ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಾರಾಂ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗೆ 2,000 ಬೆದರಿಕೆ ಪತ್ರಗಳು,100 ಕರೆಗಳು ಬಂದಿದ್ದವು!

Last Updated 25 ಏಪ್ರಿಲ್ 2018, 14:18 IST
ಅಕ್ಷರ ಗಾತ್ರ

ಜೋಧಪುರ: 2013ರ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಂ ಬಾಪು(77)ಗೆ ಜೋಧಪುರ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಲಾಂಬಾ ಅವರಿಗೆ 2,000 ಬೆದರಿಕೆ ಪತ್ರ ಮತ್ತು ನೂರರಷ್ಟು ಫೋನ್ ಕರೆಗಳು ಬಂದಿವೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

2013ರ ಆಗಸ್ಟ್ 15ರಂದು ಅಸಾರಾಂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಛಿಂದ್ವಾರದಲ್ಲಿರುವ ಅಸಾರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉತ್ತರಪ್ರದೇಶದ ಷಹಜಹಾನ್‌ಪುರದ ಬಾಲಕಿ ದೂರು ನೀಡಿದ್ದಳು. ದೂರು ಆಧರಿಸಿ 2013ರ ಸೆಪ್ಟೆಂಬರ್ 1ರಂದು ಇಂದೋರ್‌ನಲ್ಲಿ ಅಸಾರಾಂ ಅವರನ್ನು ಬಂಧಿಸಿ ಜೋಧಪುರಕ್ಕೆ ಕರೆತರಲಾಗಿತ್ತು. 2013ರ ಸೆಪ್ಟೆಂಬರ್ 2 ರಿಂದ ಅಸಾರಾಂ ನ್ಯಾಯಾಂಗ ವಶದಲ್ಲಿದ್ದರು.

ಆಗಸ್ಟ್ 20, 2013ರಂದು ಲಾಂಬಾ ಅವರು ಅಸಾರಾಂ ಬಾಪು ಅವರ ಪ್ರಕರಣದ ತನಿಖಾಕಾರ್ಯ ಕೈಗೆತ್ತಿಕೊಂಡಿದ್ದರು. ಆ ವೇಳೆ ಲಾಂಬಾ ಅವರು ಜೋಧಪುರ (ಪಶ್ಚಿಮ) ಡೆಪ್ಯುಟಿ ಕಮಿಷನರ್ ಆಗಿದ್ದರು.

ತನಿಖೆ ನಡೆಸುತ್ತಿದ್ದ ವೇಳೆ ನನಗೆ ಬೆದರಿಕೆ ಪತ್ರಗಳು ಬರುತ್ತಿದ್ದವು. ಅಸಾರಾಂಗೆ ಏನಾದರೂ ಆದರೆ ನಿಮ್ಮ ಕುಟುಂಬದವರನ್ನು ಕೊಲ್ಲುತ್ತೇವೆ ಎಂದು ಆ ಪತ್ರಗಳಲ್ಲಿ ಬೆದರಿಕೆಯೊಡ್ಡಲಾಗಿತ್ತು. ನನ್ನ ಫೋನ್ ಪದೇ ಪದೇ ರಿಂಗಣಿಸುತ್ತಲೇ ಇರುತ್ತಿತ್ತು. ಆಮೇಲೆ ನಾನು ಅನಾಮಿಕ ದೂರವಾಣಿ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ನಾನು ಉದಯ್‍ಪುರಕ್ಕೆ ಹೋದ ನಂತರ ಪತ್ರಗಳು ಬರುವುದು ಕಡಿಮೆ ಆಯಿತು.

ಈಗ ಜೋಧಪುರದಲ್ಲಿ ಭ್ರಷ್ಟಾಚಾರ ದಳದ ಸುಪರಿಟೆಂಡೆಂಟ್ ಆಫ್ ಪೊಲೀಸ್ ಆಗಿರುವ ಲಾಂಬಾ ಬೆದರಿಕೆಗಳಿಗೆ ಅಂಜಿ ತನ್ನ ಮಗಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದರು. ಹೆಂಡತಿಯನ್ನು ಮನೆಯಿಂದ ಹೊರಗೆ ಹೋಗಲು ಬಿಡುತ್ತಿರಲಿಲ್ಲ. 
ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ಪ್ರಕರಣದ ಆರೋಪಿಯೊಬ್ಬರು ಮುಂದಿನ ಗುರಿ ಚಂಚಲ್ ಮಿಶ್ರಾ ಎಂದು ಹೇಳಿದ್ದರು. ಅಸಾರಾಂ ಪ್ರಕರಣದ ತನಿಖೆ ನಡೆಸುತ್ತಿದ್ದ ಜೋಧಪುರದ ಡಿಎಸ್‍ಪಿ ಆಗಿದ್ದರು ಈ ಚಂಚಲ್ ಮಿಶ್ರಾ.

ಈ ಪ್ರಕರಣದ ತನಿಖೆ ನಡೆಸುವಾಗ ಯಾವುದೇ  ರಾಜಕೀಯ ಒತ್ತಡ ಇರಲಿಲ್ಲ. ಆದರೆ ತನಿಖೆ ವಿಳಂಬವಾದರೆ ತೊಡಕುಗಳು ಜಾಸ್ತಿ ಎಂಬುದು ಗೊತ್ತಿತ್ತು ಎಂದಿದ್ದಾರೆ ಲಾಂಬಾ.

[related]

ನಮಗೆ ಕಷ್ಟಕರ ಪರಿಸ್ಥಿತಿ ಎಂದೆನಿಸಿದ್ದು ಅಸಾರಾಂ ಅವರನ್ನು ಅವರ ಆಶ್ರಮದಿಂದ ಬಂಧಿಸುವುದು ಮತ್ತು ಜೋಧಪುರದಲ್ಲಿ ಅವರ ಬೆಂಬಲಿಗರು ಯಾವುದೇ ಅಹಿತಕರ ಘಟನೆಗಳು ನಡೆಸದಂತೆ ನೋಡಿಕೊಳ್ಳುವುದಾಗಿತ್ತು. ಜೋಧಪುರದಲ್ಲಿ ಪೊಲೀಸರ ಮುಂದೆ ಹಾಜರಾಗಲು ಅಸಾರಾಂ ಒಪ್ಪದೇ ಇದ್ದ ಕಾರಣ ಅವರನ್ನು ಆಶ್ರಮದಿಂದಲೇ ಬಂಧಿಸುವ ಜವಾಬ್ದಾರಿ ನಮ್ಮ ಇಲಾಖೆಯ ಮೇಲಿತ್ತು.

ನಮ್ಮ ತಂಡದ 11 ಮಂದಿ ಸದಸ್ಯರು ಅಸಾರಾಂ ಅವರ ಆಶ್ರಮಕ್ಕೆ ಸಮನ್ಸ್ ಕೊಡಲು ಹೋದಾಗ ಅಲ್ಲಿ 8,000 ಬೆಂಬಲಿಗರು ನೆರೆದಿದ್ದರು. ನಮ್ಮ ತಂಡದ ಸದಸ್ಯರು ಸಮನ್ಸ್ ತೋರಿಸಿದರೂ, ಆ ಒಂದು ಸಮನ್ಸ್ ನ್ನು ಅಸಾರಾಂಗೆ ನೀಡಬೇಕಾದರೆ 10 ಗಂಟೆಗಳೇ ಬೇಕಾಯಿತು.
ಅಲ್ಲಿನ ಬೆಂಬಲಿಗರನ್ನು ನಿಯಂತ್ರಿಸುವುದಕ್ಕೆ ಮಾಧ್ಯಮದವರ ಬೆಂಬಲವೂ ಸಹಕಾರಿಯಾಯಿತು. ಜೋಧಪುರದ ಪೊಲೀಸರ ತಂಡವು 2013 ಆಗಸ್ಟ್ 30ರಂದು ಆಶ್ರಮಕ್ಕೆ ನುಗ್ಗಿ ಅಸಾರಾಂನ್ನು ಬಂಧಿಸಿತ್ತು.

79ರ ಹರೆಯದ ಅಸಾರಾಂ ವಿರುದ್ಧ ಪೋಸ್ಕೊ ಕಾಯ್ದೆ 2012 ಮತ್ತು  ಪರಿಶಿಷ್ಟ ಜಾತಿ ಮತ್ತು ಪಂಗಡ (ಜಾತಿನಿಂದನೆ ತಡೆ) ಕಾಯ್ದೆ, 1989ರ ಅಡಿಯಲ್ಲಿ ಕೇಸು ದಾಖಲಿಸಲಾಗಿತ್ತು. ಕಳೆದ 56 ತಿಂಗಳು ಅಸಾರಾಂ ಜೋಧಪುರ ಸೆಂಟ್ರಲ್ ಜೈಲಿನಲ್ಲಿದ್ದರು.

ಬಂಧಿಸಿದ ನಂತರ, ತನ್ನನ್ನು ವಿಮಾನದಲ್ಲಿ ಕರೆದೊಯ್ಯಬೇಕೆಂದು ಅಸಾರಾಂ ಹೇಳಿದಾಗ ನಾವು ಪೊಲೀಸರು ಒಪ್ಪಿದೆವು. ಆ ರಾತ್ರಿ ಅವರು ತಮ್ಮ ಮಕ್ಕಳಿಗೆ ಕರೆ ಮಾಡಿ ಮರುದಿನ ಬೆಳಗ್ಗೆ ತನ್ನನ್ನು ಕರೆದೊಯ್ಯುವಾಗ 25,000 ಜನರನ್ನು ಒಗ್ಗೂಡುವಂತೆ ಮಾಡಿ ಎಂಬ ನಿರ್ದೇಶನ ನೀಡಿದ್ದರು. ಅವರು ಹಾಗೆ ಹೇಳಿದ್ದು ಸಿಂಧಿ ಭಾಷೆಯಲ್ಲಾಗಿತ್ತು. ಆದರೆ ನಮ್ಮ ತಂಡದಲ್ಲಿದ್ದ ಒಬ್ಬರಿಗೆ ಸಿಂಧಿ ಭಾಷೆ ತಿಳಿದಿದ್ದ ಕಾರಣ ಅಸಾರಾಂ ಯೋಜನೆ ಫ್ಲಾಪ್ ಆಯಿತು.
ಅಸಾರಾಂನ್ನು ಜೋಧಪುರಕ್ಕೆ ಕರೆದುಕೊಂಡು ಬಂದು ಸರ್ಕಾರಿ ಅತಿಥಿ ಗೃಹದಲ್ಲಿರಿಸಿದ್ದೆವು. ಅದೊಂದು ದಿನ ನಾನು ಅವರ ಕೋಣೆಗೆ ಹೋದಾಗ ಅವರು ಸೋಫಾದಲ್ಲಿ ಕುಳಿತಿದ್ದರು. ಅಲ್ಲಿಂದ ಎದ್ದು ನೆಲದಲ್ಲಿ ಕೂರುವಂತೆ ನಾನು ಆದೇಶಿಸಿದೆ. ಆ ಹೊತ್ತಿಗೆ ಅವರು ತಪ್ಪೊಪ್ಪಿಕೊಂಡರು ಎಂದು ಲಾಂಬಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT