ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಣ್ಣ ಮಗನಿಗೆ ಜೆಡಿಎಸ್‌ ಟಿಕೆಟ್‌!

ಬಳ್ಳಾರಿ ಗ್ರಾಮೀಣದಲ್ಲಿ ಸ್ಪರ್ಧೆ ಬಿಟ್ಟುಕೊಟ್ಟ ಪಕ್ಷ; ಕಂಪ್ಲಿಯಿಂದ ನಾರಾಯಣಪ್ಪ ಬದಲಿಗೆ ಕೆ.ರಾಘವೇಂದ್ರ ಕಣಕ್ಕೆ
Last Updated 25 ಏಪ್ರಿಲ್ 2018, 7:20 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಮೀನಳ್ಳಿ ತಾಯಣ್ಣ ಅವರಿಗೆ ಟಿಕೆಟ್‌ ಘೋಷಿಸಿದ್ದ ಜೆಡಿಎಸ್‌, ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಮಂಗಳವಾರ, ಅವರ ಮಗ ಡಿ.ರಮೇಶ್‌ ಅವರನ್ನು ಕಣಕ್ಕೆ ಇಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಆ ಮೂಲಕ, ಕಾಂಗ್ರೆಸ್‌ನ ಬಿ.ನಾಗೇಂದ್ರ ಮತ್ತು ಬಿಜೆಪಿಯ ಎಸ್‌.ಪಕ್ಕಿರಪ್ಪ ಎದುರು ತೀವ್ರ ಪೈಪೋಟಿ ನೀಡುವ ಅವಕಾಶವನ್ನು ಬಿಟ್ಟುಕೊಟ್ಟಿದೆ.

ಮೂರು ದಶಕದಿಂದ ಪಕ್ಷವನ್ನು ಸಂಘಟಿಸಿದ್ದ ತಾಯಣ್ಣ 2013ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಯ ಬಿ.ಶ್ರೀರಾಮುಲು ಮತ್ತು ಕಾಂಗ್ರೆಸ್‌ನ ಅಸುಂಡಿ ವನ್ನೂರಪ್ಪ ಅವರಿಗೆ ತೀವ್ರ ಪೈಪೋಟಿ ನೀಡಿದ್ದ ತಾಯಣ್ಣ, 3,958 ಮತ ಗಳಿಸಿ ಮೂರನೇ ಸ್ಥಾನದಲ್ಲಿ ಉಳಿದಿದ್ದರು.

ಸೋತ ಬಳಿಕ ಸುಮ್ಮನಾಗದೆ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷವನ್ನು ಸಂಘಟಿಸಿದ್ದರು. 2018ರ ಚುನಾವಣೆ ಮೇಲೂ ಅವರ ಕಣ್ಣಿತ್ತು. ಆದರೆ ಈಗಿನ ಸನ್ನಿವೇಶ ಸಂಪೂರ್ಣ ಬದಲಾಗಿದೆ. ತಾವು ಸ್ಪರ್ಧಿಸುವ ಬದಲು ತಮ್ಮ ಮಗನನ್ನು ಅವರು ಕಣಕ್ಕೆ ಇಳಿಸಿದ್ದಾರೆ. ತಂದೆ–ಮಗನ ಜೋಡಿ ಚುನಾವಣೆಯಲ್ಲಿ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಅವಕಾಶ ಕಡಿಮೆ: ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಅಸ್ತಿತ್ವದಲ್ಲಿ ಇದ್ದ ಕುರುಗೋಡು ಕ್ಷೇತ್ರದಲ್ಲಿ 1985ರಲ್ಲಿ ಜನತಾ ಪಕ್ಷದಿಂದ ಬಿ.ಶಿವರಾಮರೆಡ್ಡಿ ಗೆದ್ದಿದ್ದರು. 2004ರಲ್ಲಿ ಜೆಡಿಎಸ್‌ನಿಂದ ಎನ್.ಸೂರ್ಯನಾರಾಯಣರೆಡ್ಡಿ ಗೆದ್ದಿದ್ದರು. ಬಳ್ಳಾರಿ ಕ್ಷೇತ್ರದಲ್ಲಿ 1883ನಲ್ಲಿ ಮುಂಡ್ಲೂರು ರಾಮಪ್ಪ ಜನತಾಪಕ್ಷದಿಂದ ಗೆದ್ದಿದ್ದರು. ಈ ನಿದರ್ಶನಗಳನ್ನು ಹೊರತುಪಡಿಸಿದರೆ ಜನತಾ ಪರಿವಾರಕ್ಕೆ ಚುನಾವಣೆಗಳಲ್ಲಿ ಗೆಲುವು ದೊರೆತಿಲ್ಲ.

ಕಾಂಗ್ರೆಸ್‌ನ ಭದ್ರ ಕೋಟೆಯಾಗಿರುವ ಬಳ್ಳಾರಿಯಲ್ಲಿ ತಳ ಊರಲು ಇದ್ದ ಅವಕಾಶವು ಈ ಬಾರಿಯ ಚುನಾವಣೆಯಲ್ಲೂ ಕ್ಷೀಣಿಸಿದೆ.

ಸೂಕ್ಷ್ಮ ಕ್ಷೇತ್ರ: ‘ಅತಿ ಹೆಚ್ಚು ಹಣ ಖರ್ಚಾಗಲಿರುವ ಕ್ಷೇತ್ರಗಳು’ ಎಂದು ಚುನಾವಣಾ ಆಯೋಗವು ಗುರುತಿಸಿರುವ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಗ್ರಾಮೀಣ ಕ್ಷೇತ್ರವೂ ಒಂದು.

‘ಜನ ಬಲಕ್ಕಿಂತಲ್ಲೂ ಹಣ ಬಲವೇ ಮುಖ್ಯವಾಗಿದೆ’ ಎಂಬ ಕಾರಣಕ್ಕೆ ಅಭ್ಯರ್ಥಿಯೇ ಹಿಂಜರಿದು, ತಮ್ಮ ಮಗನನ್ನು ಕಣಕ್ಕೆ ಇಳಿಸಿರುವುದು ಜೆಡಿಎಸ್‌ ಪಕ್ಷಕ್ಕಷ್ಟೇ ಅಲ್ಲದೆ, ಚುನಾವಣಾ ಇತಿಹಾಸದಲ್ಲೂ ದಾಖಲೆ ನಿರ್ಮಿಸಿದೆ.

ಶ್ರೀಮಂತ ಅಭ್ಯರ್ಥಿ ಸಿಗಲಿಲ್ಲ: ಶಿವಪ್ಪ

ಬಳ್ಳಾರಿ: ‘ಕ್ಷೇತ್ರಕ್ಕೆ ಕಾಂಗ್ರೆಸ್‌ನ ಬಿ.ನಾಗೇಂದ್ರ ಪ್ರವೇಶಿಸಿದ ಬಳಿಕ ಸ್ಪರ್ಧಿಸಲು ತಾಯಣ್ಣ ಹಿಂಜರಿದಿದ್ದರು. ನಾಗೇಂದ್ರ ಅವರಿಗೆ ಹಣ ಬಲದಲ್ಲಿ ಸಮರ್ಥರಾದವರೊಬ್ಬರನ್ನು ಕಣಕ್ಕೆ ಇಳಿಸಲು ಜೆಡಿಎಸ್‌ ರಾಜ್ಯ ಘಟದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಬೇರೆ ಪಕ್ಷದ ಕೆಲವರೊಂದಿಗೆ ನಡೆಸಿದ್ದ ಮಾತುಕತೆಯೂ ವಿಫಲವಾಯಿತು. ತಾಯಣ್ಣ ತಮ್ಮ ಮಗನನ್ನೇ . ಅದು ಅವರ ದೊಡ್ಡಸ್ತಿಕೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ ‘ಪ್ರಜಾವಾಣಿ’ಗೆ ಮಂಗಳವಾರ ತಿಳಿಸಿದರು.

ಅಭ್ಯರ್ಥಿಗಳ ಕೊರತೆ

ಬಳ್ಳಾರಿ: ಜೆಡಿಎಸ್‌ ಬಳ್ಳಾರಿ ಗ್ರಾಮೀಣದಲ್ಲಷ್ಟೇ ಅಲ್ಲದೆ ಇತರೆ ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಗಳ ಕೊರತೆಯನ್ನು ಎದುರಿಸಿದೆ. ಸಿರುಗುಪ್ಪದಲ್ಲಿ ಪಕ್ಷ ಟಿಕೆಟ್‌ ಘೋಷಿಸಿದ್ದ ಜಿ.ಕೆ.ಹನುಮಂತಪ್ಪ ಬದಲಿಗೆ ಮಾರುತಿ ಎಂಬುವವರು ಸ್ಪರ್ಧಿಸಿದ್ದಾರೆ. ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದವರು. ಕಂಪ್ಲಿಯಲ್ಲಿ ಟಿಕೆಟ್‌ ಘೋಷಣೆಯಾಗಿದ್ದ ಬಿ.ನಾರಾಯಣಪ್ಪ ಬದಲಿಗೆ ಕೆ.ರಾಘವೇಂದ್ರ ಸ್ಪರ್ಧಿಸಿದ್ದಾರೆ. ಹಗರಿಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್‌ ತೊರೆದ ಎಸ್‌.ಕೃಷ್ಣಾನಾಯ್ಕ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ.

**
ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷವು ತನ್ನ ಎದುರಾಳಿ ಪಕ್ಷಗಳೊಂದಿಗೆ ಪ್ರಬಲ ಪೈಪೋಟಿ<br/>ನಡೆಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ ಕೆ.ಶಿವಪ್ಪ,
– ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

**
ಕ್ಷೇತ್ರದಲ್ಲಿ ನಾನು ಸಾಕಷ್ಟು ಕೆಲಸ ಮಾಡಿರುವೆ. ಜನರ ಸೇವೆ ಮಾಡಲಿ ಎಂದು ನನ್ನ ಮಗನಿಗೆ ಅವಕಾಶ ನೀಡಿರುವೆ 
– ಮೀನಳ್ಳಿ ತಾಯಣ್ಣ, ಅಭ್ಯರ್ಥಿ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT