ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಂಜಯ, ವಿಜಯಪುರ

ವ್ಯವಸಾಯ ಮಾಡುತ್ತೇನೆ. ವಯಸ್ಸು 26. ಜಮೀನು 8 ಎಕರೆ ಇದೆ. ಎಸ್.ಬಿ.ಐ.ದಲ್ಲಿ ಉಳಿತಾಯ ಖಾತೆ ಇದೆ. ಕಳೆದ ಮೂರು ವರ್ಷಗಳಿಂದ ಕೃಷಿ ಆದಾಯದಿಂದ ಬಂದ ₹ 6 ಲಕ್ಷ ನನ್ನ ಮತ್ತು ತಂದೆ ತಾಯಿ ಖಾತೆಯಲ್ಲಿ ಸಮನಾಗಿ ಇಟ್ಟಿದ್ದೇನೆ. ಈ ಹಣಕ್ಕೆ ತೆರಿಗೆ ಬಗ್ಗೆ ಮಾಹಿತಿ ನೀಡಿ. ಈ ಎಲ್ಲಾ ಹಣ ನನ್ನ ಖಾತೆಯಲ್ಲಿ ಇಡಬಹುದೇ, ಬೇರೆ ಯಾವ ಖಾತೆ ತೆರೆಯಲಿ? ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸುವುದು ಹೇಗೆ?

ಉತ್ತರ: ನೀವು ಕೃಷಿಕರು. ಕೃಷಿಯಿಂದ ಬರುವ ವಾರ್ಷಿಕ ಆದಾಯ ಎಷ್ಟೇ ಇರಲಿ, ಈ ಆದಾಯ, ಆದಾಯ ತೆರಿಗೆ ಸೆಕ್ಷನ್ 10 (1) ಆಧಾರದ ಮೇಲೆ ಸಂಪೂರ್ಣ ತೆರಿಗೆ ವಿನಾಯ್ತಿ ಪಡೆದಿದೆ. ಆದರೆ ಹೀಗೆ ಬರುವ ಆದಾಯ ಬ್ಯಾಂಕ್ ಠೇವಣಿ ಮಾಡಿದಾಗ ಬರುವ ಬಡ್ಡಿಗೆ ತೆರಿಗೆ ಇರುತ್ತದೆ. ಇಲ್ಲಿ ಕೂಡಾ ಓರ್ವ ವ್ಯಕ್ತಿಯ ವಾರ್ಷಿಕ ಒಟ್ಟು ಬಡ್ಡಿ ಅದಾಯ, ಕೃಷಿ ಆದಾಯ ಹೊರತುಪಡಿಸಿ, ₹ 2.50 ಲಕ್ಷಗಳ ತನಕ ತೆರಿಗೆ ಕೊಡುವ ಅವಶ್ಯವಿಲ್ಲ.

ನೀವು ವಾರ್ಷಿಕವಾಗಿ ಪಡೆಯುವ ಕೃಷಿ ಆದಾಯವನ್ನು ನಿಮ್ಮ ಹೆಸರಿನಲ್ಲಿಯೇ ಠೇವಣಿ ಇರಿಸಲು ಅಥವಾ ತಂದೆ ತಾಯಿ ಹೆಸರಿನಲ್ಲಿ ಇರಿಸಲು ಕಾನೂನಿನ ತೊಡಕು ಇರುವುದಿಲ್ಲ. ಮೂರು ಜನರ ಹೆಸರಿನಲ್ಲಿ ಇರಿಸಿದರೆ ₹ 2.50 ಲಕ್ಷದಂತೆ ಮೂರು ಜನರ ಹೆಸರಿನಲ್ಲಿಯೂ ತರಿಗೆ ವಿನಾಯ್ತಿ ಪಡೆಯಬಹುದು. ಸದ್ಯದ ಪರಿಸ್ಥಿತಿಯಲ್ಲಿ ನೀವು ಹೇಗೆ ವಿನಿಯೋಗಿಸಿದರೂ ನೀವು ತೆರಿಗೆಗೆ ಒಳಗಾಗುವುದಿಲ್ಲ. ಉಳಿಸುವ ಹಣ, ಉಳಿತಾಯ ಖಾತೆಯಲ್ಲಿ ಎಷ್ಟು ಬೇಕೋ ಅಷ್ಟೇ ಉಳಿಸಿಕೊಂಡು ಉಳಿದ ಹಣ ಅವಧಿ ಠೇವಣಿಯಲ್ಲಿ ಇರಿಸಿ ಹೆಚ್ಚಿನ ಬಡ್ಡಿ ಪಡೆಯಿರಿ.

**

ಎಂ. ದೊಡ್ಡಯ್ಯ, ತುಮಕೂರು

ನಾನು ನಿವೃತ್ತ ಹಿರಿಯ ನಾಗರಿಕ. ನನ್ನದು ಅವಿಭಕ್ತ (HUF) ಕುಟುಂಬವಾಗಿರುತ್ತದೆ. HUF ಬ್ಯಾಂಕ್‌ ಖಾತೆಗೆ ಆಧಾರ ಜೋಡಣೆ ಅವಶ್ಯವಿದೆಯೇ ಹಾಗೂ 80ಸಿ ₹ 1.50 ಲಕ್ಷ ಉಳಿತಾಯ ಮಾಡಬಹುದೇ ತಿಳಿಸಿರಿ. ನನಗೆ ವಾರ್ಷಿಕವಾಗಿ ವೈಯಕ್ತಿಕ ₹ 2.60 ಲಕ್ಷ ಬಡ್ಡಿ HUF ಬ್ಯಾಂಕ್‌ ಖಾತೆಯಿಂದ ಬರುತ್ತದೆ. ತೆರಿಗೆ ಹಾಗೂ ಇತರೆ ವಿಚಾರಗಳಿಗೆ ದಯಮಾಡಿ ಉತ್ತರಿಸಿ.

ಉತ್ತರ: HUF ಬ್ಯಾಂಕ್‌ ಖಾತೆಗೆ ಆಧಾರ ಅಳವಡಿಸಬೇಕು ಹಾಗೂ ಇಲ್ಲಿ ಸೆಕ್ಷನ್ 80ಸಿ ಆಧಾರದ ಮೇಲೆ ಗುಂಪು ವಾರ್ಷಿಕ ₹ 1.50 ಲಕ್ಷ ಉಳಿತಾಯ ಮಾಡಿದಲ್ಲಿ, ತೆರಿಗೆ ವಿನಾಯಿತಿ ಸೌಲಭ್ಯವನ್ನು ಪಡೆಯಬಹುದು. ನೀವು ವಾರ್ಷಿಕವಾಗಿ HUF ಬ್ಯಾಂಕ್‌ ಖಾತೆಯಿಂದ ವೈಯಕ್ತಿಕವಾಗಿ ಪಡೆಯುವ ಬಡ್ಡಿ ನಿಮ್ಮ ಇತರೇ ಆದಾಯಕ್ಕೆ ಸೇರಿಸಿ (ಕೃಷಿ ಆದಾಯ ಹೊರತುಪಡಿಸಿ) ಅಂತಹ ಆದಾಯ ₹ 3 ಲಕ್ಷ ದಾಟಿದಲ್ಲಿ, ನೀವು ತೆರಿಗೆಗೆ ಒಳಗಾಗುತ್ತೀರಿ ಹಾಗೂ ರಿಟರ್ನ್ ಸಲ್ಲಿಸಬೇಕಾಗುತ್ತದೆ.

**

ನವಾಜ್. ಸಿ.ಕೆ., ಚಿತ್ರದುರ್ಗ

ನಾನು ಕರ್ನಾಟಕ ಸರ್ಕಾರಿ ನೌಕರ. ನನ್ನ ವೇತನದಿಂದ ಸುಮಾರು 45,000 NPSಗೆ ಜಮಾ ಆಗುತ್ತದೆ. ವಾರ್ಷಿಕವಾಗಿ ಅಷ್ಟೇ ಮೊತ್ತ ಸರ್ಕಾರದಿಂದ ಜಮಾ ಆಗುತ್ತದೆ. PLI, KGID ಎಲ್ಲಾ ಸೇರಿ ₹ 1.50 ಲಕ್ಷಕ್ಕಿಂತ ಹೆಚ್ಚಾಗಿ ಸುಮಾರು ₹ 2 ಲಕ್ಷದಷ್ಟಾಗುತ್ತದೆ. ನಾನು ಸ್ವ ಇಚ್ಛೆಯಿಂದ ರಾಷ್ಟ್ರೀಯ ಪಿಂಚಣಿ ಯೋಜನೆಗೆ (NPS) ₹ 50 ಸಾವಿರ ಕಟ್ಟುತ್ತೇನೆ. ಪ್ರಶ್ನೆ: ಸರ್ಕಾರದ ವತಿಯಿಂದ NPS ಜಮಾ ಆಗುವ ಮೊತ್ತಕ್ಕೆ I.T. Return ಸಲ್ಲಿಸುವಾಗ ಕಳೆಯಬಹುದೇ? ಇದನ್ನು ಸೇರಿಸಿದಾಗ ₹ 1.50 ಲಕ್ಷ ಮಿತಿ ದಾಟಿದರೆ, ಅದನ್ನು ಕಳೆಯಬಹುದೇ?

ಉತ್ತರ: ಸೆಕ್ಷನ್ 80C ಆಧಾರದ ಮೇಲೆ, NPSಗೆ ನೀವು ಕಟ್ಟಿದ ಹಣ ಆದಾಯ ತೆರಿಗೆ ವಿನಾಯಿತಿ ಮಿತಿಗೆ ಒಳಪಡಿಸಬಹುದು. ಅಷ್ಟೇ ಹಣ ಸರ್ಕಾರ ಕೊಡುವಲ್ಲಿ ಆ ಮೊತ್ತದಿಂದ ವಿನಾಯಿತಿ ಪಡೆಯುವಂತಿಲ್ಲ ಹಾಗೂ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಲು ಬರುವುದಿಲ್ಲ. ನೀವು ವಾಲಂಟರಿ ಕಟ್ಟುವ ಹಣ ಸೆಕ್ಷನ್ 80CCD (1B) ಆಧಾರದ ಮೇಲೆ ಆದಲ್ಲಿ ಮಾತ್ರ ಪ್ರತ್ಯೇಕವಾಗಿ ₹ 50,000 ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಒಟ್ಟಿನಲ್ಲಿ 80C ಆಧಾರದ ಮೇಲೆ ಇಲ್ಲಿ ವಿವರಿಸಿದಂತೆ ₹ 1.50 ಹಾಗೂ  80CCD (1B) ಆಧಾರದ ಮೇಲೆ ₹ 50,000 ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

**

ಹೆಸರು ಬೇಡ, ಊರು ಬೇಡ

ನಾನು ನಿವೃತ್ತ ಹಿರಿಯ ನಾಗರಿಕ. ನಿವೃತ್ತಿ ವೇತನ ತಿಂಗಳಿಗೆ ₹ 18,000, ನಿವೃತ್ತಿ ಹೊಂದಿದಾಗ ಒಟ್ಟು ₹ 40 ಲಕ್ಷ ಬಂದಿದೆ. ₹ 15 ಲಕ್ಷ ಅಂಚೆ ಕಚೇರಿ ಸೀನಿಯರ್ ಸಿಟಿಜನ್ ಠೇವಣಿ ಹಾಗೂ ₹ 4.50 ಲಕ್ಷವನ್ನು ತಿಂಗಳ ವರಮಾನ ಯೋಜನೆ (Monthly Income Scheme –MIS) ಮಾಡಿರುತ್ತೇನೆ. ಇನ್ನು ಉಳಿದ ₹ 20 ಲಕ್ಷ ಬ್ಯಾಂಕ್ ಠೇವಣಿ ಮಾಡಿರುತ್ತೇನೆ. ಪ್ರಶ್ನೆ: ಸೀನಿಯರ್ ಸಿಟಿಜನ್ ಠೇವಣಿಯಿಂದ ಮೂರು ತಿಂಗಳಿಗೊಮ್ಮೆ ಬರುವ ಬಡ್ಡಿ I.T. Act 80C ಪ್ರಕಾರ ಆದಾಯದಿಂದ ತೆರಿಗೆ ವಿನಾಯಿತಿ ಇದೆಯೇ. ಇದ್ದಲ್ಲಿ ಯಾವ ರೀತಿ ಲೆಕ್ಕಾಚಾರ ಹಾಕಬೇಕು. ವಾರ್ಷಿಕ 80C  ಪ್ರಕಾರ ₹ 1.50 80C ಅಡಿಯಲ್ಲಿ ತೋರಿಸಬಹುದೇ. MIS ಬಡ್ಡಿಗೆ ಯಾವುದಾದರೂ ರಿಯಾಯ್ತಿ ಇದೆಯೇ. ನನಗೆ 2012ರಲ್ಲಿ Spinal card operation ಆಗಿದ್ದು, ಡಾಕ್ಟರ್ ಸಲಹೆ ಪ್ರಕಾರ ಬಿಪಿ ಹಾಗೂ ಇತರೆ ಮಾತ್ರೆಗಳಿಗಾಗಿ  ತಿಂಗಳಿಗೆ ₹ 4000 ಖರ್ಚಾಗುತ್ತದೆ. ಇದನ್ನು ಸೆಕ್ಷನ್ 80 DDB ಅಡಿಯಲ್ಲಿ ರಿಯಾಯಿತಿ ಪಡೆಯಬಹುದೇ?

ಉತ್ತರ: ನೀವು ಹಿರಿಯ ನಾಗರಿಕರಾಗಿದ್ದು, ನಿಮ್ಮ ವಾರ್ಷಿಕ ಪಿಂಚಣಿ ಆದಾಯ ಹಾಗೂ ಠೇವಣಿ ಮೇಲಿನ ಬಡ್ಡಿ (MIS ಹಾಗೂ Sr. Citizen Deposit) ಸೇರಿಸಿ ಬರುವ ಮೊತ್ತದಲ್ಲಿ  ₹ 3 ಲಕ್ಷ ಕಳೆದು ಉಳಿದ ಹಣಕ್ಕೆ ಆದಾಯ ತೆರಿಗೆ ಕೊಡಬೇಕಾಗುತ್ತದೆ ಹಾಗೂ ರಿಟರ್ನ್ ತುಂಬಬೇಕು.

Sr. Citizen Deposit, ಸೆಕ್ಷನ್ 80C ಆಧಾರದ ಮೇಲೆ, ನೀವು ಠೇವಣಿ ಇಟ್ಟ ವರ್ಷದಲ್ಲಿ ಮಾತ್ರ ಗರಿಷ್ಠ ₹ 1.50 ಲಕ್ಷ ಒಟ್ಟು ಆದಾಯದಿಂದ ಕಳೆಯಬಹುದು ಹಾಗೂ ಉಳಿದ ಮೊತ್ತಕ್ಕೆ ತೆರಿಗೆ ಸಲ್ಲಿಸಬೇಕು. ಪ್ರಾಯಶಃ ನಿಮ್ಮ ಪ್ರಕಾರ ನೀವಿಟ್ಟ ₹ 15 ಲಕ್ಷ ಮುಂದಿನ ವರ್ಷಗಳಿಗೂ ಸೆಕ್ಷನ್ 80C ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದಿರಬೇಕು. ಇದು ಸಾಧ್ಯವಿಲ್ಲ.ಆರ್ಥಿಕ ವರ್ಷವೊಂದರಲ್ಲಿ ನೀವು ಎಷ್ಟೇ ಠೇವಣಿ  ಮಾಡಿದರೂ, ಅದರ ಗರಿಷ್ಠ ಮೊತ್ತ ₹ 1.50 ಮಾತ್ರ 80Cಗೆ ಒಳಗಾಗುತ್ತದೆ. ಒಟ್ಟಿನಲ್ಲಿ ಪ್ರತೀ ವರ್ಷ ಠೇವಣಿ ಇರಿಸಿದರೆ ಮಾತ್ರ ಈ ಸೌಲಭ್ಯ ಇರುತ್ತದೆ. ಹಿಂದಿನ ಠೇವಣಿಗೆ ಬರುವುದಿಲ್ಲ. MIS ಅಥವಾ ಇನ್ನಿತರ ಠೇವಣಿಗಳ ಬಡ್ಡಿಗೆ ತೆರಿಗೆ ರಿಯಾಯಿತಿ ಇರುವುದಿಲ್ಲ. ಆದರೆ PPFನಲ್ಲಿ ಬರುವ ಬಡ್ಡಿಗೆ ಸಂಪೂರ್ಣ ವಿನಾಯಿತಿ ಇದೆ. ನೀವು ಪ್ರಶ್ನೆಯಲ್ಲಿ ತಿಳಿಸಿದಂತೆ ಶಸ್ತ್ರಚಿಕಿತ್ಸೆಯಿಂದ ಮಾಸಿಕ ಔಷಧ ಖರ್ಚು ಸೆಕ್ಷನ್ 80DDB ಅಡಿಯಲ್ಲಿ ಬರುವುದಿಲ್ಲ.

**

ಆಲೂರ್ ಗೌಡ, ಊರು ಬೇಡ

ನಾನು ರಾಜ್ಯ ಸರ್ಕಾರಿ ನೌಕರಿಯಲ್ಲಿ ಸಹಾಯಕ ನಿರ್ದೇಶಕನಾಗಿದ್ದೇನೆ.  ನನ್ನ ವಾರ್ಷಿಕ ಸಂಬಳ ₹ 7 ಲಕ್ಷ. ನನ್ನ ಹೆಂಡತಿಗೆ ತಿಂಗಳಿಗೆ ₹ 45,000 ಬಾಡಿಗೆ ಬರುತ್ತದೆ ಹಾಗೂ ಆಕೆ ತೆರಿಗೆ ರಿಟರ್ನ್ ಸಲ್ಲಿಸುತ್ತಾಳೆ. ಸಂಬಳದಲ್ಲಿ ಕಡಿತ GPF ₹  20,000, KGID ₹ 2,500, LIC 1,500, SBI ನವರ ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಲು ಅಥವಾ ಉತ್ತಮ ಹೂಡಿಕೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿರಿ. ನಮಗೆ PUC ಹಾಗೂ 9ನೇ ತರಗತಿಯಲ್ಲಿ ಓದುವ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಅವರ ಭವಿಷ್ಯದ ವಿಚಾರದಲ್ಲಿ ಕೂಡಾ ನಿಮ್ಮ ಸಲಹೆ ಬೇಕಾಗಿದೆ?

ಉತ್ತರ: ನಿಮ್ಮ ಒಟ್ಟು ಆದಾಯ ಹಾಗೂ ಪರಿಸರ ಪರಿಗಣಿಸುವಾಗ  ನೀವು ಇಳಿಸಿರುವ ವಿಮಾ ಮೊತ್ತ ತುಂಬಾ ಕಡಿಮೆ ಇದೆ. ಕನಿಷ್ಠ ₹ 10,000 ತಿಂಗಳಿಗೆ ವಿಮೆ ಇಳಿಸಿರಿ. LIC ಯವರ ಜೀವನ ಆನಂದ ಪಾಲಿಸಿ ಮಾಡಿಸಿರಿ. SBI ರವರ ಪ್ರತೀ ತಿಂಗಳೂ ತುಂಬುವ SIPನಲ್ಲಿ Deff-Equity Fund ನಲ್ಲಿ ₹ 5,000 ಹೂಡಿಕೆ ಪ್ರಾರಂಭಿಸಿರಿ.

ವರ್ಷಾಂತ್ಯಕ್ಕೆ ಲಾಭ ನೋಡಿಕೊಂಡು ಹೆಚ್ಚಿನ ಮೊತ್ತ ನಿರ್ಧರಿಸಿರಿ. ಹೆಣ್ಣು ಮಕ್ಕಳ ಸಲುವಾಗಿ ವಾರ್ಷಿಕ ಕನಿಷ್ಠ 20 ಗ್ರಾಮ್ ಬಂಗಾರದ ನಾಣ್ಯ ಕೊಳ್ಳಿರಿ. ಈ ಪ್ರಕ್ರಿಯೆ ಮಕ್ಕಳ ಮದುವೆ ತನಕ ಮುಂದುವರೆಸಿರಿ. ಈ ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆ ಸಲುವಾಗಿ ಕನಿಷ್ಠ ತಲಾ ₹ 10,000, 10 ವರ್ಷಗಳ ಆರ್.ಡಿ. ಮಾಡಿರಿ. ಈ ಮೊತ್ತದಿಂದ ಅವರ ಭವಿಷ್ಯ ಸುಗಮವಾಗುತ್ತದೆ. ಸಾಧ್ಯವಾದಲ್ಲಿ ನೀವು ಉಳಿಸುವ ಹಣ ಹಾಗೂ ಸ್ವಲ್ಪ ಸಾಲ ಮಾಡಿಯಾದರೂ ಉತ್ತಮ ನಿವೇಶನದ ಮೇಲೆ ಹಣ ಹೂಡಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

**

ಹೆಸರು ಬೇಡ, ವಿದೇಶದಲ್ಲಿ ಸೇವೆಯಲ್ಲಿರುವುದು

ನಾನು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ನನ್ನ ಹೆಂಡತಿ ಮಕ್ಕಳನ್ನು ಭಾರತದಲ್ಲಿ ಬಿಟ್ಟಿರುತ್ತೇನೆ. ನನ್ನ ತಂದೆಯವರು ಮಾಡಿದ ಸಾಲ ತೀರಿಸಲು ಇಲ್ಲಿ ಉದ್ಯೋಗ ಹುಡುಕಿಕೊಂಡು 15 ವರ್ಷಗಳ ಹಿಂದೆ ಬಂದಿದ್ದೆ. ಊರಿನಲ್ಲಿ ಒಂದು ಮನೆ ಕಟ್ಟಿದ್ದೇನೆ. ಸದ್ಯ ಸಾಲ ತೀರಿಸಿ ಆರ್ಥಿಕವಾಗಿ ಸ್ವತಂತ್ರನಾಗಿದ್ದೇನೆ. ನನಗೆ ಇಬ್ಬರು ಗಂಡು ಮಕ್ಕಳು. ದೊಡ್ಡವನು 10ನೇಯ ಮತ್ತು ಚಿಕ್ಕವನು 4ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ದೊಡ್ಡವನಿಗೆ LIC ಜೀವನ್ ಕೋಮಲ್ ಪಾಲಿಸಿ ಮಾಡಿಸಿ ವಾರ್ಷಿಕ ₹ 7600 ಹಾಗೂ ಚಿಕ್ಕವನಿಗೆ SBI ವಿಮೆ ವಾರ್ಷಿಕ ₹ 50,000 ಕಟ್ಟುತ್ತೇನೆ. ಎರಡು ವರ್ಷಗಳಿಂದ ಇಬ್ಬರ ಅಕೌಂಟಿಗೆ ತಲಾ ₹ 3000 ಪ್ರತೀ ತಿಂಗಳು ಕಳಿಸುತ್ತಿದ್ದೇನೆ. ನಾನು 2006ರಲ್ಲಿ LIC ಜೀವನ ಆನಂದ ಪಾಲಿಸಿ ಮಾಡಿಸಿ ಮೂರು ತಿಂಗಳಿಗೊಮ್ಮೆ  ₹  3600 ಕಟ್ಟುತ್ತಿದ್ದೇನೆ. ನಿಮ್ಮ ಅಂಕಣದಿಂದ ಪ್ರಭಾವಿತನಾಗಿ ಕಳೆದೆರಡು ವರ್ಷಗಳಿಂದ SBIನಲ್ಲಿ ಆರ್.ಡಿ. ಮಾಡಿ ತಿಂಗಳಿಗೆ 10,000 ಕಟ್ಟುತ್ತಿದ್ದೇನೆ. ಇದು ಈಗ ₹ 2.50 ಲಕ್ಷ ಆಗಿದೆ. ಇದನ್ನು ಮುಂದುವರೆಸುತ್ತೇನೆ. ನನ್ನ ಖರ್ಚು, ಬಾಡಿಗೆ ಕಳೆದು ಉಳಿಯುವ ಹಣ ಸುಮಾರು ₹ 25,000 ತಪ್ಪದೇ ಊರಿಗೆ ಕಳಿಸುತ್ತಿದ್ದೇನೆ. ನನಗೆ ಇನ್ನೂ 11 ವರ್ಷ ಸೇವಾವಧಿ ಇದೆ. ಮಕ್ಕಳ ಭವಿಷ್ಯಕ್ಕಾಗಿ ಹೇಗೆ ಮುಂದುವರೆಯಬೇಕು?

ಉತ್ತರ: ವಿದೇಶದಲ್ಲಿದ್ದರೂ ಪ್ರಜಾವಾಣಿ ಪ್ರಶ್ನೋತ್ತರ ನೀವು ಓದಿ ಪ್ರೇರಿತರಾಗಿ ₹  10,000 ಆರ್.ಡಿ. ಪ್ರಾರಂಭಿಸಿರುವುದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ಹೆತ್ತವರ ಋಣ ತೀರಿಸಲು ದೇಶ ಬಿಟ್ಟು ವಿದೇಶದಲ್ಲಿ ಸೇವೆ ಸಲ್ಲಿಸಿ, ಸಾಲ ತೀರಿಸಿದ ನಿಮ್ಮ ವ್ಯಕ್ತಿತ್ವ, ನಮ್ಮ ಯುವ ಜನಾಂಗಕ್ಕೆ ಅನುಕರಣೀಯವಾಗಿದೆ. ಎಲ್ಲಕ್ಕೂ ಮುಖ್ಯವಾಗಿ ನಿಮ್ಮ ಪತ್ನಿ ಮಕ್ಕಳ ತ್ಯಾಗ ಕೂಡಾ ಬಹುದೊಡ್ಡದು.

ನೀವು ಇದುವರೆಗೆ ಮಾಡಿರುವ ಉಳಿತಾಯ ಯೋಜನೆ ತುಂಬಾ ಚೆನ್ನಾಗಿದ್ದು ಅವುಗಳನ್ನು ಮುಂದುವರೆಸಿರಿ. ನೀವು ಕಳಿಸುವ ₹ 25,000 ನಿಮ್ಮ ಹೆಂಡತಿ ಮಕ್ಕಳ ಖರ್ಚಿಗೆ ಬೇಕಾಗಬಹುದು. ಅವರ ತ್ಯಾಗಮಯ ಜೀವನದಲ್ಲಿ, ನೀವು ಕಳಿಸುವ ಹಣದಿಂದಾಗಿ ಜೀವನವನ್ನು ಚೆನ್ನಾಗಿ ಅನುಭವಿಸಲಿ. ನಿಮ್ಮ ಗಂಡು ಮಕ್ಕಳಿಗೆ ವಿಮೆ ಇಳಿಸಿರುತ್ತೀರಿ.

ಜೊತೆಗೆ ನೀವು ಕಟ್ಟುವ ಮಾಸಿಕ ಆರ್.ಡಿ. ₹ 10,000 ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಮಕ್ಕಳನ್ನು ವೃತ್ತಿಪರ ವಿದ್ಯೆಗೆ ಪ್ರೋತ್ಸಾಹಿಸಿರಿ. ಇದರಿಂದ ಸ್ವಂತ ಉದ್ಯೋಗ ಅಥವಾ ನೌಕರಿ ಎರಡನ್ನೂ ಮಾಡಲು ಅನುಕೂಲವಾಗುತ್ತದೆ. ನೀವು ಭಾರತಕ್ಕೆ ಬಂದಾಗ e-mail ಮಾಡಿ ಸಾಧ್ಯವಾದರೆ ಭೇಟಿಯಾಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT