ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆಗೆ ಗೊಂದಲದ ತೆರೆ: ನಾಮಪತ್ರ ವಾಪಸ್‌ಗೆ ಇದೇ 27 ಕೊನೆ ದಿನ

Last Updated 24 ಏಪ್ರಿಲ್ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಮುಕ್ತಾಯವಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಮತ್ತು ಪಕ್ಷೇತರರಿಂದ ಒಟ್ಟು 3,943 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಕೆಗೆ ಅವಧಿ ಮುಗಿಯುತ್ತಾ ಬಂದಿದ್ದರೂ ರಾಜಕೀಯ ಪಕ್ಷಗಳಲ್ಲಿ ಗೊಂದಲ ಮನೆ ಮಾಡಿತ್ತು. ಮೂರೂ ಪ್ರಮುಖ ಪಕ್ಷಗಳು ಗೊಂದಲದ ಕಾರಣ ಕೆಲವು ಕ್ಷೇತ್ರಗಳಲ್ಲಿ ಕೊನೆಯ ಕ್ಷಣದಲ್ಲಿ ನೇರವಾಗಿ ‘ಬಿ ಫಾರಂ’ ನೀಡುವ ಮೂಲಕ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ.

ಭಾರಿ ಪೈಪೋಟಿ ಏರ್ಪಟ್ಟಿರುವ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆ
ಪಿಯಿಂದ ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಸಿದರು.  ಟಿಕೆಟ್‌ ಸಿಕ್ಕರೂ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆಯ ಕುರಿತು ತೀರ್ಮಾನ ಪ್ರಕಟಿಸದೇ ಸುಮ್ಮನಿದ್ದ ನಟ ಅಂಬರೀಷ್ ಕೊನೆ ಗಳಿಗೆಯಲ್ಲಿ ರಾಜಕೀಯ ನಿವೃತ್ತಿ ಪ್ರಕಟಿಸಿದರು. ತಕ್ಷಣವೇ ಕಾಂಗ್ರೆಸ್‌ ಗಣಿಗ ರವಿಕುಮಾರ್ ಗೌಡ ಅವರಿಗೆ ಬಿ ಫಾರಂ ನೀಡಿ ಕಣಕ್ಕಿಳಿಸಿತು.

ಮೈಸೂರಿನ ವರುಣಾ ಕ್ಷೇತ್ರದಲ್ಲಿ ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡದೆ, ಕೊನೆ ಗಳಿಗೆಯಲ್ಲಿ ಆರ್‌ಎಸ್‌
ಎಸ್‌ ಕಾರ್ಯಕರ್ತ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ತೋಟದಪ್ಪ ಬಸವರಾಜಪ್ಪ ಅವರಿಗೆ ಬಿ ಫಾರಂ ನೀಡಿ ಕಣಕ್ಕೆ ಇಳಿಸಿತು. ವಿಜಯೇಂದ್ರ ಅವರಿಗೇ ಟಿಕೆಟ್‌ ನೀಡಬೇಕು ಎಂದು ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಆರಂಭಿಸಿದ್ದ ಪ್ರತಿಭಟನೆಯನ್ನು ಮಂಗಳವಾರವೂ ಮುಂದುವರಿಸಿದರು. ಆದರೆ, ಪಕ್ಷದ ವರಿಷ್ಠರು ಕಾರ್ಯಕರ್ತರ ಬೆದರಿಕೆ ಮತ್ತು ಪ್ರತಿಭಟನೆಗೆ ಸೊಪ್ಪು ಹಾಕಲಿಲ್ಲ.

ಹಾನಗಲ್‌ ಶಾಸಕ ಮನೋಹರ ತಹಸೀಲ್ದಾರ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

‘ಕಾಂಗ್ರೆಸ್ ವರಿಷ್ಠರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಪಕ್ಷ ಬಿಟ್ಟಿಲ್ಲ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಭರವಸೆಯನ್ನು ದೃಢಪಡಿಸಿದರೆ ಕಣದಿಂದ ಹಿಂದೆ ಸರಿಯಲು ಸಿದ್ಧ’ ಎಂದು ಅವರು ಹೇಳಿದರು.

ಜೆಡಿಎಸ್‌ನಲ್ಲೂ ಕೆ.ಆರ್.ಪೇಟೆ, ದೇವನಹಳ್ಳಿ, ಶಿಡ್ಲಘಟ್ಟ ಸೇರಿದಂತೆ 15 ರಿಂದ 20 ಕ್ಷೇತ್ರಗಳಲ್ಲಿ ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳಿಗೆ ‘ಬಿ ಫಾರಂ’ ನೀಡುವಲ್ಲಿ ಗೊಂದಲ ಉಂಟಾಗಿದೆ. ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಬಿಎಸ್‌ಪಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಮೇಲುಕೋಟೆಯಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್, ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.

ಚುನಾವಣಾ ಆಯೋಗ ಇದೇ 17 ರಂದು ಅಧಿಸೂಚನೆ ಹೊರಡಿಸಿತ್ತು. ಬುಧವಾರ (ಏ.25) ನಾಮ ಪತ್ರಗಳ ಪರಿಶೀಲನೆ ನಡೆಯಲಿದೆ. ಶುಕ್ರವಾರ (ಏ. 27) ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ.  ಕೊನೆಯ ದಿನ ಮಧ್ಯಾಹ್ನ 3 ರವರೆಗೆ ನಾಮಪತ್ರ ಸಲ್ಲಿಸಲು ಸ್ಪರ್ಧಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂಬಂಧ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಚುನಾವಣಾ ಕಚೇರಿಯನ್ನು ತೆರೆದು ವ್ಯವಸ್ಥೆ ಮಾಡಲಾಗಿತ್ತು.

ಲಘು ಲಾಠಿ ಪ್ರಹಾರ: ವರುಣಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಅವರ ಸ್ಪರ್ಧೆ ತಡೆ ಹಿಡಿದಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಮಂಗಳವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

ಬಿಜೆಪಿ ಸಭೆ ನಡೆದ ನಗರದ ಪ್ರೆಸಿಡೆಂಟ್‌ ಹೋಟೆಲ್‌ ಮುಂಭಾಗದಲ್ಲಿ ನಾಯಕರ ವಿರುದ್ಧ ಧಿಕ್ಕಾರ ಕೂಗಿ ದಾಂದಲೆ ನಡೆಸಿದರು. ವಿಜಯೇಂದ್ರಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಬೆಂಗಳೂರು–ನೀಲಗಿರಿ ರಸ್ತೆ ತಡೆ ಹಿಡಿದು ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕೇಂದ್ರ ಸಚಿವ ಅನಂತಕುಮಾರ್‌ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿದರು. ವಿಜಯೇಂದ್ರಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

5 ಕೋಟಿ ದಾಟಿದ ಮತದಾರರು: ಮತದಾರರ ಪಟ್ಟಿಗೆ ಹೆಸರು ಸೇರಿಸಲು ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ 12.28 ಲಕ್ಷ ಮತದಾರರ ಹೆಸರು ಸೇರ್ಪಡೆಯಾಗಿದೆ. ಇದರಿಂದ ಮತದಾರರ ಸಂಖ್ಯೆ 5,10,39,107 ಏರಿಕೆಯಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

ಎರಡು ಕಡೆ ಕಾಲಿಟ್ಟವರು

ಸಿದ್ದರಾಮಯ್ಯ: ಚಾಮುಂಡೇಶ್ವರಿ– ಬಾದಾಮಿ,

ಎಚ್‌.ಡಿ.ಕುಮಾರಸ್ವಾಮಿ: ರಾಮನಗರ –ಚನ್ನಪಟ್ಟಣ

ಬಿ.ಶ್ರೀರಾಮುಲು:ಮೊಳಕಾಲ್ಮುರು–ಬಾದಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT