ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿಗೆ ಬತ್ತದ ಉತ್ಸಾಹ

ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ; ನಾಮಪತ್ರಗಳ ಪರಿಶೀಲನೆ ಇಂದು
Last Updated 25 ಏಪ್ರಿಲ್ 2018, 9:38 IST
ಅಕ್ಷರ ಗಾತ್ರ

ಕಲಬುರ್ಗಿ: ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳು ಅಪಾರ ಬೆಂಬಲಿಗರು, ಕಾರ್ಯಕರ್ತರ ಜಯ ಘೋಷಗಳ ಮಧ್ಯೆ ಅಂತಿಮ ದಿನವಾದ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಈ ಮೊದಲು ಎರಡು ಬಾರಿ ನಾಮಪತ್ರ ಸಲ್ಲಿಸಿರುವ ಕಲಬುರ್ಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಪಾಟೀಲ ಅವರು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ನಗರದ ನೆಹರೂ ಗಂಜ್‌ನ ನಗರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟ ಅವರು ಕಾರ್ಯಕರ್ತರತ್ತ ಉತ್ಸಾಹದಿಂದ ಕೈಬೀಸಿದರು. ಇವರ ತಂದೆ, ಶಾಸಕ ಬಿ.ಜಿ.ಪಾಟೀಲ, ಮುಖಂಡರಾದ ವಿದ್ಯಾಸಾಗರ ಶಾಬಾದಿ ಜೊತೆಯಾಗಿದ್ದರು.

ಕಮಲ ಚಿಹ್ನೆಗಳುಳ್ಳ ಬಾವುಟಗಳು ಎಲ್ಲೆಡೆ ರಾರಾಜಿಸಿದವು. ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಚಂದ್ರಕಾಂತ ಪಾಟೀಲ ಪರ ಘೋಷಣೆ ಕೂಗಿದರು.

ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ ಅವರು ಮೆರವಣಿಗೆಯಲ್ಲಿ ಬಂದು ಇಂದಿರಾ ಸ್ಮಾರಕ ಭವನ (ಟೌನ್ ಹಾಲ್) ಮುಂಭಾಗದ ಡಾ.ಬಾಬು ಜಗಜೀವನರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಡೊಳ್ಳು, ಹಲಗೆ ಬಡಿತಕ್ಕೆ ಕಾರ್ಯಕರ್ತರು ಹೆಜ್ಜೆ ಹಾಕಿದರು. ಅಭ್ಯರ್ಥಿ ಪರ ಜಯಘೋಷಗಳು ಮೊಳಗಿದವು.

ಜೆಡಿಎಸ್‌ನ ಮೂವರು ಕಣಕ್ಕೆ: ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಬಸವರಾಜ ಡಿಗ್ಗಾವಿ, ಕಲಬುರ್ಗಿ ಉತ್ತರ ಮತಕ್ಷೇತ್ರದ ಅಭ್ಯರ್ಥಿ ನಾಸಿರ್ ಹುಸೇನ್ ಹಾಗೂ ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ರೇವುನಾಯಕ ಬೆಳಮಗಿ ಅವರು ಒಂದೇ ದಿನ ನಾಮಪತ್ರ ಸಲ್ಲಿಸಿದರು.

ಡಿಗ್ಗಾವಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಮೆರವಣಿಗೆ ಹೊರಟರೆ, ನಾಸಿರ್ ಹುಸೇನ್ ಖಾಜಾ ಬಂದಾ ನವಾಜ್ ದರ್ಗಾದಿಂದ ಹಾಗೂ ರೇವುನಾಯಕ ಬೆಳಮಗಿ ಅವರು ಸೂಪರ್ ಮಾರ್ಕೆಟ್‌ನಿಂದ ಮೆರವಣಿಗೆಯಲ್ಲಿ ಸಾಗಿ ಬಂದರು. ದಾರಿಯುದ್ದಕ್ಕೂ ಪಕ್ಷದ ಕಾರ್ಯಕರ್ತರು ಸಂಭ್ರಮದಿಂದ ಹೆಜ್ಜೆ ಹಾಕಿದರು.

ಬಿಎಸ್‌ಪಿ ಮೆರವಣಿಗೆ: ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಸೂರ್ಯಕಾಂತ ನಿಂಬಾಳಕರ ಅವರು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಈ ಮೊದಲು ಬಿಎಸ್‌ಪಿ ಇವರಿಗೆ ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದಿಂದ ‘ಬಿ’ ಫಾರಂ ನೀಡಿತ್ತು. ಆದರೆ ರೇವುನಾಯಕ ಬೆಳಮಗಿ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದರಿಂದ, ಇವರು ಕಲಬುರ್ಗಿ ದಕ್ಷಿಣ ಮತಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

ಎತ್ತಿನಗಾಡಿಯಲ್ಲಿ ಬಂದ ಡಿಗ್ಗಾವಿ

ನಂದಿವನದ ಮೂಲಕ ರೈತರ ದನಕರುಗಳಿಗೆ ಆಶ್ರಯ ನೀಡಿದ್ದ ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಸವರಾಜ ಡಿಗ್ಗಾವಿ ಅವರು ಎತ್ತಿನಗಾಡಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದರು. ಗಾಡಿಯ ಎರಡೂ ಬದಿ ಯಲ್ಲಿ ತೆನೆಹೊತ್ತ ಮಹಿಳೆಯ ಕಟೌಟ್‌ಗಳನ್ನು ನಿಲ್ಲಿಸಲಾಗಿತ್ತು. ಗ್ರಾಮೀಣ ಪ್ರದೇಶದ ಬೆಂಬಲಿ ಗರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಅಭ್ಯರ್ಥಿ ಮುಂದೆ, ನೀರಿನ ಗಾಡಿ ಹಿಂದೆ!

ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ ಅವರು ತೆರೆದ ವಾಹನದಲ್ಲಿ ಮುಂದೆ ಸಾಗಿದರೆ, ಅವರ ಹಿಂಬದಿಯ ವಾಹನದಲ್ಲಿ ನೀರಿನ ಬಾಟಲ್‌ಗಳನ್ನು ಇಡಲಾಗಿದ್ದ ವಾಹನವಿತ್ತು. ಬಿಸಿಲಿನಿಂದ ಕಂಗೆಟ್ಟ ಕಾರ್ಯಕರ್ತರು ನೀರು ಕುಡಿದು ದಾಹ ಇಂಗಿಸಿ ಕೊಂಡರು. ಬೇರೆ ಅಭ್ಯರ್ಥಿಗಳ ಮೆರವಣಿಗೆಯಲ್ಲಿ ನೀರಿನ ಪ್ಯಾಕೆಟ್‌ಗಳನ್ನು ವಿತರಿಸಲಾಗಿತ್ತು. ಇವರು 1ಲೀಟರ್ ನೀರಿನ ಬಾಟಲ್‌ಗಳ ವ್ಯವಸ್ಥೆ ಮಾಡಿದ್ದರು.

ಬಿಎಸ್‌ಪಿ ಅಭ್ಯರ್ಥಿ ಕೈಯಲ್ಲಿ ಜೆಡಿಎಸ್ ಬಾವುಟ!

ಬಿಎಸ್‌ಪಿ ಅಭ್ಯರ್ಥಿ ಸೂರ್ಯಕಾಂತ ನಿಂಬಾಳಕರ, ಜೆಡಿಎಸ್ ಅಭ್ಯರ್ಥಿಗಳಾದ ಬಸವರಾಜ ಡಿಗ್ಗಾವಿ ಮತ್ತು ರೇವುನಾಯಕ ಬೆಳಮಗಿ ಅವರು ನಾಮಪತ್ರ ಸಲ್ಲಿಸುವ ವೇಳೆ ಜಗತ್ ವೃತ್ತದಲ್ಲಿ ಮುಖಾಮುಖಿಯಾದರು. ಈ ವೇಳೆ ಸೂರ್ಯಕಾಂತ ನಿಂಬಾಳಕರ ಜೆಡಿಎಸ್ ಬಾವುಟವನ್ನು ಬೀಸುವ ಮೂಲಕ ಅಚ್ಚರಿ ಮೂಡಿಸಿದರು. ರೇವುನಾಯಕ ಮತ್ತು ಬಸವರಾಜ ಅವರು ಕೆಲಹೊತ್ತು ಸಮಾಲೋಚನೆ ನಡೆಸಿದರು.

ನಾಮಪತ್ರ ಸಲ್ಲಿಕೆ, ಮೆರವಣಿಗೆ

ಬಸವರಾಜ ಡಿಗ್ಗಾವಿ ಮತ್ತು ನಾಸಿರ್ ಹುಸೇನ್ ಉಸ್ತಾದ ಅವರು ಶುಭ ಮುಹೂರ್ತ ನೋಡಿಕೊಂಡು ಮೆರವಣಿಗೆಗೂ ಮುನ್ನವೇ ನಾಮಪತ್ರ ಸಲ್ಲಿಸಿದರು. ಆ ಬಳಿಕ ತಮ್ಮ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ನಾಸಿರ್ ಅವರು ಖಾಜಾ ಬಂದಾ ನವಾಜ್ ದರ್ಗಾ, ಕಿರಾಣಾ ಬಜಾರ್, ಬಾಂಡೆ ಬಜಾರ್ ಮೂಲಕ ಜಗತ್ ವೃತ್ತ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT