ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನೆಯೇ ಗುಡಿ

Last Updated 25 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ಗಂಗಾದಿತೀರ್ಥೇಷು ವಸಂತಿ ಮತ್ಸ್ಯಾಃ

ದೇವಾಲಯೇ ಪಕ್ಷಿಗಣಾಶ್ಚ ನಿತ್ಯಂ |

ತೇ ಜ್ಞಾನಹೀನಾ ನ ಫಲಂ ಲಭಂತೇ

ತೀರ್ಥಾನಿ ದೇವಾಯತನಾನಿ ಭಾವಾಃ ||

ಈ ಶ್ಲೋಕದ ಭಾವಾರ್ಥ ಹೀಗೆ:

‘ಗಂಗಾನದಿ ಮೊದಲಾದ ತೀರ್ಥಗಳಲ್ಲಿ ಮೀನುಗಳು ಅಸಂಖ್ಯ ಸಂಖ್ಯೆಯಲ್ಲಿರುತ್ತವೆ; ದೇವಾಲಯಗಳ ಗೋಪುರಗಳಲ್ಲಿ ಎಷ್ಟೋ ಹಕ್ಕಿಗಳು ಗೂಡನ್ನು ಕಟ್ಟಿಕೊಂಡಿರುತ್ತವೆ. ಹೀಗೆಂದು ಮೀನುಗಳಾಗಲೀ ಹಕ್ಕಿಗಳಾಗಲೀ ತೀರ್ಥ–ದೇವಾಲಯದ ಸಾನ್ನಿಧ್ಯದಿಂದ ಜ್ಞಾನಿಗಳಾಗಿಲ್ಲ; ಸದ್ಗತಿಯೂ ದೊರೆತಿಲ್ಲ. ಒಳ್ಳೆಯ ಭಾವನೆಗಳೇ ದಿಟವಾದ ತೀರ್ಥಕ್ಷೇತ್ರಗಳು ಮತ್ತು ದೇವಾಲಯಗಳು.

ತೀರ್ಥಕ್ಷೇತ್ರ ಮತ್ತು ದೇವಾಲಯಗಳ ಬಗ್ಗೆ ನಮಗೆ ತುಂಬ ಗೌರವವಿದೆ. ಇವು ಪವಿತ್ರಕ್ಷೇತ್ರಗಳು ಎನ್ನುವುದೇ ನಮ್ಮ ಗೌರವಕ್ಕೆ ಕಾರಣವಲ್ಲವೆ? ಹಾಗಾದರೆ ಇವು ಹೇಗೆ ಪವಿತ್ರಕ್ಷೇತ್ರಗಳು ಎನಿಸಿಕೊಳ್ಳುತ್ತವೆ? ಈ ಪ್ರಶ್ನೆಯ ಬಗ್ಗೆ ನಾವು ಜಿಜ್ಞಾಸೆಯನ್ನು ಮಾಡಬೇಕಿದೆ.

ಪೌರಾಣಿಕವಾಗಿ ಪ್ರಸಿದ್ಧವಾಗಿರುವ ಸ್ಥಳ, ಮಹಾಪುರುಷರ ಜನ್ಮಕ್ಷೇತ್ರ ಅಥವಾ ಕಾರ್ಯಕ್ಷೇತ್ರ – ಇವು ತೀರ್ಥಕ್ಷೇತ್ರಗಳು ಎನಿಸಿಕೊಳ್ಳುತ್ತವೆ; ನದಿಪ್ರದೇಶಗಳು ಕೂಡ ಇಂಥ ಅಭಿದಾನಕ್ಕೆ ಪಾತ್ರವಾಗಿವೆ. ನಾವಿಲ್ಲಿ ಗಮನಿಸಬೇಕಾದ್ದು – ಪೌರಾಣಿಕತೆಯ ಹಿನ್ನೆಲೆಯಲ್ಲಿ ಯಾವುದೋ ಒಂದು ಸಂದೇಶವೂ ಮಹತ್ವವೂ ಇರುತ್ತದೆ; ಮಹಾಪುರುಷ ಲೋಕದ ಒಳಿತಿಗಾಗಿ ಅವನ ಜೀವನವನ್ನು ಮುಡಿಪಾಗಿಟ್ಟಿರುತ್ತಾನೆ. ಹೀಗೆ ಲೋಕಕ್ಕೆ ಒಳ್ಳೆಯದಾಗಲು ಕಾರಣವಾದ ಸ್ಥಳಗಳು ‘ತೀರ್ಥಕ್ಷೇತ್ರ’ ಎಂದೆನಿಸಿಕೊಳ್ಳುತ್ತದೆ. ನಾವು ತೀರ್ಥಕ್ಷೇತ್ರಕ್ಕೆ ಯಾತ್ರೆ ಮಾಡುವ ಉದ್ದೇಶ ಆ ಒಳಿತಿನ ಭಾವ ನಮ್ಮಲ್ಲೂ ಒದಗಲಿ ಎಂದು. ಒಳಿತು ನಮ್ಮಲ್ಲಿ ನೆಲೆಯಾಗಬೇಕಾದರೆ ಆ ಭಾವನೆಯನ್ನು ನಮ್ಮ ಭಾವ–ಬುದ್ಧಿಗಳಲ್ಲಿ ತುಂಬಿಸಿಕೊಳ್ಳಬೇಕೆ ವಿನಾ ಸುಮ್ಮನೆ ಆ ತೀರ್ಥಕ್ಷೇತ್ರಗಳಿಗೆ ಪಿಕ್‌ನಿಕ್‌ ರೀತಿಯಲ್ಲಿ ಹೋಗಿಬಂದರೆ ಪ್ರಯೋಜನವಿರದು. ಗಂಗಾನದಿ ಸಾವಿರಾರು ವರ್ಷಗಳಿಂದಲೂ ಕೋಟ್ಯಂತರ ಜನರನ್ನು ಬೇರೆ ಬೇರೆ ವಿಧಾನಗಳಲ್ಲಿ ಕಾಪಾಡುತ್ತಬಂದಿದೆ; ಗಂಗೆ ದೇವಲೋಕದಿಂದ ಭೂಲೋಕಕ್ಕೆ ಹರಿದುಬಂದದ್ದೇ ಲೋಕವನ್ನು ಉದ್ಧರಿಸಲು. ಹೀಗಾಗಿ ಅದು ಪವಿತ್ರ. ನಾವು ಗಂಗಾನದಿಯಲ್ಲಿ ಸ್ನಾನ ಮಾಡುವಾಗ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಶುದ್ಧರಾಗಬೇಕು. ಆಗಷ್ಟೆ ನಮ್ಮ ತೀರ್ಥಯಾತ್ರೆಗೆ ಅರ್ಥ ಬರುವುದು. ಮೀನುಗಳು ಕೂಡ ಅದೇ ತೀರ್ಥದಲ್ಲಿ ಇರುತ್ತವೆ; ಆದರೆ ಅವಕ್ಕೆ ಭಾವನೆಗಳು ಇರದು. ಹೀಗೆಯೇ ಕೇವಲ ದೈಹಿಕ ಸಾಮೀಪ್ಯವೇ ತೀರ್ಥಕ್ಷೇತ್ರ ಎನಿಸಿಕೊಳ್ಳದು; ನಮ್ಮ ಅಂತರಂಗದ ಸಹಜ ಭಾವದಲ್ಲಿ ತೀರ್ಥಕ್ಷೇತ್ರದ ಪಾವಿತ್ರ್ಯ ತುಂಬಿರಬೇಕು.

ಇನ್ನು ದೇವಾಲಯಗಳು. ದೇವರು ನೆಲೆಸಿರುವ ಮಂದಿರವೇ ದೇವಾಲಯ. ನಾವು ದೇವಾಲಯಕ್ಕೆ ಹೋಗುತ್ತಿರುತ್ತೇವೆ; ನಾನಾ ವಿಧದ ಸೇವೆಯನ್ನೂ ಮಾಡಿಸುತ್ತಿರುತ್ತೇವೆ. ಇಷ್ಟರಿಂದಲೇ ಅದು ನಮ್ಮ ಪಾಲಿಗೆ ದಿಟವಾದ ‘ದೇವಾಲಯ’ ಎನಿಸಿಕೊಳ್ಳುತ್ತದೆಯೆ? ದೇವರು ಎನ್ನುವ ತತ್ತ್ವ ನಮ್ಮ ಅಂತರಂಗದ ಮಂದಿರದಲ್ಲಿ ನೆಲೆಸಿರಬೇಕು. ಆಗ ಮಾತ್ರವೇ ಅವನನ್ನು ಹೊರಗಿನ ದೇವಾಲಯದಲ್ಲಿ ಕಾಣಲಾದೀತು.

ಸುಮ್ಮನೆ ದೇವಾಲಯಕ್ಕೆ ಹೋಗಿ, ಒಂದಷ್ಟು ಪ್ರದಕ್ಷಿಣೆಯನ್ನು ಮಾಡಿ, ತೀರ್ಥ–ಪ್ರಸಾದಗಳನ್ನು ಸೇವಿಸುವುದರಿಂದ ಏನೂ ಪ್ರಯೋಜನವಿರದು. ದೇವಾಲಯದ ಗೋಪುರದಲ್ಲಿ ಹಕ್ಕಿಗಳು ಗೂಡನ್ನು ಕಟ್ಟಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ನಾವು ಎಂದೋ ಒಂದು ದಿನ ಗುಡಿಗೆ ಹೋಗಿಬರುವವರು; ಆದರೆ ಆ ಹಕ್ಕಿಗಳು ಗುಡಿಯನ್ನೇ ಅವುಗಳ ವಾಸಸ್ಥಾನವನ್ನಾಗಿಸಿಕೊಂಡಿರುತ್ತವೆ. ಹೀಗೆ ದೇಹವಷ್ಟೆ ದೇವಾಲಯದಲ್ಲಿರುವುದು ಪುಣ್ಯಪ್ರದವಾದರೆ ನಮಗಿಂತಲೂ ಹೆಚ್ಚಾಗಿ ಆ ಹಕ್ಕಿಗಳಿಗೆ ಅದು ಲಭಿಸಬೇಕಲ್ಲವೆ? ಆದರೆ ಹಾಗೆ ಹಕ್ಕಿಗಳಿಗೆ ಅದು ಲಭಿಸದು ಎನ್ನುತ್ತದೆ, ಈ
ಸುಭಾಷಿತ. ಇದಕ್ಕೆ ಅದು ಕೊಡುವ ಕಾರಣ – ಭಾವನೆ ಮುಖ್ಯ. ಹಕ್ಕಿಗಳಿಗೆ ಆ ಗುಡಿಯ ಪಾವಿತ್ರ್ಯವಾಗಲೀ, ದೈವತ್ವದ ಕಲ್ಪನೆಯಾಗಲೀ ಇರದು. (ಹಕ್ಕಿಗಳ ಮನಸ್ಸು–ಭಾವನೆಗಳು ನಮಗಂತೂ ತಿಳಿಯುತ್ತಿಲ್ಲವಷ್ಟೆ!) ನಾವು ದೇವಾಲಯಕ್ಕೆ ಹೋದಾಗ ನಮ್ಮ ಮನಸ್ಸಿನಲ್ಲಿ ಉದಾತ್ತವಾದ ಚಿಂತನೆಗಳು ತುಂಬಿರಬೇಕು; ದೈವಿಕತೆಯ ಭಾವ ನಮ್ಮ ವ್ಯಕ್ತಿತ್ವಕ್ಕೆ ವರ್ಗಾವಣೆಗೊಂಡಿರಬೇಕು. ಆಗ ಮಾತ್ರವೇ ನಾವು ಸಂದರ್ಶಿಸುತ್ತಿರುವ ಸ್ಥಳವು ದೇವಾಲಯ ಎಂಬ ಅರ್ಥವ್ಯಾಪ್ತಿಗೆ ಬರುತ್ತದೆ. ಹೀಗಲ್ಲದೆ, ಯಾಂತ್ರಿಕವಾಗಿ ದೇವಾಲಯಕ್ಕೆ ಹೋಗಿಬರುವುದರಿಂದಲೂ ಪ್ರಯೋಜನವಿರದು. ದೇವಾಲಯದಲ್ಲಿದ್ದಾಗ ನಮ್ಮ ಮನಸ್ಸು ಕಲ್ಮಷಗಳಿಂದ ಮುಕ್ತವಾಗಿರಬೇಕು. ಆಗ ಮಾತ್ರವೇ ದೇವಾಲಯಕ್ಕೆ ದಿಟವಾದ ಅರ್ಥ ಒದಗುತ್ತದೆ.

–ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT