ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿ’ ಫಾರಂ ಗೊಂದಲ: ಯಾರು ಕೆ.ಆರ್‌.ಪೇಟೆ ಜೆಡಿಎಸ್‌ ಅಭ್ಯರ್ಥಿ?

Last Updated 25 ಏಪ್ರಿಲ್ 2018, 10:29 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ವರಿಷ್ಠರು ಕೆ.ಸಿ.ನಾರಾಯಣಗೌಡ ಹಾಗೂ ಬಿ.ಎಲ್‌.ದೇವರಾಜು ಇಬ್ಬರಿಗೂ ‘ಸಿ’ ಫಾರಂ ನೀಡಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿ ಯಾರು ಎಂಬ ಗೊಂದಲ ಸೃಷ್ಟಿಯಾಗಿದೆ.

ಬಿ ಫಾರಂ ಪಡೆಯುವಲ್ಲಿ ಯಶಸ್ವಿಯಾಗಿದ್ದ ಶಾಸಕ ನಾರಾಯಣಗೌಡ ಸೋಮವಾರ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ನಾರಾಯಣಗೌಡರಿಗೆ ನೀಡಿದ್ದ ಬಿ ಫಾರಂ ರದ್ದುಗೊಳಿಸಿ ಬಿ.ಎಲ್‌.ದೇವರಾಜು ಅವರಿಗೆ ಮಂಗಳವಾರ ಸಿ ಫಾರಂ (ಪರಿಷ್ಕರಣಾ ಪತ್ರ) ನೀಡಿದ್ದರು.

‘ನಾರಾಯಣಗೌಡರಿಗೆ ನೀಡಿದ್ದ ಬಿ ಫಾರಂ ಹಿಂದಕ್ಕೆ ಪಡೆಯಲಾಗಿದೆ. ದೇವರಾಜು ಅವರೇ ಅಧಿಕೃತ ಅಭ್ಯರ್ಥಿ’ ಎಂದು ಘೋಷಣೆ ಮಾಡಿ ಚುನಾವಣಾಧಿಕಾರಿಗೆ ಪತ್ರ ನೀಡಿದ್ದರು. ಅದರಂತೆ ಬಿ.ಎಲ್‌.ದೇವರಾಜು ಮಂಗಳವಾರ ಬೆಳಿಗ್ಗೆ 11ಕ್ಕೆ ನಾಮಪತ್ರ ಸಲ್ಲಿಸಿದರು.

ಇದರಿಂದ ವಿಚಲಿತರಾದ ಶಾಸಕ ನಾರಾಯಣಗೌಡ ಬೆಳಿಗ್ಗೆ 11.30ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 2.30ಕ್ಕೆ ಇನ್ನೊಮ್ಮೆ ನಾಮಪತ್ರ ಸಲ್ಲಿಸಿದರು. ‘ನನಗೇ ಸಿ ಫಾರಂ ನೀಡಿದ್ದಾರೆ. ನಾನೇ ಅಧಿಕೃತ ಅಭ್ಯರ್ಥಿ’ ಎಂದು ಹೇಳಿಕೊಂಡರು.

ಈಗ ಅಧಿಕೃತ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಅಭ್ಯರ್ಥಿಗಳನ್ನು ನಿರ್ಧರಿಸುವ ಹೊಣೆ ಚುನಾವಣಾಧಿಕಾರಿಗಳ ಮೇಲಿದೆ. ‘ಮಂಗಳವಾರ ಎಲ್ಲರ ನಾಮಪತ್ರ ಸ್ವೀಕರಿಸಿದ್ದೇವೆ. ಜೆಡಿಎಸ್‌ ಅಧಿಕೃತ ಅಭ್ಯರ್ಥಿ ಯಾರು ಎಂಬುದು ಬುಧವಾರ ನಾಮಪತ್ರ ಪರಿಷ್ಕರಣೆ ವೇಳೆ ತಿಳಿಯಲಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ತಿಳಿಸಿದರು.

ಸಿ ಫಾರಂ ಏಕೆ ಕೊಡುತ್ತಾರೆ?

ರಾಜಕೀಯ ಪಕ್ಷವೊಂದು ತನ್ನ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಲು ‘ಬಿ’ ಫಾರಂ ನೀಡುತ್ತದೆ. ಅದರ ಆಧಾರದ ಮೇಲೆ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸುತ್ತಾರೆ.

ಒಂದು ವೇಳೆ ಅಭ್ಯರ್ಥಿಯನ್ನು ಬದಲಾವಣೆ ಮಾಡಲು ನಿರ್ಧರಿಸಿದರೆ ಪಕ್ಷದ ವರಿಷ್ಠರು ಚುನಾವಣಾಧಿಕಾರಿಗೆ ಒಂದು ‘ಪರಿಷ್ಕರಣಾ ಪತ್ರ’ ನೀಡುತ್ತಾರೆ. ಇದನ್ನೇ ‘ಸಿ’ ಫಾರಂ ಎಂದು ಕರೆಯಲಾಗುತ್ತದೆ. ಪರಿಷ್ಕರಣಾ ಪತ್ರದ ಜೊತೆ ಪಕ್ಷವು ಬದಲಾದ ಅಭ್ಯರ್ಥಿಗೆ ಮತ್ತೊಮ್ಮೆ ‘ಬಿ’ ಫಾರಂ ವಿತರಣೆ ಮಾಡುತ್ತದೆ. ಈ ಪತ್ರದ ಆಧಾರದ ಮೇಲೆ ಚುನಾವಣಾಧಿಕಾರಿಗಳು ಮೊದಲು ಸಲ್ಲಿಸಿದ್ದ ನಾಮಪತ್ರವನ್ನು ರದ್ದು ಮಾಡಿ ಬದಲಾದ ಅಭ್ಯರ್ಥಿಯ ನಾಮಪತ್ರವನ್ನು ಅಧಿಕೃತಗೊಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT