ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಅಡುಗೆ ಇನ್ನೂ ಮರೆತಿಲ್ಲ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅಮ್ಮ ನನಗೆ ಯಾವ ಅಡುಗೆ ಕೆಲಸಕ್ಕೂ ಹೇಳುತ್ತಿರಲಿಲ್ಲ. ನಾನೂ ಕೂಡಾ ಇಷ್ಟಪಟ್ಟು ಯಾವ ಅಡುಗೆಯನ್ನು ಕಲಿಯಲಿಲ್ಲ. ಅಮ್ಮ ಯಾವತ್ತಾದರೂ ಊರಿಗೆ ಹೋಗಿದ್ದರೆ ಅಪ್ಪ ಎಲ್ಲರಿಗೂ ಅಡುಗೆ ಮಾಡುತ್ತಿದ್ದ. ನೀ ಅಡುಗಿ ಯಾವತ್ತ ಮಾಡಾಕ ಕಲಿತೆಯೋ ಏನೋ? ಎಂದು ಅಮ್ಮ ನನಗೆ ಬೈಯುವಾಗ ಆಗ ಅಪ್ಪ ಅಕಿ ಮದಿವಿ ಆದ ಮ್ಯಾಲೆ ಅಡಗಿ ಮಾಡದು ಇರತೈತಿ ಈಗ ಆಕಿ ಆರಾಮಾಗಿ ಇರ್ಲಿ ಬಿಡು. ಎಂದು ಅಪ್ಪ ನನ್ನ ಪರ ವಹಿಸಿ ಮಾತನಾಡುತ್ತಿದ್ದರು.

ದೊಡ್ಡಜ್ಜಿಗೆ ಆರಾಮ ಇಲ್ಲದ ಕಾರಣ ಅಪ್ಪ ಅಮ್ಮ ಊರಿಗೆ ಹೋಗಬೇಕಾಗಿ ಬಂದಿತು. ಮನೆಯಲ್ಲಿ ನಾನು ನನ್ನ ತಮ್ಮ, ನನ್ನ ತಂಗಿ ಅಷ್ಟೆ ಇದ್ದೆವು. ಆಗ ನಾನು ಹತ್ತನೆಯ ತರಗತಿಯಲ್ಲಿ ಓದುತ್ತಿದ್ದೆ.

ಅದೇ ದಿನ ನನ್ನ ಸೋದರ ಮಾವ ನಮ್ಮ ಮನೆಗೆ  ಊರಿಂದ ಬಂದರು. ಆಗ ಊಟದ ಸಮಯ ಮಧ್ಯಾಹ್ನ 2 ಗಂಟೆ ಇದ್ದಿರಬಹುದು. ನಾವು ಊಟ ಮಾಡಿ ಕುಳಿತಿದ್ದೆವು. ಅಮ್ಮ ಮಾಡಿಟ್ಟ ಅಡುಗೆ ಖಾಲಿ ಮಾಡಿ ಎಣ್ಣೆಗಾಯಿ ಬದನೆಕಾಯಿ ಪಲ್ಯ ಮಾತ್ರ ಮಿಕ್ಕಿತ್ತು. ಮಾವನಿಗೆ ಬದನೆಕಾಯಿ ಪಲ್ಯಕ್ಕೆ ಚಪಾತಿ ಮಾಡಿದರಾಯಿತು ಎಂದು ಹಿಟ್ಟನ್ನು ಕಲಿಸಿ ಇಟ್ಟೆ.

ನನ್ನ ಸೋದರ ಮಾವ ಆಗ ಬೆಂಗಳೂರಿನಲ್ಲಿ ಓದುತ್ತಿದ್ದ. ನಾನು ಮಾವನನ್ನು ಮಾತನಾಡಿಸಲು ಸಂಕೋಚಪಡುತ್ತಿದ್ದೆ. ಗಂಟೆ ಮೂರು ಆಗುತ್ತಾ ಬಂದಿತು. ಇನ್ನು ಚಪಾತಿ ಮಾಡಿರಲಿಲ್ಲ. ನನಗೆ ಒಲೆ ಹಚ್ಚೋಕೆ ಬರುತ್ತಿರಲಿಲ್ಲ. ಆಗ ಸೌದೆ ಒಲೆ ಮೇಲೆಯೇ ಅಡಿಗೆ ಮಾಡಬೇಕಿತ್ತು. ಎಷ್ಟೇ ತಿಪ್ಪರಲಾಗಾ ಹಾಕಿದರು ಒಲೆ ಹತ್ತಲೆ ಇಲ್ಲ. ಮನೆಯೆಲ್ಲಾ ಹೊಗೆಯಿಂದ ತುಂಬಿ ಹೋಗಿತ್ತು. ಕಣ್ಣುಗಳೆಲ್ಲಾ ಕೆಂಪಾಗಿದ್ದವು. ನಾ ಹೆಂಗ್ ಚಪಾತಿ ಮಾಡಲಿ ಅಯ್ಯೋ ದೇವರೆ ಎಂದು ಮನಸ್ಸಿನಲ್ಲಿಯೇ ಎಲ್ಲಾ ದೇವರನ್ನು ನೆನಸಿಕೊಂಡೆ. ಚಪಾತಿ ಹಿಟ್ಟು ನನ್ನ ಮ್ಯಾಲೆ ಕೋಪ ಮಾಡಿ ಕೊಂಡಿತ್ತು. ಕೈಗೆಲ್ಲಾ ಮೆತ್ತಿಕೊಂಡಿತ್ತು. ಚಪಾತಿ ಲಟ್ಟಿಸೋಕೆ ಬರಲಿಲ್ಲ. ಒಲೆಯ ಮುಂದೆ ಕುಳಿತು ವಟಗುಟ್ಟುತ್ತಿದ್ದೆ. ಕಣ್ಣಲ್ಲಿ ಗಂಗಾ ಮಾತೆ ಧಾವಿಸುತ್ತಿದ್ದಳು. ಅಷ್ಟರಲ್ಲಿ ನನ್ನ ತಮ್ಮ ಬಂದು ‘ಯಾಕ್ ಅಕ್ಕ ಅಳಾಕತ್ತಿ’ ಎಂದ, ಮಾವನು ಒಳಗೆ ಬಂದರು. ಇಬ್ಬರು ನನ್ನ ಸ್ಥಿತಿಯನ್ನು ಕಂಡು ನಗಲು ಪ್ರಾರಂಭಿಸಿದರು.

ನನ್ನ ಮಾವ ಒಲೆಯ ಮುಂದೆ ಬಂದು ನನ್ನನ್ನು ಎಬ್ಬಿಸಿ ತಾವೇ ಕುಳಿತು ಹಿಟ್ಟನ್ನು ಗಟ್ಟಿಯಾಗಿ ಕಲಿಸಿ ಚಪಾತಿ ತಯಾರಿಸಿ ಒಂದು ತಟ್ಟೆಗೆ ಹಾಕಿ ಬದನೆಕಾಯಿ ಪಲ್ಯ ಹಚ್ಚಿ ‘ತೊಗೊ ತಿನ್ನು ಇಷ್ಟೊತ್ತು ದಣಿದಿರಬೇಕು’ ಎಂದು ನನ್ನ ಮುಂದೆ ಹಿಡಿದು ಕಿರುನಗೆ ಬೀರಿದರು. ಈಗ ಅವರೆ ನನ್ನ ಯಜಮಾನರು.

ಅಂಕಿತಾ ಹೋಸಕೇರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT