ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿನಲ್ಲಿ ‘ಅಭಿಮಾನದ ಕಲೆ’ ಮೂಡಿಸಿದ ಪ್ರೇಕ್ಷಕರು

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮುಂಬೈ: ಕ್ರಿಕೆಟ್‌ ವಿಶ್ವಕಪ್ ಗೆದ್ದ ದಿನ ಅಭಿಮಾನಿಗಳು ಕಾರಿನ ಮೇಲೇರಿ ನೃತ್ಯ ಮಾಡಿದ್ದನ್ನು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್‌ ನೆನಪಿಸಿಕೊಂಡಿದ್ದಾರೆ. ಕಾರಿನಲ್ಲಿ ಕಲೆಗಳಾದರೂ ಅದನ್ನು ಅಂದಿನ ಸಂಭ್ರಮದ ಒಂದು ಭಾಗವಾಗಿ ಪರಿಗಣಿಸಿದ್ದಾಗಿಯೂ ಅವರು ಹೇಳಿದ್ದಾರೆ.

ಬೋರಿಯನ್ ಮಜುಂದಾರ್‌ ಬರೆದ ‘ಇಲೆವನ್ ಗಾಡ್ಸ್ ಅಂಡ್‌ ಬಿಲಿಯನ್‌ ಇಂಡಿಯನ್ಸ್‌’ ಕೃತಿಯನ್ನು ಸೋಮವಾರ ರಾತ್ರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ಗೆದ್ದ ನಂತರ ಎಲ್ಲರೂ ಸಂಭ್ರಮದಲ್ಲಿ ತೇಲುತ್ತಿದ್ದೆವು. ಆಗ ಪತ್ನಿ ಅಂಜಲಿಗೆ ಕರೆ ಮಾಡಿ ಕ್ರೀಡಾಂಗಣಕ್ಕೆ ಬರುವಂತೆ ತಿಳಿಸಿದೆ. ಆಕೆ ಸ್ವಲ್ಪ ಹೊತ್ತಿನಲ್ಲೇ ಕಾರಿನಲ್ಲಿ ಬಂದಳು. ಅಷ್ಟರಲ್ಲಿ ಪಾರ್ಕ್‌ ಮಾಡಿದ್ದ ಕಾರುಗಳ ಮೇಲೆ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದರು. ಅಂಜಲಿಯನ್ನು ನೋಡಿ ಈ ಕಾರನ್ನು ಏನೂ ಮಾಡಬೇಡಿ ಎಂದು ಕೆಲವರು ಹೇಳಿದರು. ಆದರೆ ಆಕೆ ಇಳಿದು ಹೋದ ನಂತರ ಮೇಲೇರಿ ಕುಣಿದರು’ ಎಂದು ವಿವರಿಸಿದರು.

’ಅಂಜಲಿ ಕಾರಿನಿಂದ ಇಳಿದು ಹೋಗುವ ವರೆಗೆ ಎಲ್ಲರೂ ಸುಮ್ಮನಿದ್ದರು. ಆದರೆ ಸಂಭ್ರಮ ಮುಗಿಸಿ ಬಂದು ನೋಡಿದರೆ ಕಾರಿನ ಮೇಲೆ ಕಲೆಗಳು ಮೂಡಿದ್ದವು. ಈ ಕುರಿತು ಚಾಲಕನನ್ನು ಕೇಳಿದಾಗ, ಮೇಡಂ ಹೋಗುವ ವರೆಗೆ ಸುಮ್ಮನಿದ್ದವರು ನಂತರ ಕಾರಿನ ಮೇಲೆ ಹತ್ತಿ ನೃತ್ಯ ಮಾಡಿದರು. ಆದ್ದರಿಂದ ಕಲೆಗಳಾಗಿವೆ ಎಂದರು’ ಎಂದು ಸಚಿನ್ ಹೇಳಿದರು.

‘ಲೆಗ್‌ ಬ್ರೆಕ್ ಮಾಡಬಲ್ಲ ಆಫ್‌ ಸ್ಪಿನ್ನರ್‌ ಬಹುಭಾಷಿ ಇದ್ದಂತೆ’
ನವದೆಹಲಿ: ‘
ಲೆಗ್‌ ಬ್ರೆಕ್ ಬೌಲಿಂಗ್ ಮಾಡಬಲ್ಲ ಆಫ್‌ ಸ್ಪಿನ್ ಬೌಲರ್‌ ಎಂದರೆ, ಬಹುಭಾಷೆಗಳನ್ನು ಮಾತನಾಡಬಲ್ಲ ವ್ಯಕ್ತಿ ಇದ್ದಂತೆ...’

ಇತ್ತೀಚೆಗೆ ಬ್ಯಾಟ್ಸ್‌ಮನ್‌ಗಳನ್ನು ಹೆಚ್ಚಾಗಿ ಕಾಡುತ್ತಿರುವ ಮಣಿಗಂಟಿನ ಸ್ಪಿನ್ನರ್‌ಗಳ ಕುರಿತು ಮಾತನಾಡಿದ ಸಂದರ್ಭದಲ್ಲಿ ಹಾಸ್ಯದ ದಾಟಿಯಲ್ಲಿ ಬ್ಯಾಟಿಂಗ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಆಡಿದ ಮಾತು ಇದು.

ಮಂಗಳವಾರ 45ನೇ ಜನ್ಮದಿನ ಆಚರಿಸಿದ ತೆಂಡೂಲ್ಕರ್‌ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ‘ಎರಡು ಅಥವಾ ಮೂರು ಇಲ್ಲವೇ ಅದಕ್ಕಿಂತ ಹೆಚ್ಚು ಭಾಷೆಗಳನ್ನು ತಿಳಿದಿರುವುದು ಒಳ್ಳೆಯದೇ. ಅದರಿಂದ ಹಾನಿಯೇನೂ ಇಲ್ಲ. ಹಾಗೆಯೇ ವೈವಿಧ್ಯಮಯ ಬೌಲಿಂಗ್ ಮಾಡಲು ತಿಳಿದುಕೊಂಡಿದ್ದರೆ ನಷ್ಟವಿಲ್ಲ’ ಎಂದರು.

ಸಚಿನ್ ತೆಂಡೂಲ್ಕರ್‌ ಯಾವುದೇ ಬೌಲರ್‌ನ ಹೆಸರು ಹೇಳಲಿಲ್ಲ. ಆದರೆ ಇತ್ತೀಚೆಗೆ ಲೆಗ್ ಸ್ಪಿನ್‌ ಬೌಲಿಂಗ್ ಮಾಡಲು ಶ್ರಮಿಸುತ್ತಿರುವ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಅವರಿಗೆ ಈ ಮಾತು ಸರಿಯಾಗಿ ಅನ್ವಯವಾಗುತ್ತದೆ.

‘ಆಫ್‌ ಸ್ಪಿನ್ನರ್‌ಗಳಿಗೆ ಲೆಗ್ ಸ್ಪಿನ್‌ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಕ್ರಿಕೆಟ್ ಪಂಡಿತರಲ್ಲಿ ಇದೆ. ಆಫ್‌ ಸ್ಪಿನ್ನರ್‌ಗೆ ಲೆಗ್ ಸ್ಪಿನ್ ಮಾಡಲು ತಿಳಿದಿದ್ದರೆ ದೂಸ್ರಾದೊಂದಿಗೆ ಮತ್ತೊಂದು ಅಸ್ತ್ರ ಆತನ ಬಳಿ ಇದೆ ಎಂದೇ ತಿಳಿದುಕೊಳ್ಳಬೇಕು. ನಾನು ಬೌಲಿಂಗ್ ಮಾಡುತ್ತಿದ್ದಾಗ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಆಫ್‌ ಸ್ಪಿನ್ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಲೆಗ್ ಬ್ರೇಕ್‌ ಅಸ್ತ್ರ ಬಳಸುತ್ತಿದ್ದೆ’ ಎಂದು ತೆಂಡೂಲ್ಕರ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT