ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಅಧಿಕಾರ ಸಿಕ್ಕರೆ ಅಪಾಯ

ಮೋಸದಲ್ಲಿ ಅಮಿತ್ ಶಾ ಚತುರ: ನಟ ಪ್ರಕಾಶ್ ರೈ ಅಭಿಮತ
Last Updated 25 ಏಪ್ರಿಲ್ 2018, 13:05 IST
ಅಕ್ಷರ ಗಾತ್ರ

ಉಡುಪಿ: ‘ಧರ್ಮ ಇರುವುದು ಬೆಂಕಿ ಹಚ್ಚಲು ಅಲ್ಲ, ದೀಪ ಬೆಳಗಿ ಆ ಬೆಳಕಿನಲ್ಲಿ ಮುನ್ನಡೆಯಲು’ ಎಂದು ನಟ ಪ್ರಕಾಶ್ ರೈ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಡಾ. ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸಂವಿಧಾನ ರಕ್ಷಿಸಿ ದೇಶ ಉಳಿಸಿ’ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಮಠ, ಧರ್ಮ ಪೀಠಗಳನ್ನು ಬಳಸಿಕೊಂಡು ಬಿಜೆಪಿ ಮಾಡುತ್ತಿರುವ ಕುಟಿಲ ರಾಜಕೀಯವನ್ನು ವಿರೋಧಿಸುವವರನ್ನು ಧರ್ಮ ವಿರೋಧಿ ಎಂದು ಬಣ್ಣಿಸುತ್ತಾರೆ.ಹಿಂದೂ ಧರ್ಮ ಬೇರೆ ಹಾಗೂ ಹಿಂದುತ್ವ ಬೇರೆ ಎಂಬುದನ್ನು ನಮ್ಮ ಧರ್ಮದ ಸಹೋದರ– ಸಹೋದರಿಯರಿಗೆ ತಿಳಿಸಿಕೊಡಬೇಕು ಎಂದರು.

‘ಬಹುಸಂಖ್ಯಾತರು ಅಲ್ಪಸಂಖ್ಯಾತ ರನ್ನು ತುಳಿಯುವ ಪ್ರಯತ್ನ ವ್ಯವಸ್ಥಿತ ವಾಗಿ ನಡೆಯುತ್ತಿದೆ. ಸಜ್ಜನರ ಊಹೆಗೂ ನಿಲುಕದ ರೀತಿಯಲ್ಲಿ ದ್ರೋಹದ ಪಿತೂರಿ ಮಾಡಲಾಗುತ್ತಿದೆ. ದೇಶದ ಎಲ್ಲ ಧರ್ಮ, ಜಾತಿಯ ಜನರೂ ಬದುಕಬೇಕು ಎಂದು ಅಂಬೇಡ್ಕರ್ ಸಂವಿಧಾನ ನೀಡಿದರು. ಆದರೆ ಅಂಬೇಡ್ಕರ್ ಅವರ ಮೂರ್ತಿಯೇ ಬಂಧಿಯಾಗುವಂತ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಸಂವಿಧಾನವನ್ನು ರಕ್ಷಿಸಿ ಎಂದು ಹೇಳುವಂತಹ ವಾತಾವರಣ ನಿರ್ಮಾಣವಾಗಿರುವುದಕ್ಕೆ ನಾಚಿಕೆಯಾಗಬೇಕು’ ಎಂದು ಹೇಳಿದರು.

‘ಕೋಮುವಾದ ಎಂಬುವುದು ಬಿಜೆಪಿಯ ನಾಲಗೆ ತುದಿಯಲ್ಲಿದೆ. ಅಶಾಂತಿ ಹುಟ್ಟಿಸಿ ಭೇದ ಮಾಡಿ ಚುನಾವಣೆಯನ್ನು ಗೆಲ್ಲಲು ಅಮಿತ್ ಷಾ ನೋಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಆಗುತ್ತದೆ, ಅದರ ವಿರುದ್ಧ ದೂರು ನೀಡದ ಆಕೆಯ ತಂದೆಯನ್ನು ಕೊಲೆ ಮಾಡುತ್ತಾರೆ. ಇಷ್ಟೆಲ್ಲಾ ಆದ ನಂತರ ಬಿಜೆಪಿಯ ಶಾಸಕನನ್ನು ಬಂಧಿಸುತ್ತಾರೆ. ಇಂತಹ ಪಕ್ಷಕ್ಕೆ ದೇಶವನ್ನು ಕೊಡುವುದು ಹೇಗೆ. ಸಂವಿಧಾನ ಬದಲಾಯಿಸುತ್ತೇವೆಂದು ಹೇಳುವವರಿಗೆ ದೇಶ ಕೊಡುವುದು ಹೇಗೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ದೊಡ್ಡ ದುರಂತ ನೋಡಬೇಕಾಗುತ್ತದೆ’ ಎಂದರು.

ಸಂವಿಧಾನ ಉಳಿವಿಗಾಗಿ ಕರ್ನಾಟಕದ ಸಂಚಾಲಕ ಕೆ.ಎಲ್. ಅಶೋಕ್. ಜಿಲ್ಲಾ ಮುಸ್ಲಿಂ ಒಕ್ಕೂಟದ ಮಹಮ್ಮದ್ ಯಾಸಿನ್ ಮಲ್ಪೆ, ಕೋಮು ಸೌಹಾರ್ದ ವೇದಿಕೆ ಅಧ್ಯಕ್ಷ ಜಿ. ರಾಜಶೇಖರ್ ಇದ್ದರು.

ಸಿ.ಎಂ ಯೋಗಿ ಪೂಜಾರಿಯೇ?– ಪ್ರಕಾಶ್‌ ರೈ ಪ್ರಶ್ನೆ

ನಮ್ಮ ಕೋಮಿನ ಬಾಲಕಿಯನ್ನು ಸೆಳೆದರೆ, ನಿಮ್ಮ ಕೋಮಿನ 100 ಬಾಲಕಿಯರನ್ನು ಹೊತ್ತುಕೊಂಡು ಬರುತ್ತೇವೆ ಎಂದು ಹೇಳುವ. ಕೊಲೆ ಮಾಡಿ ಎಂದು ಹೇಳುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಪೂಜಾರಿ, ಮಹಂತರಂತೆ. ಕೊಲೆ ಮಾಡಲು ಹೇಳುವವರು ಪೂಜಾರಿಯೇ ಎಂದು ಪ್ರಕಾಶ್ ರೈ ಪ್ರಶ್ನಿಸಿದರು.

ಜಾತ್ಯತೀತರು ಎಂದರೆ ಅಪ್ಪ– ಅಮ್ಮನ ರಕ್ತದ ಪರಿಚಯ ಇಲ್ಲದವರು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳುತ್ತಾರೆ. ಆದರೆ ರಕ್ತದ ಪರಿಚಯ ಬೇಕಾಗಿರುವುದು ಸಾಮಾನ್ಯರಿಗೆ ಅಲ್ಲ, ರಕ್ತವನ್ನು ಕುಡಿಯುವವರಿಗೆ ಹಾಗೂ ರೋಗ ಇರುವವರಿಗೆ ಮಾತ್ರ. ಅಷ್ಟಕ್ಕೂ ಒಂದು ಕೋಮಿನ ಜನರನ್ನು ಅಳಿಸಿ ಹಾಕುತ್ತೇನೆ ಎಂದು ಹೇಳುವ ವ್ಯಕ್ತಿ ಧರ್ಮದ ವಕ್ತಾರನಾಗಲು ಹೇಗೆ ಸಾಧ್ಯ ಎಂದರು. ಧರ್ಮ ಬೆಳೆಸಬೇಕು ಎಂದರೆ ಮಠ, ಧರ್ಮಪೀಠವನ್ನು ಕಟ್ಟಿ. ಅದಕ್ಕಾಗಿ ಸರ್ಕಾರ ರಚಿಸುವ ಕೆಲಸ ಬೇಡ ಎಂದರು.

**
ದೇಶಕ್ಕೆ ದಿಕ್ಸೂಚಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜನರು ಕರ್ತವ್ಯ ನಿರ್ವಹಿಸಬೇಕು. ಯಾಮಾರಿದರೂ ಕೋಮುವಾದಿಗಳು ಅಟ್ಟಹಾಸ ಮೆರೆಯುತ್ತಾರೆ
– ಮಾವಳ್ಳಿ ಶಂಕರ್, ಡಿಎಸ್‌ಎಸ್ ರಾಜ್ಯ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT