ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಪುರುಷ ಜಗತ್ತಿನ ವಿದ್ಯಮಾನ

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚುನಾವಣೆಯು ಹೊಸ್ತಿಲಲ್ಲಿದೆ. ಅದು ಊರು ದೂರವಿದ್ದಾಗಲಾದರೂ ಮಹಿಳಾ ಮೀಸಲಾತಿಯ, ನಾಯಕತ್ವದ ಸಂಗತಿಗಳು ಅಷ್ಟಿಷ್ಟು ಚರ್ಚೆಗೆ ಬರುತ್ತಿದ್ದವು. ಈಗ ಜಾತಿ, ಧರ್ಮಗಳ ವಾಗ್ವಾದಕ್ಕೇ ಹೆಚ್ಚಿನ ಮಹತ್ವ.

ಚುನಾವಣಾ ರಾಜಕಾರಣದಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ರಾಜಕೀಯ ಪಕ್ಷಗಳಿರಲಿ, ಕೊನೆಪಕ್ಷ ‘ಟ್ರೋಲ್ ಆರ್ಮಿ’ಗಳೂ ತಲೆ ಕೆಡಿಸಿಕೊಂಡಿಲ್ಲ. ಜಾತಿ, ಮತ, ಪಂಥಗಳ ಲೆಕ್ಕಾಚಾರಗಳು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿವೆ. ಆದರೆ ಮಹಿಳೆಯರಿಗೆ ಯಾರು ಎಷ್ಟು ಸ್ಥಾನ ಕೊಟ್ಟಿದ್ದಾರೆ; ಈ ನಿಟ್ಟಿನಲ್ಲಿ ಯಾರು ಕಳಪೆ, ಯಾರು ಪರವಾಗಿಲ್ಲ ಅನ್ನುವ ವಿವರಗಳು ಸುದ್ದಿ ಮಾತ್ರವಾಗಿ ಮುಗಿದು ಹೋಗುತ್ತಿವೆ. ರಾಜಕಾರಣದಲ್ಲಿಯೇ ಇರುವ ಮಹಿಳೆಯರು ಕೂಡಾ ಈ ಸಂಗತಿಯನ್ನು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಅವರು ಪುರುಷ ಜಗತ್ತು ಸೃಷ್ಟಿಸಿದ ಚರ್ಚೆಗಳಲ್ಲಿ ಕಳೆದುಹೋಗಿದ್ದಾರೆಯೇ ವಿನಾ ಮಹಿಳಾ ಪ್ರಾತಿನಿಧ್ಯದ ಪ್ರಶ್ನೆಯನ್ನು ಮುನ್ನೆಲೆಗೆ ತರುತ್ತಿಲ್ಲ.

ಭಾರತ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಇದು ಹೀಗೇ ಆಗಿರುವುದು. ರಾಜಕಾರಣ ಅಂದರೇನೇ ಪುರುಷ ಜಗತ್ತಿನ ವಿದ್ಯಮಾನ ಅನ್ನುವಂತೆ ಆಗಿಬಿಟ್ಟಿದೆ. ಅಪರೂಪಕ್ಕೆ ಅಷ್ಟಿಷ್ಟು ಮಹಿಳಾ ರಾಜಕಾರಣಿಗಳು ಉನ್ನತ ಹುದ್ದೆಯ ಗಾದಿ ಏರಿರಬಹುದು. ಅವುಗಳ ಸಂಖ್ಯೆ ನಗಣ್ಯ ಅನ್ನಿಸುವಷ್ಟು ಕಡಿಮೆ ಇದೆ.

ಇಲ್ಲ, ಇದು ಮೀಸಲಾತಿಯ ಚರ್ಚೆಯಲ್ಲ. ಈ ನಿಟ್ಟಿನಲ್ಲಿ ಭಾರತೀಯ ಮಹಿಳೆಯರ ದಶಕಗಳ ಕನಸು ಹಾಗೆಯೇ ಉಳಿದುಹೋಗಿದೆ. ಇದು ಕನಿಷ್ಠ ಪರಿಗಣನೆಯ ಪ್ರಶ್ನೆ. ಚುನಾವಣಾ ರಾಜಕಾರಣದ ಅಬ್ಬರದ ಚರ್ಚೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಸ್ಥಾನ ಎಲ್ಲಿದೆ? ಯಾಕೆ ಅದು ನಿರ್ಣಾಯಕ ಚರ್ಚೆಯನ್ನು ಸೃಷ್ಟಿಸುತ್ತಿಲ್ಲ? ಮಹಿಳೆಯರಲ್ಲಿ ಯಾವ ಹಿನ್ನೆಲೆಯವರಿಗೆ, ಯಾವ ವರ್ಗದವರಿಗೆ ಎಷ್ಟು ಸ್ಥಾನ ಕೊಡಲಾಗಿದೆ ಅನ್ನುವ ಚರ್ಚೆಯಾದರೂ ಆಗಬೇಕಿತ್ತು. ಭರವಸೆ ನೀಡಿದ್ದಷ್ಟು ಪ್ರಮಾಣದಲ್ಲಿ ಟಿಕೆಟ್ ಯಾಕೆ ಕೊಡಲಾಗಿಲ್ಲ ಅನ್ನುವ ಪ್ರಶ್ನೆ ಏಳಬೇಕಿತ್ತು. ಆದರೆ ಈ ಚರ್ಚೆಗಳನ್ನು ಇಂದಿನ ವಾತಾವರಣದಲ್ಲಿ ನಿರೀಕ್ಷಿಸುವಂತೆಯೇ ಇಲ್ಲ. ಹೋಗಲಿ, ಇತ್ತೀಚಿನ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ‘ಹೆಚ್ಚು ಅವಕಾಶ ಕಲ್ಪಿಸಿಕೊಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡುತ್ತೇವೆ’ ಎಂದು ಪಕ್ಷಗಳು ರಾಜಕೀಯ ನಾಟಕವನ್ನಾದರೂ ಮಾಡಬಹುದಿತ್ತು. ನಮ್ಮ ದೇಶದಲ್ಲಿ ಜಾತಿ, ಧರ್ಮಗಳು ಇಂಥ ನಾಟಕಗಳಿಗೆ ಬಳಕೆಯಾಗುತ್ತವೆ. ಆದರೆ ಮಹಿಳೆಯರಿಗೆ ಅಲ್ಲಿಯೂ ಪ್ರವೇಶವಿಲ್ಲ! ಅಷ್ಟು ನಗಣ್ಯ, ಅಷ್ಟು ತಾತ್ಸಾರ!

ಯಾವುದೇ ಪುರುಷ ರಾಜಕಾರಣಿಗೆ ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಪ್ರಶ್ನೆ ಕೇಳಿದಾಗ, ‘ಅರ್ಹರು ಇದ್ದಲ್ಲಿ ಟಿಕೆಟ್ ಕೊಟ್ಟೇ ಕೊಡುತ್ತೇವೆ’ ಎಂದು ತೇಲಿಸಿಬಿಡುತ್ತಾರೆ. ಅರ್ಹ ಮಹಿಳೆಯರ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸಿ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಮಹಿಳಾ ರಾಜಕಾರಣಿಗಳು ಜನಪ್ರಿಯತೆ ಪಡೆಯಲು ಪೂರಕವಾಗಿ, ಬೆಂಬಲವಾಗಿ ನಿಲ್ಲುವುದಂತೂ ದೂರದ ಮಾತು.

ಶಾಸನಸಭೆಗಳಲ್ಲಿ ಶೇ 33ರಷ್ಟು ಮೀಸಲಾತಿ ಬೇಕೆಂಬುದು ಮಹಿಳೆಯರ ಯಾವತ್ತಿನ ಬೇಡಿಕೆ. ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡು 70 ವರ್ಷಗಳು ಕಳೆದ ಮೇಲೂ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗುತ್ತಿರುವುದು ಶೇ 5ರಿಂದ ಶೇ 10ರವರೆಗೆ ಮಾತ್ರ! ಈ ಬಾರಿಯ ಚುನಾವಣೆಯನ್ನೇ ನೋಡಿ. ಕಾಂಗ್ರೆಸ್ 16 ಮಹಿಳೆಯರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿ ಟಿಕೆಟ್ ನೀಡಿರುವುದು 6 ಮತ್ತು ಜೆಡಿಎಸ್ ಟಿಕೆಟ್ ನೀಡಿರುವುದು 5 ಮಹಿಳೆಯರಿಗಷ್ಟೇ. ಈ ಬಗ್ಗೆ ಪ್ರಶ್ನಿಸಿದರೆ ಪುರುಷ ರಾಜಕಾರಣಿಗಳು ಪಂಚಾಯ್ತಿಗಳ ಕಡೆಗೆ ಕೈತೋರಿಸುತ್ತಾರೆ. ಅಲ್ಲಿ ಶೇ 50 ಮಹಿಳಾ ಪ್ರಾತಿನಿಧ್ಯಕ್ಕೆ ಅವಕಾಶ ಕೊಡಲಾಗಿದೆ ಎಂದು ಮೀಸೆ ತಿರುಗಿಸುತ್ತಾರೆ. ಪಂಚಾಯ್ತಿ ಮಟ್ಟದಲ್ಲಿ ತಮ್ಮ ಕೈಲೇ ಅಧಿಕಾರವನ್ನಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಮಹಿಳೆಯರು ಇಲ್ಲವೆಂದಲ್ಲ. ಆದರೆ, ಹೆಂಡತಿಯರ ಹೆಸರಲ್ಲಿ ಕುರ್ಚಿ ಲಪಟಾಯಿಸುವ ಗಂಡಂದಿರ ಸಂಖ್ಯೆ ಎಷ್ಟಿದೆ ಅನ್ನುವುದೂ ಗುಟ್ಟಿನ ಸಂಗತಿಯೇನಲ್ಲ. ಜೊತೆಗೆ, ಮಹಿಳೆಯರಿಗೆ ಮುಖ್ಯವಾಹಿನಿ ರಾಜಕಾರಣದಲ್ಲಿ, ದೊಡ್ಡ ವಿಸ್ತಾರದ ರಾಜಕಾರಣದಲ್ಲಿಯೂ ಸಮಾನ ಅವಕಾಶಗಳು ಬೇಕು. ಚಿಕ್ಕದನ್ನು ಎದುರಿಗಿಟ್ಟು ದೊಡ್ಡ ಅವಕಾಶಗಳ ನಿರಾಕರಣೆ ಎಷ್ಟು ಸರಿ?

ರಾಜಕೀಯ ಪಕ್ಷಗಳು ಟಿಕೆಟ್ ಘೋಷಿಸಿದಾಗಿನಿಂದ ಸುದ್ದಿ ವಾಹಿನಿಗಳಲ್ಲಿ ನಾಟಕದ ಸರಣಿಯನ್ನೇ ನೋಡುತ್ತಿದ್ದೇವೆ. ಜನಸೇವೆಯ ಅವಕಾಶ ಕೈತಪ್ಪಿದ್ದಕ್ಕೆ (!?) ರಾಜಕಾರಣಿಗಳು ಕಣ್ಣೀರು ಇಡುತ್ತಿದ್ದಾರೆ. ನಿರ್ದಿಷ್ಟ ಸಮುದಾಯ– ಜಾತಿಯ ಸೇನೆಗಳು ‘ನಮಗೆ ಅನ್ಯಾಯವಾಗಿದೆ’ ಎಂದು ಬೊಬ್ಬೆ ಹೊಡೆಯುತ್ತಿವೆ. ರಾಜಕೀಯ ಪಂಡಿತರು ಕೂಡಾ ಪುರುಷ ಕೇಂದ್ರಿತ ರಾಜಕಾರಣದ ಚರ್ಚೆಯನ್ನೇ ನಡೆಸುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆಗಳು, ಭಾಷಣ, ವಾಗ್ವಾದ, ವಿಶ್ಲೇಷಣೆಗಳೆಲ್ಲವೂ ಪುರುಷಮಯವೇ. ಮಹಿಳೆಯರನ್ನು ಒಳಗೊಳಿಸಿಕೊಳ್ಳುವುದು ಅಂದರೆ ಒಂದಷ್ಟು ಯೋಜನೆಗಳ ಘೋಷಣೆ ಎಂದಷ್ಟೇ ರಾಜಕಾರಣದ ಲೆಕ್ಕಾಚಾರ. ಅದಕ್ಕೇ ರಾಜಕಾರಣವನ್ನು, ಅದರಲ್ಲೂ ಚುನಾವಣಾ ರಾಜಕಾರಣವನ್ನು ‘ಪುರುಷ ಜಗತ್ತಿನ ವಿದ್ಯಮಾನ’ ಎಂದು ಕರೆದಿರುವುದು.

ಈ ಎಲ್ಲದರ ಜೊತೆಗೆ ರಾಜಕೀಯ ಪಕ್ಷಗಳು ಲಜ್ಜೆಯೇ ಇಲ್ಲದಂತೆ ಅತ್ಯಾಚಾರ ಆರೋಪಿಗಳಿಗೆ, ಲೈಂಗಿಕ ದೌರ್ಜನ್ಯ– ಮಹಿಳಾ ದೌರ್ಜನ್ಯ ನಡೆಸಿದ ಆರೋಪಿಗಳಿಗೆ ಟಿಕೆಟ್ ನೀಡಿವೆ. ಈ ಮೂಲಕ ತಮ್ಮ ಮಹಿಳಾವಿರೋಧಿ ನಿಲುವನ್ನು ಸ್ಪಷ್ಟವಾಗಿ ತೋರಿಸಿಕೊಂಡಿವೆ. ಚುನಾವಣೆಗೆ ಮೂರು– ನಾಲ್ಕು ತಿಂಗಳು ಮೊದಲು ಮಹಿಳೆಯರಿಗೆ ಹದಿನೈದು ಟಿಕೆಟ್, ಇಪ್ಪತ್ತು ಟಿಕೆಟ್ ಎಂದೆಲ್ಲ ಭಾಷಣ ಬಿಗಿದಿದ್ದ ರಾಜಕೀಯ ಪಕ್ಷಗಳು ಈಗ ಉಸಿರೆತ್ತದೆ ಕುಳಿತಿವೆ. ಮಹಿಳಾ ಸುರಕ್ಷೆ, ಸಬಲೀಕರಣ ಎಂದು ಯೋಜನೆಗಳನ್ನು ಘೋಷಿಸುತ್ತಿದ್ದವರಿಗೂ ಈಗ ಜಾಣಕುರುಡು. ಸಂಖ್ಯೆ ಒಂದೇ ಇರಬಹುದು ಅಥವಾ ನಾಲ್ಕೈದು. ಇಲ್ಲಿ ಆ ಪಕ್ಷ ಈ ಪಕ್ಷಕ್ಕಿಂತ ಪರವಾಗಿಲ್ಲ ಅನ್ನುವ ಲೆಕ್ಕಾಚಾರವೇ ಅಸಹ್ಯ. ಕರ್ನಾಟಕದ ಮಟ್ಟಿಗೆ ಈ ಬಾರಿಯ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷವೂ ಕನಿಷ್ಠ ಶೇ 10ರಷ್ಟು ಸ್ಥಾನಗಳನ್ನೂ ಮಹಿಳೆಯರಿಗೆ ನೀಡಿಲ್ಲ. ಇದೆಂಥಾ ನಾಚಿಕೆಗೇಡು!

ಈ ಎಲ್ಲ ಅಂಕಿಅಂಶಗಳನ್ನು, ಪರಿಗಣನೆಯ ಪ್ರಮಾಣವನ್ನು ನೋಡುವಾಗ, ಭಾರತ ಇನ್ನೂ ಕೂಡ ಪರಿಪೂರ್ಣ ರಾಷ್ಟ್ರವಾಗಿಲ್ಲ ಎಂದೇ ಅನ್ನಿಸುತ್ತದೆ. ಪ್ರಜಾಪ್ರಭುತ್ವದ, ಚುನಾವಣೆಯ ಮೂಲಕ ಪ್ರತಿನಿಧಿಯನ್ನು ಆಯ್ಕೆ ಮಾಡುವ ಬಗ್ಗೆ ದೊಡ್ಡದೊಡ್ಡ ಮಾತುಗಳನ್ನು ಆಡಲಾಗುತ್ತದೆ. ಯಾವ ದೇಶದಲ್ಲಿ ಸಂಖ್ಯೆಯಲ್ಲಿಯೂ ಸರಿಸಮವಾಗಿರುವ ಮಹಿಳೆಯರು ರಾಜಕೀಯ ಪ್ರಾತಿನಿಧ್ಯದ ವಿಷಯ ಬಂದಾಗ ಅತ್ಯಂತ ಕೆಳ ಹಂತದಲ್ಲಿ ಇದ್ದಾರೋ, ಆ ದೇಶವನ್ನು ಪರಿಪೂರ್ಣ ಪ್ರಜಾಪ್ರಭುತ್ವ ಎಂದು ಕರೆಯುವುದಾದರೂ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT