ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಶಕಗಳಲ್ಲಿ ₹10 ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ ಅಸಾರಾಂ ಬಾಪು

Last Updated 25 ಏಪ್ರಿಲ್ 2018, 12:20 IST
ಅಕ್ಷರ ಗಾತ್ರ

ಬೆಂಗಳೂರು: ಅದು 70ರ ದಶಕ, ಸಾಬರಮತಿ ನದಿ ತೀರದ ಸಣ್ಣ ಗುಡಿಸಲಿನಲ್ಲಿ ಅಸಾರಾಂ ಬಾಪು ವಾಸ. ನಾಲ್ಕು ದಶಕಗಳಲ್ಲಿ ಸ್ಥಿತಿ ಪೂರ್ಣ ಬದಲಾಯಿತು. ಸ್ವಘೋಷಿತ ದೇವಮಾನವನಾದ ಅಸಾರಾಂ ಬಾಪು ಕಟ್ಟಿಕೊಂಡಿದ್ದು ₹10 ಸಾವಿರ ಕೋಟಿ ಸಾಮ್ರಾಜ್ಯ. ಒಂದು ಗುಡಿಸಲಿನಿಂದ ಜಗತ್ತಿನಾದ್ಯಂತ 400 ಆಶ್ರಮ ಕಟ್ಟುವಷ್ಟು ತನ್ನ ಕೀರ್ತಿ ವಿಸ್ತರಿಸಿಕೊಂಡರು.

2013ರಲ್ಲಿ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಂ ಬಂಧನವಾದ ಬಳಿಕ ಆಶ್ರಮದಲ್ಲಿದ್ದ ಅನೇಕ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಪೊಲೀಸರ ತನಿಖೆಯಲ್ಲಿ ₹10 ಸಾವಿರ ಕೋಟಿ ಮೌಲ್ಯದ ಆಸ್ತಿ ದಾಖಲೆಗಳು ಬಹಿರಂಗಗೊಂಡಿದ್ದವು. ಇದರೊಂದಿಗೆ ಅನೇಕ ಭಾಗಗಳಲ್ಲಿನ ಜಮೀನಿನ(ಮೌಲ್ಯ ಗುರುತಿಸದ) ಕುರಿತ ದಾಖಲೆಗಳೂ ದೊರೆತಿದ್ದವು.

ನಾಲ್ಕನೇ ತರಗತಿ ವರೆಗೆ ಓದು: ಅತ್ಯಾಚಾರ ಪ‍್ರಕರಣದ ಆರೋಪದ ನಂತರ  ಭೂಕಬಳಿಕೆ ಹಾಗೂ ಆಶ್ರಮದಲ್ಲಿ ಮಾಟ–ಮಂತ್ರ ನಡೆಸುತ್ತಿರುವ ಸಂಬಂಧ ಆರೋಪವರಿಸಲಾಗಿತ್ತು. ಅಸಾರಾಂ ವೆಬ್‌ಸೈಟ್‌ನಲ್ಲಿನ ಸಾಕ್ಷ್ಯಚಿತ್ರದ ಪ್ರಕಾರ, 1941ರಲ್ಲಿ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಜನಿಸಿದ ಅಸುಮಲ್‌ ಸರುಮಲಾನಿ 1947ರ ದೇಶ ವಿಭಜನೆ ಬಳಿಕ ಪಾಲಕರೊಂದಿಗೆ ಅಹಮದಾಬಾದ್‌ಗೆ ಬಂದರು.

ಮಣಿನಗರ ಪ್ರದೇಶದಲ್ಲಿ ನಾಲ್ಕನೇ ತರಗತಿ ವರೆಗೂ ವ್ಯಾಸಂಗ ಮಾಡಿದ್ದ ಅಸುಮಲ್‌, ತಂದೆ ಥೌಮಲ್‌ ಸಾವಿನಿಂದಾಗಿ ಓದು ಅಪೂರ್ಣಗೊಂಡಿತು. 10 ವರ್ಷದ ಬಾಲಕನಿದ್ದಾಗಲೇ ಸಣ್ಣಪುಟ್ಟ ಕಾರ್ಯನಿರ್ವಹಿಸುತ್ತ ಅಸುಮಲ್‌ ಕೆಲ ವರ್ಷಗಳಲ್ಲಿ ಆಧ್ಯಾತ್ಮಿಕ ಸೆಳೆತದಿಂದ ಹಿಮಾಲಯದ ಕಡೆಗೆ ಪ್ರಯಾಣ ಬೆಳೆಸುತ್ತಾನೆ. ಅಲ್ಲಿ ಗುರು ಲಿಲಾಶಾ ಬಾಪು ಆಶೀರ್ವಾದ ಸಿಗುತ್ತದೆ.

ಅದೇ ಗುರು ಅಸುಮಲ್‌ಗೆ 1964ರಲ್ಲಿ ‘ಅಸಾರಾಂ’ ಎಂದು ಹೆಸರಿಟ್ಟು ಜನರಿಗೆ ಮಾರ್ಗದರ್ಶನ ನೀಡುವಂತೆ ತಿಳಿಸುತ್ತಾರೆ. 70ರ ದಶಕದಲ್ಲಿ ಅಹಮದಾಬಾದ್‌ನ ಸಾಬರಮತಿ ನದಿ ತೀರದ ಮೊಟೇರಾ ಪ್ರದೇಶಕ್ಕೆ ಬಂದು ಅವರು ತಪಸ್ಸು ನಡೆಸುತ್ತಾರೆ. 1972ರಲ್ಲಿ ಗುಡಿಸಲಿನಲ್ಲಿಯೇ ‘ಮೋಕ್ಷ ಕುಟೀರ’ ಪ್ರಾರಂಭಿಸುವ ಮೂಲಕ ಆಧ್ಯಾತ್ಮಿಕ ಗುರುವಿನ ಹಾದಿ ಪ್ರಾರಂಭವಾಗುತ್ತದೆ.

ಕೆಲವೇ ವರ್ಷಗಳಲ್ಲಿ ಜನರ ನಡುವೆ ‘ಸಂತ ಆಸಾರಾಂಜೀ ಬಾಪು’ ಎಂದೇ ಖ್ಯಾತರಾಗುತ್ತಾರೆ. ಗುಡಿಸಲು ಸುಸಜ್ಜಿತ ಆಶ್ರಮವಾಗಿ ಬದಲಾಗುತ್ತದೆ. ಮುಂದಿನ ನಲವತ್ತು ವರ್ಷಗಳಲ್ಲಿ ಭಾರತ ಸೇರಿ ಹೊರ ದೇಶದಲ್ಲಿ ಒಟ್ಟು 400 ಆಶ್ರಮಗಳು ಸ್ಥಾಪನೆಯಾಗುತ್ತವೆ. ಮೊಟೇರಾ ಪ್ರದೇಶದ ಆಶ್ರಮದಲ್ಲಿ ಅಸಾರಾಂರನ್ನು ಗುರುವಾಗಿ ಸ್ವೀಕರಿಸಿರುವ ಅನೇಕ ಭಕ್ತರು ಇಂದಿಗೂ ಅವರನ್ನು ಭಜಿಸುತ್ತಿದ್ದಾರೆ.

ಲಕ್ಷ್ಮೀ ದೇವಿ ಅವರನ್ನು ವಿವಾಹವಾಗಿರುವ ಅಸಾರಾಂ ದಂಪತಿಗೆ ನಾರಾಯಣ್‌ ಸಾಯಿ ಮತ್ತು ಭಾರತಿ ದೇವಿ ಇಬ್ಬರು ಮಕ್ಕಳು. ಸದ್ಯ ನಾರಾಯಣ್‌ ಸಾಯಿ ಕಾರಾಗೃಹದಲ್ಲಿದ್ದಾರೆ. 

ನಿಗೂಢ ಸಾವು: ಗುರುಕುಲದಲ್ಲಿದ್ದ ದೀಪೇಶ್‌ ಮತ್ತು ಅಭಿಷೇಕ್‌ ವಘೇಲಾ ಸಹೋದರರ ಮೃತದೇಹ 2008ರಲ್ಲಿ ಆಶ್ರಮದ ಸಮೀಪ ನದಿ ತೀರದಲ್ಲಿ ಪತ್ತೆಯಾಗುತ್ತದೆ. ಈ ಪ್ರಕರಣದ ಸಂಬಂಧ ಗುಜರಾತ್‌ ರಾಜ್ಯದ ಸಿಐಡಿ, ಆಶ್ರಮದ ಏಳು ಜನರ ವಿರುದ್ಧ ದೂರು ದಾಖಲಿಸಿತ್ತು. ಆಶ್ರಮದಲ್ಲಿ ಮಾಟ–ಮಂತ್ರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹತ್ಯೆಯಾಗಿದೆ ಎಂದು ಮೃತ ಸಹೋದರರ ಪಾಲಕರು ಆರೋಪಿಸಿದ್ದರು.

ಆದರೆ, ಅಸಾರಾಂಗೆ ಹೊಡೆತ ನೀಡಿದ್ದು 2013ರಲ್ಲಿ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ. ಈ ಪ‍್ರಕರಣದ ಸಂಬಂಧ ಅವರನ್ನು ರಾಜಸ್ತಾನದಲ್ಲಿ ಪೊಲೀಸರು ಬಂಧಿಸುತ್ತಾರೆ. ಆ ಬೆನ್ನಲೇ ಸೂರತ್‌ ಮೂಲದ ಸಹೋದರಿಯರು ಅಸಾರಾಂ ಮತ್ತು ಅವರ ಪುತ್ರ ನಾರಾಯಣ್‌ ಸಾಯಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುತ್ತಾರೆ.

ಸೂರತ್‌ ಸಹೋದರಿಯರು ನೀಡಿದ ದೂರಿನ ಮೇಲೆ ಅಲ್ಲಿನ ಪೊಲೀಸರು 2013ರ ಅಕ್ಟೋಬರ್‌ 6ರಂದು ಪ್ರಕರಣ ದಾಖಲಿಸುತ್ತಾರೆ.

2013ರ ಆಗಸ್ಟ್ 15ರಂದು ಅಸಾರಾಂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಛಿಂದ್ವಾರದಲ್ಲಿರುವ ಅಸಾರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉತ್ತರಪ್ರದೇಶದ ಷಹಜಹಾನ್‌ಪುರದ ಬಾಲಕಿ ದೂರು ನೀಡುತ್ತಾಳೆ. ದೂರು ಆಧರಿಸಿ 2013ರ ಸೆಪ್ಟೆಂಬರ್ 1ರಂದು ಇಂದೋರ್‌ನಲ್ಲಿ ಅಸಾರಾಂರನ್ನು ಬಂಧಿಸಿ ಜೋಧಪುರಕ್ಕೆ ಕರೆತರಲಾಗಿತ್ತು. 2013ರ ಸೆಪ್ಟೆಂಬರ್ 2 ರಿಂದ ಅಸಾರಾಂ ನ್ಯಾಯಾಂಗ ವಶದಲ್ಲಿದ್ದಾರೆ.

(ಮೂಲ ವರದಿ: ಡಿಎನ್‌ಎ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT