ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಗಡಿಗೆ ಮಂಜು ಕೊಡುಗೆ ಏನು’

ಸುದ್ದಿಗೋಷ್ಠಿಯಲ್ಲಿ ಡಿ.ಸಿ.ಸಿ ಸದಸ್ಯ ಆರ್.ಎಸ್.ನಾಗೇಶ್ ಸವಾಲು
Last Updated 25 ಏಪ್ರಿಲ್ 2018, 12:42 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ‘ಮಾಗಡಿ ಕ್ಷೇತ್ರದಲ್ಲಿ ಎಚ್.ಸಿ.ಬಾಲಕೃಷ್ಣ ಅವರ ಅಭಿವೃದ್ಧಿ ಕೆಲಸದ ಬಗ್ಗೆ ಪ್ರಶ್ನೆ ಮಾಡುವ ಜೆಡಿಎಸ್ ಅಭ್ಯರ್ಥಿ ಎ.ಮಂಜುರವರು ಕ್ಷೇತ್ರಕ್ಕೆ ತಮ್ಮ ಕೊಡುಗೆ ಏನೆಂದು ಜನರ ಮುಂದೆ ಬಹಿರಂಗ ಪಡಿಸಲಿ’ ಎಂದು ಡಿ.ಸಿ.ಸಿ ಸದಸ್ಯ ಆರ್.ಎಸ್.ನಾಗೇಶ್ ಸವಾಲು ಹಾಕಿದರು.

‘ಮಾಗಡಿ ಕ್ಷೇತ್ರದ ಶಾಸಕರಾಗಿದ್ದ ಎಚ್‌.ಸಿ. ಬಾಲಕೃಷ್ಣ ಕಾಂಗ್ರೆಸ್ ಜೊತೆ ಗುರುತಿಸಿಕೊಂಡ ಮೇಲೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತಂದು ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯ
ಗಳನ್ನು ಕೈಗೊಂಡಿದ್ದಾರೆ.

ಮಂಚನಬೆಲೆ ಜಲಾಶಯದಿಂದ ಬಿಡದಿಯ ನಲ್ಲಿಗುಡ್ಡ ಕೆರೆಗೆ ನೀರು ಹರಿಸುವ ಶಾಶ್ವತ ಕುಡಿಯುವ ನೀರಿನ ಯೋಜನೆ ಮತ್ತು ಯುಜಿಡಿ ಸಂಪರ್ಕ ಕಾಮಗಾರಿಗೆ ಸುಮಾರು ₹170 ಕೋಟಿ ಮೊತ್ತದ ಯೋಜನೆಗೆ ಸಚಿವ ಸಂಪುಟದಿಂದ ಅನುಮೋದನೆ ದೊರೆಯುವಂತೆ ಮಾಡಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕಾಂಗ್ರೆಸ್ ಮುಖಂಡ ರಾಮನಹಳ್ಳಿ ಗೋಪಾಲ್ ಮಾತನಾಡಿ ‘ಎ.ಮಂಜು ಅವರ ತಂದೆ ಅಳಗಿರಿರವರು ಬೈರಮಂಗಲ ಕೆರೆಗೆ ಅಣೆಕಟ್ಟು ನಿರ್ಮಾಣ ಕಾಮಗಾರಿ ಮಾಡುವ ಸಮಯದಲ್ಲಿ ತಮಿಳುನಾಡಿನಿಂದ ವಲಸೆ ಬಂದು ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ರಾಮನಹಳ್ಳಿಯ ಗೌರಮ್ಮ ಎಂಬುವರನ್ನು ವಿವಾಹವಾಗಿ ಇಲ್ಲೇ ನೆಲೆ ಕಂಡುಕೊಂಡರು, ಹೀಗಾಗಿ ಎ.ಮಂಜುರವರ ತಂದೆ ತಮಿಳುನಾಡು ಮೂಲದವರು ಎಂಬ ವಿಚಾರ ಗುಪ್ತವಾಗೇನೂ ಉಳಿದಿಲ್ಲ. ಇದನ್ನೇ ಬಾಲಕೃಷ್ಣರವರೂ ಹೇಳಿದ್ದಾರೆ’ ಎಂದರು.

ಮುಖಂಡ ಆರ್. ಜಯಚಂದ್ರ ಮಾತನಾಡಿ ‘ಬಿಡದಿ ಹೋಬಳಿಯಲ್ಲಿ ಕಾಂಗ್ರೆಸ್ ಹಿಂದಿನ ಚುನಾವಣೆಯಲ್ಲಿಯೂ ಸುಮಾರು 1,500 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಪಡೆದಿತ್ತು. ಮೂಲ ಒಕ್ಕಲಿಗ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಎಲ್ಲ ಗ್ರಾಮಗಳಲ್ಲಿ ಸಮುದಾಯದ ಹಿರಿಯರು ಗುಪ್ತ ಸಮಾಲೋಚನೆ ನಡೆಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣರವರಿಗೆ 5 ಸಾವಿರಕ್ಕೂ ಹೆಚ್ಚಿನ ಮತಗಳ ಮುನ್ನಡೆ ದೊರೆಯಲಿದೆ’
ಎಂದರು.

ಕಾಂಗ್ರೆಸ್ ಮುಖಂಡ ರಾಮನಹಳ್ಳಿ ರಾಜೇಶ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಸಂಚಾಲಕ ಇಟ್ಟಮಡು ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT