ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ‘ದ್ವಂದ್ವ’ದಲ್ಲಿ ಸಿಲುಕಿದ ಮತದಾರ

ಜನರನ್ನು ‘ಭ್ರಮೆ’ಯಲ್ಲಿ ಮುಳುಗಿಸುತ್ತಿರುವ ಯೋಜನೆಗಳು, ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾದ ಘೋಷಣೆ
Last Updated 25 ಏಪ್ರಿಲ್ 2018, 8:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಣ’ ಬಾಯಾರಿಕೆ ಆವರಿಸಿಕೊಂಡಿರುವ ಜಿಲ್ಲೆಯಲ್ಲಿ ‘ನೀರಾವರಿ’ ಪದ ಉಸುರದೆ ಕಳೆಯುವ ದಿನವೇ ಇಲ್ಲ ಎನ್ನುವಂತಾಗಿದೆ. ಅದರಲ್ಲೂ ನೀರಾವರಿ ವಿಚಾರದಲ್ಲಿ ಅನೇಕ ವರ್ಷಗಳಿಂದ ಕೇಳಿ ಬರುತ್ತಿರುವ ಪರ–ವಿರೋಧಗಳನ್ನು ಕೇಳಿ ಸಾಮಾನ್ಯ ಮತದಾರ ತಲೆ ಚಿಟ್ಟು ಹಿಡಿಸಿಕೊಂಡಿದ್ದಾನೆ. ಸತ್ಯ ಯಾವುದು ಮತ್ತು ಸುಳ್ಳು ಯಾವುದು ಎಂಬುದನ್ನು ಅರಿಯಲಾಗದೆ ದ್ವಂದ್ವದಲ್ಲಿ ಸಿಲುಕಿದ್ದಾನೆ.

ಜನಪ್ರತಿನಿಧಿಗಳು ಎನಿಸಿಕೊಂಡು ಸರ್ಕಾರದ ಭಾಗವಾದವರು, ಮತ್ತವರ ಹಿಂಬಾಲಕರು ಸರ್ಕಾರದ ಯೋಜನೆ ಗಳನ್ನು ದೃಢವಾಗಿ ಸಮರ್ಥಿಸಿಕೊಳ್ಳುತ್ತ ಬರುತ್ತಿದ್ದಾರೆ. ಇನ್ನೊಂದೆಡೆ ಅಷ್ಟೇ ಗಟ್ಟಿ ಧ್ವನಿಯಲ್ಲಿ ವಿರೋಧ ಪಕ್ಷಗಳು, ನೀರಾವರಿ ಹೋರಾಟಗಾರರು ಯೋಜನೆಗಳನ್ನು ವಿರೋಧಿಸುತ್ತಲೇ ಇದ್ದಾರೆ. ಇದನ್ನೆಲ್ಲ ನೋಡಿದ ಜನಸಾಮಾನ್ಯರು ‘ಯಾರು ಹಿತವರು ಈ ಮೂವರೊಳಗೆ’ ಎಂದು ತಮ್ಮ ಮನಃಸಾಕ್ಷಿಯನ್ನು ಕೇಳಿಕೊಳ್ಳುತ್ತಲೇ ಸತ್ಯ ತಿಳಿಯುವ ತವಕದಲ್ಲಿದ್ದಾರೆ.

‘ಒಂದಲ್ಲ, ಎರಡಲ್ಲ ಸಾವಿರಾರು ಕೋಟಿ ಸುರಿದಿದ್ದೇವೆ’, ‘ಅಗೋ ಬಂತು ನೋಡಿ ನೀರು’ ಎಂದು ರಾಜಕಾರಣಿಗಳು ಒಂದೊಂದು ದಿಕ್ಕಿನತ್ತ ಬೆರಳು ತೋರುತ್ತಿದ್ದಾರೆ. ಶಾಶ್ವತ ನೀರಾವರಿಗಾಗಿ ಎರಡು ದಶಕಗಳಿಂದ ಹೋರಾಡುತ್ತಿರುವವರು ‘ಆ ಸುಳ್ಳುಗಾರರ ಮಾತು ನಂಬಬೇಡಿ. ಅವರು ಹೇಳುವುದೆಲ್ಲ ಬೋಗಸ್‌’, ‘ಶಾಶ್ವತ ನೀರಾವರಿಯೊಂದೇ ನಮಗೆ ಪರಿಹಾರ. ಅದಕ್ಕಾಗಿ ಹೋರಾಡೋಣ ಬನ್ನಿ’ ಎಂದು ಕರೆಯುತ್ತಾರೆ. ಹೀಗಾಗಿ ಜನರಿಗೆ ಯಾರ ಮಾತು ನಂಬಬೇಕು ತಿಳಿಯದಂತಾಗಿದೆ.

ಜಿಲ್ಲೆಯ ಜನರ ಮುಖ್ಯ ಕಸಬು ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಹೈನೋದ್ಯಮವಾಗಿದೆ. ಇವುಗಳಿಗೆ ಸೇರಿದಂತೆ ಮುಖ್ಯವಾಗಿ ಕುಡಿಯಲು ಇವತ್ತು ಜನರಿಗೆ ಶುದ್ಧ ನೀರು ಬೇಕಿದೆ. ಆದರೆ ಇವತ್ತು ಜಿಲ್ಲೆಯಲ್ಲಿ ಅದೇ ಮುಖ್ಯ ಚರ್ಚೆಯ ವಸ್ತುವಾಗಿ ಜನಸಾಮಾನ್ಯರಿಗೆ ‘ದುಬಾರಿ’ ಉತ್ಪನ್ನದಂತಾಗುತ್ತಿದೆ.

ವಾಸ್ತವ ಏನು?

ಪ್ರಸ್ತುತ ಜಿಲ್ಲೆಯ ಎರಡು ಪ್ರಮುಖ ‘ನೀರಾವರಿ’ ಯೋಜನೆಗಳು ಎಂದು ಬಿಂಬಿತವಾಗುತ್ತಿರುವ ಎತ್ತಿನಹೊಳೆ ಮತ್ತು ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರಿನ ಏತ ನೀರಾವರಿ ಯೋಜನೆ ಹೆಸರಿನಲ್ಲಿ ರಾಜಕಾರಣಿಗಳು ಜನರನ್ನು ಅತಿಯಾದ ‘ಭ್ರಮೆ’ಯಲ್ಲಿ ಮುಳುಗಿಸಿದ್ದೇ ಹೆಚ್ಚು. ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಯ 196 ಕೆರೆಗಳಿಗೆ ಮತ್ತು ಮತ್ತು ಏತ ನೀರಾವರಿ ಯೋಜನೆಯಲ್ಲಿ 58 ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಸರ್ಕಾರ ಭರವಸೆ ನೀಡಿದೆ.

ಸರ್ಕಾರ ಕೊಟ್ಟ ಮಾತಿನಂತೆ ₹ 21 ಸಾವಿರ ಕೋಟಿ ಖರ್ಚು ಮಾಡಿ ಆ ನೀರು ಹರಿಸಿದರೂ ಜಿಲ್ಲೆಯಲ್ಲಿ ಅದರ ಪ್ರಯೋಜನ ಮಾತ್ರ ‘ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗುತ್ತದೆ. ಶಾಶ್ವತ ಪರಿಹಾರ ಮಾತ್ರ ಕಿಂಚಿತ್ತು ಸಿಗುವುದಿಲ್ಲ. ಏಕೆಂದರೆ ಜಿಲ್ಲೆಯಲ್ಲಿ 1,841 ಕೆರೆಗಳಿವೆ. ಆ ಪೈಕಿ ಎರಡೂ ಯೋಜನೆಗಳ ನೀರು ಹರಿದರೂ ಅದು ಸೇರುವುದು ಶೇ 14 ರಷ್ಟು (254) ಕೆರೆಗಳಿಗೆ ಮಾತ್ರ. ಇನ್ನುಳಿದ 1,587 ಕೆರೆಗಳ ಗತಿ ಏನು? ಇದಕ್ಕೆ ಉತ್ತರಿಸುವವರಿಲ್ಲ.

ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ಅಡಿ ನೀರು ಸಿಗುವ ಸಾಧ್ಯತೆ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ನಡುವೆಯೇ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಹಿರಿಯ ವಿಜ್ಞಾನಿ ಟಿ.ವಿ.ರಾಮಚಂದ್ರ ಅವರು ‘ಎತ್ತಿನಹೊಳೆ ಯೋಜನೆಗೆ ಹಾಕಿರುವ ಪೈಪ್‌ನಲ್ಲಿ ಕೋಲಾರದ ಜನರಿಗೆ ಪಶ್ಚಿಮಘಟ್ಟದ ಆಮ್ಲಜನಕ ಸಿಗಬಹುದೇ ಹೊರತು ನೀರು ಹರಿಯಲು ಸಾಧ್ಯವಿಲ್ಲ’ ಎಂದು ಹೇಳಿರುವುದು ಜನರನ್ನು ಜಿಜ್ಞಾಸೆಗೆ ದೂಡಿ, ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇವುಗಳಿಗೆ ಉತ್ತರ ಹುಡುಕುವ ಯತ್ನ ಇದುವರೆಗೆ ನಡೆದಿಲ್ಲ

ಇನ್ನೊಂದೆಡೆ ನೀರಾವರಿ ಹೋರಾಟಗಾರರು ಜೀವಸಂಕುಲಕ್ಕೆ ಮಾರಕವಾದ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರಿನ ಒಂದು ಹನಿ ನಮ್ಮ ಕೆರೆಗಳಿಗೆ ಸೋಂಕಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಹೀಗಾಗಿ ಈ ಎರಡು ಯೋಜನೆಗಳಲ್ಲಿ ಅಷ್ಟು ಸುಲಭವಾಗಿ ನೀರು ಹರಿದು ಬಂದು ಕೆರೆ ಒಡಲು ತುಂಬುವ ಲಕ್ಷಣಗಳಿಲ್ಲ. ಹೀಗಾಗಿ ನೀರಿಗಾಗಿ ಜನರ ನರಳಾಟ ಸದ್ಯ ನಿಲ್ಲುವ ಸ್ಥಿತಿಯಲ್ಲಿ ಇಲ್ಲ.

ಜಿಲ್ಲೆಯ ಭೌಗೋಳಿಕ ಚಿತ್ರಣ

ರಾಜ್ಯದ ದಕ್ಷಿಣ ದಿಕ್ಕಿನಲ್ಲಿ ಸಮುದ್ರ ಮಟ್ಟಕ್ಕಿಂತ 911 ಮೀಟರ್ ಎತ್ತರದಲ್ಲಿ 4,254 ಚ.ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿರುವ ಜಿಲ್ಲೆಯಲ್ಲಿ ಆರು ತಾಲ್ಲೂಕುಗಳನ್ನು ಒಳಗೊಂಡಂತೆ 1,514 ಹಳ್ಳಿಗಳಿವೆ. ಒಂದು ಅಂದಾಜಿನ ಪ್ರಕಾರ 12.54 ಲಕ್ಷ ಜನಸಂಖ್ಯೆ ಇದೆ. ಅದರಲ್ಲಿ ಶೇ81 ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಪೂರ್ವ ಕೃಷಿ ವಲಯ ಸೇರುವ ಜಿಲ್ಲೆಯಲ್ಲಿ 4.01 ಲಕ್ಷ ಹೇಕ್ಟೇರ್ ಭೂ ಪ್ರದೇಶವಿದೆ. ಆ ಪೈಕಿ 49 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ, 1.74 ಲಕ್ಷ ಒಟ್ಟು ಬಿತ್ತನೆ ಪ್ರದೇಶವಿದೆ. ಈ ಪೈಕಿ 41.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಮಾಡಲಾಗುತ್ತಿದೆ. 13 ಸಾವಿರ ಹೇಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ರೇಷ್ಮೆ ಇದೆ.

ಜಿಲ್ಲೆಯಲ್ಲಿ 2.03 ಲಕ್ಷ ಕೃಷಿ ಕುಟುಂಬಗಳಿದ್ದು, ಅದರಲ್ಲಿ 1.73 ಲಕ್ಷ ಸಣ್ಣ, ಅತಿ ಸಣ್ಣ ಕುಟುಂಬಗಳಿವೆ. ವಾರ್ಷಿಕ 773 ಮೀ .ಮೀಟರ್ ಮಳೆ ಆಗುತ್ತದೆ. ಆದರೆ ನೀರಿನ ಕೊರತೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ.

ಬಗೆಹರಿಯದ ಕೊರತೆಯ ‘ಒರತೆ’

ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಅಗತ್ಯಕ್ಕಾಗಿಯೇ ಒಂದು ವರ್ಷಕ್ಕೆ ಸುಮಾರು 3 ಟಿಎಂಸಿ ಅಡಿ ನೀರು ಬೇಕು. ಆ ಪೈಕಿ ಈಗಾಗಲೇ ಅರ್ಧದಷ್ಟು ನೀರಿನ ಕೊರತೆ ಕಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡದಂತೆ (ಎಲ್‌ಪಿಸಿಡಿ) ಪ್ರಸ್ತುತ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಗೆ ದಿನಕ್ಕೆ ಕನಿಷ್ಠ 85 ಲೀಟರ್ ನೀಡಬೇಕು. ಆದರೆ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಜನರಿಗೆ ಇದರ ಅರ್ಧ ಪ್ರಮಾಣ ನೀರು ಸಹ ದೊರೆಯುತ್ತಿಲ್ಲ.

ಜಿಲ್ಲಾ ಕೇಂದ್ರದಲ್ಲಿಯೇ ಅನೇಕ ಬಡಾವಣೆಗಳಲ್ಲಿ ಜನರು ಕೊಡದ ಲೆಕ್ಕದಲ್ಲಿ ಹಣ ಕೊಟ್ಟು ಟ್ಯಾಂಕರ್‌ಗಳು ಪೂರೈಸುವ ನೀರು ಕುಡಿಯುತ್ತಿದ್ದಾರೆ. ಮಾನವ ಹಕ್ಕುಗಳ ಬಗ್ಗೆ ಭಾಷಣ ಮಾಡುವ ಯಾರೊಬ್ಬರೂ ಈ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ ಎನ್ನುವುದು ಪ್ರಜ್ಞಾವಂತರ ಪ್ರಶ್ನೆ. ನೀರಿನ ಬೇಡಿಕೆ ಪೂರೈಸುವ ಭರದಲ್ಲಿ ಜಿಲ್ಲೆಯಾದ್ಯಂತ ಈವರೆಗೆ 73,622 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಆ ಪೈಕಿ 30,991 ಬಾವಿಗಳು ವಿಫಲಗೊಂಡಿವೆ. ಅತಿಯಾದ ಅಂತರ್ಜಲ ಬಳಕೆಯಿಂದ ಪ್ಲೋರೈಡ್ ಸದ್ದಿಲ್ಲದೆ ಇನ್ನಿಲ್ಲದ ಅನಾಹುತ ಮಾಡುತ್ತಿದೆ.

ಟೋಪಿ ಹಾಕುವುದೇ ಕೆಲಸ

‘ಮುಗ್ಧ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ, ಭ್ರಮೆಯಲ್ಲಿಟ್ಟು ಮತ ಪಡೆದು ಟೋಪಿ ಹಾಕುವುದೇ ರಾಜಕಾಣಿಗಳ ಕೆಲಸವಾಗಿದೆ. ಎತ್ತಿನಹೊಳೆ ಮತ್ತು ಏತ ನೀರಾವರಿ ಯೋಜನೆಗಳಲ್ಲಿ ಪೈಪ್ ಖರೀದಿಗೆ ತೋರಿದ ತರಾತುರಿ, ಆಸಕ್ತಿ ಶಾಶ್ವತ ನೀರಾವರಿ ಬೇಡಿಕೆಗೆ ಸ್ಪಂದಿಸುವ ವಿಚಾರದಲ್ಲಿ ತೋರಿಸಲಿಲ್ಲ. ಬರೀ ಕಮಿಷನ್ ಹೊಡೆಯುವ ಈ ಕೆಲಸವನ್ನು ಜನರು ಅರ್ಥ ಮಾಡಿಕೊಳ್ಳಬೇಕು.

ನಾನು 1952ರಿಂದ ಚುನಾವಣೆ ನೋಡಿಕೊಂಡು ಬಂದಿರುವೆ. ಎಲ್ಲ ಪಕ್ಷದವರೂ ಜನರಿಗೆ ಸುಳ್ಳು ಹೇಳಿ ವಂಚಿಸುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಯಾರಿಗೂ ಸಹ ಸಮಸ್ಯೆ ಬಗೆಹರಿಸುವ ಮನಸಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ. ನೀರಾವರಿಗಾಗಿ ನಾವು ಸಾವಿರಾರು ಕೊಟ್ಟಿದ್ದೇವೆ ಎಂದು ಹೇಳುವವರು ಯಾರಪ್ಪನ ಮನೆ ದುಡ್ಡು ಕೊಟ್ಟಿದ್ದಾರೆ ಹೇಳಲಿ?
– ಲಕ್ಷ್ಮಯ್ಯ, ಹಿರಿಯ ಹೋರಾಟಗಾರ

ಅಸಹಾಯಕ ಬಲಿಪಶುಗಳು

ಎತ್ತಿನಹೊಳೆಯಲ್ಲಿ ನೀರಿದ್ದರೆ ತಾನೇ ನಮಗೆ ನೀರು ತಂದು ಕೊಡುವುದು. ಸ್ಥಳೀಯರಿಗೇ ನೀರು ಸಾಕಾಗದೇ ಇರುವಾಗ ನಮಗೆ ಎಲ್ಲಿಂದ ತಂದು ಕೊಡುತ್ತಾರೆ? ಹೀಗಾಗಿ ತರಾತುರಿಯಲ್ಲಿ ಏತ ನೀರಾವರಿ ಯೋಜನೆ ಜಪ ಶುರುವಿಟ್ಟುಕೊಂಡರು. ಇವತ್ತು ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆ ಎಳೆದು ಮೋಸ ಮಾಡುವುದೇ ರಾಜಕಾರಣಿಗಳ ಕಾಯಕವಾಗಿದೆ.

ಕೆಲಸವಿಲ್ಲದೆ ನಿರುದ್ಯೋಗಿಗಳಿಗೆ ಕೂಲಿ ಕೊಟ್ಟು ಸಮಾವೇಶಗಳಿಗೆ ಕರೆತಂದು ಅದನ್ನೇ ತಮ್ಮ ಜನಪ್ರಿಯತೆ ಎಂದು ಪೊಳ್ಳು ಶಕ್ತಿಪ್ರದರ್ಶನ ಮಾಡಲಾಗುತ್ತಿದೆ. ಜೀವನ ನಡೆಸಲು ಕಷ್ಟವಾಗಿ ಜನರು ನೂರು, ಇನ್ನೂರು ಕೊಟ್ಟರೆ ಸಾಕು ಕರೆದಲ್ಲಿ ಬಂದು ಬಾವುಟ ಹಿಡಿದು ಜೈಕಾರ ಹಾಕುವ ಮಟ್ಟಿಗೆ ಅಸಹಾಯಕ ಬಲಿಪಶುಗಳಾಗಿದ್ದಾರೆ. ಇದು ನಮ್ಮ ದೌರ್ಭಾಗ್ಯ
– ಬಿ.ನಾರಾಯಣಸ್ವಾಮಿ, ರೈತ ಮುಖಂಡ

**
ವಿಜ್ಞಾನಿಗಳ ಎಚ್ಚರಿಕೆ ಅಲ್ಲಗಳೆಯುವ ರಾಜಕಾರಣಿಗಳು ರಸ್ತೆಬದಿಯ ಗಿಳಿಶಾಸ್ತ್ರದವರ ಮಾತಿಗೆ ಬೆಲೆ ಕೊಡುವ ಕೆಲಸ ಮಾಡುತ್ತಿದ್ದಾರೆ
– ಆರ್.ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT