ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ ಆಧಾರಿತ ಕ್ಯಾಬ್‌ ಪ್ರಯಾಣಕ್ಕೆ ಕೆಲವು ಸುರಕ್ಷತಾ ಕ್ರಮಗಳು

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮಹಾನಗರಗಳಲ್ಲಿ ಮೊಬೈಲ್‌ ಕಿರುತಂತ್ರಾಂಶ (ಆ್ಯಪ್‌) ಆಧಾರಿತ ಕ್ಯಾಬ್‌ ಸೇವೆಗಳ ಬಳಕೆ ವ್ಯಾಪಕ ಜನಪ್ರಿಯತೆ ಪಡೆದಿವೆ. ನಗರವಾಸಿಗಳ ಪಾಲಿಗೆ ಅವುಗಳ ಮೇಲಿನ ಅವಲಂಬನೆ ಅನಿವಾರ್ಯವಾಗಿದೆ. ಬಳಕೆದಾರರ ಅಗತ್ಯ ಮತ್ತು ತಂತ್ರಜ್ಞಾನ ಆಧರಿಸಿ, ‘ಉಬರ್‌’ ಸೇರಿದಂತೆ ಇತರ ಆ್ಯಪ್‌ ಆಧಾರಿತ ಕ್ಯಾಬ್‌ ಸೇವಾ ಸಂಸ್ಥೆಗಳು ಇಂದು ರಸ್ತೆ ಸುರಕ್ಷತೆ, ಪಾರದರ್ಶಕತೆ ಮತ್ತು ಗ್ರಾಹಕರ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ವಿನೂತನ ಪ್ರಯತ್ನಗಳನ್ನು ಮಾಡುತ್ತಿವೆ.

ಆ್ಯಪ್‌ ಆಧರಿಸಿ ಕ್ಯಾಬ್‌ ಬುಕ್‌ ಮಾಡುವುದರಿಂದ ಹಿಡಿದು ನಿಗದಿತ ಸ್ಥಳ ತಲುಪುವವರೆಗೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ. ಪ್ರಯಾಣಕ್ಕೂ ಮುನ್ನ...

ಚಾಲಕನ ಪೂರ್ವಾಪರ ಮತ್ತು ಕ್ಯಾಬ್‌ ವಿವರ

ಚಾಲಕನ ಪೂರ್ವಾಪರ ಕುರಿತು ಎರಡೆರಡು ಬಾರಿ ಖಚಿತಪಡಿಸಿಕೊಳ್ಳಿ. ವಾಹನದ ನೋಂದಣಿ ಸಂಖ್ಯೆ ಮತ್ತು ಆ್ಯಪ್‌ನಲ್ಲಿ ನೀಡಿದ ವಾಹನದ ಸಂಖ್ಯೆ ಎರಡೂ ಹೊಂದಿಕೆಯಾಗುತ್ತಿವೆಯೇ ನೋಡಿಕೊಳ್ಳಿ. ಚಾಲಕನ ಹೆಸರು, ಭಾವಚಿತ್ರ, ರೇಟಿಂಗ್ ಮುಂತಾದ ಮಾಹಿತಿ ತಿಳಿದುಕೊಳ್ಳಿ. ಇದರಿಂದ ನಿಮ್ಮನ್ನು ಕರೆದುಕೊಂಡು ಹೋಗಲು ಬರುತ್ತಿರುವ ಚಾಲಕ ಯಾರು ಎಂಬುದನ್ನು ಮೊದಲೇ ತಿಳಿದುಕೊಳ್ಳಲು ಸಾಧ್ಯವಾಗಲಿದೆ.

ಕ್ಯಾಬ್‌ ನಿಮ್ಮನ್ನು ತಲುಪುವ ಮೊದಲೇ ಚಾಲಕನ ವಿವರಗಳನ್ನು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಜತೆ ಹಂಚಿಕೊಳ್ಳಿ. ನೀವು ಪ್ರಯಾಣಿಸಲಿರುವ ಕ್ಯಾಬ್‌ ವಾಣಿಜ್ಯ ವಾಹನವಾಗಿರಬೇಕು. ಅಂದರೆ ಅದರ ನೋಂದಣಿ ಫಲಕದ ಬಣ್ಣ ಹಳದಿ ಇರಬೇಕು. ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ, ನಾಲ್ಕು ಚಕ್ರದ ವಾಹನಗಳಲ್ಲಿ ಕಪ್ಪುಬಣ್ಣದ (ಟಿಂಟೆಡ್‌) ಗಾಜುಗಳನ್ನು ಬಳಸಬಾರದು. ಇದರ ಬಗ್ಗೆಯೂ ನಿಮ್ಮ ಗಮನವಿರಲಿ.

ಪ್ರಯಾಣದ ಅವಧಿಯಲ್ಲಿ

ಪ್ರಯಾಣ ಆರಂಭವಾದ ನಂತರ ‘ಶೇರ್ ಸ್ಟೇಟಸ್‌’ ಆಯ್ಕೆ ಬಳಸಿ, ಮತ್ತೊಮ್ಮೆ ಪ್ರಯಾಣ ವಿವರಗಳನ್ನು ಮತ್ತು ಚಾಲಕನ ವಿವರಗಳನ್ನು ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಗೆ ಕಳುಹಿಸಿ. ಇದರಿಂದ ನಿಮ್ಮ ಪ್ರಯಾಣದ ಕುರಿತು ಮತ್ತು ಸುರಕ್ಷಿತವಾಗಿ ಹಿಂದಿರುಗುವುದರ ಬಗ್ಗೆ ಅವರು ಆಗಿಂದಾಗ್ಗೆ ನಿಗಾ ವಹಿಸಬಹುದು. ಇದಕ್ಕೆ ಅವರು ಸಂಬಂಧಿಸಿದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಅಗತ್ಯವೂ ಇರುವುದಿಲ್ಲ.

ಹಿಂಬದಿ ಸೀಟಿನಲ್ಲಿ ಪ್ರಯಾಣಿಸಿ

ಕ್ಯಾಬ್‌ನಲ್ಲಿ ನೀವು ಒಬ್ಬರೇ ಪ್ರಯಾಣಿಸುವವರಾದರೆ ಹಿಂಬದಿ ಸೀಟಿನಲ್ಲಿ ಕುಳಿತು ಪ್ರಯಾಣಿಸಿ. ಇದರಿಂದ ನೀವು ಅಪಾಯದ ಸಂದರ್ಭದಲ್ಲಿ ಕ್ಯಾಬ್‌ನ ಎರಡೂ ಬದಿಯಿಂದ ಸುರಕ್ಷಿತವಾಗಿ ಬಚಾವಾಗಬಹುದು. ಅಲ್ಲದೆ, ಹಿಂದೆ ಕುಳಿತು ಪ್ರಯಾಣಿಸುವುದರಿಂದ ನಿಮ್ಮ ಮತ್ತು ಚಾಲಕನ ಮಧ್ಯೆ ಒಂದಷ್ಟು ವೈಯಕ್ತಿಕ ಅಂತರವೂ ದೊರೆಯುತ್ತದೆ.

ತುರ್ತು ಗುಂಡಿ: ಉಬರ್ ಕಂಪನಿಯ ಕ್ಯಾಬ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ತುರ್ತು ಪರಿಸ್ಥಿತಿಗಳಲ್ಲಿ ಸಹಾಯಕ್ಕೆ ಪೊಲೀಸರನ್ನು ಸಂಪರ್ಕಿಸಲು ‘ತುರ್ತು ಗುಂಡಿ’ ಸೌಲಭ್ಯ ಒದಗಿಸಲಾಗಿದೆ. ಒಂದು ವೇಳೆ ಅಂತರ್ಜಾಲ ಸಂಪರ್ಕ ಇಲ್ಲದಿದ್ದರೆ, ನಿಮಗೆ ಅತ್ಯುತ್ತಮ ಎನಿಸಿದ ನಿರ್ಧಾರ ತೆಗೆದುಕೊಳ್ಳಿ. ಅನಿವಾರ್ಯ ಎನಿಸಿದರೆ 100 ಸಂಖ್ಯೆಗೆ ಕರೆ ಮಾಡಿ. ಕ್ಯಾಬ್‌ನಲ್ಲಿ ಪ್ರಯಾಣಿಸುವ ಒಂಟಿ ಮಹಿಳೆಯರಿಗಾಗಿ ದೆಹಲಿ ಪೊಲೀಸ್‌ ಇಲಾಖೆ ರೂಪಿಸಿರುವ ಮಹಿಳಾ ಪ್ರಯಾಣಿಕರ ಸುರಕ್ಷತೆ ಆ್ಯಪ್‌ ‘ಹಿಮ್ಮತ್‌’ ಅನ್ನು ದೆಹಲಿಯಲ್ಲಿ ಸಂಚರಿಸುವ ಉಬರ್‌ ಕ್ಯಾಬ್‌ಗಳಲ್ಲಿ ಅಳವಡಿಸಲಾಗಿದೆ. ಇದೇ ರೀತಿ ಉಬರ್, ಕೋಲ್ಕತ್ತ ಪೊಲೀಸರ ‘ಬಂಧು’ ಆ್ಯಪ್‌ ಜತೆ ಸಹಯೋಗ ಹೊಂದಿದೆ.

ಮ್ಯಾಪ್‌ ಆನ್‌ ಇರಲಿ: ಪ್ರಯಾಣದ ಅವಧಿಯಲ್ಲಿ ನೀವು ಎಲ್ಲಿದ್ದೀರಿ, ಯಾವ ಮಾರ್ಗದಲ್ಲಿ ಚಲಿಸುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ಗೂಗಲ್‌ ಮ್ಯಾಪ್‌ ಅಥವಾ ಸೂಕ್ತವೆನಿಸಿದ ಮ್ಯಾಪ್‌ ಅನ್ನು ಯಾವಾಗಲೂ ಚಾಲನೆಯಲ್ಲಿ ಇಟ್ಟಿರಿ.

ಪ್ರಯಾಣ ಮುಗಿದ ನಂತರ: ಪ್ರಯಾಣ ಮುಗಿದ ನಂತರ ಚಾಲಕನ ಕುರಿತು ನಿಮ್ಮ ಅಭಿಪ್ರಾಯ ನೀಡಬಹುದು. ನಿಮ್ಮ ಅಭಿಪ್ರಾಯವನ್ನು ಆ್ಯಪ್‌ ಆಧಾರಿತ ಸೇವೆಗಳು ಮತ್ತು ಚಾಲಕನ ಕಾರ್ಯ ನಿರ್ವಹಣೆಗೆ ಸಂಪರ್ಕಿಸಲಾಗುತ್ತದೆ.

24 ಗಂಟೆ ಸಹಕಾರ: ನಿಮ್ಮ ಪ್ರಯಾಣದ ಕುರಿತು ಯಾವುದೇ ಪ್ರಶ್ನೆ ಅಥವಾ ಅನುಮಾನಗಳಿದ್ದರೂ, ಅದಕ್ಕೆ ಸ್ಪಂದಿಸಲು ದಿನದ 24 ಗಂಟೆಯೂ ಒಂದು ತಂಡ ಆಯಾ ಕ್ಯಾಬ್‌ ಸಂಸ್ಥೆಗಳಲ್ಲಿ ಸದಾ ಸನ್ನದ್ಧ ಸ್ಥಿತಿಯಲ್ಲಿ ಇರುತ್ತದೆ.

ಕ್ಷಿಪ್ರ ಸ್ಪಂದನೆ: ತುರ್ತು ಪರಿಸ್ಥಿತಿ ನಿರ್ವಹಿಸಲು ಆ್ಯಪ್‌ ಆಧಾರಿತ ಕ್ಯಾಬ್‌ ಸಂಸ್ಥೆಗಳು, ವಿಶೇಷ ಪರಿಣತರ ತಂಡವನ್ನು ಹೊಂದಿರುತ್ತವೆ. ಆ ತಂಡ ಆಯಾ ಪರಿಸ್ಥಿತಿಗಳಿಗೆ ಆಗಿಂದಾಗಲೇ ಸ್ಪಂದಿಸುತ್ತವೆ.

ಚೈಲ್ಡ್‌ ಲಾಕ್‌: ನೀವು ಒಬ್ಬರೇ ಪ್ರಯಾಣಿಸುತ್ತಿದ್ದೀರಿ ಎಂದಾದರೆ, ಚೈಲ್ಡ್‌ ಲಾಕ್‌ ಗುಂಡಿ ಆ್ಯಕ್ಟಿವೇಟ್‌ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.⇒ v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT