ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಮುಖಂಡರ ವಿರುದ್ಧ ವಾಗ್ದಾಳಿ

ಎರಡನೆ ಬಾರಿಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಅಭ್ಯರ್ಥಿ, ಸಚಿವ ಎ.ಮಂಜು
Last Updated 25 ಏಪ್ರಿಲ್ 2018, 10:51 IST
ಅಕ್ಷರ ಗಾತ್ರ

ಅರಕಲಗೂಡು: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಮಂಗಳವಾರ ತಮ್ಮ ಅಪಾರ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಎರಡನೇ ಬಾರಿ ನಾಮಪತ್ರ ಸಲ್ಲಿಸಿದರು.

ಕ್ಷೇತ್ರದ ವಿವಿಧ ಭಾಗದಿಂದ ಅಪಾರ ಬೆಂಬಲಿಗರು ಬೈಕ್ ರ‍್ಯಾಲಿಯಲ್ಲಿ ಬಂದು ಪಟ್ಟಣದ ಬನ್ನಿ ಮಂಟಪದ ಬಳಿ ಜಮಾಯಿಸಿದರು. ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದ ಎ.ಮಂಜು ಅವರ ಪರವಾಗಿ ಕಾರ್ಯಕರ್ತರು ಘೋಷಣೆ ಮೊಳಗಿಸಿದರು. ಅನಕೃ ವೃತ್ತದಿಂದ ಕೋಟೆ ಮಾರ್ಗವಾಗಿ ತಾಲ್ಲೂಕು ಕಚೇರಿಗೆ ತೆರಳಿ ಸಹಾಯಕ ಚುನಾವಣಾಧಿಕಾರಿ ವೆಂಕಟರಮಣ ರೆಡ್ಡಿ ಅವರಿಗೆ ಉಮೇದುವಾರಿಕೆ  ಸಲ್ಲಿಸಿದರು.

ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ‘ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಹೋರಾಟದ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದೇನೆ. ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರಂತೆ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವನಲ್ಲ’ ಎಂದು ವ್ಯಂಗ್ಯವಾಡಿದರು.

ಕಳೆದ 40 ವರ್ಷಗಳಿಂದ ರಾಜಕಾರಣ ಮಾಡಿ ಪ್ರಧಾನಿ, ಮುಖ್ಯಮಂತ್ರಿ ಹುದ್ದೆ ಅನುಭವಿಸಿದ ದೇವೇಗೌಡರ ಕುಟುಂಬದವರು ಮಾಡಿದ ಅಭಿವೃದ್ಧಿ ಕೆಲಸವನ್ನು ಸಚಿವ ಸ್ಥಾನ ಸಿಕ್ಕ ಎರಡೇ ವರ್ಷದಲ್ಲೇ ಮಾಡಿರುವುದಾಗಿ ಹೇಳಿದರು.

‘ರಾಮಸ್ವಾಮಿ ಅವರು ಮೂರು ಬಾರಿ ಶಾಸಕರಾಗಿ ತಾಲ್ಲೂಕಿಗೆ ನೀಡಿದ ಕೊಡುಗೆ ಏನು? ಅವಕಾಶ ದೊರೆತಾಗ ಅಭಿವೃದ್ಧಿ ಕೆಲಸ ಮಾಡದೆ ಪುನಃ ಗೆದ್ದರೆ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುವ ಇವರಿಂದಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ಅಧಿಕಾರಿಗಳ ಮೇಲೆ ಕೇಸು ದಾಖಲಿಸಿ ಕಿರುಕುಳ ನೀಡಲಾಯಿತು’ ಎಂದು ವಾಗ್ದಾಳಿ ನಡೆಸಿದರು. ನನ್ನ ಅವಧಿಯಲ್ಲಿ ಕೈಗೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ಕಳಪೆ ಕಾಮಗಾರಿಯಾಗಿವೆ ಎಂದು ದೂರುವ ವಿರೋಧ ಪಕ್ಷದ ಮುಖಂಡರು, ಈ ಕುರಿತು ಲಿಖಿತವಾಗಿ ಏಕೆ ದೂರು ನೀಡಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಕ್ಷೇತ್ರದಲ್ಲಿ ಜನಸೇವಕನಾಗಿ ಸಲ್ಲಿಸಿರುವ ನನ್ನ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮತ್ತೊಮ್ಮೆ ನನಗೆ ಆಶೀರ್ವದಿಸಬೇಕು ಎಂದರು.

ಮುಖಂಡರಾದ ಭೈರೇಗೌಡ, ಶಂಭೇಗೌಡ, ರಂಗೇಗೌಡ, ಪ್ರಸನ್ನಕುಮಾರ್, ಜಿ.ಪಂ ಸದಸ್ಯರಾದ ಬಿ.ಎಂ. ರವಿ, ಎಸ್.ಪಿ. ರೇವಣ್ಣ ಮುಂತಾದ ಪ್ರಮುಖರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT