ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಸುಧಾಕರ್ ನಾಮಪತ್ರ ಸಲ್ಲಿಕೆ

ಬೆಂಬಲಿಗರೊಂದಿಗೆ ಮೆರವಣಿಗೆ, ಶಕ್ತಿ ಪ್ರದರ್ಶನ; ಮೊಯಿಲಿ, ಮುನಿಯಪ್ಪ ಸಾಥ್
Last Updated 25 ಏಪ್ರಿಲ್ 2018, 8:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸ್ಥಳೀಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರು ಮಂಗಳವಾರ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಎರಡನೇ ಬಾರಿ ನಾಮಪತ್ರ ಸಲ್ಲಿಸಿದರು.

ಬೆಳಗ್ಗೆ ನಾಮಪತ್ರ ಸಲ್ಲಿಸುವ ಮೊದಲು ವಾಪಸಂದ್ರ ಬಳಿ ಇರುವ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುಧಾಕರ್‌, ಅಲ್ಲಿಂದ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಹೊರಟರು. ಬಿ.ಬಿ ರಸ್ತೆ, ಬಜಾರ್‌ ರಸ್ತೆ, ಗಂಗಮ್ಮ ಗುಡಿ ರಸ್ತೆಯ ಮೂಲಕ ತಾಲ್ಲೂಕು ಕಚೇರಿ ವರೆಗೆ ತೆರೆದ ವಾಹನದಲ್ಲಿ ತಮ್ಮ ಹಿತೈಷಿಗಳು, ಬೆಂಬಲಿಗರೊಂದಿಗೆ ಸಾಗಿದರು.

ಬಳಿಕ ಸಂಸದರಾದ ಕೆ.ಎಚ್‌.ಮುನಿಯಪ್ಪ, ವೀರಪ್ಪ ಮೊಯಿಲಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡ ಗಂಗರೇಕಾಲುವೆ ನಾರಾಯಣಸ್ವಾಮಿ ಅವರೊಂದಿಗೆ ತಾಲ್ಲೂಕು ಕಚೇರಿ ಒಳಗೆ ತೆರಳಿ ಚುನಾವಣಾಧಿಕಾರಿ ಶಿವಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್‌, ‘ಕಳೆದ ಐದು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಕ್ಷೇತ್ರ ಅಭಿವೃದ್ಧಿಪಡಿಸಿದ್ದೇನೆ. ಅದು ನನ್ನ ಗೆಲುವಿನ ಆತ್ಮವಿಶ್ವಾಸವನ್ನು ನೂರಕ್ಕೆ ನೂರರಷ್ಟು ಹೆಚ್ಚಿಸಿದೆ. ಈ ಬಾರಿ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ವೀರಪ್ಪ ಮೊಯಿಲಿ ಮಾತನಾಡಿ, ‘ಸ್ವಾತಂತ್ರ್ಯ ಬಂದ ಮೇಲೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್‌. ನಮ್ಮ ಜನಪರ ಕಾರ್ಯಕ್ರಮಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದೆ’ ಎಂದು ಹೇಳಿದರು.

‘ಅಂಬರೀಷ್ ಅವರಿಗೆ ಆರೋಗ್ಯ ಸರಿ ಇಲ್ಲ. ಅವರು ಪಕ್ಷದೊಂದಿಗೆ ಮುನಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಬಳಿಕ ಬದಾಮಿ ಕ್ಷೇತ್ರದ ಮುಖಂಡರ ಒತ್ತಾಯದ ಮೇರೆಗೆ ಅಲ್ಲಿಯೂ ಕೂಡ ಸ್ಪರ್ಧಿಸಲು ಒಪ್ಪಿದ್ದಾರೆ. ಅವರ ವಿರುದ್ಧ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇದು ಪಕ್ಷಕ್ಕೆ ಲಾಭವಾಗಲಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಗುಜರಾತ್‌, ಉತ್ತರ ಪ್ರದೇಶದಲ್ಲಿದ್ದ ಹುರುಪು ರಾಜ್ಯದಲ್ಲಿ ಉಳಿದಿಲ್ಲ. ಅವರಿಗೆ ಈ ಬಾರಿಯ ಚುನಾವಣೆ ನಿರಾಸಕ್ತಿ ಮೂಡಿಸಿದೆ. ಅವರು ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿರುವುದು ದೊಡ್ಡ ತಪ್ಪು. ಇದರಿಂದಾಗಿ ರಾಜ್ಯದಲ್ಲಿ ಬಿಜೆಪಿ ವರ್ಚಸ್ಸು ಶೇ 50 ರಷ್ಟು ಕುಸಿದಿದೆ’ ಎಂದು ಅಭಿಪ್ರಾಯಪಟ್ಟರು.

ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ ಈ ಬಾರಿ ಗೌರಿಬಿದನೂರು, ಬಾಗೇ ಪಲ್ಲಿ, ಚಿಕ್ಕಬಳ್ಳಾಪುರ ಕ್ಷೇತ್ರಗಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್‌ ಎರಡು ಹೋಳಾಗಿ ರುವುದರಿಂದ ವಿ. ಮುನಿಯಪ್ಪ ಅವರ ಗೆಲುವು ಕಟ್ಟಿಟ್ಟ ಬುತ್ತಿ. ಇನ್ನು ಚಿಂತಾಮಣಿ ಕ್ಷೇತ್ರದಲ್ಲಿ ತಡವಾದ ತೀರ್ಮಾನದಿಂದ ಸ್ವಲ್ಪ ಮಟ್ಟಿಗೆ ನಮಗೆ ಕಷ್ಟವಾಗಲಿದೆ. ಅಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

ಪರದಾಡಿದ ಸವಾರರು

ಸುಧಾಕರ್ ಅವರ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ವೇಳೆ ಸಾವಿರಾರು ಜನರ ದಟ್ಟಣೆಯಿಂದಾಗಿ ಬಿ.ಬಿ.ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ವಾಹನ ಸವಾರರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT