ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ.ಯಲ್ಲೂ ಗಂಧದ ಕಳವು

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅ ಲ್ಲಲ್ಲಿ ಬಿದ್ದಿರುವ ಶ್ರೀಗಂಧದ ಮರಗಳ ತುಂಡುಗಳು, ಕೆಲವೆಡೆ ಮರಗಳ ಬುಡದವರೆಗೆ ಕತ್ತರಿ, ಇನ್ನೂ ಕೆಲವೆಡೆ ಬೇರು ಸಹಿತ ಮರಗಳ ಕಟಾವು, ಮುಂದೆ ಸಾಗಿದರೆ ಮರಗಳನ್ನು ಕಡಿಯಲೆಂದು ಅವುಗಳ ಕಾಂಡಗಳಲ್ಲಿ ಹಾಕಿರುವ ಗುರುತು...

ಇವಿಷ್ಟೂ ಕಂಡು ಬಂದಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಜೈವಿಕ ಉದ್ಯಾನದಲ್ಲಿ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಹೊಂದಿರುವ ತಾಣ ಎಂದೇ ಪ್ರಸಿದ್ಧಿಯಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಶ್ರೀಗಂಧದ ಮರಗಳ ಕಳವು ದಿನೇ ದಿನೇ ಹೆಚ್ಚುತ್ತಿವೆ.

ಎರಡು ವಾರದಲ್ಲಿ 45ಕ್ಕೂ ಹೆಚ್ಚು ಶ್ರೀಗಂಧದ ಮರಗಳು ಕಳ್ಳರ ಪಾಲಾಗಿವೆ. ಅಲ್ಲದೆ 30ಕ್ಕೂ ಹೆಚ್ಚು ಮರಗಳನ್ನು ಕಡಿಯುವುದಕ್ಕೆಂದು ಕಳ್ಳರು ಗುರುತು ಮಾಡಿರುವುದೂ ಪತ್ತೆಯಾಗಿದೆ. ಇದರಿಂದ ವಿ.ವಿ ಆವರಣದಲ್ಲಿ ಗಿಡ, ಮರ, ಪ್ರಾಣಿ, ಪಕ್ಷಿಗಳಿಗೂ ಸುರಕ್ಷಿತ ವಾತಾವರಣ ಇಲ್ಲದಂತಾಗಿದೆ.

ವಿ.ವಿ. ಕುಲಪತಿ ನಿವಾಸದ ಬಳಿ, ತೋಟಗಾರಿಕಾ ಕಚೇರಿಯ ಅಕ್ಕಪಕ್ಕದಲ್ಲಿ ಹಾಗೂ ಜ್ಞಾನಭಾರತಿ ರೈಲು ನಿಲ್ದಾಣದ ರಸ್ತೆಯ ಎರಡೂ ಬದಿಯಲ್ಲಿನ ಶ್ರೀಗಂಧದ ಮರಗಳು ಮರಗಳ್ಳರ ಪಾಲಾಗಿವೆ. ರಸ್ತೆ ಬದಿ ಹಾಗೂ ಜೈವಿಕ ಉದ್ಯಾನದೊಳಗಿರುವ 3ರಿಂದ 12 ವರ್ಷದ ಮರಗಳನ್ನು ಕಳ್ಳರು ಕತ್ತರಿಸಿ, ಗಂಧದ ತಿರುಳನ್ನು ತೆಗೆದುಕೊಂಡು ಹೋಗಿದ್ದಾರೆ.

ಏಪ್ರಿಲ್‌ 12ರಂದು ಕುಲಪತಿ ನಿವಾಸದ ಮುಂಭಾಗದ ರಸ್ತೆಯಲ್ಲಿಯೇ 13 ಶ್ರೀಗಂಧದ ಮರಗಳು, ಏ. 15ರಂದು 16 ಮರಗಳನ್ನು ಕತ್ತರಿಸಿ, ಬುಡವನ್ನು ಬಗೆದು ಗಂಧದ ತಿರುಳಿರುವ ತುಂಡುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಜೈವಿಕ ಉದ್ಯಾನದ ‘ಪಂಚವಟಿ’ ವನದ ಪಕ್ಕದಲ್ಲಿರುವ 10 ಗಂಧದ ಮರಗಳನ್ನು ಏ.16ರಂದು ಕತ್ತರಿಸಲಾಗಿದೆ. ಏ.21ರಂದು ಕುಲಪತಿ ನಿವಾಸದ ಬಳಿಯ ಎರಡು ಮರಗಳನ್ನು ಕತ್ತರಿಸಲಾಗಿದೆ. ಅಲ್ಲದೆ ಜೈವಿಕ ಉದ್ಯಾನದಲ್ಲಿನ ಹಲವು ಗಂಧದ ಮರಗಳು ಹಾಗೂ ರೈಲು ನಿಲ್ದಾಣ ರಸ್ತೆ, ಅಂಬೇಡ್ಕರ್‌ ಭವನದ ಬಳಿಯ ಕೆಲ ಗಂಧದ ಮರಗಳನ್ನು ಕಟಾವು ಮಾಡುವ ಸಲುವಾಗಿ ಮರಗಳ್ಳರು ಗುರುತು ಮಾಡಿದ್ದಾರೆ. ಈ ಕುರಿತು ಸೋಮವಾರವಷ್ಟೇ (ಏ 23) ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಲಪತಿ ಅಧಿಕೃತ ನಿವಾಸ, ಅಗ್ನಿಶಾಮಕ ದಳದ ಕಚೇರಿ, ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರ ಹಾಗೂ ಅಂಬೇಡ್ಕರ್‌ ಭವನದ ಎದುರಿಗೆ ರಾತ್ರಿ ಕಾವಲುಗಾರರು ಇದ್ದರೂ  ಗಂಧದ ಮರಗಳ ಕಳ್ಳತನಕ್ಕೇನೂ ಅಡ್ಡಿಯಾಗಿಲ್ಲ ಅನ್ನುವುದೇ ಅಚ್ಚರಿ.

‘ನನ್ನ ಜೀವವೂ ಮುಖ್ಯ’ :
‘ಕೆಲ ದಿನಗಳ ಹಿಂದೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮರಗಳ್ಳರು ಶ್ರೀಗಂಧದ ಮರಗಳನ್ನು ಗರಗಸದಿಂದ ಕತ್ತರಿಸುವುದನ್ನು  ಗಮನಿಸಿದೆ. ಜೋರಾಗಿ ಕೂಗಿಕೊಂಡು ಅವರನ್ನು ಹಿಡಿಯಲು ಹತ್ತಿರಕ್ಕೆ ಹೋಗಿದ್ದೆ. ಆದರೆ ಆರು–ಏಳು ಮಂದಿ ಇದ್ದ ಕಳ್ಳರ ಗುಂಪು ನನ್ನ ಮೇಲೆಯೇ ಕಲ್ಲು ತೂರಿತು. ಅಟ್ಟಿಸಿಕೊಂಡು ಬಂದಿತು. ಹೆದರಿ ಓಡಿ ಹೋದೆ’ ಎಂದು ಬೆಂ.ವಿ.ವಿ ತೋಟಗಾರಿಕಾ ಇಲಾಖೆಯ ಸಸ್ಯಕಾಶಿಯ ಭದ್ರತಾ ಸಿಬ್ಬಂದಿ ಪಾಂಡು ಅಲವತ್ತುಕೊಂಡರು.

‘ಮರಗಳ್ಳರ ಕೈಯಲ್ಲಿ ಮಚ್ಚು, ಕುಡಗೋಲು, ಗರಗಸ, ಚಾಕು ಇದ್ದವು. ಅವರ ಕೈಗೆ ಸಿಕ್ಕಿದ್ದರೆ ನನ್ನ ಕತೆ ಏನಾಗುತ್ತಿತ್ತೊ ಗೊತ್ತಿಲ್ಲ. ನನ್ನ ಜೀವವೂ ಮುಖ್ಯವಲ್ಲವೇ’ ಎಂದು ಆ ದಿನದ ಘಟನೆಯನ್ನು ನೆನೆದುಕೊಂಡರು.

ವಿವಿಧೆಡೆಯಿಂದ ಮುಕ್ತ ಪ್ರವೇಶ:
ಜ್ಞಾನಭಾರತಿ ಆವರಣಕ್ಕೆ ಒಂದಲ್ಲ, ಎರಡಲ್ಲ ಆರೇಳು ಕಡೆ ಪ್ರವೇಶದ್ವಾರಗಳಿವೆ. ಮೈಸೂರು ರಸ್ತೆಯಿಂದ, ರೈಲ್ವೆ ನಿಲ್ದಾಣದಿಂದ, ನಾಗದೇವನಹಳ್ಳಿ ಕಡೆಯಿಂದ, ಮರಿಯಪ್ಪನಪಾಳ್ಯ, ವಿ.ವಿ ಕ್ವಾಟ್ರಸ್‌, ನಾಗರಬಾವಿ, ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಇ) ಹಿಂಭಾಗದಿಂದ ಪ್ರವೇಶಕ್ಕೆ ಅವಕಾಶ ಇದೆ. ನಾಗರಬಾವಿ ಕಡೆಯ ನ್ಯಾಷನಲ್‌ ಲಾ ಸ್ಕೂಲ್‌ ಬಳಿ ವಿ.ವಿ ಗೇಟ್‌ ನಿರ್ಮಿಸಿದೆ. ಆದರೆ ಅಲ್ಲಿ ಯಾವ ಭದ್ರತಾ ಸಿಬ್ಬಂದಿಯೂ ಇಲ್ಲ. ಉಳಿದ ಪ್ರವೇಶದ್ವಾರಗಳಲ್ಲಿ ಗೇಟ್‌ಗಳೂ ಇಲ್ಲ, ಭದ್ರತಾ ಸಿಬ್ಬಂದಿಯೂ ಇಲ್ಲ.

‘ಇಡೀ ಜ್ಞಾನಭಾರತಿ ಆವರಣದಲ್ಲಿ ಎರಡು– ಮೂರು ಕಡೆ ಮಾತ್ರ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದು ಬಿಟ್ಟರೆ ಬೇರೆಲ್ಲೂ ಇಲ್ಲ. ಅವನ್ನು ಕಾಲ ಕಾಲಕ್ಕೆ ಪರಿಶೀಲಿಸುವ ಕಾರ್ಯವನ್ನೂ ಯಾರೂ ಮಾಡುತ್ತಿಲ್ಲ’ ಎನ್ನುತ್ತಾರೆ ವಿ.ವಿಯ ಹಿರಿಯ ಪ್ರಾಧ್ಯಾಪಕರೊಬ್ಬರು.

‘ವಿ.ವಿ. ಆವರಣದೊಳಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಯಾವ ವಾಹನಗಳು ಎಷ್ಟೊತ್ತಿಗೆ ಬಂದು ಹೋಗುತ್ತವೆ ಎಂಬುದನ್ನು ನೋಂದಾಯಿಸುವ ಕೆಲಸಗಳೂ  ಆಗುತ್ತಿಲ್ಲ. ಅಲ್ಲದೆ ಈ ಎಲ್ಲ ರಸ್ತೆಗಳನ್ನು ಸಾರ್ವಜನಿಕರು ಮುಕ್ತವಾಗಿ ಬಳಸುತ್ತಿರುವುದರಿಂದ ವಿ.ವಿ ಆವರಣದೊಳಗೆ ಹಗಲು, ರಾತ್ರಿ ವಾಹನ ಸಂಚಾರ ಇರುತ್ತದೆ. ಅದರ ನಿಯಂತ್ರಣವೂ ಕಷ್ಟವಾಗಿದೆ’ ಎನ್ನುತ್ತಾರೆ ಅವರು.

‘ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಮುಖ್ಯ ಪ್ರವೇಶ ದ್ವಾರದಲ್ಲಿ ಒಬ್ಬರು ಭದ್ರತಾ ಸಿಬ್ಬಂದಿ ಇರುತ್ತಾರಾದರೂ, ಅವರು ಇದ್ಯಾವುದನ್ನೂ ಗಮನಿಸುವುದಿಲ್ಲ. ಜ್ಞಾನ ಭಾರತಿ ಆವರಣದ ಯಾವ ಮಾರ್ಗಗಳಲ್ಲೂ ‘ಚೆಕ್‌ ಪೋಸ್ಟ್‌’ಗಳಿಲ್ಲ. ಹಾಗಾಗಿ ಜ್ಞಾನಭಾರತಿ ಆವರಣ ಒಂದು ರೀತಿ ಕಣ್ಗಾವಲೇ ಇಲ್ಲದ ಪ್ರದೇಶವಾಗಿದೆ. ಯಾರು ಬೇಕಾದರೂ ಬರಬಹುದು, ಏನು ಬೇಕಾದರೂ ಮಾಡಬಹುದು ಎಂಬಂತಾಗಿದೆ’ ಎಂಬುದು ವಿ.ವಿಯ ಸಂಶೋಧನಾರ್ಥಿಯೊಬ್ಬರ ಬೇಸರದ ನುಡಿ.

‘ಇಲ್ಲಿಗೆ ಬರುವ ‌ಕೆಲ ದುಷ್ಟರು ಇಲ್ಲಿನ ಕಾಡಿನಲ್ಲಿರುವ ನವಿಲು, ಮೊಲವನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ರಾತ್ರಿಯಿದ್ದ ಶ್ರೀಗಂಧದ ಮರಗಳು ಬೆಳಗಾಗುವುದರಲ್ಲಿ ಕಾಣೆಯಾಗುತ್ತಿವೆ. ವಿ.ವಿ ಆಡಳಿತ ವ್ಯವಸ್ಥೆಗೆ ಇಲ್ಲಿನ ಜೈವಿಕ ಉದ್ಯಾನ, ಕಾಡು, ಪರಿಸರವನ್ನು ರಕ್ಷಿಸುವ ಆಸಕ್ತಿ ಇದ್ದಂತಿಲ್ಲ. ಅಗತ್ಯ ಭದ್ರತಾ ಮತ್ತು ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈ ಕುರಿತು ಧ್ವನಿ ಎತ್ತಿದರೆ, ನಮ್ಮ ಮೇಲೆ ಹಲ್ಲೆಗಳಾಗುತ್ತವೆ’ ಎಂದು ವಿ.ವಿ ಹಾಸ್ಟೆಲ್‌ನ ವಿದ್ಯಾರ್ಥಿಯೊಬ್ಬರು ಅಸಮಾಧಾನ ತೋಡಿಕೊಂಡಿದ್ದಾರೆ.

**
ಜ್ಞಾನಭಾರತಿ ಆವರಣದಲ್ಲಿ ಗಂಧದ ಮರಗಳ ಕಳ್ಳತನ ಇತ್ತೀಚೆಗೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಪೊಲೀಸ್‌ರಿಗೆ ದೂರು ನೀಡಿದ್ದು, ರಾತ್ರಿ ಗಸ್ತು ಹೆಚ್ಚಿಸುವಂತೆ ಕೋರಿದ್ದೇವೆ. ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ


– ಡಾ. ಐ.ಎಸ್‌.ಶಿವಕುಮಾರ್‌ ಪ್ರಭಾರ ಕುಲಪತಿ, ಬೆಂ.ವಿ.ವಿ

ಹಗಲಲ್ಲಿ ಗುರುತು, ರಾತ್ರಿ ಕತ್ತರಿ

ಜ್ಞಾನಭಾರತಿ ಆವರಣದ ವಿಸ್ತೀರ್ಣ 1,100 ಎಕರೆ. ಇಲ್ಲಿನ ಜೈವಿಕ ಉದ್ಯಾನ ಭಾಗ–1ರಲ್ಲಿ 300 ಎಕರೆ ಹಾಗೂ ಭಾಗ–2ರಲ್ಲಿ 150 ಎಕರೆ ಇದೆ. ಒಟ್ಟಾರೆ ವಿ.ವಿ ಆವರಣದಲ್ಲಿ ಸುಮಾರು 5,000 ಶ್ರೀಗಂಧದ ಮರಗಳಿವೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಜೈವಿಕ ಉದ್ಯಾನದ ಭಾಗ–2ರಲ್ಲಿ 340 ಶ್ರೀಗಂಧದ ಮರಗಳಿವೆ.  2017ರಲ್ಲಿ ಇಲ್ಲಿ 26 ಗಂಧದ ಮರಗಳು ಕಳವಾಗಿದ್ದ ವರದಿಯಾಗಿತ್ತು. ಆ ನಂತರ ಈ 15 ದಿನಗಳಲ್ಲಿ ಈ ಮರಗಳ ಕಳವು ಹೆಚ್ಚಾಗಿದೆ. ಕಿಡಿಗೇಡಿಗಳು ಬೆಳಗ್ಗೆ ಹೊತ್ತಿನಲ್ಲಿ ಬಂದು ಮರಗಳ ಗುರುತು ಮಾಡಿ, ರಾತ್ರಿ ಹೊತ್ತಿನಲ್ಲಿ ಗುಂಪು ಗುಂಪಾಗಿ ಬಂದು ಮರಗಳನ್ನು ಕತ್ತರಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಎರಡು–ಮೂರು ತಿಂಗಳಲ್ಲಿ ವಿ.ವಿಯ ಎಲ್ಲ ಶ್ರೀಗಂಧದ ಮರಗಳು ಕಳ್ಳರ ಪಾಲಾಗುತ್ತವೆಯಷ್ಟೇ ಎಂದು ಬೇಸರದಿಂದ ಹೇಳುತ್ತಾರೆ ಜೈವಿಕ ಉದ್ಯಾನದ ಸಮನ್ವಯಾಧಿಕಾರಿ

 
– ಪ್ರೊ. ಟಿ.ಜೆ.ರೇಣುಕಾ ಪ್ರಸಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT