ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಕೊಣನಹುಂಡಿ ಗ್ರಾಮ

ಶಾಲೆಗಾಗಿ ಮಕ್ಕಳು 2 ಕಿ.ಮೀ ನಡೆಯಬೇಕು
Last Updated 25 ಏಪ್ರಿಲ್ 2018, 8:21 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಈ ಗ್ರಾಮವನ್ನು ಸಂಪರ್ಕಿಸಲು ಸುಸಜ್ಜಿತ ರಸ್ತೆಯೇ ಇಲ್ಲ. ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತದೆ. ಕುಡಿಯುವ ನೀರಿಗೆ ಹಾಹಾಕಾರ, ಮಕ್ಕಳಿಗೆ ಅಂಗನವಾಡಿ ಸೇರಿದಂತೆ ಸರ್ಕಾರಿ ಪ್ರಾಥಮಿಕ ಶಾಲೆಯೂ ಇಲ್ಲ.ಇದು ಹೋಬಳಿಯ ಉಮ್ಮತ್ತೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊಣನಹುಂಡಿ ಗ್ರಾಮದ ಸ್ಥಿತಿ.

ಗ್ರಾಮಕ್ಕೆ ಜನರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಜನಪ್ರತಿನಿಧಿಗಳು ಮುಂದಾದಂತೆ ಕಾಣುತ್ತಿಲ್ಲ. ಈ ಗ್ರಾಮವು ಉಮ್ಮತ್ತೂರು ಹಾಗೂ ದೇಮಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಧ್ಯಬಾಗದಲ್ಲಿದೆ. ಈ ಎರಡು ಗ್ರಾಮಗಳಿಂದಲೂ ಈ ಗ್ರಾಮಕ್ಕೆ ರಸ್ತೆ ಅಭಿವೃದ್ಧಿಪಡಿಸಿಲ್ಲ. ಮಣ್ಣಿನ ರಸ್ತೆಯಲ್ಲಿಯೇ ತಿರುಗಾಡಬೇಕಾದ ಪರಿಸ್ಥಿತಿಯಿದೆ. ಬಸ್ ಹಾಗೂ ವಾಹನ ಸಂಚಾರದ ವ್ಯವಸ್ಥೆ ಇಲ್ಲ. ಇರುವ ರಸ್ತೆಯಲ್ಲಿ ಜಾಲಿ ಗಿಡಗಳು ಆವರಿಸಿಕೊಂಡಿವೆ.

ಗ್ರಾಮದ ಬಡಾವಣೆಗೆ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಮನೆಗಳ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ.  ಕುಡಿಯುವ ನೀರಿಗಾಗಿ ಕಿರುನೀರು ಸರಬರಾಜು ಘಟಕದಿಂದ ಎರಡು ತೊಂಬೆಗಳನ್ನು ಅಳವಡಿಸಲಾಗಿದೆ. ಯಾವುದರಲ್ಲೂ ನೀರು ತುಂಬಿಸುತ್ತಿಲ್ಲ. ತೊಂಬೆಗಳು ಅನಾಥವಾಗಿವೆ. ಇರುವ 2 ಕೈಪಂಪುಗಳು ಕೆಟ್ಟು ನಿಂತು ವರ್ಷಗಳೇ ಕಳೆದಿವೆ. ದುರಸ್ತಿಪಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಿಲ್ಲ.

ಕೇವಲ ಒಂದು ಕೊಳವೆ ಬಾವಿ ಕೊರೆಯಿಸಲಾಗಿದ್ದು, ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.ಈ ಕೊಳವೆ ಬಾವಿಯಿಂದ ಎಲ್ಲ ಮನೆಗಳಿಗೂ ನೀರು ಸಾಲುತ್ತಿಲ್ಲ. ಬರುವ ಅಲ್ಪ ನೀರನ್ನು ನಿವಾಸಿಗಳು ಪಡೆಯಬೇಕಾಗಿದೆ. ಜತೆಗೆ ಅಕ್ಕಪಕ್ಕದ ಗ್ರಾಮ ಹಾಗೂ ಹೊಲ ಗದ್ದೆಗಳಲ್ಲಿ ಹೆಂಗಸರು, ಮಕ್ಕಳು ಬಿಸಿಲು –ಮಳೆ ಲೆಕ್ಕಿಸದೇ ನೀರು ತರಬೇಕಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಚಾಲನೆಗೊಂಡಿದ್ದರೂ ಈ ಗ್ರಾಮಕ್ಕೆ ತಲುಪಿಲ್ಲ. ಗ್ರಾಮಕ್ಕೆ ಅಂಗನವಾಡಿ ಕೇಂದ್ರದ ವ್ಯವಸ್ಥೆ ಇಲ್ಲ. ಸರ್ಕಾರಿ ಶಾಲೆ ಇಲ್ಲದೇ ಎರಡು ಕಿ.ಮೀ ದೂರದಲ್ಲಿರುವ ದೇಮಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಮಕ್ಕಳು ನಡೆದುಕೊಂಡು ಹೋಗಬೇಕಾಗಿದೆ. ಶಾಲೆ ದೂರ ಇರುವುದರಿಂದ ಕೆಲ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿದ್ದಾರೆ ಎಂದು ಹೇಳುತ್ತಾರೆ ಗ್ರಾಮಸ್ಥರು.

ಪ್ರತಿ ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ನಮಗೆ ಭರವಸೆಯನ್ನಷ್ಟೇ ಕೊಡುತ್ತಿದ್ದಾರೆ. ಆದರೆ, ನಮ್ಮ ಗ್ರಾಮದ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿಲ್ಲ. ಮುಖ್ಯವಾಗಿ ಕುಡಿಯುವ ನೀರು, ರಸ್ತೆ, ಚರಂಡಿ ಒದಗಿಸಿಕೊಟ್ಟರೇ ಅಷ್ಟೇ ಸಾಕು ಎಂದು ಗ್ರಾಮದ ಗಿರಿಜಮ್ಮ, ರಾಜಮ್ಮ ಅಳಲು ತೋಡಿಕೊಂಡರು.

ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಮುಂದಿನ ವಾರದೊಳಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಚುನಾವಣೆಯ ನಂತರ ನರೇಗಾ ಯೋಜನೆಯಲ್ಲಿ ಚರಂಡಿ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಲಾಗುವುದು ಎಂದರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ.

ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT