ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯವಾದ ನೆರಳಿಗಾಗಿ ಹುಡುಕಾಟ

ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಶೂನ್ಯ ನೆರಳು ದಿನದ ಪ್ರಾತ್ಯಕ್ಷಿಕೆ
Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೆರಳು ಶೂನ್ಯವಾಗುವ ಅಪರೂಪದ ವಿದ್ಯಮಾನಕ್ಕೆ ನಗರ ಮಂಗಳವಾರ ಸಾಕ್ಷಿಯಾಯಿತು. ಮಧ್ಯಾಹ್ನ 12 ಗಂಟೆ 18 ನಿಮಿಷಕ್ಕೆ ಎಲ್ಲರ ನೆರಳುಗಳು ಕಣ್ಮರೆಯಾದವು!

ಜವಾಹರಲಾಲ್‌ ನೆಹರೂ ತಾರಾಲಯದ ಆವರಣದಲ್ಲಿ ‘ಶೂನ್ಯ ನೆರಳಿನ ಮಧ್ಯಾಹ್ನ’ದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ನೂರಾರು ಮಕ್ಕಳು ಹಾಗೂ ಅವರೊಟ್ಟಿಗೆ ಬಂದಿದ್ದ ಪೋಷಕರು ಬೆರಗು ಕಂಗಳಿಂದ ಈ ವಿದ್ಯಮಾನವನ್ನು ಕಣ್ತುಂಬಿಕೊಂಡರು.

ನೆರಳು ಇಲ್ಲವಾಗುವುದನ್ನು ಮಕ್ಕಳ ಅನುಭವಕ್ಕೆ ತರಲು ತಾರಾಲಯದಲ್ಲಿ 3 ಮೀಟರ್ ಎತ್ತರದ ಕಬ್ಬಿಣದ ಕಂಬ, ಸುಮಾರು ಒಂದು ಅಡಿ ಎತ್ತರದ ಕಂಬ, ಅಕ್ಷರದ ರಂಧ್ರಗಳುಳ್ಳ ಬಿಲ್ಲೆಗಳು (ಶೂನ್ಯ ನೆರಳಿನ ವೇಳೆ ಅಕ್ಷರಗಳನ್ನು ಓದಲು ಸಾಧ್ಯ), ಮೂರು ರಂಧ್ರಗಳ ಸಮವಾದ ಜೋಡಣೆ, ಗಾಜಿನ ಲೋಟದ ನೆರಳು, ನಿಖರವಾದ ಸಮಯಕ್ಕೆ ಪಟಾಕಿ ಸಿಡಿಯುವ ಸಾಧನವನ್ನು ಅಳವಡಿಸಲಾಗಿತ್ತು.

ಸೂರ್ಯ ಚಲಿಸಿದಂತೆಲ್ಲ ಬದಲಾಗುವ ನೆರಳನ್ನು ಮಕ್ಕಳೇ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಮಧ್ಯಾಹ್ನ 12.15ರಿಂದ ಕ್ಷೀಣಿಸಲು ಪ್ರಾರಂಭವಾದ ನೆರಳಿನ ಉದ್ದ 12.18ಕ್ಕೆ ಶೂನ್ಯವಾಯಿತು.

ವರ್ಷದಲ್ಲಿ ಎರಡು ಬಾರಿ ಮಾತ್ರ ಈ ವಿದ್ಯಮಾನ ಕಾಣಸಿಗುತ್ತದೆ. ಭೂಮಿಯಿಂದ ನಿಂತು ನೋಡಿದಾಗ ನಿತ್ಯವೂ ಸೂರ್ಯೋದಯದ ಸ್ಥಾನ ಪಲ್ಲಟವಾಗುತ್ತಿರುತ್ತದೆ. ಉತ್ತರಾಯಣದಲ್ಲಿ ಏಪ್ರಿಲ್‌ 24ರಂದು ಹಾಗೂ ದಕ್ಷಿಣಾಯನದಲ್ಲಿ ಆಗಸ್ಟ್‌ 18ರಂದು ಸೂರ್ಯ ಬೆಂಗಳೂರಿನ ನಡು ನೆತ್ತಿಯ ಮೇಲೆ ಹಾದು ಹೋಗುತ್ತಾನೆ. ಭೂಮಿಗೆ ಲಂಬವಾಗಿ ನೆಟ್ಟ ಕಂಬವು ಅಂದು ಮಧ್ಯಾಹ್ನ ಅರೆಕ್ಷಣ ಲವಲೇಶದಷ್ಟೂ ನೆರಳನ್ನು ಹೊಂದಿರುವುದಿಲ್ಲ ಎಂದು ತಾರಾಲಯದ ನಿರ್ದೇಶಕ ಪ್ರಮೋದ್‌ ಗಲಗಲಿ ತಿಳಿಸಿದರು.

ಸೂರ್ಯ ಉತ್ತರದಿಂದ ದಕ್ಷಿಣಕ್ಕೆ ಹಾಗೂ ದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತಿರುವಾಗ ಪ್ರತಿ ದಿನವೂ ಒಂದೊಂದು ಕಡೆ ಶೂನ್ಯ ನೆರಳು ದಿನ ಇರುತ್ತದೆ. ಇಂದು ಚೆನ್ನೈ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಇತ್ತು. ಸೂರ್ಯ ನಡು ನೆತ್ತಿಯ ಮೇಲೆ ಬರುವ ದಿನಾಂಕವನ್ನು ಅಕ್ಷಾಂಶ ನಿರ್ಧರಿಸುತ್ತದೆ. ಆ ದಿನದಲ್ಲಿ ಯಾವ ಸಮಯಕ್ಕೆ ಶೂನ್ಯ ನೆರಳು ಸಂಭವಿಸುತ್ತದೆ ಎನ್ನುವುದನ್ನು ರೇಖಾಂಶದಿಂದ ತಿಳಿಯಲಾಗುತ್ತದೆ. ರಾಜ್ಯದ ವಿವಿಧ ನಗರಗಳಲ್ಲಿ ಬೇರೆಬೇರೆ ದಿನ ಶೂನ್ಯ ನೆರಳಿನ ವಿದ್ಯಮಾನ ಕಾಣಿಸಿಕೊಳ್ಳುತ್ತದೆ ಎಂದು ಮಾಹಿತಿ ನೀಡಿದರು.

ಈ ದಿನ ನಿರ್ದಿಷ್ಟ ಜಾಗದ ಮೇಲೆ ಬೀಳುವ ಸೂರ್ಯನ ಕಿರಣಗಳ ಪ್ರಖರತೆ ಹೆಚ್ಚು ಇರುತ್ತದೆ. ಇದರ ಪ್ರಾತ್ಯಕ್ಷಿಕೆ ತೋರಿಸಲು ಪಟಾಕಿಯೊಂದನ್ನು ಇಡಲಾಗಿತ್ತು. ಸೂರ್ಯ ಪ್ರಖರತೆಗೆ ಪಟಾಕಿ ಹೊತ್ತಿಕೊಳ್ಳುವುದನ್ನೇ ಮಕ್ಕಳು ಕುತೂಲಹದಿಂದ ಕಾಯುತ್ತಿದ್ದರು. ಸೂರ್ಯ ಕಿರಣಗಳಿಂದಲೇ ಪಟಾಕಿಯ ಮದ್ದಿಗೆ ಬೆಂಕಿ ಹೊತ್ತಿಕೊಂಡಿತು. ಇನ್ನೇನು ಸಿಡಿಯುತ್ತದೆ ಎಂದು ಕಿವಿ ಮುಚ್ಚಿಕೊಂಡು ನೋಡುತ್ತಿದ್ದ ಮಕ್ಕಳಿಗೆ ಪಟಾಕಿ ಟುಸ್‌ ಎಂದಿದ್ದು, ತುಸು ಬೇಸರ ತರಿಸಿತು.

ಶೂನ್ಯ ನೆರಳು ಕಂಡ ಮಕ್ಕಳ ಅಭಿಪ್ರಾಯ

ಶೂನ್ಯ ನೆರಳಿನ ದಿನ ಎಂಬ ಮಾಹಿತಿಯನ್ನು ಕಂಡು, ಪ್ರಾಯೋಗಿಕ ಅನುಭವ ಪಡೆಯಲು ತಾರಾಯಲಯಕ್ಕೆ ಬಂದೆ. ವಿದ್ಯಮಾನವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಇದು ನೆರವಾಯಿತು
– ತುಷಾರಿಣಿ, 9ನೇ ತರಗತಿ

ಮೊದಲ ಬಾರಿಗೆ ನೆಹರು ತಾರಾಲಯಕ್ಕೆ ಬಂದಿದ್ದೇನೆ. ಬಾಟಲ್ ಇಟ್ಟು ನೆರಳಿನ ಚಲನವಲನಗಳನ್ನು ಪರೀಕ್ಷಿಸಿ ಶೂನ್ಯ ನೆರಳಿನ ಕೌತುಕವನ್ನು ವೀಕ್ಷಿಸಿದೆ. ಇನ್ನು ಪ್ರತೀ ವರ್ಷ ಇದನ್ನು ನೋಡಲು ಮರೆಯುವುದಿಲ್ಲ
–ಯಶಸ್ವಿ, 8ನೇ ತರಗತಿ

ಬೇಸಿಗೆ ರಜೆಯಲ್ಲಿ ತಾರಾಲಯದಲ್ಲಿ ವಿವಿಧ ಕಾರ್ಯಕ್ರಮಗಳಿರುತ್ತವೆ. ಕಳೆದ ವರ್ಷವೂ ನಾನು ಶೂನ್ಯ ನೆರಳಿನ ದಿನದ ಅನುಭವ ಪಡೆದಿದ್ದೆ. ಈ ವರ್ಷವೂ ನೋಡಿದೆ. ಖುಷಿಯಾಯ್ತು
–ದೃವಶ್ರೀ, 6ನೇ ತರಗತಿ

ಸೂರ್ಯನ ಚಲನೆಗಳ ಬಗ್ಗೆ, ಉತ್ತರಾಯಣ, ದಕ್ಷಿಣಾಯಣದ ಕುರಿತು ಸಮಗ್ರವಾಗಿ ತಿಳಿಯಲು ಇಲ್ಲಿ ಸಾಧ್ಯವಾಯಿತು. ವಿಜ್ಞಾನದ ಒಂದು ವಿದ್ಯಮಾನದಿಂದ ಸಾಕಷ್ಟು ವಿಷಯಗಳು ತಿಳಿಯುತ್ತವೆ
–ಲಕ್ಷ್ಮೀಶ, 6ನೇ ತರಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT