ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿಯ ಬುಡ್ಜೀಲ ಮತ್ತು ನಾಲ್ಕಾಣೆ

Last Updated 25 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ಅದು ಮೂರು ಅಂತಸ್ತಿನ ಬುಡ್ಜೀಲ (ಅಡಿಕೆ-ಎಲೆ ಚೀಲ). ಅದು ನಮ್ಮ ತ್ರಿವರ್ಣ ಧ್ವಜದಂತೆ ಮೂರು ಬಣ್ಣಗಳಿಂದ ಕೂಡಿತ್ತು. ಮೇಲಿನ ಅಂತಸ್ತಿನಲ್ಲಿ ಎಲೆ ಅಡಿಕೆ, ಸುಣ್ಣದ ಡಬ್ಬಿ. ಮಧ್ಯದಲ್ಲಿ ಮಕ್ಕಳು ಅಥವಾ ಸಂಬಂಧಿಕರು ಕೊಟ್ಟ ಹಣ. ಕೊನೆಯದರಲ್ಲಿ ಹೊಗೆಪುಡಿಯ ಜೊತೆ ಒಂದಿಷ್ಟು ಚಿಲ್ಲರೆ. ಅವಳಿಗೆ ಅದೇ ತಿಜೋರಿ, ನನಗೆ ಅದೇ ಬ್ಯಾಂಕ್. ಅದರ ಕೇಂದ್ರಸ್ಥಾನ ಅವಳ ಸೊಂಟ. ಒಂದು ದಿನವೂ ನಾನು ಆ ಬ್ಯಾಂಕಿನಲ್ಲಿ ಹಣ ಇಟ್ಟವನಲ್ಲ. ಬರಿ ವಿತ್‌ಡ್ರಾ ಮಾಡ್ತಿದ್ದೆ. ವಿರಾಮ ಕಾಲದ ಕುರುಕಲು ತಿಂಡಿಗೆ ನಾನು ಆಶ್ರಯಿಸಿದ್ದು ತಿಪ್ಪಜ್ಜಿಯ ಈ ಚೀಲವನ್ನು; ಅಂದರೆ ಅವಳು ಕೊಡುತ್ತಿದ್ದ ನಾಲ್ಕಾಣೆಯನ್ನು. ಕಿರಿಯ ಮೊಮ್ಮಗನಾದ ನನ್ನ ಮೇಲೆ ಅವಳಿಗೆ ಅನನ್ಯ ಪ್ರೀತಿ.

ಇನ್ನು ಮನೆಗೆ ನೆಂಟರೋ ಅಥವಾ ಸಂಬಂಧಿಕರೋ ಬಂದರೆ ನನಗೆ ಎಲ್ಲಿಲ್ಲದ ಖುಷಿ. ಏಕೆಂದರೆ ಅವರು ಹೋಗುವಾಗ ದುಡ್ಡು ಕೊಡ್ತಾರೆ ಅಂತ. ಆಗ ಮನೆಯಲ್ಲಿ ದುಡ್ಡು ಕೊಡುತ್ತಿರಲಿಲ್ಲ. ಹೀಗಾಗಿ ಅಜ್ಜಿಯ ಚೀಲದ ಬ್ಯಾಂಕೇ ನನಗೆ ಗತಿಯಾಗಿತ್ತು.

ಬಹಿರ್ದೆಸೆಗೆ ಹೋಗಲೆಂದೇ ನಮ್ಮನೆಯ ಬಾಗಿಲಲ್ಲಿ ಮಣ್ಣಿನಕುಡಿಕೆ ಇಟ್ಟಿದ್ದೆವು. ಇನ್ನು ಅಜ್ಜಿ ಹೋಗುವಾಗ ಅದಕ್ಕೆ ನೀರು ಹಾಕುವುದು ನನ್ನ ಕೆಲಸ. ಅದಕ್ಕೆ ಪಡೆಯುತ್ತಿದ್ದ ಇನಾಮು ನಾಲ್ಕಾಣೆ.

‘ರುದ್ರ ಬಾರೋ, ಕುಡಿಕೆಗೆ ನೀರು ಹಾಕು, ಹೊರಗಡೆ ಹೋಗಬೇಕು’ ಎಂದಾಗ, ‘ನಾಲ್ಕಾಣೆ ಕೊಟ್ರೆ ಹಾಕೋದು’ ಅಂತಿದ್ದೆ. ಕೊಡುವವರೆಗೂ ಬಿಡುತ್ತಿರಲಿಲ್ಲ. ಕೊಟ್ಟಮೇಲೆ ನೀರು ಹಾಕ್ತಿದ್ದೆ. ಅಂತಹ ಕಂಡೀಷನ್ ಮನುಷ್ಯ ನಾನು. ನಾನು ನೀರು ತರಲು ಒಳಹೋದಾಗ ಅವಳ ಚೀಲ ಬಿಚ್ಚಿ ಹೊಗೆಪುಡಿಯಲ್ಲಿ ಹುಡುಕಿ ನಾಲ್ಕಾಣೆ ಕೊಡ್ತಿದ್ಲು. ನನಗೆ ಆಗ ಎಲ್ಲಿಲ್ಲದ ಸಂತೋಷ ಆಗ್ತಿತ್ತು. ಒಡನೆ ಅಜ್ಜಿ ಬಹಿರ್ದೆಸೆಗೆ, ನಾನು ಅಂಗಡಿ ಕಡೆಗೆ.

ಅಂಗಡಿಗೆ ಹೋಗಿ ಸಂಡಿಗೆಯೋ, ಚಕ್ಕಲಿಯೋ, ಬುರುಗಿನ ಉಂಡೆಯೋ ಅಥವಾ ರಸಗುಲ್ಲವೋ ತಿಂದು ಚಡ್ಡಿಗೆ ಕೈ ಒರೆಸಿಕೊಂಡು ಮನೆಕಡೆ ಬರುವುದಕ್ಕೂ ಅಜ್ಜಿ ಬಹಿರ್ದೆಸೆ ಮುಗಿಸಿ ಮನೆಗೆ ಬರುವುದಕ್ಕೂ ಒಂದೇ ಆಗಿರುತ್ತಿತ್ತು.

ಇನ್ನು, ಅವಳ ಚೀಲದಲ್ಲಿ ಹಣ ಎಷ್ಟಿಟ್ಟಿದ್ದಾಳೆ ನೋಡಬೇಕು ಎನ್ನುವ ಕುತೂಹಲದಿಂದ ಹತ್ತಿರ ಹೋಗಿ ನೋಡೋಣ ಅಂದ್ರೆ ಅವಳ ಊರುಗೋಲು ಯಾವಾಗಲೂ ಭೂತವಾಗಿ ಕಾಡುತ್ತಿತ್ತು. ಯಾಕಂದ್ರೆ ನನ್ನ ಕುಂಡೆ ಒಮ್ಮೆ ಅದರ ರುಚಿ ನೋಡಿತ್ತು. ಆದರೂ ಒಮ್ಮೆ ಅವಳು ಮಲಗಿದಾಗ ಛಲದಂಕಮಲ್ಲನಂತೆ ಸದ್ದಿಲ್ಲದೆ ಯಶಸ್ವಿ ಕಾರ್ಯಾಚರಣೆ ಮಾಡಿ ನೋಡಿದಾಗ ನನ್ನ ಶೋಧಿಸುವ ಕಣ್ಣಿಗೆ ಕಂಡಿದ್ದು: ಎಲೆ ಅಡಿಕೆ, ಹೊಗೆಪುಡಿ, ಏಳೆಂಟು ನಾಲ್ಕಾಣೆಗಳು ಹಾಗೂ ಐದು-ಹತ್ತರ ಎರಡೆರಡು ನೋಟುಗಳು. ಅಷ್ಟರಲ್ಲಿ ಅಜ್ಜಿ ಮಗ್ಗಲು ಬದಲಿಸಿದ್ದರಿಂದ ನಾನು ಕಾಲಿಗೆ ಬುದ್ಧಿ ಹೇಳಿದ್ದೆ.

ಆ ದಿನ ಶನಿವಾರ, ನಾನು ಶಾಲೆಗೆ ಹೋಗಿದ್ದೆ. ನಮ್ಮನೆ ಹಿಂದಿನ ತೇರುಮಲ್ಲಜ್ಜರ ಆಂಜನೇಯಣ್ಣ ನಮ್ಮ ನಾಲ್ಕನೇ ತರಗತಿಗೆ ಬಂದವನೇ ‘ಸಾರ್, ರುದ್ರನ ಅಜ್ಜಿ ಸತ್ತೋಗಿದ್ದಾರೆ, ಅವನನ್ನು ಕಳಿಸಿ’ ಎಂದ. ಮೇಷ್ಟ್ರು ಸಮ್ಮತಿಸುವುದರೊಳಗೆ ನನ್ನ ಚೀಲ ಹೆಗಲೇರಿತ್ತು. ಮನೆಗೆ ಬಂದು ಅಜ್ಜಿಯ ಶವದ ಬಳಿ ನಿಂತು ಹಾಗೆ ನೋಡ್ತಿದ್ದೆ. ಅವಳ ಪಕ್ಕದಲ್ಲೇ ಆ ಚೀಲ ಅನಾಥವಾಗಿ ಬಿದ್ದಿತ್ತು. ಎರಡನ್ನೂ ಕಂಡು ದುಃಖ ಉಮ್ಮಳಿಸಿತು. ಅಂದು ಸಂಜೆ ಕಾರ್ಯಮುಗಿದ ಮೇಲೆ ಬಂದು ಚೀಲ ಹುಡುಕಿದಾಗ ನನಗೆ ಸಿಗಲಿಲ್ಲ.

ಮೂರು ದಿನಗಳ ನಂತರ ನನ್ನ ಲಕ್ಷ್ಮದೊಡ್ಡಮ್ಮ,‘ರುದ್ರು, ಅಜ್ಜಿ ಚೀಲ ಅದೋ ಆ ಗೂಡಲ್ಲಿದೆ ನೋಡು’ ಎಂದ್ರು. ನಾನು ಓಡಿಹೋಗಿ ಚೀಲ ಬಿಚ್ಚಿ ನೋಡಿದಾಗ, ಕಾಕತಾಳೀಯ ಎಂಬಂತೆ ನನಗೆ ಸಿಕ್ಕಿದ್ದು ನಾಲ್ಕಾಣೆ ಮಾತ್ರ. ಅಷ್ಟಕ್ಕೂ ಅದರಲ್ಲಿ ಇದ್ದದ್ದು ಅಷ್ಟೆ. ಅದನ್ನು ತೆಗೆದುಕೊಂಡು ಪುಟ್ಟನಾಯಕರ ಅಂಗಡಿಗೆ ಹೋಗಿ ರಸಗುಲ್ಲಾ ತಿಂದ್ಬಿಟ್ಟೆ. ಪ್ರಾಯಶಃ ನನ್ನ ಅಜ್ಜಿ ಆತ್ಮಕ್ಕೆ ಆಗ ಮೋಕ್ಷ ದೊರಕಿರಬಹುದು. ಇನ್ನೂ ಚೀಲ ಮರಳಿ ನೋಡಲಿಲ್ಲ. ಈಗಿನ ಭಾವನೆ ಆಗಿದ್ದಿದ್ದರೆ ಆ ನಾಲ್ಕಾಣೆ ಮತ್ತು ಚೀಲವನ್ನು ಮ್ಯೂಜಿಯಂ ಪೀಸ್‌ನಂತೆ ಜತನದಿಂದ ಕಾಪಾಡಿಕೊಳ್ಳುತ್ತಿದ್ದೆ.

ಈಗ ನನ್ನ ಮಕ್ಕಳು, ‘ಅಪ್ಪ, ಪಾನಿಪೂರಿ ಕೊಡ್ಸು, ಗೋಬಿ ಕೊಡ್ಸು, ಐಸ್ಕ್ರೀಮ್ ಕೊಡ್ಸು’ ಅಂದಾಗಲೆಲ್ಲಾ ನನಗೆ ನನ್ನ ಅಜ್ಜಿಯ ಚೀಲ ಮತ್ತು ನಾಲ್ಕಾಣೆ ನೆನಪಾಗುತ್ತೆ. ಕೆಲವು ಸಲ ಆ ನೆನಪು ಬಂದು ಕಣ್ಣಾಲಿಗಳಲ್ಲಿ ಹನಿಸಿದ್ದು ಉಂಟು. ಆಗ ಆ ನಾಲ್ಕಾಣೆ ಕೊಡುತ್ತಿದ್ದ ಅತೀವ ಸಂತೋಷದ ಮುಂದೆ ಈಗ ನಾ ಪಡೆಯುವ ಸಂಬಳದ ಖುಷಿ ಪೇಲವವಾಗಿ ಕಾಣ್ತದೆ.

ಈಗ ಅಜ್ಜಿಯೂ ಇಲ್ಲ, ಅವಳ ಬುಡ್ಜೀಲವು ಇಲ್ಲ. ನಾಲ್ಕಾಣೆಯೂ ಇಲ್ಲ. ಇದ್ದರೂ ಆ ನಾಲ್ಕಾಣೆ ಚಲಾವಣೆಯಲ್ಲಿಲ್ಲ. ಎಲ್ಲವೂ ನನಗೆ ನೆನಪು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT