ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ವಿಧಾನಸೌಧ ಸಮಸ್ಯೆಗಳ ಆಗರ

ಗುಂಡ್ಲುಪೇಟೆ: ಕುಡಿಯಲು ನೀರಿಲ್ಲ, ಶೌಚಾಲಯವಿಲ್ಲದೇ ಜನರ ಪರದಾಟ,
Last Updated 25 ಏಪ್ರಿಲ್ 2018, 8:18 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪ್ರತಿದಿನ ಒಂದಲ್ಲ ಒಂದು ಕೆಲಸಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಮಿನಿ ವಿಧಾನಸೌಧಕ್ಕೆ ಸಾವಿರಾರು ಜನ ಬರುತ್ತಾರೆ. ಅವರು ಕುಡಿಯಲು ನೀರಿನ ಬಾಟಲಿ ಹಿಡಿದುಕೊಂಡು ಬರಬೇಕು. ಶೌಚಾಲಯಕ್ಕೆ ಬಯಲು ಪ್ರದೇಶವೇ ಗತಿ.

ತಾಲ್ಲೂಕಿನ ಮಿನಿ ವಿಧಾನಸೌಧದಲ್ಲಿ ಹಲವು ಇಲಾಖೆಗಳು ಕೆಲಸ ನಿರ್ವಹಿಸುತ್ತಿವೆ. ಖಾತೆ ಮಾಡಿಸಲು, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಲು, ತಹಶೀಲ್ದಾರ್ ಭೇಟಿ ಮಾಡಲು... ಹೀಗೆ ಒಂದಿಲ್ಲೊಂದು ಕೆಲಸಕ್ಕೆ ಬರಲೇಬೇಕು.

ಆದರೆ ಇಲ್ಲಿಗೆ ಬಂದಾಗ ತಕ್ಷಣ ಕೆಲಸಗಳಾಗುವುದಿಲ್ಲ ಇಂಥ ಸಂದರ್ಭದಲ್ಲಿ ಬಾಯಾರಿಕೆಯಾದಾಗ, ಶೌಚಕ್ಕೆ ಹೋಗಬೇಕೆನಿಸಿದರೆ ಸಮಸ್ಯೆ ಕಟ್ಟಿಟ್ಟಬುತ್ತಿ. ಈ ಬಗ್ಗೆ ಅಧಿಕಾರಿಗಳಲ್ಲಿ ಹಲವು ಬಾರಿ ಜನ ಸಮಸ್ಯೆ ಹೇಳಿಕೊಂಡಿದ್ದಾರೆ. ಇಲ್ಲಿನ ಅಧಿಕಾರಿಗಳು ಬದಲಾದರೆ ಹೊರತು ಸಮಸ್ಯೆ ಬದಲಾಗಿಲ್ಲ.

ಕಚೇರಿಯೊಳಗೆ ಕುಡಿಯುವ ನೀರಿನ ಘಟಕವಿದ್ದರೂ ನಿರ್ವಹಣೆಯಿಲ್ಲದೆ ದುರಸ್ತಿಯಾಗಿದೆ. ಬಾಯಾರಿಕೆಯಾದಾಗ ಸಮೀಪ ಹೋಟೆಲ್‍ಗಳೊ ಇಲ್ಲ. ದಾನಿಯೊಬ್ಬರು ನೀಡಿರುವ ನೀರಿನ ಘಟಕ ಹಾಳಾಗಿ ಸುಮಾರು 6 ತಿಂಗಳು ಕಳೆದಿದ್ದರೂ ಸಂಬಂಧಪಟ್ಟವರು ಸರಿಪಡಿಸಲು ಮುಂದಾಗಿಲ್ಲ.

ದಿನನಿತ್ಯ ಸಾವಿರಾರು ಜನ ವ್ಯವಹಾರ ನಡೆಸುವ ಜಾಗದಲ್ಲಿ ಕುಡಿಯಲು ನೀರಿಲ್ಲ. ಇದೆಂಥಾ ಅವ್ಯವಸ್ಥೆ ಎಂದು ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಘಟಕದ ಅಧ್ಯಕ್ಷ ಅಬ್ದುಲ್ ಮಲೀಕ್ ಬೇಸರ ವ್ಯಕ್ತಪಡಿಸಿದರು.

ಶೌಚಾಲಯ ಬಳಕೆಗೆ ಇಲ್ಲ: ಇಲ್ಲಿ ಸಾರ್ವಜನಿಕ ಶೌಚಾಲಯವಿದ್ದರೂ ಬಳಕೆಗೆ ಸಿಗುತ್ತಿಲ್ಲ. ಇಲ್ಲಿನ ಸಿಬ್ಬಂದಿ ಬಳಕೆ ಮಾಡಿಕೊಂಡು ಬೀಗ ಹಾಕಿಕೊಳ್ಳುತ್ತಾರೆ. ಸಾರ್ವಜನಿಕರಿಗೆ ಮಿನಿ ವಿಧಾನಸೌಧದ ಹಿಂಬದಿಯಲ್ಲಿರುವ ಜಾಗವೇ ಗತಿ ಎಂಬಂತಾಗಿದೆ.

ಈ ಆವರಣದಲ್ಲಿ ಶೌಚಾಲಯ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಆರೇಳು ತಿಂಗಳು ಹಿಂದೆಯೇ ಕಾಮಗಾರಿ ಶುರು ಮಾಡಿದ್ದರೂ ಪೂರ್ಣವಾಗಿಲ್ಲ. ಪುರುಷರು ಬಯಲನ್ನು ಆಶ್ರಯಿಸುತ್ತಾರೆ, ಆದರೆ ಮಹಿಳೆಯರ ಪಾಡೇನು ಎಂದು ಇಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ಪ್ರಶ್ನೆ ಮಾಡುತ್ತಾರೆ.

ಕೆಲ ಕೊಠಡಿಗಳ ಮುಂದೆ ಒಂದೆರಡು ಕುರ್ಚಿಗಳನ್ನು ಇಡಲಾಗಿದೆ. ಸಾರ್ವಜನಿಕರು ಮರದ ನೆರಳಿನಲ್ಲಿ ಕುಳಿತುಕೊಳ್ಳುವಂತಾಗಿದೆ.

ತಾಲ್ಲೂಕು ಕಚೇರಿಯಲ್ಲಿ ಮೂಲಸೌಕರ್ಯ ಸಮಸ್ಯೆಗಳಿರುವುದು ಇಲ್ಲಿನ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೂ ತಿಳಿದಿದೆ. ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ದಲಿತ ಮುಖಂಡ ಬೆಳಚಲವಾಡಿ ಚಿಕ್ಕಣ ಅವರು ಆರೋಪಿಸಿದರು.

**

ತಾಲ್ಲೂಕು ಕಚೇರಿಯಲ್ಲಿ ಮೂಲಸೌಕರ್ಯ ಸಮಸ್ಯೆ ಹಿಂದಿನಿಂದಲೂ ಇದೆ. ಇಲ್ಲಿಗೆ ವರ್ಗಾವಣೆಯಾಗಿ ಕೆಲವೇ ದಿನಗಳಾಗಿದೆ. ಈಗ ಚುನಾವಣೆ ಇದೆ. ಕೆಲವೇ ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ
- ಚಂದ್ರಕುಮಾರ್, ತಹಶೀಲ್ದಾರ್

ಮಲ್ಲೇಶ. ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT