ₹ 200ರಿಂದ ₹ 300 ಸಂಪಾದನೆಯಾಗುತ್ತದೆ. ಆ ಹಣದಲ್ಲಿಯೇ ಬಸವಣ್ಣ ಮತ್ತು ನಮಗೆ ಹೊಟ್ಟೆ ತುಂಬಿಸಿಕೊಳ್ಳಬೇಕು. ಸಮಯವಿದ್ದರೆ ಅಡುಗೆ ನಾವೇ ಮಾಡಿಕೊಳ್ಳುತ್ತೇವೆ. ಇಲ್ಲವಾದರೆ ಹಳ್ಳಿಗಳಲ್ಲಿ ಯಾರದಾರೂ ಮನೆಯಲ್ಲಿ ತೆಗೆದುಕೊಂಡು ಊಟ ಮಾಡುತ್ತೇವೆ. ಊರಿಂದ ಊರಿಗೆ ಬಂಡಿಯಲ್ಲೇ ಹೋಗುತ್ತೇವೆ. ಅದರಲ್ಲೇ ನಮಗೆ ಬೇಕಿರುವ ಎಲ್ಲಾ ವಸ್ತುಗಳನ್ನು ಇಟ್ಟುಕೊಂಡು ಅಲೆಮಾರಿ ಜೀವನ ನಡೆಸುತ್ತೇವೆ. ಹಳ್ಳಿಗಳಲ್ಲಿ ದೇವಸ್ಥಾನಗಳ ಬಳಿ ಟೆಂಟ್‌ ಹಾಕುತ್ತೀವಿ. ಜನಗಳಿಗೆ ಅಲ್ಲೇ ಆಟ ತೋರಿಸುತ್ತೇವೆ. ಜೀವನ ನಡೆಸಿಕೊಂಡು ಹೋಗುತ್ತಿದ್ದೇವೆ.

ಒಂದಷ್ಟು ಹಳ್ಳಿ ಹೋಡಾಡುತ್ತೀವಿ. ತಿಂಗಳಿಗೊಮ್ಮೆ ಊರಿಗೆ ಹೋಗುತ್ತೀವಿ. ಜನ ಕೊಟ್ಟಿರುವ ದವಸ ಧಾನ್ಯವನ್ನು ಮನೆಯಲ್ಲಿ ಇಡುತ್ತೇವೆ. ಬಟ್ಟೆಯನ್ನೆಲ್ಲಾ ಒಗೆದುಕೊಂಡು ಮತ್ತೇ ಗಂಟು ಮೂಟೆ ಕಟ್ಟಿ ಹೊರಡುತ್ತೇವೆ. ನಮಗೇನಾದರೂ ಕಷ್ಟ ಬಂದಾಗ ಈ ದವಸ ಮಾರಿ ಹಣ ಉಪಯೋಗಿಸಿಕೊಳ್ಳುತ್ತೀವಿ.

ಹಳ್ಳಿಯಲ್ಲಿ ಒಂದೊಂದು ಕಡೆ ದೇವಸ್ಥಾನ ಹೊರಾಂಗಣ ಇರುತ್ತೆ. ಒಂದೊಂದು ಕಡೆ ಹೊರಾಂಗಣ ಇರಲ್ಲ. ಇದ್ರೆ ನಾವೇನು ಮಲಗುತ್ತೇವೆ. ಆದರೆ ಬಸವಗಳು ಮಳೆ ಬಂದ್ರೆ ನೆನೆಯಬೇಕು. ಬಿಸಿಲಿಗೆ ಬೇಯಬೇಕಮ್ಮ. ಊರಿಂದ ಊರಿಗೆ ಬಂಡಿಯಲ್ಲಿ ಸಾಗುವಾಗ ನಮಗೆ ಎಲ್ಲಾದರೂ ನೀರು ಕಾಣಿಸಿದ್ರೆ ಅಲ್ಲೇ ನಮ್ಮ ಸ್ನಾನ, ಬಟ್ಟೆ ಒಗೆದುಕೊಳ್ಳುವುದು, ಬಸವಗಳ ಮೈತೊಳೆಯುವುದು ಎಲ್ಲಾ ದಿನಚರಿಗಳನ್ನು ಮುಗಿಸಿಕೊಂಡು ಮತ್ತೊಂದು ಹಳ್ಳಿಗೆ ಹೊರಡುತ್ತೇವೆ.

ಕೋಲೆಬಸವನ ಆಟ ಆಡಿಸುವುದಕ್ಕೆ ಬಸವಗಳನ್ನು ಆರೋಗ್ಯವಾಗಿ ನೋಡಿಕೊಳ್ಳಬೇಕು. ಜತೆಗೆ ನಮ್ಮ ಆರೋಗ್ಯನ ನೋಡಿಕೊಂಡು ಆಟದಲ್ಲಿ ಡೋಲು, ಮೇಳ ಬಳಸಿ ಹಾಡು ಆಡುತ್ತಾ ಕಥೆ ಹೇಳುತ್ತಾ ಬಂದಿರುವ ಜನರನ್ನೆಲ್ಲಾ ನಗಿಸಬೇಕು. ನಂತರ ಜನ ಕೊಟ್ಟಿರೋ ಹಣ, ದವಸ,ಧಾನ್ಯದಲ್ಲಿ ನಮ್ಮ ಜೀವನ ಬಂಡಿ ಸಾಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT