ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿತದ ಮಟ್ಟು, ದಣಿವರಿಯದ ಪಟ್ಟು

Last Updated 25 ಏಪ್ರಿಲ್ 2018, 5:19 IST
ಅಕ್ಷರ ಗಾತ್ರ

ಸಂಗೀತವನ್ನು ಶಾಸ್ತ್ರೀಯವಾಗಿಯೋ, ಅದರ ಮೂಲಬೇರುಗಳಿಗೆ ನಿಷ್ಠರಾಗಿಯೋ ವಿಮರ್ಶೆ ಮಾಡುವವರಿಗೆ ಮೊದಲಿನಿಂದಲೂ ಸಿನಿಮಾ ಸಂಗೀತವೆಂದರೆ ತಕರಾರು. ಇದಕ್ಕೆ ಅವರವರದೇ ಕಾರಣಗಳಿವೆ.

ದೇವಿಶ್ರೀ ಪ್ರಸಾದ್ ಅರ್ಥಾತ್ ‘ಡಿಎಸ್‌ಪಿ’ ಕುರಿತೂ ಕೆಲವು ವರ್ಗಗಳ ಹಿಂದೆಯೇ ಇಂಥ ಟೀಕೆ–ಟಿಪ್ಪಣಿಗಳು ವ್ಯಕ್ತಗೊಂಡವು. ಅವರ ಸಂಗೀತದ ಏಕತಾನತೆಯನ್ನು ಪ್ರಶ್ನಿಸಿದವರೂ ಇದ್ದರು. ಆದರೆ, ಅದೇ ಹೊತ್ತಿಗೆ ಅನುಭವಿ ನಟ–ನಿರ್ದೇಶಕ–ನಿರ್ಮಾಪಕ ಕಮಲ್ ಹಾಸನ್ ಈ ಸ್ವರ ಸಂಯೋಜಕನ ಎದುರು ನಿಂತರು. ಟ್ಯೂನ್‌ಗಳನ್ನು ಕೇಳಿದರು. ‘ದಶಾವತಾರಂ’, ‘ಮನ್ಮದನ್ ಅಂಬು’ ತರಹದ ತಮಿಳು ಸಿನಿಮಾಗಳಿಗೆ ಡಿಎಸ್‌ಪಿ ಸಂಗೀತವೇ ಇರಬೇಕೆಂದು ಕಮಲ್‌ ಯೋಚಿಸಲು ಬಲವಾದ ಕಾರಣವಿದೆ. ಡಿಎಸ್‌ಪಿ ಶಾಲಾ ದಿನಗಳಲ್ಲಿಯೇ ಕುಣಿಯುವಂಥ ಹಾಡುಗಳನ್ನು ಕಟ್ಟುತ್ತಿದ್ದರು. ಇಷ್ಟವಾದ ಸಾಹಿತ್ಯ ಬರೆಯುತ್ತಿದ್ದರು. ನೃತ್ಯ ನಿರ್ದೇಶನವನ್ನೂ ಮಾಡುತ್ತಿದ್ದರು. ಹೀಗಾಗಿ ಸಿನಿಮಾ ಸಂಗೀತ ಅವರಿಗೆ ಸುಲಭವಾಗಿ ಒಲಿಯಿತು.

ಕೀಬೋರ್ಡ್ ನುಡಿಸುವುದನ್ನು ಕಲಿತ ಎಷ್ಟೋ ಯುವಕರಿಗೆ ಸಂಗೀತದ ವಿಷಯದಲ್ಲಿ ಅನೇಕ ಆರಾಧ್ಯ ದೈವಗಳಿರುವುದು ಸಹಜ. ಡಿಎಸ್‌ಪಿ ಅವರ ಆರಾಧ್ಯ ದೈವ ಮೈಕಲ್ ಜಾಕ್ಸನ್. ಹಾಡುಗಳಿರುವುದೇ ಕುಣಿಸಲು ಎನ್ನುವ ಮೈಕಲ್ ಜಾಯಮಾನವನ್ನೇ ಇವರೂ ಕಣ್ಣಿಗೊತ್ತಿಕೊಂಡರು. ಹಾಗೆಂದು ಮಾಧುರ್ಯವನ್ನು ಸಂಪೂರ್ಣ ನಿರಾಕರಿಸಲಿಲ್ಲ.

‘ಬೊಮ್ಮರಿಲು’ ತರಹದ ತೆಲುಗು ಸಿನಿಮಾಗೆ ಬೇಕಿದ್ದ ವೈವಿಧ್ಯಮಯ ಸ್ವರಗಳನ್ನು ಕೊಟ್ಟು ಜನಪ್ರಿಯರಾಗಿದ್ದ ಅವರು, ಆಮೇಲೆ ತಮಿಳಿನಲ್ಲಿ ಅವಕಾಶ ಬಂದಾಗಲೂ ಹೊರಳಿದರು. ಕನ್ನಡದಲ್ಲಿ ‘ಯಾರಿವನು ಕನ್ನಡದವನು...’ ಎಂದು ಪುನೀತ್ ರಾಜ್‌ಕುಮಾರ್ ಅಭಿನಯದ ಸಿನಿಮಾಗೆ ಹಾಡುವ ಬುಲಾವು ಬಂದಾಗಲೂ ಒಲ್ಲೆ ಎನ್ನಲಿಲ್ಲ. ಡಿಎಸ್‌ಪಿ ಶೋಮ್ಯಾನ್. ವೇದಿಕೆ ಮೇಲೆ ಅವರು ಹಾಡುತ್ತಲೇ ಕುಣಿಯುವುದನ್ನು ಕಂಡು ನಟ–ನೃತ್ಯ ನಿರ್ದೇಶಕ ಪ್ರಭುದೇವ ಶಹಬ್ಬಾಸ್‌ಗಿರಿ ಕೊಟ್ಟಿದ್ದರು. ಇಂಥ ಅತಿ ಉತ್ಸಾಹವನ್ನು ಕೆಲವರು ಟೀಕಿಸಿದಾಗ, ಡಿಎಸ್‌ಪಿ ಕೂಡ ಕುಗ್ಗಿಹೋಗಿದ್ದರು. ಒಂದು ಕಾಲಘಟ್ಟದಲ್ಲಿ ಅವರು ಯಾವ ಟ್ಯೂನ್ ಮಾಡಲು ಕುಳಿತರೂ ಎಲ್ಲಿಯೋ ಕೇಳಿದ ಹಾಗಿದೆಯಲ್ಲ ಎನಿಸುತ್ತಿತ್ತು.

‘ಕಾಪಿಕ್ಯಾಟ್’ ಎಂಬ ಬಯ್ಗುಳವನ್ನು ಸಹಿಸಿ ಕೊಳ್ಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಆಗ ಅವರು ತಮ್ಮಷ್ಟಕ್ಕೆ ತಾವೇ ಕೆಲವು ಮಟ್ಟುಗಳನ್ನು ಹಾಕಿಕೊಂಡರು.

‘ಸಂಗೀತ ಕ್ಷೋಭೆಗೆ ಸಂಗೀತವೇ ಮದ್ದು’ ಎಂದು ಅವರು ಆಗ ಹೇಳಿದ ಮಾತನ್ನು ಶಾಸ್ತ್ರೀಯ ಸಂಗೀತ ವೈಯಾಕರಣಿಗಳೂ ಒಪ್ಪಿಯಾರು. ಅಲ್ಲಿಂದಾಚೆಗೆ ಅವರು ನಿರಾಕರಣೆಯ ಮಂತ್ರವನ್ನೂ ಪಠಿಸಲಾರಂಭಿಸಿದರು. ಸಂಗೀತದ ವಿಷಯದಲ್ಲಿ ತುಸುವೂ ರಾಜಿಯಾಗದ ದೊಡ್ಡ ನಿರ್ದೇಶಕರಿಗೆ ಖುದ್ದು ಡಿಎಸ್‌ಪಿ ಬೆನ್ನು ಮಾಡಿದರು. ಕೈಯಲ್ಲಿ ಅರ್ಧ ಡಜನ್ ಚಿತ್ರಗಳಿದ್ದ ಹೊತ್ತಿನಲ್ಲಿ ಸಲ್ಮಾನ್ ಖಾನ್ ಫೋನ್ ಮಾಡಿ, ‘ಬಾಡಿಗಾರ್ಡ್’ ಸಿನಿಮಾ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿಕೊಡುವಂತೆ ಕೇಳಿದಾಗಲೂ ಒಪ್ಪಲಿಲ್ಲ.

‘ಏಕ್ ಥಾ ಟೈಗರ್’ ಸಿನಿಮಾ ಗೀತೆಗಳ ಸಂಯೋಜಿಸುವ ಅವಕಾಶಕ್ಕೂ ಬೆನ್ನುಮಾಡಬೇಕಾಗಿ ಬಂತು. ಈ ನಿರಾಕರಣೆಗಳಿಂದ ಸಲ್ಮಾನ್ ಬೇಸರ ಪಟ್ಟುಕೊಳ್ಳಲಿಲ್ಲ. ‘ರೆಡಿ’ ಚಿತ್ರದ ‘ಧಿಂಕ ಚಿಕ’ ಹಾಡಿನ ಜನಪ್ರಿಯತೆ ಎಂಥದೆನ್ನುವುದು ಸಲ್ಮಾನ್‌ಗೆ ಚೆನ್ನಾಗಿ ಗೊತ್ತಿದೆ. ಅದನ್ನು ಸಂಯೋಜಿಸಿದ್ದು ಇದೇ ಡಿಎಸ್‌ಪಿ. ನಿರ್ದೇಶಕರ ಮನಃಪರಿವರ್ತನೆ ಮಾಡುವುದರಲ್ಲೂ ಈ ಸಂಗೀತ ನಿರ್ದೇಶಕ ಪಳಗಿದವರು. ‘ಗಬ್ಬರ್ ಸಿಂಗ್’ ತೆಲುಗು ಸಿನಿಮಾದಲ್ಲಿ ನಾಯಕ ಪವನ್ ಕಲ್ಯಾಣ್ ಅವರನ್ನು ಪರಿಚಯಿಸುವಂಥ ಹಾಡು ವೇಗವಾಗಿಯೇ ಇರಬೇಕು ಎಂದು ನಿರ್ದೇಶಕರು ಬಯಸಿದ್ದರು.

‘ಇಲ್ಲ, ನಿಧಾನಗತಿಯ ಹಾಡೇ ಚೆಂದ’ ಎಂದು ಟ್ಯೂನ್ ಕೇಳಿಸಿ, ಒಪ್ಪಿಸಿದ್ದರು ಡಿಎಸ್‌ಪಿ. ಕೀಬೋರ್ಡ್ ಇಟ್ಟ ಸ್ಥಳದ ಸುತ್ತ ಖಾಲಿ ಜಾಗ ಇರುವಂತೆ ಈ ಸಂಗೀತ ನಿರ್ದೇಶಕ ನೋಡಿಕೊಳ್ಳುತ್ತಾರೆ. ಸಂತೋಷ, ನೋವು ಏನೇ ಆದರೂ ನುಡಿಸುತ್ತಾ ಕುಣಿದು ಮನಸ್ಸನ್ನು ಹಗುರಾಗಿಸಿಕೊಳ್ಳುವ ಅವರ ಸಂಕಲ್ಪ ಮೆಚ್ಚುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT