ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊತ್ತೂರು ಕೋಲಾರಕ್ಕೆ: ಮುಳಬಾಗಿಲಿಗೆ ಮುನಿಯಪ್ಪ ಪುತ್ರಿ

‘ಮೂಡಣ’ ಬಾಗಿಲು ಕ್ಷೇತ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ; ತೀವ್ರ ಕುತೂಹಲ ಮೂಡಿಸಿದ ಅಭ್ಯರ್ಥಿಗಳ ನಡೆ
Last Updated 25 ಏಪ್ರಿಲ್ 2018, 6:45 IST
ಅಕ್ಷರ ಗಾತ್ರ

ಕೋಲಾರ: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಅವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಮತ್ತೊಂದೆಡೆ ಸಂಸದ ಕೆ.ಎಚ್‌.ಮುನಿಯಪ್ಪ ಅವರ ಎರಡನೇ ಪುತ್ರಿ ನಂದಿನಿ ಅವರು ಮುಳಬಾಗಿಲು ಮೀಸಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಸೈಯದ್‌ ಜಮೀರ್‌ ಪಾಷಾ ಅವರು ಏ.20ರಂದು ಬಿ ಫಾರಂ ಜತೆ ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭಿಸಿದ್ದರು.

ಮಂಜುನಾಥ್‌ ಸಹ ಪಕ್ಷದ ಬಿ ಫಾರಂ ಜತೆ ಏ.23ರಂದು ಮುಳಬಾಗಿಲು ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿ ಪ್ರಚಾರ ನಡೆಸಿದ್ದರು. ಆದರೂ ಅವರು ಕೋಲಾರ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು ರಾಜಕೀಯ ವಲಯದಲ್ಲಿ ಅಚ್ಚರಿಮೂಡಿಸಿದ್ದಾರೆ.

ಮಂಜುನಾಥ್‌ರ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಬುಧವಾರ (ಏ.25) ಅಂತಿಮ ತೀರ್ಪು ಬರುವ ಸಾಧ್ಯತೆ ಇದೆ. ನ್ಯಾಯಾಲಯದಲ್ಲಿ ವ್ಯತಿರಿಕ್ತ ತೀರ್ಪು ಬಂದರೆ ಮುಳಬಾಗಿಲು ಕ್ಷೇತ್ರದಲ್ಲಿ ನಾಮಪತ್ರ ತಿರಸ್ಕೃತವಾಗಬಹುದೆಂಬ ಕಾರಣಕ್ಕೆ ಮಂಜುನಾಥ್‌ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪ್ರಕರಣವೇನು?: ಮಂಜುನಾಥ್‌ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ ಬುಡ್ಗ ಜಂಗಮ ಜಾತಿಗೆ ಸೇರಿದವರೆಂದು 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ, ಅವರು ಹಿಂದುಳಿದ ವರ್ಗಗಳ ಬೈರಾಗಿ ಜಾತಿಯವರು. ಈ ಬಗ್ಗೆ ವಿಚಾರಣೆ ನಡೆಸಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟರಾಮ್‌ ಮತ್ತು ಪಂಡಿತ್‌ ಮುನಿವೆಂಕಟಪ್ಪ ಎಂಬುವರು ಹೈಕೋರ್ಟ್‌ನಲ್ಲಿ ಧಾವೆ ಹೂಡಿದ್ದರು. ಈ ಬಗ್ಗೆ ಐದು ವರ್ಷಗಳಿಂದ ವಿಚಾರಣೆ ನಡೆದಿದ್ದು, ನ್ಯಾಯಾಲಯ ಅಂತಿಮ ತೀರ್ಪು ಕಾಯ್ದಿರಿಸಿದೆ.

ದಿಢೀರ್‌ ಸಭೆ: ನ್ಯಾಯಾಲಯದಲ್ಲಿ ವ್ಯತಿರಿಕ್ತ ತೀರ್ಪು ಬಂದರೆ ನಾಮಪತ್ರ ತಿರಸ್ಕೃತವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪುತ್ತದೆ ಎಂದು ಅರಿತ ಮಂಜುನಾಥ್‌ ಬೆಂಗಳೂರಿನಲ್ಲಿ ಸೋಮವಾರ (ಏ.23) ರಾತ್ರಿ ಸಂಸದ ಮುನಿಯಪ್ಪ ಹಾಗೂ ಪಕ್ಷದ ಮುಖಂಡರ ಜತೆ ದಿಢೀರ್‌ ಸಭೆ ನಡೆಸಿ ಕೋಲಾರ ಕ್ಷೇತ್ರದಲ್ಲಿ ಕಣಕ್ಕಿಳಿಯುವ ನಿರ್ಧಾರ ಕೈಗೊಂಡರು ಎಂದು ಗೊತ್ತಾಗಿದೆ.

ಮುಳಬಾಗಿಲು ಕ್ಷೇತ್ರದಲ್ಲಿ ಮುನಿಯಪ್ಪರ ಮಗಳನ್ನು ಕಣಕ್ಕಿಳಿಸಿ ಮಂಜುನಾಥ್‌ರ ಬೆಂಬಲದೊಂದಿಗೆ ಚುನಾವಣೆ ಎದುರಿಸಬೇಕು. ಇದಕ್ಕೆ ಪ್ರತಿಯಾಗಿ ಕೋಲಾರ ಕ್ಷೇತ್ರದಲ್ಲಿ ಮುನಿಯಪ್ಪ ಅವರು ಮಂಜುನಾಥ್‌ರನ್ನು ಬೆಂಬಲಿಸಬೇಕು ಎಂದು ಸಭೆಯಲ್ಲಿ ನಿರ್ಣಯವಾಗಿದೆ ಎಂದು ಗೊತ್ತಾಗಿದೆ.

ಮುಖಂಡರ ತಂತ್ರಗಾರಿಕೆ: ನ್ಯಾಯಾಲಯದ ತೀರ್ಪು ಆಧರಿಸಿ ಉಭಯ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಬೇಕೆಂದು ನಿರ್ಧರಿಸಬೇಕು. ಮುಳಬಾಗಿಲು ಕ್ಷೇತ್ರದಲ್ಲಿ ಮಂಜುನಾಥ್‌ರ ನಾಮಪತ್ರ ತಿರಸ್ಕೃತವಾದರೆ ಕೋಲಾರದಲ್ಲಿ ಪಕ್ಷದ ಅಭ್ಯರ್ಥಿ ಜಮೀರ್‌ ಪಾಷಾ ಉಮೇದುವಾರಿಕೆ ಹಿಂಪಡೆಯಬೇಕು. ಮಂಜುನಾಥ್‌ ನಾಮಕಾವಸ್ಥೆಗೆ ಪಕ್ಷೇತರ ಅಭ್ಯರ್ಥಿಯಾದರೂ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿ ಎಂದೇ ಬಿಂಬಿಸಬೇಕು. ಆ ಮೂಲಕ ಪಕ್ಷದ ಮತಗಳು ಚದುರದಂತೆ ನೋಡಿಕೊಳ್ಳಬೇಕು ಎಂದು ಮುಖಂಡರು ತಂತ್ರಗಾರಿಕೆ ರೂಪಿಸಿದ್ದಾರೆ.

ಮಂಜುನಾಥ್‌ ಮುಳಬಾಗಿಲು ಕ್ಷೇತ್ರದ ಶಾಸಕರಾಗಿದ್ದರೂ ಕೋಲಾರ ಕ್ಷೇತ್ರದ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಮೊದಲಿನಿಂದಲೂ ಚಿಂತಾಕ್ರಾಂತರಾಗಿದ್ದ ಅವರು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧತೆ ಸಹ ಮಾಡಿಕೊಂಡಿದ್ದರು.

**
ನನ್ನ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನಲ್ಲಿ ಬುಧವಾರ (ಏ.25) ಅಂತಿಮ ತೀರ್ಪು ಬರಲಿದೆ. ತೀರ್ಪು ನನ್ನ ಪರ ವಾಗಿ ಇರುತ್ತದೆ ಎಂಬ ನಂಬಿಕೆ ಇದೆ
– ಕೊತ್ತೂರು ಜಿ.ಮಂಜುನಾಥ್‌, ಮುಳಬಾಗಿಲು ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT