ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಕ್ಷೇತ್ರಗಳಲ್ಲಿ ಬಂಡಾಯ ಜೋರು

ಬಿಜೆಪಿ, ಜೆಡಿಎಸ್‌ನಲ್ಲಿ ಅಸಮಾಧಾನ; ಪಕ್ಷಾಂತರ, ಸ್ವತಂತ್ರ ಸ್ಪರ್ಧೆ
Last Updated 25 ಏಪ್ರಿಲ್ 2018, 12:19 IST
ಅಕ್ಷರ ಗಾತ್ರ

ಮೈಸೂರು: ಟಿಕೆಟ್‌ ಸಿಗದ ಅಸಮಾಧಾನದಿಂದ ಮೈಸೂರು ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಮುಖಂಡರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.

ಕೆಲವರು ಪಕ್ಷಾಂತರ ಮಾಡಿದರೆ, ಇನ್ನು ಕೆಲವರು ಪಕ್ಷೇತರ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ‘ಬಿ’ ಫಾರಂ ಕೈತಪ್ಪಿದ್ದರಿಂದ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಕೆಲವರು ಈಗ ಸುಮ್ಮನಾಗಿದ್ದಾರೆ.

ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿ ಕೆ.ಹರೀಶ್‌ ಗೌಡ ಸ್ಪರ್ಧಿಸಿದ್ದಾರೆ. ಸ್ಪರ್ಧೆ ಮಾಡದಂತೆ ಮನವೊಲಿಸಲು ಪಕ್ಷದ ವರಿಷ್ಠ ಎಚ್‌.ಡಿ.ರೇವಣ್ಣ ಪ್ರಯತ್ನಿಸಿ ವಿಫಲರಾದರು. ಈ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಪ್ರೊ.ಕೆ.ಎಸ್‌.ರಂಗಪ್ಪ ಕಣಕ್ಕಿಳಿದಿದ್ದಾರೆ.

ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎಚ್.ವಿ.ಕೃಷ್ಣಸ್ವಾಮಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಈ ಕ್ಷೇತ್ರದಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಸಿದ್ದರಾಜು ಸ್ಪರ್ಧಿಸಿದ್ದಾರೆ.

ಕಾಂಗ್ರೆಸ್‌ನತ್ತ ಗಣೇಶ್‌: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಚ್.ಡಿ.ಗಣೇಶ್‌ ಅವರು ಕಾಂಗ್ರೆಸ್‌ನತ್ತ ಹೆಜ್ಜೆ ಇಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಉದ್ಯಮಿ ಎಸ್‌.ಮಂಜುನಾಥ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿದೆ.

‘ನನಗೆ ಟಿಕೆಟ್‌ ನೀಡದೆ ಇರುವುದರಿಂದ ಬೇಸತ್ತು ಪಕ್ಷ ತೊರೆಯುತ್ತಿದ್ದೇನೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗುತ್ತೇನೆ’ ಎಂದಿದ್ದಾರೆ.

ಕೆ.ಆರ್‌.ನಗರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಹೊಸಹಳ್ಳಿ ವೆಂಕಟೇಶ್ ಅವರು ಉಮೇದುವಾರಿಕೆ ಸಲ್ಲಿಸಿದರು. ಈ ಕ್ಷೇತ್ರದಲ್ಲಿ ಶ್ವೇತಾ ಗೋಪಾಲ್ ಅವರಿಗೆ ಬಿಜೆಪಿ ಟಿಕೆಟ್‌ ಲಭಿಸಿದೆ.

‘ಪಟ್ಟಣದಲ್ಲಿ ನಡೆದ ಪರಿವರ್ತನಾ ರ‍್ಯಾಲಿ ವೇಳೆ ಯಡಿಯೂರಪ್ಪ ನನ್ನನ್ನು ಗೆಲ್ಲಿಸುವಂತೆ ಜನರನ್ನು ಕೋರಿದ್ದರು. ಸಿ.ಪಿ.ಯೋಗೇಶ್ವರ್‌ ಕೂಡ ನನ್ನ ಪರವಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಕುತಂತ್ರ ನಡೆದಿದೆ’ ಎಂದು ಅವರು ಆರೋಪಿಸಿದ್ದಾರೆ.

ಎಸ್ಪಿಯಿಂದ ನಟರಾಜ್‌: ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಈಚೆಗೆ ಬಿಜೆಪಿ ಸೇರಿದ್ದ ಬಿ.ಎಂ.ನಟರಾಜ್ ಅವರಿಗೆ ನರಸಿಂಹರಾಜ ಕ್ಷೇತ್ರದಿಂದ ಪಕ್ಷದ ಟಿಕೆಟ್‌ ಸಿಗಲಿಲ್ಲ. ಹೀಗಾಗಿ, ಅವರು ಸಮಾಜವಾದಿ ಪಕ್ಷದಿಂದ (ಎಸ್ಪಿ) ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಂದೇಶ್‌ ಸ್ವಾಮಿ ಕಣಕ್ಕಿಳಿದಿದ್ದಾರೆ.

ಅಸಮಾಧಾನ ಶಮನ: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಎಚ್‌.ವಿ.ರಾಜೀವ್‌ ಅವರು ತಮ್ಮ ಬೆಂಬಲಿಗರ ಸಭೆ ನಡೆಸಿದ್ದರು. ಪಕ್ಷೇತರರಾಗಿ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಾಯಿಸಿದ್ದರು. ಈ ಕ್ಷೇತ್ರದಲ್ಲಿ ಎಸ್‌.ಎ.ರಾಮದಾಸ್‌ ಕೊನೆ ಗಳಿಗೆಯಲ್ಲಿ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಆರಂಭದಲ್ಲಿ ಬೇಸರ ಇದ್ದದು ನಿಜ. ಅದೀಗ ಶಮನಗೊಂಡಿದ್ದು, ನಗರ ಪ್ರದೇಶದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ’ ಎಂದು ರಾಜೀವ್‌ ಪ್ರತಿಕ್ರಿಯಿಸಿದರು.

ನಂಜನಗೂಡು ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಕೋಟೆ ಎಂ.ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು. ತಿ.ನರಸೀಪುರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಡಾ.ಭಾರತೀಶಂಕರ್‌ ಕೂಡ ಬೆಂಬಲಿಗರ ಬಳಿ ಅಸಮಾಧಾನ ತೋಡಿಕೊಂಡಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ ಸಿಗದ ಕಾರಣ ಅಸಮಾಧಾನಗೊಂಡಿದ್ದ ಮಹೇಶ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಚಾಮರಾಜ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಎಸ್.ಜಯಪ್ರಕಾಶ್ ಮುಂದಾಗಿದ್ದಾರೆ. ಬಿಜೆಪಿ ವರಿಷ್ಠರಿಗೆ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ.

ಬಂಡಾಯ ಅಭ್ಯರ್ಥಿಗಳು

ಅಭ್ಯರ್ಥಿ   ಕ್ಷೇತ್ರ

ಎಚ್‌.ವಿ.ಕೃಷ್ಣಸ್ವಾಮಿ -ಎಚ್‌.ಡಿ.ಕೋಟೆ

ಕೆ.ಹರೀಶ್‌ ಗೌಡ - ಚಾಮರಾಜ

ಬಿ.ಎಂ.ನಟರಾಜ್‌ -ನರಸಿಂಹರಾಜ

ಎಸ್‌.ಜಯಪ್ರಕಾಶ್‌ - ಚಾಮರಾಜ

ಹೊಸಹಳ್ಳಿ ವೆಂಕಟೇಶ್‌ -ಕೆ.ಆರ್‌.ನಗರ

ಮಹೇಶ್‌- ತಿ.ನರಸೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT