ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಕುಸಿಯುತ್ತಿರುವ ಪುಸ್ತಕ ಪ್ರೀತಿ

ಸರ್ವಜ್ಞ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಬಡಿಗೇರ ಆತಂಕ
Last Updated 25 ಏಪ್ರಿಲ್ 2018, 13:18 IST
ಅಕ್ಷರ ಗಾತ್ರ

ಯಾದಗಿರಿ: ‘ಡಿಜಿಟಲ್ ತಂತ್ರಜ್ಞಾನ ಬೆಳವಣಿಗೆಯಿಂದ ನೈಜ ಪುಸ್ತಕ ಪ್ರೀತಿ ಕಡಿಮೆಯಾಗಿದೆ’ ಎಂದು ಸರ್ವಜ್ಞ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಬಡಿಗೇರ ಅಭಿಪ್ರಾಯಪಟ್ಟರು.

ಕನ್ನಡ ಪುಸ್ತಕ ಪ್ರಾಧಿಕಾರ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಯಾದಗಿರಿ, ಕೋಲೂರು ಮಲ್ಲಪ್ಪ ಸ್ಮಾರಕ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜು ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪುಸ್ತಕ ದಿನಾಚರಣೆ ಸಮಾರಂಭದಲ್ಲಿ ಯುವ ಲೇಖಕ ಶ್ರೀಕಾಂತ ಬೈಲಪತ್ತಾರ ಅವರ ಪ್ರಶ್ನಾರ್ಥ ಚಿಹ್ನೆ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಪುಸ್ತಕ ಸಂಸ್ಕೃತಿಯನ್ನು ಇಂದು ಮೊಬೈಲ್‌ ಕ್ರಾಂತಿ ನುಂಗಿ ಹಾಕಿದೆ. ಪುಸ್ತಕ, ಸ್ಲೇಟು ಹಿಡಿಯಬೇಕಾದ ಕಂದಮ್ಮಗಳ ಕೈಯಲ್ಲಿ ಪಾಲಕರು ಮೊಬೈಲ್ ನೀಡುತ್ತಿದ್ದಾರೆ. ಲಾಲಿ ಹಾಡಬೇಕಾದ ಹೆತ್ತಮ್ಮಂದಿರು ಮೊಬೈಲ್‌ಗಳಲ್ಲಿ ಗೇಮ್‌ ಹಾಕಿಕೊಟ್ಟು ಮಕ್ಕಳನ್ನು ರಮಿಸುತ್ತಿದ್ದಾರೆ. ಪುಸ್ತಕದ ಜಗತ್ತು ಪ್ರವೇಶಿಸಬೇಕಾದ ಮಕ್ಕಳು ಮೊಬೈಲ್‌ ಜಗತ್ತು ಹೊಕ್ಕು ಹಾಳಾಗುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಮನರಂಜನೆಯನ್ನು ನೀಡುವ ಮೊಬೈಲ್‌ ಅತಿಮಾನುಷ ಜ್ಞಾನದ ಪ್ರತಿಬಿಂಬವಾಗಿದೆ. ಮೊಬೈಲ್‌ ಇಂದು ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಆದರೆ, ಅದನ್ನು ಬಳಕೆ ಮಾಡಿಕೊಳ್ಳಬೇಕಾದ ರೀತಿ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಇಂದು ನಾಗರಿಕರ ಸಮಾಜ ಅಘಾತವನ್ನು ಅನುಭವಿಸುತ್ತಿದೆ. ದೇಶದ ಕಟ್ಟಾಳುಗಳಾಗಬೇಕಿದ್ದ ಮಕ್ಕಳು ಇಂದು ಮೊಬೈಲ್‌ ಹುಳುಗಳಾಗುತ್ತಿದ್ದಾರೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಪಾಲಕರು ಮಕ್ಕಳ ಕೈಗೆ ಪುಸ್ತಕಗಳನ್ನು ನೀಡಬೇಕು. ಕತ್ತೆತ್ತಿ ಆಕಾಶ ನೋಡುವುದನ್ನು ಕಲಿಸಬೇಕು. ಕಾಡು,ಗುಡ್ಡ, ಮರ, ಬೀಜ, ಹೀಚು, ಕಾಯಿ, ಹೂ, ಹಣ್ಣುಗಳನ್ನು ಪರಿಚಯಿಸಬೇಕು. ರೈತನ ಹೊಲದಲ್ಲಿ ಬೆಳೆಯುವ ಸಾಮಾನ್ಯ ಬೆಂಡೆಕಾಯಿ ಬಗ್ಗೆ ಇಂದಿನ ಮಕ್ಕಳಿಗೆ ಅರಿವಿಲ್ಲ. ಅದನ್ನೂ ಕೂಡ ಅಂತರ್ಜಾಲದಲ್ಲಿ ಮಾಹಿತಿಗಾಗಿ ತಡಕಾಡುತ್ತಾರೆ. ಮನುಷ್ಯ ಸಂಪೂರ್ಣವಾಗಿ ಯಂತ್ರಗಳನ್ನು ಅವಲಂಬಿಸುವಂತಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು’ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಭೀಮರಾಯ ಲಿಂಗೇರಿ ಮಾತನಾಡಿ, ‘ಪುಸ್ತಕದಿಂದ ಉತ್ತಮ ಸಂಸ್ಕೃತಿ, ಕಲೆ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಪುಸ್ತಕದ ಹವ್ಯಾಸ ಬೆಳೆಸಿಕೊಳ್ಳಬೇಕೆ’ ಎಂದು ಕಿವಿಮಾತು ಹೇಳಿದರು.

ಜಗದೀಶ ನೂಲಿನವರ, ಗಿರೀಶ್ ಪಾಟೀಲ್, ನಂದಿನಿ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಶ್ರೀಶೈಲ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಬಸವರಾಜ ಯಾದವ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT