ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ: ತೇಜಸ್ವಿ

ಬಿಜೆಪಿ ಬೃಹತ್‌ ಕಾರ್ಯಕರ್ತರ ಸಭೆ: ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ನಾಮಪತ್ರ ಸಲ್ಲಿಕೆ
Last Updated 25 ಏಪ್ರಿಲ್ 2018, 6:41 IST
ಅಕ್ಷರ ಗಾತ್ರ

ಜಮಖಂಡಿ: ‘ಜಾತಿಯ ವಿಷ ಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಹಾಗೂ ಜಾತಿಯ ಆಧಾರದ ಮೇಲೆ ಸಮಾಜ ಒಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಅನಿಷ್ಟ ಸರ್ಕಾರದ ವಿರುದ್ಧ ರಾಜ್ಯದ ಜನತೆ ರೋಸಿ ಹೋಗಿದ್ದಾರೆ’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.

ಜಮಖಂಡಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಅವರ ನಾಮಪತ್ರ ಸಲ್ಲಿಕೆ ನಿಮಿತ್ತ ಮಂಗಳವಾರ ಇಲ್ಲಿನ ಬಸವ ಭವನ ಆವರಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ವಂದೇ ಮಾತರಂ ಗೀತೆ ಹೇಳುವ, ಭಾರತ ಮಾತಾಕಿ ಜೈ ಎನ್ನುವ 24 ಮಂದಿ ಯುವಕರ ಸಾವು, 3,800ಕ್ಕೂ ಹೆಚ್ಚು ಆತ್ಮಹತ್ಯೆ ಮಾಡಿಕೊಂಡ ಸ್ವಾಭಿಮಾನಿ ರೈತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಂಹಕಾರದ ಮಾತುಗಳು ಹಾಗೂ ದುರಂಹಕಾರದ ನಗೆ ಮತದಾನ ಮಾಡಲು ಮತಯಂತ್ರದ ಮುಂದೆ 2018ರ ಮೇ 12ರಂದು ನಿಂತಾಗ ನೆನಪಿಗೆ ಬರಲಿ’ ಎಂದು ಮನವಿ ಮಾಡಿದರು.

‘ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಾಗ ರಾಜ್ಯ ಕಾಂಗ್ರೆಸ್‌ ಶೇ 10ರ ಸರ್ಕಾರ ಎಂದಿದ್ದಕ್ಕೆ ಮುಖ್ಯಮಂತ್ರಿ ಪ್ರಧಾನಿ ಅವರಿಂದ ದಾಖಲೆ ಬೇಡಿದ್ದರು. ₹ 831 ಕೋಟಿ ಆಸ್ತಿ ವಿವರಗಳುಳ್ಳ ದಾಖಲೆಗಳನ್ನು ಈಗ ಸ್ವತಃ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಐದು ವರ್ಷದಲ್ಲಿ ₹ 831 ಕೋಟಿ ಆದಾಯ ಬರುವ ವ್ಯವಹಾರ ಯಾವುದಿದೆ? ಎಂದು ಇಂಧನ ಸಚಿವರನ್ನು ಕೇಳಬೇಕಾಗಿದೆ’ ಎಂದು ಲೇವಡಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಶಾಸಕ ಸಿದ್ದು ನ್ಯಾಮಗೌಡ ಅವರಿಗೆ ತಮ್ಮ ಸಕ್ಕರೆ ಕಾರ್ಖಾನೆಯಲ್ಲಿ ಕುಳಿತು ಕಬ್ಬಿನ ಕಾಟಾ ಬಡಿಯುವುದನ್ನು ಬಿಟ್ಟು ಮತ್ತೇನೂ ಗೊತ್ತಿಲ್ಲ. ಆದ್ದರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಕ್ಕರೆ ಕಾರ್ಖಾನೆಗಳಲ್ಲಿ ಸರ್ಕಾರದ ವತಿಯಿಂದ ತೂಕದ ಸೇತುವೆ ಸ್ಥಾಪಿಸುವುದಾಗಿ ಭರವಸೆ ನೀಡಿದರು.

ಶಾಸಕರಿಗೆ ತಮ್ಮ ಸಕ್ಕರೆ ಕಾರ್ಖಾನೆ, ಮನೆ ಹಾಗೂ ಶಾಲೆಗಳಿಗೆ ಹೋಗುವ ರಸ್ತೆಗಳನ್ನು ಬಿಟ್ಟರೆ ಕ್ಷೇತ್ರದ ಉಳಿದ ರಸ್ತೆಗಳು ಕಾಣುವುದಿಲ್ಲ. ಅವಸರದಲ್ಲಿ ಮಿನಿ ವಿಧಾನಸೌಧ, ಬಸ್‌ ನಿಲ್ದಾಣ ನಿರ್ಮಿಸಿ ಕಳಪೆ ಗುಣಮಟ್ಟದ ಕಾಮಗಾರಿ ಮಾಡಲಾಗಿದೆ. ಸರ್ಕಾರದ ದುಡ್ಡು ಸರಿಯಾಗಿ ಬಳಸಿಕೊಳ್ಳದ ಬೇಜವಾಬ್ದಾರಿ ಕಾಂಗ್ರೆಸ್‌ ಸರ್ಕಾರ ಹಾಗೂ ಶಾಸಕರು ಎಂದು ಟೀಕಿಸಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಾಗವ್ವ ಕುರಣಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರೇಣುಕಾ ಮಲಘಾಣ, ಬಸವರಾಜ ಬಿರಾದಾರ, ಶಿವಾನಂದ ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ರಾಕೇಶ ಲಾಡ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಈಶ್ವರ ಆದೆಪ್ಪನವರ, ಏಗಪ್ಪ ಸವದಿ, ಎಂ.ಬಿ. ನ್ಯಾಮಗೌಡ, ಸುರೇಶಗೌಡ ಪಾಟೀಲ, ಸಿ.ಟಿ. ಉಪಾಧ್ಯೆ ವೇದಿಕೆಯಲ್ಲಿದ್ದರು. ಮಲ್ಲು ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT