ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಾತ್ಮಕ ಅರಣ್ಯೀಕರಣ

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಭೀಮಗಡ ವನ್ಯಧಾಮದ ವ್ಯಾಪ್ತಿಯಲ್ಲಿ ಜಿಂದಾಲ್ ಕಂಪನಿಯು 878 ಎಕರೆ ಖಾಸಗಿ ಜಮೀನು ಖರೀದಿಸಲು ಮುಂದಾಗಿರುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಇದರ ಹಿಂದಿನ ಉದ್ದೇಶ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಬೇಕಾಗಿದೆ. ಇಲ್ಲಿ ಯಾವುದೇ ಕಂಪನಿಯನ್ನು ಅಥವಾ ಅದರ ಉದ್ದೇಶವನ್ನು ಸಮರ್ಥಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ವಾಸ್ತವಾಂಶ ತಿಳಿಸುವ ಯತ್ನವಷ್ಟೇ.

ಪರಿಹಾರಾತ್ಮಕ ಅರಣ್ಯೀಕರಣದ ಭಾಗವಾಗಿ ಜಮೀನು ಖರೀದಿಸುತ್ತಿರುವುದಾಗಿ ಜಿಂದಾಲ್ ಕಂಪನಿ ಹೇಳಿದೆ. ಆದರೆ ಅದರ ಬೆನ್ನಲ್ಲೇ ‘ಕಂಪನಿಯು ಅಲ್ಲಿ ಗಣಿಗಾರಿಕೆ ಆರಂಭಿಸಲಿದೆ’ ಎಂಬ ಸುದ್ದಿಯೂ ಹಬ್ಬಿದೆ. ಅಲ್ಲಿ ಗಣಿಗಾರಿಕೆ ಆರಂಭಿಸುವುದು ದೂರದ ಮಾತು. ಯಾಕೆಂದರೆ, ಅದು ಖಾಸಗಿ ಜಮೀನಾಗಿದ್ದರೂ ವನ್ಯಧಾಮದ ವ್ಯಾಪ್ತಿಯಲ್ಲಿ ಬರುತ್ತದೆ. ವನ್ಯಧಾಮದ ವ್ಯಾಪ್ತಿಯಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸಬೇಕಾದರೂ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಬಹುಮುಖ್ಯವಾಗಿ ಸುಪ್ರೀಂ ಕೋರ್ಟ್‌ನ ಅನುಮತಿ ಅಗತ್ಯ. ಅಲ್ಲದೇ, 2016ರ ಜ. 7ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಭೀಮಗಡ ವನ್ಯಧಾಮದ ಪರಿಸರ ಸೂಕ್ಷ್ಮವಲಯದ ಕರಡು ಅಧಿಸೂಚನೆಯ ಪ್ರಕಾರ ಇಲ್ಲಿ ವಾಣಿಜ್ಯ ಉದ್ದೇಶದ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಹೀಗಿರುವಾಗ ಗಣಿಗಾರಿಕೆಯ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಇಲ್ಲಿ ಬರುವ ಅನುಮಾನವೆಂದರೆ, ರಾಜ್ಯದ ಬೇರೆ ಯಾವುದೋ ಭಾಗದಲ್ಲಿ ತನ್ನ ಯೋಜನೆ ಆರಂಭಿಸಲು ಕಂಪನಿಗೆ ಅರಣ್ಯ ಭೂಮಿಯ ಅವಶ್ಯಕತೆಯಿದ್ದು, ಇದನ್ನು ಬಳಸಿಕೊಂಡಿದ್ದಕ್ಕೆ ಪರಿಹಾರಾರ್ಥವಾಗಿ ಅರಣ್ಯ ಸಂರಕ್ಷಣಾ ಕಾಯ್ದೆ– 1980ರ ಅಡಿ ಈ ಖಾಸಗಿ ಜಮೀನನ್ನು ಪರಿಹಾರಾತ್ಮಕ ಅರಣ್ಯೀಕರಣದ ಭಾಗವಾಗಿ ಖರೀದಿಸುತ್ತಿದೆ ಎಂಬುದು.

ಇಲ್ಲಿ ಪರಿಹಾರಾತ್ಮಕ ಅರಣ್ಯೀಕರಣ ಷರತ್ತಿನ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಕೆಗಳಿಗೆ
ಪರಿವರ್ತಿಸಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಸಲ್ಲಿಸುವ ಪ್ರಸ್ತಾವಗಳಿಗೆ ಒಪ್ಪಿಗೆ ಸೂಚಿಸುವ ಸಮಯದಲ್ಲಿ ಕೇಂದ್ರ ಸರ್ಕಾರ ಹಾಕುವ ಷರತ್ತುಗಳಲ್ಲಿ ‘ಪರಿಹಾರಾತ್ಮಕ ಅರಣ್ಯೀಕರಣ’ ಪ್ರಮುಖವಾದುದು. ‘ಅರಣ್ಯ (ಸಂರಕ್ಷಣಾ) ಕಾಯ್ದೆ- 1980’, ದೇಶದಲ್ಲಿ ಅರಣ್ಯ ಭೂಮಿಯ ಬಳಕೆ ಅಥವಾ ಅದನ್ನು ಅರಣ್ಯೇತರ ಉದ್ದೇಶಗಳಿಗೆ ವರ್ಗಾಯಿಸುವ ಅಂದರೆ ಕೈಗಾರಿಕಾ ಅಥವಾ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ ಮಾಡುವುದನ್ನು ನಿರ್ವಹಿಸುತ್ತದೆ. ಹೀಗೆ ಅರಣ್ಯಭೂಮಿಯನ್ನು ಪಡೆಯುವ ಕಂಪನಿಯು ಪರ್ಯಾಯ ಭೂಮಿಯಲ್ಲಿ ಪರಿಹಾರಾತ್ಮಕ ಅರಣ್ಯೀಕರಣವನ್ನು ಕೈಗೊಳ್ಳಲು ಯೋಜನೆ ರೂಪಿಸಬೇಕಾಗುತ್ತದೆ. ಅರಣ್ಯೀಕರಣ ಉದ್ದೇಶಕ್ಕೆ, ಪರ್ಯಾಯ ಭೂಮಿಯಲ್ಲಿ ಗಿಡಮರಗಳನ್ನು ಬೆಳೆಸುವ ಬಗ್ಗೆ ಯೋಜನೆ ಸಿದ್ಧಪಡಿಸಿ ನೀಡಬೇಕಾಗುತ್ತದೆ. ನಷ್ಟವಾಗುವ ಅರಣ್ಯ ಪರಿಸರದ ಪ್ರಮಾಣವನ್ನು ಸರಿದೂಗಿಸಲು ಅಗತ್ಯವಾದ ಪರಿಹಾರಾತ್ಮಕ ಹಣವನ್ನು ನೀಡಬೇಕಾಗುತ್ತದೆ.

ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಈಗಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪರಿಹಾರಾತ್ಮಕ ಅರಣ್ಯೀಕರಣವನ್ನು ಅರಣ್ಯ ಭೂಮಿಗೆ ಸಮನಾದ ಅರಣ್ಯೇತರ ಭೂಮಿಯಲ್ಲಿ ಕೈಗೊಳ್ಳಲಾಗುತ್ತದೆ. ಕಂದಾಯ ಭೂಮಿ ಹಾಗೂ ಈ ವರ್ಗಕ್ಕೆ ಸೇರುವ ಇತರ ಎಲ್ಲ ರೀತಿಯ ಭೂಮಿಗಳನ್ನು (ಸದರಿ ಭೂಮಿಗಳ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯವಾಗುವಂತಿದ್ದರೆ) ಸಹ ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ ಈ ಪ್ರದೇಶಗಳನ್ನು ಭಾರತೀಯ ಅರಣ್ಯ ಕಾಯ್ದೆ– 1927ರ ಪ್ರಕಾರ ಮೀಸಲು ಅರಣ್ಯವನ್ನಾಗಿ ಘೋಷಿಸಬೇಕಾಗುತ್ತದೆ. ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಸೂಕ್ತವಾಗುವ ಅತಿಕ್ರಮಣದಂತಹ ಸಮಸ್ಯೆಗಳಿಂದ ಮುಕ್ತವಾದ ಅರಣ್ಯೇತರ ಹಾಗೂ ಕಂದಾಯ ಅರಣ್ಯ ಭೂಮಿಗಳನ್ನು ಗುರುತಿಸಲು ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಭೀಮಗಡ ವನ್ಯಧಾಮದ ವ್ಯಾಪ್ತಿಯಲ್ಲಿ ಜಿಂದಾಲ್ ಕಂಪನಿಯು ಖರೀದಿಸಲು ಮುಂದಾಗಿರುವ ಜಮೀನಿನ ವಿಚಾರ ಇದಕ್ಕೆ ಹೋಲಿಕೆಯಾಗುವಂತಿದೆ. ಇಂತಹ ಯೋಜನೆ ರಾಜ್ಯದಲ್ಲಿ ಇದೇ ಮೊದಲೇನಲ್ಲ. ತಮಿಳುನಾಡು ಮೂಲದ ಇಕೊಜೆನ್ ಡೆವೆಲಪರ್ಸ್ ಅಂಡ್‌ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ದಾವಣಗೆರೆ ಜಿಲ್ಲೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಪವನ ವಿದ್ಯುತ್ ಯೋಜನೆಗೆ ಬೇಕಾಗುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿಯ ಹುಲಂದ ಗ್ರಾಮ ವ್ಯಾಪ್ತಿಯಲ್ಲಿ 90 ಹೆಕ್ಟೇರ್ ಜಮೀನು ಖರೀದಿಗೆ ಭೂಮಾಲೀಕರೊಂದಿಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ. ಇನ್ನೊಂದು ಕಂಪನಿ ತಾನು ಉತ್ತರ ಕರ್ನಾಟಕದಲ್ಲಿ ಆರಂಭಿಸಲು ಉದ್ದೇಶಿಸಿರುವ ಯೋಜನೆಗೆ ಬೇಕಾಗುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನ ಓಂಕಾರ ಬಳಿ 54 ಎಕರೆ ಭೂಮಿ ಖರೀದಿಸಲು ಸಿದ್ಧತೆ ನಡೆಸಿದೆ. ಪುಣೆ ಮೂಲದ ಕಂಪನಿಯೊಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅಂದಾಜು 21 ಎಕರೆ ಭೂಮಿ ಖರೀದಿಸಿ ಅರಣ್ಯ ಇಲಾಖೆ ವಶಕ್ಕೆ ನೀಡಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, 2016ರ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಅಥವಾ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಮಾನವ– ವನ್ಯಜೀವಿ ಸಂಘರ್ಷವಿರುವ ಖಾಸಗಿ ಜಮೀನುಗಳನ್ನು ಮಾತ್ರ ಗುರುತಿಸಿ, ಖರೀದಿಸಿ ಸರ್ಕಾರಕ್ಕೆ ನೀಡಬೇಕು. ರಾಜ್ಯ ಸರ್ಕಾರದ ಈ ನಿರ್ಧಾರ ಶ್ಲಾಘನೀಯ. ಅರಣ್ಯದಂಚಿನ ಜನ ವನ್ಯಮೃಗಗಳ ದಾಳಿಯಿಂದ ಕಂಗೆಟ್ಟಿದ್ದಾರೆ. ಇಂಥ ಸ್ಥಿತಿಯಲ್ಲಿ ಸ್ವಇಚ್ಛೆಯಿಂದ ತಮ್ಮ ಜಮೀನುಗಳನ್ನು ಮಾರಲು ಮುಂದೆ ಬರುವ ಜನರ ಭೂಮಿ ಖರೀದಿಸಲು ಸರ್ಕಾರ ಅವಕಾಶ ಒದಗಿಸಿರುವುದು ಸರಿಯಾದ ಕ್ರಮವಾಗಿದೆ.

ವನ್ಯಮೃಗಗಳ ರಕ್ಷಣೆಯ ಉದ್ದೇಶಕ್ಕಾಗಿ, ಭೀಮಗಡ ವನ್ಯಧಾಮದ ಗವಾಳಿ ಗ್ರಾಮದ ಸರ್ವೆ ಸಂಖ್ಯೆ 71, 72 ಹಾಗೂ ಹುಲಂದ ಗ್ರಾಮದ ಸರ್ವೆ ಸಂಖ್ಯೆ 3ರ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದು ಅಗತ್ಯ. ಇಲ್ಲಿ ಹುಲಿ, ಚಿರತೆ, ಕೆನ್ನಾಯಿ, ಕರಡಿ, ಕಾಡುಕೋಣ ಮುಂತಾದ ವನ್ಯಜೀವಿಗಳ ಚಲನವಲನ ಹೆಚ್ಚಾಗಿದೆ. ಅರಣ್ಯ ಇಲಾಖೆಯು ಇಲ್ಲಿ ಬೇರೆ ಯಾವುದೇ ಚಟುವಟಿಕೆ ನಡೆಸದೆ, ಈಗಿರುವ ಸ್ಥಿತಿಯಲ್ಲಿಯೇ ಬಿಡುವುದು ವನ್ಯಜೀವಿಗಳ ಹಿತದೃಷ್ಟಿಯಿಂದ ಸೂಕ್ತವಾದ ಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT