ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿದ ತಾಳಮೇಳ: ಸೊರಗಿದ ಕ್ಷೇತ್ರ

ಕಾಂಗ್ರೆಸ್‌ – ಬಿಜೆಪಿ ಆರೋಪ– ಪ್ರತ್ಯಾರೋಪದಲ್ಲಿ ಮಡಿಕೇರಿ ಕ್ಷೇತ್ರದ ಜನರು ಹೈರಾಣ
Last Updated 25 ಏಪ್ರಿಲ್ 2018, 10:00 IST
ಅಕ್ಷರ ಗಾತ್ರ

ಮಡಿಕೇರಿ: ಅರೆಮಲೆನಾಡು ಹಾಗೂ ಮಲೆನಾಡು ಪ್ರದೇಶ ಹೊಂದಿರುವ ಕ್ಷೇತ್ರ ಮಡಿಕೇರಿ. ಸೋಮವಾರಪೇಟೆ ಇಡೀ ತಾಲ್ಲೂಕು ಈ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟರೆ, ಮಡಿಕೇರಿ ತಾಲ್ಲೂಕಿನ ಬಹುಪಾಲು ಗ್ರಾಮಗಳು ಇದೇ ಕ್ಷೇತ್ರದಲ್ಲಿವೆ. ಒಂದೆಡೆ ಕಾಫಿ, ಕಾಳುಮೆಣಸು ಪ್ರಧಾನ ಬೆಳೆ. ಅರೆಮಲೆನಾಡು ಪ್ರದೇಶದಲ್ಲಿ ರಾಗಿ, ಜೋಳ, ಶುಂಠಿ, ಭತ್ತವನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಿರುವವರೇ ಹೆಚ್ಚು.

ಹಾರಂಗಿ ಜಲಾಶಯದಿಂದ ಕುಶಾಲನಗರ ವ್ಯಾಪ್ತಿಯು ನೀರಾವರಿ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದೆ. ಅದು ರೈತರ ನೆಮ್ಮದಿಗೆ ಕಾರಣವಾಗಿದೆ. ವಿರಾಜಪೇಟೆಯಂತೆ ಈ ಕ್ಷೇತ್ರದಲ್ಲೂ ಸಮಸ್ಯೆಗಳ ಸರಮಾಲೆಯಿದ್ದು, ಕ್ಷೇತ್ರದ ಒಳಹೊಕ್ಕರೇ ಕಣ್ಣಿಗೆ ಬೀಳುತ್ತವೆ.

ಈ ಕ್ಷೇತ್ರದ ಒಡಲಲ್ಲಿಯೂ ಹಲವು ಪ್ರವಾಸಿ ತಾಣಗಳಿವೆ. ರಾಜಾಸೀಟ್‌, ಓಂಕಾರೇಶ್ವರ ದೇಗುಲ, ಗದ್ದುಗೆ, ಅಬ್ಬಿ ಜಲಪಾತ, ಮಲ್ಲಳ್ಳಿ ಜಲಪಾತ, ಹಾರಂಗಿ ಜಲಾಶಯ, ದುಬಾರೆ, ನಿಸರ್ಗಧಾಮ... ಹೀಗೆ ಹಲವು ತಾಣಗಳು ವರ್ಷವಿಡೀ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಎಲ್ಲೆಡೆ ಮೂಲಸೌಲಭ್ಯದ ಕೊರತೆಯಿಂದ ಪ್ರವಾಸಿಗರಿಗೆ ನಿರಾಸೆ ಉಂಟಾಗುತ್ತಿದೆ. ಮಾದರಿ ತಾಣ ಒಂದೂ ಕಣ್ಣಿಗೆ ಕಾಣುವುದಿಲ್ಲ.

ನಿಲ್ಲದ ಸಂಘರ್ಷ: ಇಡೀ ಕೊಡಗು ಜಿಲ್ಲೆಯನ್ನೇ ಆನೆ– ಮಾನವ ಸಂಘರ್ಷ ಕಾಡುತ್ತಿದೆ. ಸೋಮವಾರಪೇಟೆ, ಮಾದಾಪುರ, ಶನಿವಾರಸಂತೆ, ಕುಶಾಲನಗರ, ಸುಂಟಿಕೊಪ್ಪ... ಇಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ. ಇದುವರೆಗೂ ಕುಶಾಲನಗರದ ಹೆಬ್ಬಾಲೆ ಆಸುಪಾಸಿನಲ್ಲಿ ಕಾಡಾನೆ ಹಾವಳಿ ಇರಲಿಲ್ಲ. ಇತ್ತೀಚೆಗೆ ಅಲ್ಲಿಗೂ ಕಾಡಾನೆಗಳು ಲಗ್ಗೆಯಿಡಲು ಆರಂಭಿಸಿವೆ. ಆನೆ ಕಂದಕ, ಸೋಲಾರ್‌ ಬೇಲಿ ಯೋಜನೆ ನೆರವಿಗೆ ಬರುತ್ತಿಲ್ಲ. ರೈಲು ಕಂಬಿ ಅಳವಡಿಸಬೇಕು ಬೇಡಿಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ.

ಆನೆ ದಾಳಿಯಿಂದ ಬೆಳೆ ನಷ್ಟ ವಾಗುತ್ತಿದೆ. ಪ್ರತಿವರ್ಷ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಿದೆ. ಇನ್ನೂ ಕ್ಷೇತ್ರದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾಧಿಸುವುದು ಸಹಜ ಎಂಬಂತಾಗಿದೆ. ಮಳೆ ಕಡಿಮೆಯಾದ ವರ್ಷ ಬೇಸಿಗೆಯಲ್ಲಿ ಕಾವೇರಿ ನದಿ ಬತ್ತಿ ಹೋಗುತ್ತದೆ. ಹೀಗಾಗಿ, ಪ್ರತಿವರ್ಷ ಕುಶಾಲನಗರ ಪಟ್ಟಣದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುತ್ತದೆ. ಕಾವೇರಿ ನದಿ ಜಿಲ್ಲೆಯಲ್ಲಿ ಹುಟ್ಟಿದರೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಸೋಮವಾರಪೇಟೆ ಸಮೀಪದ ಮಲ್ಲಳ್ಳಿ ಜಲಪಾತಕ್ಕೆ ತೂಗು ಸೇತುವೆ ನಿರ್ಮಾಣ ಭರವಸೆಯಾಗಿ ಉಳಿದಿದೆ. ಜಿಲ್ಲೆಯ ಸುಂದರ ಜಲಪಾತಗಳಲ್ಲಿ ಮಲ್ಲಳ್ಳಿ ಒಂದು. ಅದನ್ನು ಪ್ರವಾಸಿಗರ ಆಕರ್ಷಣೀಯ ತಾಣ ಮಾಡಬಹುದಿತ್ತು. ಇದುವರೆಗೂ ಅದು ಸಾಧ್ಯವಾಗಿಲ್ಲ. ಹೊನ್ನಮ್ಮನ ಕೆರೆಯನ್ನು ಪ್ರವಾಸಿ ತಾಣ ಮಾಡುವ ಪ್ರಸ್ತಾಪವಿತ್ತು. ಅದು ಬಾಗಿನ ಅರ್ಪಣೆಗೆ ಸೀಮಿತವಾಗಿದೆ! ಕುಶಾಲನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕನ್ನಡ ಭವನಕ್ಕೂ ಇನ್ನೂ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಬೇಕು– ಬೇಡಗಳ ನಡುವೆ ಕುಶಾಲನಗರದ ತನಕ ರೈಲು ಯೋಜನೆ ಬರುವುದು ವಿಳಂಬವಾಗಿದೆ. ಸರ್ವೆ ಮಾತ್ರ ಸೀಮಿತವಾಗಿದೆ. ಕುಶಾಲನಗರ ಆಸುಪಾಸಿನಲ್ಲಿ ಕಾವೇರಿ ನದಿ ಸಂಪೂರ್ಣವಾಗಿ ಕಲುಷಿತಗೊಂಡಿದೆ.

ಅನುದಾನದ ಕೊರತೆ: ಕೊಡಗಿನ ಜಿಲ್ಲಾ ಕೇಂದ್ರವು ಸೊರಗಿದೆ. ಒಳಚರಂಡಿ ಕಾಮಗಾರಿಯು (ಯು.ಜಿ.ಡಿ) ಇಡೀ ಮಂಜಿನ ನಗರಿಯ ಅಂದ ಕೆಡಿಸಿದೆ. ಜನರಲ್‌ ತಿಮ್ಮಯ್ಯ ಮ್ಯೂಸಿಯಂಗೆ ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಕೊಡವ ಹೆರಿಟೇಜ್‌ ಕನಸು ಇನ್ನೂ ನನಸಾಗಿಲ್ಲ. ಸಾಂಸ್ಕೃತಿಕ ಭವನ ಕಾಮಗಾರಿ ಸ್ಥಗಿತವಾಗಿದೆ. ಮಡಿಕೇರಿ ರಸ್ತೆ ವಿಸ್ತರಣೆಗೆ ಕಾಲ ಕೂಡಿ ಬಂದಿಲ್ಲ. ರಾಜಾಸೀಟ್‌ ಉದ್ಯಾನ ಅಭಿವೃದ್ಧಿಯೂ ಹುಸಿಯಾಗಿದೆ. ಇನ್ನು ಮಡಿಕೇರಿ ಕ್ಷೇತ್ರದಲ್ಲೂ ಜಮ್ಮಾ ಸಮಸ್ಯೆ ಇತ್ಯರ್ಥವಾಗಿಲ್ಲ.

ಆಗಿರುವ ಕಾಮಗಾರಿಗಳು: ಮಡಿಕೇರಿಯಲ್ಲಿ ಖಾಸಗಿ ಬಸ್‌ ನಿಲ್ದಾಣ, ಇಂದಿರಾ ಕ್ಯಾಂಟೀನ್‌, ಹಾರಂಗಿಯಲ್ಲಿ ಉದ್ಯಾನ, ಕೆಲವು ಭಾಗದಲ್ಲಿ ಪ್ರಾಥಮಿಕ ಆರೋಗ್ಯ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. ಅಲ್ಲಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ನಡೆದಿದೆ. ಕಸ್ತೂರಿ ರಂಗನ್‌ ವರದಿ ಜಾರಿಯ ಆತಂಕ ಬೆನ್ನು ಬಿಡದೇ ಇನ್ನೂ ಕಾಡುತ್ತಿದೆ.

‘ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಕಾರಣಕ್ಕೆ ಕಡಿಮೆ ಪ್ರಮಾಣ ಅನುದಾನ ಜಿಲ್ಲೆಗೆ ಬಂದಿದೆ. ಐದು ವರ್ಷದಲ್ಲಿ ಕೊಡಗು ಜಿಲ್ಲೆಗೆ ₹ 2 ಸಾವಿರ ಕೋಟಿ ಅನುದಾನ ನೀಡಿದ್ದೇವೆ ಎಂಬುದು ಸುಳ್ಳು. ಅಷ್ಟು ಪ್ರಮಾಣದಲ್ಲಿ ಅನುದಾನ ನೀಡಿದ್ದರೆ ಇದು ಮಾದರಿ ಜಿಲ್ಲೆಯಾಗಿ ರೂಪುಗೊಳ್ಳುತ್ತಿತ್ತು. ಕಾಂಗ್ರೆಸ್‌ ಹಾಗೂ ಬಿಜೆಪಿ ಆರೋಪ– ಪ್ರತ್ಯಾರೋಪದಲ್ಲಿ ಮತದಾರರು ಸಂಕಷ್ಟಪಟ್ಟರು. ಆಡಳಿತ ಹಾಗೂ ವಿರೋಧ ಪಕ್ಷಗಳಲ್ಲಿ ಹೊಂದಾಣಿಕೆ ಕೊರತೆಯಿಂದ ಕ್ಷೇತ್ರವೂ ಸೊರಗಿತು’ ಎಂದು ಮಡಿಕೇರಿ ನಿವಾಸಿ ರಾಜೇಶ್‌ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT