ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಮಕ್ಕಳಿಗೆ ಜವಾಬ್ದಾರಿ ಕಲಿಸಿ: ಪ‍್ರಧಾನಿ ಮೋದಿ ಕರೆ

ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿರುವ ವಾತಾವರಣ ಸೃಷ್ಟಿಸಿ
Last Updated 24 ಏಪ್ರಿಲ್ 2018, 19:43 IST
ಅಕ್ಷರ ಗಾತ್ರ

ಮಾಂಡ್ಲಾ (ಮಧ್ಯಪ್ರದೇಶ): ಸುರಕ್ಷಿತ ವಾತಾವರಣ ಸೃಷ್ಟಿಗಾಗಿ ಜನರು ತಮ್ಮ ಹೆಣ್ಣು ಮಕ್ಕಳನ್ನು ಗೌರವಿಸಬೇಕು ಮತ್ತು ಗಂಡು ಮಕ್ಕಳನ್ನು ಹೊಣೆಗಾರಿಕೆ ಉಳ್ಳವರಾಗಿ ಬೆಳೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.

12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕಾಗಿ ಸುಗ್ರೀವಾಜ್ಞೆ ತಂದಿರುವುದನ್ನು ಪ್ರಸ್ತಾಪಿಸಿದ ಮೋದಿ, ಅತ್ಯಾಚಾರದ ವಿರುದ್ಧ ತಮ್ಮ ಸರ್ಕಾರದ ದೃಢ ನಿಲುವನ್ನು ಇದು ತೋರಿಸುತ್ತದೆ ಎಂದು ಹೇಳಿದರು.

ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗಾಗಿ ದೇಶವ್ಯಾಪಿ ಅಭಿಯಾನ ನಡೆಸುವಂತೆ ಅವರು ಕರೆ ನೀಡಿದರು. ‘ನಿಮ್ಮ ಧ್ವನಿಯನ್ನು ಕೇಳುವ ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ಸರ್ಕಾರ ದೆಹಲಿಯಲ್ಲಿ ಇದೆ. ಹಾಗಾಗಿಯೇ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಹೊರಡಿಸಲಾಗಿದೆ’ ಎಂದು ಹೇಳಿದರು.

ಕಠುವಾ, ಉನ್ನಾವ್‌ ಮತ್ತು ಸೂರತ್‌ನಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಕೃತ್ಯಗಳು ಇತ್ತೀಚೆಗೆ ನಡೆದಿದ್ದವು. ಇದಕ್ಕೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಪರಿಣಾಮವಾಗಿ, 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಮರಣ ದಂಡನೆ ವಿಧಿಸಲು ಅವಕಾಶ ನೀಡುವ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಆದಿವಾಸಿಗಳೇ ಹೆಚ್ಚಾಗಿರುವ ರಾಮನಗರದಲ್ಲಿ ರಾಷ್ಟ್ರೀಯ ಪಂಚಾಯಿತಿರಾಜ್‌ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮಾತನಾಡಿದರು.

ವಾಗ್ದಾಳಿ:  ನೆಹರೂ–ಗಾಂಧಿ ಕುಟುಂಬದ ವಿರುದ್ಧ ಮೋದಿ ಅವರು ಪರೋಕ್ಷ ವಾಗ್ದಾಳಿ ನಡೆಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕೂಡ ಕೆಲವೇ ವ್ಯಕ್ತಿಗಳು ಮತ್ತು ಕುಟುಂಬಗಳ ಸುತ್ತವೇ ಗಿರಕಿ ಹೊಡೆಯುತ್ತಿರುವುದು ದುರದೃಷ್ಟಕರ ಎಂದು ಮೋದಿ ಹೇಳಿದರು.

ಆದಿವಾಸಿ ಸಮುದಾಯಗಳಿಗೆ ಸೇರಿದವರನ್ನೂ ಒಳಗೊಂಡಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಮರೆಯಲ್ಲಿಯೇ ಉಳಿದವರಿಗಾಗಿ ದೇಶದಾದ್ಯಂತ ಸ್ಮಾರಕಗಳನ್ನು ನಿರ್ಮಿಸಲಾಗುವುದು ಎಂದು ಪ್ರಧಾನಿ ಘೋಷಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ದೇಶಕ್ಕಾಗಿ ತ್ಯಾಗ ಮಾಡಿದ ಹಲವರ ಬಗ್ಗೆ ಇಂದಿನ ತಲೆಮಾರಿಗೆ ಏನೂ ಗೊತ್ತಿಲ್ಲ. ಯುವ ತಲೆಮಾರಿನಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿಯೇ ಪ್ರತಿ ರಾಜ್ಯದಲ್ಲಿ ಒಂದು ವಸ್ತುಸಂಗ್ರಹಾಲಯ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
**
ನೀರು ಸಂರಕ್ಷಣೆಗೆ ನರೇಗಾ ಅನುದಾನ
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ನೀಡಿದ ಅನುದಾನವನ್ನು ನೀರು ಸಂರಕ್ಷಣೆ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಬೇಸಿಗೆಯ ಮೂರು ತಿಂಗಳಲ್ಲಿ ಗ್ರಾಮಗಳಲ್ಲಿನ ನೀರಿನ ಕೊರತೆ ನಿವಾರಣೆ ಮತ್ತು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಇದರಿಂದ ಸಾಧ್ಯ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮ ಕೇಂದ್ರಿತ ಅಭಿವೃದ್ಧಿಯ ಮೂಲಕ ಮಹಾತ್ಮ ಗಾಂಧಿಯ ಕನಸನ್ನು ನನಸು ಮಾಡಲು ಗ್ರಾಮೀಣ ಪ್ರದೇಶದ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬೇಕು. ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಲ್ಲಿ ನರೇಗಾ ಮೂಲಕ ನೀರು ಸಂರಕ್ಷಣೆಯ ಕೆಲಸವನ್ನಷ್ಟೇ ಮಾಡಬೇಕು ಎಂದು ಮೋದಿ ಕರೆ ನೀಡಿದರು.

‘ಮಳೆ ನೀರಿನ ಪ್ರತಿ ಹನಿಯನ್ನೂ ಸಂರಕ್ಷಿಸಬೇಕು. ಇದು ನಮ್ಮ ಹಣ ಉಳಿಸುವುದರ ಜತೆಗೆ ಗ್ರಾಮಗಳನ್ನು ನೀರಿನ ಅಭಾವದಿಂದ ರಕ್ಷಿಸುತ್ತದೆ. ಕೃಷಿಗೆ ಸಹಕಾರಿಯಾಗುತ್ತದೆ’ ಎಂದರು.

ಗ್ರಾಮಗಳ ಜನರು ‘ಜನಧನ, ವನಧನ ಮತ್ತು ಗೋಧನ’ಗಳಿಗೆ (ಮಾನವ, ಅರಣ್ಯ ಮತ್ತು ಗೋ ಸಂಪನ್ಮೂಲ) ಒತ್ತು ನೀಡಬೇಕು ಎಂದೂ ಅವರು ಹೇಳಿದರು.
**
ಹೆಣ್ಣು ಮಕ್ಕಳನ್ನು ಗೌರವಿಸಿ, ಗಂಡು ಮಕ್ಕಳಿಗೆ ಜವಾಬ್ದಾರಿ ಕಲಿಸುವ ಮೂಲಕ ಸುರಕ್ಷಿತವಾದ ವಾತಾವರಣ ಸೃಷ್ಟಿ ಸಾಧ್ಯ. ಈ ನಿಟ್ಟಿನಲ್ಲಿ ಚಳವಳಿಯೇ ನಡೆಯಬೇಕು.
–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT