ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಸಂಬಂಧವಿಲ್ಲ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಅಭಿಮತ
Last Updated 25 ಏಪ್ರಿಲ್ 2018, 8:43 IST
ಅಕ್ಷರ ಗಾತ್ರ

ಕೊಪ್ಪ: ‘ನಾವೆಲ್ಲರೂ ಪಾಲಿಸುವ ಹಿಂದೂ ಧರ್ಮಕ್ಕೂ ಬಿಜೆಪಿ, ಸಂಘ ಪರಿವಾರದವರು ಪ್ರತಿಪಾ ದಿಸುವ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಹೇಳಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾ ವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಡಿ.ರಾಜೇಗೌಡರ ನಾಮಪತ್ರ ಸಲ್ಲಿಕೆ ಪ್ರಯುಕ್ತ ಪಟ್ಟಣದ ಪುರಸಭಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಜನಾಶೀರ್ವಾದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಈ ನಕಲಿ ದೇಶಭಕ್ತರಿಗೆ ಹಿಂದೂ ಧರ್ಮ, ದೇಶದ ಬಗ್ಗೆ ಗೌರವವಿಲ್ಲ. ಐದು ಸಾವಿರ ವರ್ಷಗಳ ಇತಿಹಾಸವಿರುವ ಹಿಂದೂ ಧರ್ಮದ ರಕ್ಷಣೆಗೆ ಅಂದು ಯಾವುದೇ ಖಾಕಿ ಚಡ್ಡಿ, ಕರಿಟೋಪಿಯ ಪಡೆ ಇರಲಿಲ್ಲ. ಇವರ ಡ್ರೆಸ್ ಕೋಡ್ ಹಿಟ್ಲರ್‌ನ ಪಡೆಯದ್ದಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದಲಿತ, ಹಿಂದುಳಿದ ಸಮುದಾಯದವರ ಮೇಲೆ ನಿರಂತರ ದೌರ್ಜನ್ಯ, ಹತ್ಯೆಗಳು ನಡೆಯುತ್ತಿವೆ. ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಕೊಲೆಗಳಾಗುತ್ತಿದ್ದು, ಆರೋಪಿಗಳಿಗೆ ಬಿಜೆಪಿ ಸರ್ಕಾರಗಳೇ ರಕ್ಷಣೆ ನೀಡುತ್ತಿವೆ’ ಎಂದು ದೂರಿದರು.

‘ದೇಶವನ್ನು 70 ವರ್ಷ ಆಳಿದ ಕಾಂಗ್ರೆಸ್ ಪಕ್ಷ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಸುಳ್ಳು ಹೇಳುತ್ತಿರುವ ಪ್ರಧಾನಿ ಮೋದಿ ತಮ್ಮ ನಾಲ್ಕು ವರ್ಷದ ಅಧಿಕಾರಾವಧಿಯಲ್ಲಿ ಮಾಡಿರುವ ಸಾಧನೆ ಶೂನ್ಯವಾಗಿದೆ. ಎಲ್ಲರ ಕೈಗೆ ಪೊರಕೆ ಕೊಟ್ಟು ಸ್ವಚ್ಚ ಭಾರತ ಅಭಿಯಾನದ ಹೆಸರಲ್ಲಿ ಪ್ರಚಾರಕ್ಕಾಗಿ ₹1400 ಕೋಟಿ ವೆಚ್ಚ ಮಾಡಲಾಗಿದೆ. ಬಡವರಿಗೆ ಗ್ಯಾಸ್ ನೀಡಿದ್ದೇನೆ ಎನ್ನುವ ಮೋದಿ ಗ್ಯಾಸ್ ಬೆಲೆ ₹700ಕ್ಕಿಂತಲೂ ಹೆಚ್ಚಿಸಿದ್ದನ್ನು ಮರೆಮಾಚುತ್ತಿದ್ದಾರೆ' ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಮಾತನಾಡಿ, 'ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಗಮನಾರ್ಹ ಕೊಡುಗೆ ನೀಡಿದೆ. ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಬಂಗಾರಪ್ಪ, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯನವರು ಹಲವಾರು ಮಾದರಿ ಕಾರ್ಯಕ್ರಮಗಳ ಮೂಲಕ ಶೋಷಿತ ವರ್ಗಗಳ ಕಲ್ಯಾಣದ ಜೊತೆಗೆ ನಾಡಿನ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ನಾಡಿನ ಜನತೆ ನೆಮ್ಮದಿಯಲ್ಲಿ ಬದುಕುವಂತಾಗಲು ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳೇ ಕಾರಣ’ ಎಂದರು.

‘ಸಿದ್ದರಾಮಯ್ಯ ಸರ್ಕಾರದ 94ಸಿ, 94ಸಿಸಿ, ಫಾರಂ 50, 53 ಅಡಿ ಬಡವರಿಗೆ ಭೂ ಮಂಜೂರಾತಿ ಯೋಜನೆಗಳ ಸೌಲಭ್ಯವನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಶಾಸಕ ಜೀವರಾಜ್ ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ ಬಾರಿ ನಾನು ಅಲ್ಪ ಅಂತರದಿಂದ ಸೋತರೂ, ಜನರ ಒಡನಾಟದಲ್ಲಿದ್ದು, ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಸಾರ್ವಜನಿಕ ಚಟುವಟಿಕೆಗಳಿಗೆ ಸಹಕರಿಸಿದ್ದೇನೆ. ಈ ಬಾರಿ ಮತದಾರರು ಆಶೀರ್ವದಿಸಿ ಗೆಲ್ಲಿಸಿದರೆ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ' ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುಧೀರ್ ಕುಮಾರ್ ಮುರೊಳ್ಳಿ, ಕೆ.ಪಿ. ಅಂಶುಮಂತ್, ಮಾರನಕೊಡಿಗೆ ನಟರಾಜ್, ಕ್ಷೇತ್ರ ವೀಕ್ಷಕ ಕಡ್ತೂರ್ ದಿನೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಆರ್.ಸದಾಶಿವ, ಚಂದ್ರಮ್ಮ, ರಾಜ್ಯ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗ, ಮುಖಂಡರಾದ ಪುಷ್ಪಾ ರಾಜೇಗೌಡ, ಬಾಳೆಮನೆ ನಟರಾಜ್, ಅಸಗೋಡು ನಾಗೇಶ್, ಎಚ್.ಎಂ.ಸತೀಶ್, ಅಮೃತ್ ಶೆಣೈ, ಇಫ್ತಿಕರ್ ಆದಿಲ್, ಕೆ.ಎಂ. ಗಂಗಾಧರ್, ಟಿ.ವಿ.ವರ್ಗೀಸ್, ಅನ್ನಪೂರ್ಣ ನರೇಶ್, ಎಚ್.ಎಸ್.ಇನೇಶ್, ಸುಬ್ರಹ್ಮಣ್ಯ ಶೆಟ್ಟಿ, ನುಗ್ಗಿ ಮಂಜುನಾಥ್ ಬಿ.ಸಿ. ಸಂತೋಷ್ ಇದ್ದರು.

ಪಟ್ಟಣದ ವೀರಭದ್ರ ದೇವಸ್ಥಾನ, ನಿತ್ಯಾಧಾರ ಮಾತೆ ಚರ್ಚ್, ಜಾಮಿಯಾ ಮಸೀದಿಗಳಲ್ಲಿ ಟಿ.ಡಿ.ರಾಜೇಗೌಡ ಪೂಜೆ, ಪ್ರಾರ್ಥನೆ ಸಲ್ಲಿಸಿ, ತಾಲ್ಲೂಕು ಕಚೇರಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ವಾಟರ್ ಟ್ಯಾಂಕ್ ವೃತ್ತದಿಂದ ಪುರಸಭಾ ಕ್ರೀಡಾಂಗಣದವರೆಗೆ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ರೋಡ್ ಶೋ ನಡೆಯಿತು.

‘ಸಜ್ಜನರನ್ನು ಚುನಾಯಿಸಿ’

‘ದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ತಿರುಚಿ ಬಡವರು ಬದುಕಲಾಗದಂತಹ ಶಾಸನ ತರಲು ಮುಂದಾಗುತ್ತಾರೆ. ಕರ್ನಾಟಕ ಕುವೆಂಪು, ಬಸವಣ್ಣನಂತಹ ಮಹಾಪುರುಷರು ಹುಟ್ಟಿದ ನಾಡು. ಇಲ್ಲಿನ ಧರ್ಮ, ಸಂಸ್ಕೃತಿ ಉಳಿಸುವುದು ಪ್ರಜ್ಞಾವಂತ ಮತದಾರರ ಜವಾಬ್ದಾರಿ. ಇಲ್ಲಿನ ಆಡಳಿತ ಚುಕ್ಕಾಣಿ ಬಿಜೆಪಿ ಪಾಲಾದರೆ ನಾಡಿನ ನೆಮ್ಮದಿ, ಸಂಸ್ಕೃತಿ ನಾಶವಾಗುತ್ತದೆ. ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಸಭ್ಯ ವ್ಯಕ್ತಿ. ಕ್ಷೇತ್ರದ ಅಭಿವೃದ್ಧಿಗೆ ಅಂತಹ ಸಜ್ಜನರನ್ನು ಬಹುಮತದಿಂದ ಚುನಾಯಿಸಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT