ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ನಗರಿಯಲ್ಲಿ ಹೆಚ್ಚಿದ ಬ್ಯಾಡ್ಮಿಂಟನ್ ಕನಸು...

Last Updated 25 ಏಪ್ರಿಲ್ 2018, 5:54 IST
ಅಕ್ಷರ ಗಾತ್ರ

ನಾನು ಪದಕ ಗೆದ್ದ ಸಾಧನೆ ಹೊಸ ಪ್ರತಿಭೆಗಳಿಗೆ ಸ್ಫೂರ್ತಿಯಾದರೆ ನನ್ನ ಶ್ರಮ ಸಾರ್ಥಕವೆನಿಸುತ್ತದೆ’ 2012ರ ಲಂಡನ್‌ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌ ಕಂಚಿನ ಪದಕ ಗೆದ್ದು ಭಾರತಕ್ಕೆ ಬಂದಾಗ ಹೀಗೆ ಹೇಳಿದ ಒಂದು ಮಾತು ಸಾವಿರಾರು ಯವಪ್ರತಿಭೆ ಗಳಿಗೆ ಪ್ರೇರಣೆ ತುಂಬಿದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಪಿ.ವಿ. ಸಿಂಧು ಬೆಳ್ಳಿ ಪದಕ ಗೆದ್ದ ಬಳಿಕವಂತೂ ಬ್ಯಾಡ್ಮಿಂಟನ್‌ನಲ್ಲಿಯೇ ಸಾಧನೆ ಮಾಡಬೇಕೆನ್ನುವ ಕನಸು ಅನೇಕರಲ್ಲಿ ಗಟ್ಟಿಯಾಗಿದೆ.

ಜಿ.ಚೈತ್ರಾ

ಪ್ರತಿಷ್ಠಿತ ಒಲಿಂಪಿಕ್ಸ್‌ ವಿಜಯ ವೇದಿಕೆಯಲ್ಲಿ ಭಾರತದ ಘನತೆ ಎತ್ತಿ ಹಿಡಿದ ಸೈನಾ ಮತ್ತು ಸಿಂಧು ಅವರಂತೆ ನಮ್ಮ ಮಕ್ಕಳು ಕೂಡ ಆಗಬೇಕು ಎಂಬುದು ಎಲ್ಲ ಪೋಷಕರ ಕನಸು. ಇದರಿಂದ ಭಾರತದಲ್ಲಿ 2012ರ ಬಳಿಕ ಬ್ಯಾಡ್ಮಿಂಟನ್‌ ಕ್ರಾಂತಿ ಶುರುವಾಗಿದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶಗಳು, ರಾಜಧಾನಿ ಹೊರಗಿನ ಕೇಂದ್ರಗಳಲ್ಲಿ ಈ ಆಟದತ್ತ ಒಲವು ಹೆಚ್ಚಿದೆ. ಬೇಸಿಗೆ ಶುರುವಾದರಂತೂ ಬ್ಯಾಡ್ಮಿಂಟನ್ ಅಕಾಡೆಮಿಗಳು ಭರ್ತಿಯಾಗುತ್ತಿವೆ.

ಗ್ಲೋರಿಯಾ ಅಟವಳೆ

ಹುಬ್ಬಳ್ಳಿಯಲ್ಲಿಯೂ ಬ್ಯಾಡ್ಮಿಂಟನ್‌ ಕ್ರೇಜ್‌ ಹೆಚ್ಚಿದೆ. ತಮ್ಮ ಮಕ್ಕಳು ದೇಶ ಪ್ರತಿನಿಧಿಸುವಂತಾಗಬೇಕು ಎನ್ನುವ ಆಸೆಯಿಂದ ಪೋಷಕರು ವೃತ್ತಿಪರ ತರಬೇತಿಗೆ ಕಳುಹಿಸುತ್ತಿದ್ದಾರೆ. ಉಣಕಲ್‌ ಕ್ರಾಸ್‌ನ ಸಾಯಿನಗರದಲ್ಲಿರುವ ನಾರಾಯಣ ಪೇಟ್ಕರ್‌ ಮಂಜುನಾಥ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ಪ್ರತಿಭಾವಂತ ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ.

ಈ ಕ್ಲಬ್‌ನಲ್ಲಿ ತರಬೇತಿ ಪಡೆದವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಆಡಿದ್ದಾರೆ. ಅಣ್ಣಿಗೇರಿ, ಇಳಕಲ್‌, ಬಾಗಲಕೋಟೆ, ವಿಜಯಪುರದಿಂದ ಬಂದು ಇಲ್ಲಿ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ. 2017ರ ಆಗಸ್ಟ್‌ನಲ್ಲಿ ಅಕಾಡೆಮಿ ಆರಂಭವಾಯಿತು. ಹುಬ್ಬಳ್ಳಿಯ ಮಂಜುನಾಥ ಪೇಟ್ಕರ್‌ ಮುಖ್ಯ ಕೋಚ್‌ ಆಗಿದ್ದು, ಹೊಸ ಪ್ರತಿಭೆಗಳನ್ನು ರೂಪಿಸುವ ಕೆಲಸ ಮಾಡುತ್ತಿದ್ದಾರೆ.

ಮಂಜುನಾಥ 2004ರಿಂದಲೇ ಬ್ಯಾಡ್ಮಿಂಟನ್ ತರಬೇತಿ ನೀಡುತ್ತಿದ್ದಾರೆ. ಮೊದಲು ರೋಟರಿ ಇಂಗ್ಲಿಷ್‌ ಮಾಧ್ಯಮ ಹೈಸ್ಕೂಲು, ನಂತರ ಲಯನ್ಸ್‌ ಶಾಲೆಯ ಜೊತೆ ಒಪ್ಪಂದ ಮಾಡಿಕೊಂಡು ತರಬೇತಿ ಕೊಟ್ಟಿದ್ದರು. 2017ರ ಆಗಸ್ಟ್‌ನಲ್ಲಿ ಹೊಸ ಅಕಾಡೆಮಿ ಆರಂಭಿಸಿದ್ದಾರೆ. 14 ವರ್ಷಗಳ ಅವಧಿಯಲ್ಲಿ ಇವರ ಬಳಿ ತರಬೇತಿ ಪಡೆದ 50ರಿಂದ 60 ಆಟಗಾರರು ರಾಜ್ಯಮಟ್ಟದ ಟೂರ್ನಿಗಳಲ್ಲಿ ಆಡಿದ್ದಾರೆ. ಹಲವರು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿಯೂ ಪಾಲ್ಗೊಂಡಿದ್ದಾರೆ.

ರೋಹಿತ್‌ ವಿ.ಪೂಜಾರ್‌

ಇದೇ ಅಕಾಡೆಮಿಯಲ್ಲಿ ಪಳಗಿದ ಯುವ ಪ್ರತಿಭೆ ದೀಪ್ತಿ ಅಣ್ಣಿಗೇರಿ ರಾಷ್ಟ್ರೀಯ ಮಟ್ಟದ ಟೂರ್ನಿಯ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದ್ದರು. ಚನ್ನಬಸವ ಜ್ಯೋತಿ 13 ವರ್ಷದ ಒಳಗಿನವರ ವಿಭಾಗಗಳಲ್ಲಿ ಪಾಲ್ಗೊಂಡಿದ್ದರು. 16 ವರ್ಷದ ಒಳಗಿನವರ ವಿಭಾಗದಲ್ಲಿ ರಾಜ್ಯ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದರು.

ರೋಹಿತ್‌ ಹರಕುಣಿ ರಾಜ್ಯ ಮಟ್ಟದ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ತಂಡದ ಆಟಗಾರ್ತಿ ಗ್ಲೋರಿಯಾ ಅಠಾವಲೆ ಕೂಡ ಇದೇ ಅಕಾಡೆಮಿಯಲ್ಲಿ ತರಬೇತಿ ಪಡೆದವರು. 13 ವರ್ಷದ ಒಳಗಿನವರ ವಿಭಾಗದಲ್ಲಿ ರಾಜ್ಯ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿಯೂ ಆಡಿದ್ದಾರೆ. 19 ವರ್ಷದ ಒಳಗಿನವರ ವಿಭಾಗದಲ್ಲಿ ತೃಪ್ತಿ ಶೆಣೈ ರಾಜ್ಯಮಟ್ಟದ ಟೂರ್ನಿ, ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರು. ಅವರಂತೆ ರೋಹಿತ್‌ ಹರಕುಣಿ, ಅಖಿಲ್‌, ಸೂರಜ್‌ ಹೀಗೆ ಅನೇಕ ಆಟಗಾರರು ಇದೇ ಕ್ಲಬ್‌ನಿಂದ ಅರಳುತ್ತಿರುವ ಪ್ರತಿಭೆಗಳು.

ಪ್ರತಿ ವಾರ ಪಂದ್ಯ

ವಾರಪೂರ್ತಿ ಪಡೆದ ತರಬೇತಿಯನ್ನು ಪರೀಕ್ಷಿಸುವ ಸಲುವಾಗಿ ಅಕಾಡೆಮಿಯವರು ಪ್ರತಿ ಶನಿವಾರ ಸಿಂಗಲ್ಸ್‌ ಮತ್ತು ಡಬಲ್ಸ್ ವಿಭಾಗದ ಪಂದ್ಯಗಳನ್ನು ಆಯೋಜಿಸುತ್ತಾರೆ. ಕ್ಲಬ್‌ ಆಟಗಾರರ ನಡುವೆ ಪಂದ್ಯಗಳು ನಡೆಯುತ್ತವೆ. ಇದರಿಂದ ಆಟಗಾರರು ಮಾಡುವ ತಪ್ಪುಗಳು ಏನು ಎಂಬುದು ಗೊತ್ತಾಗುತ್ತದೆ. ಗುಣಮಟ್ಟ ಕೂಡ ಸುಧಾರಿಸುತ್ತದೆ ಎಂದು ಮುಖ್ಯ ಕೋಚ್‌ ಮಂಜುನಾಥ್‌ ಹೇಳುತ್ತಾರೆ.

‘ಕನಸು ತುಂಬಿದ ಸಾಧಕರು’

ಸೈನಾ ಮತ್ತು ಸಿಂಧು ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕ ಬ್ಯಾಡ್ಮಿಂಟನ್‌ ಆಡುವವರ ಸಂಖ್ಯೆ ಹೆಚ್ಚಾಗಿದೆ. ಅಕಾಡೆಮಿಗಳಲ್ಲಿ ವೃತ್ತಿಪರ ತರಬೇತಿ ಪಡೆಯಲು ಹೆಚ್ಚು ಜನ ಬರುತ್ತಿದ್ದಾರೆ. ಪಿ.ವಿ. ಶ್ರೀಕಾಂತ್‌ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಸಾಧನೆ ಮಾಡಿದ ಮೇಲೂ ಸಾಕಷ್ಟು ಜನ ಈ ಕ್ರೀಡೆಯತ್ತ ಒಲವು ತೋರಿದ್ದಾರೆ. ನಿತ್ಯ 80 ಜನ ನಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವೃತ್ತಿಪರ ಅನುಭವ ಲಭಿಸಲು ಅಕಾಡೆಮಿಯಲ್ಲಿ ಮೂರು ಸಿಂಥೆಟಿಕ್‌ ಮ್ಯಾಟ್‌ ಹಾಕಿ ತರಬೇತಿ ನೀಡಲಾಗುತ್ತಿದೆ.

ಮಂಜುನಾಥ, ಮುಖ್ಯ ಕೋಚ್‌

ಚಿತ್ರ: ಈರಪ್ಪ ನಾಯ್ಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT